ಡಾ ಶಿವಾನಂದ ಕುಬಸದ
ಭೀಮನು ಇದಿರಿಗಿ ನಿಂತಾ | ಐನೂರು ಮಂದಿಗೆ ಮಲತಾ
ಬಾಲನು ಮಾಡಿದ ಕಸರತ್ತಾ | ಕುದರಿ ಕಡದನೋ ಹತ್ತಾ
ರಾಮನ ಕಡಿತ ವಿಪರೀತಾ | ಕಾವಲಿ ಹರಿದಿತೋ ರಕ್ತಾ
ಸಾವಿರ ಆಳಿನ ಒಬ್ಬ ಮಲತಾ | ಕೂಗತಾನ ಕಡಿ ಕಡಿರೆಂತ ||
ಲಾವಣಿಯ ಈ ನಾಲ್ಕೇ ಸಾಲುಗಳನ್ನು ಓದುತ್ತ ಓದುತ್ತ ಮೈ ರೋಮಾಂಚನಗೊಳ್ಳುತ್ತದೆ. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ಲಾವಣಿಗಳಲ್ಲಿ ಇದೂ ಒಂದು. ಹಾಗೆ ನೋಡಿದರೆ, ಬಾಯಿಂದ ಬಾಯಿಗೆ ಊರಿಂದ ಊರಿಗೆ ಹರಿದಾಡಿದ ಇಂಥ ಲಾವಣಿಗಳು ಸ್ವಾತಂತ್ರ್ಯ ಸಂಗ್ರಾಮದ ಅವಿಭಾಜ್ಯ ಅಂಗಗಳಾಗಿದ್ದವು. ಮೊದಲು ಕಥೆಗಳನ್ನು ಬರೆದು ಹಾಡುತ್ತಿದ್ದ ಲಾವಣಿಕಾರರು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶಭಕ್ತಿಯ, ದೇಶಭಕ್ತರ ಸಂಗತಿಗಳನ್ನು ಪರಿಣಾಮಕಾರಿಯಾಗಿ ಊರಿಂದೂರಿಗೆ ಬಿತ್ತರಿಸುವ ‘ಮಾಧ್ಯಮಪ್ರತಿನಿಧಿ’ಗಳಾಗಿ ಮಾರ್ಪಾಟಾದರು. ಈ ಲಾವಣಿ ಬರೆದವನ ಹೆಸರು ಗೊತ್ತಿಲ್ಲವಾದರೂ ಮಾಡಿದ ಪರಿಣಾಮ ಮಾತ್ರ ಅದ್ಭುತ. ಬಿಳಿಯರ ನಿರ್ಜೀವ ಕಡತಗಳ ಧೂಳು ತಿಂದ ಪುಟಗಳಲ್ಲಿ ಒಂದಿಷ್ಟು ಬಂಡಾಯಗಾರರ ಯಕಶ್ಚಿತ್ ಸಾವಿನಂತೆ ದಾಖಲಿಸಿಕೊಳ್ಳಬಹುದಾಗಿದ್ದ ಈ ಘಟನೆಯನ್ನು ಸ್ವಾತಂತ್ರ್ಯ ಹೋರಾಟದ ಅವಿಸ್ಮರಣೀಯ ಘಟನೆಯನ್ನಾಗಿಸಿದ ಕೀರ್ತಿ ಆ ಲಾವಣಿಕಾರನಿಗೆ ಸಲ್ಲುತ್ತದೆ. ಹೌದು,ಅದೊಂದು ದಾರುಣ ಅಂತ್ಯ ಕಂಡ ಸಮರ. ಅದು ಹಲಗಲಿ ಬಂಡಾಯ.
೧೮೫೭ ನವಂಬರ್ ೨೯ ರ ಮಧ್ಯರಾತ್ರಿ, ಪರತಂತ್ರ ಇಂಡಿಯಾದ ಮುಧೋಳ ಸಂಸ್ಥಾನದ ಅಧೀನದಲ್ಲಿ ಬರುವ ಒಂದು ಸಣ್ಣ ಹಳ್ಳಿ ಹಲಗಲಿಯ ಹೆಬ್ಬಾಗಿಲಲ್ಲಿ ೬೦೦ ಕುದುರೆಗಳ ಖುರಪುಟದ ಸದ್ದು. ಕುದುರೆಯೇರಿದ ಬ್ರಿಟಿಷ ಸೈನಿಕರು ದಂಡೆತ್ತಿ ಬಂದದ್ದು ಹಲಗಲಿಯ ಬೇಡರೆಂಬೋ ಸ್ವಾಭಿಮಾನಿಗಳನ್ನು ಬಗ್ಗು ಬಡಿಯಲು. ತಮ್ಮ ಚಕ್ರಾಧಿಪತ್ಯಕ್ಕೆ ಎದುರಾದವನ್ನು ಯುಕ್ತಿಯಿಂದಲೋ, ಕುಯುಕ್ತಿಯಿಂದಲೋ, ದಾಳಿಯಿಂದಲೋ ಸೋಲಿಸಿ ಇಡೀ ಇಂಡಿಯವನ್ನು ಕಬಳಿಸಿದ್ದ ಬ್ರಿಟಿಷರಿಗೆ ೫೦೦ ಜನಸಂಖ್ಯೆಯ ಈ ಗ್ರಾಮದ ಜನ ಸವಾಲಾಗಿದ್ದರು.
ಅದಕ್ಕೊಂದು ಹಿನ್ನೆಲೆ ಇದೆ.
೧೮೫೭ರ ಮೇ ತಿಂಗಳಲ್ಲಿ ಜರುಗಿದ ಸಿಪಾಯಿ ದಂಗೆಯನ್ನು ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೆಜ್ಜೆ ಎಂದೇ ಪರಿಗಣಿಸಲಾಗುತ್ತದೆ. ಆ ದಂಗೆಯಿಂದ ಪಾಠ ಕಲಿತ ಆಂಗ್ಲರು, ಅದೇ ವರ್ಷದ ಸಪ್ಟಂಬರ ೧೧ ರಂದು ‘ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆ’ ಯನ್ನು ಜಾರಿಗೆ ತಂದರು. ಅದರನ್ವಯ ಭಾರತದ ಪ್ರಜೆಗಳ್ಯಾರೂ ಯಾವುದೇ ರೀತಿಯ ಶಸ್ತ್ರವನ್ನು ಹೊಂದುವಂತಿಲ್ಲ. ಅಕಸ್ಮಾತ್ ಹೊಂದಿದ್ದರೂ ಅದಕ್ಕೆ ಸರಕಾರದಿಂದ ಅನುಮತಿ ಹೊಂದಬೇಕು. ಕೊಡಲಿ, ಕುಡುಗೋಲು ಮುಂತಾದ ದಿನಬಳಕೆಯ, ಜೀವನಾವಶ್ಯಕ ಸಲಕರಣೆಗಳೂ ಇದರ ವ್ಯಾಪ್ತಿಯಿಂದ ಹೊರತಾಗಿರಲಿಲ್ಲ! ಆಂಗ್ಲರಿಗೆ ಮಾತ್ರ ಈ ಕಾಯ್ದೆಯಿಂದ ಸಂಪೂರ್ಣ ವಿನಾಯತಿ !!
ವಿಲಾಯತಿಯಿಂದ ಹುಕುಮ ಕಳುವಿದರ ಕಂಪನಿ ಸರಕಾರಾ
ಎಲ್ಲ ಜನರ ತರಿಸಿ ಜೋರ ಮಾಡಿ ತರಬಾಕ ಹತ್ಯಾರ
ಮುಚ್ಚಿ ಇಟ್ಟವ್ರಿಗಿ ಮೂರ ವರ್ಷ ಬೇಡಿ ಹಾಕ್ರಿ ಪೂರಾ
ಕೊಡದೆ ದಿಟಾಯಿ ಮಾಡಿದವರನ ಕಡದಹಾಕ್ರಿ ಟಾರಾ
ಈ ಶಾಸನವನ್ನು ಭಾರತದ ಈ ಭಾಗದಲ್ಲಿ ಜಾರಿಗೆ ತರುವ ಹೊಣೆ ದಕ್ಷಿಣ ಮರಾಠಾ ವಿಭಾಗದ ಕಮಾಂಡರ್ ಆಗಿದ್ದ ಲೆಫ್ಟಿನಂಟ ಕರ್ನಲ್ ಮಾಲ್ಕಂ ಮೇಲಿತ್ತು. ಅವನ ಮುಖಾಂತರ ಬೆಳಗಾವಿಯ ಮ್ಯಾಜಿಸ್ಟ್ರೇಟ್ ಜಿ.ಬಿ. ಸೆನೆಟ್ ಕರ್ ಈ ಕಾರ್ಯದ ಹೊಣೆ ಹೊರುತ್ತಾನೆ. ಆಗಿನ ಮುಧೋಳ ಮಹಾರಾಜರ ಕಾರಭಾರಿಯಾದ ಕೃಷ್ಣರಾವರವರ ಜೊತೆ ಸಮಾಲೋಚಿಸಿ ಸಂಸ್ಥಾನದ ಎಲ್ಲರೂ ಶಸ್ತ್ರಗಳನ್ನು ಒಪ್ಪಿಸುವಂತೆ ಆಜ್ಞೆ ಹೊರಡಿಸಿದರು. ಪ್ರಾರಂಭದಲ್ಲಿ ಮುಧೋಳ ಮಹಾರಾಜರು ಹಾಗೂ ಅವರ ಆಸ್ಥಾನಿಕರು ಇದಕ್ಕೆ ಪ್ರತಿಭಟನೆ ಮಾಡಿದರೂ ಬ್ರಿಟಿಷರ ದೊಡ್ಡಶಕ್ತಿಯ ಎದುರು ತಮ್ಮ ಆಟ ನಡೆಯಲಾರದೆಂದು ತೀರ್ಮಾನಿಸಿ, ಹಾವು ಸಾಯದ ಕೋಲು ಮುರಿಯದ ‘ಜಾಣತನ’ ಪ್ರದರ್ಶಿಸಿ ತಮ್ಮ ಆಯುಧಗಳಿಗೆ ಪರವಾನಿಗೆ ಪಡೆದು ಸುಖದಿಂದ ಇರುವ ವಿಚಾರ ಮಾಡಿಕೊಂಡುಬಿಟ್ಟರು .
ಸಂಸ್ಥಾನದ ಸೈನಿಕರಲ್ಲಿ ಮುಖ್ಯ ಭಾಗವಾದ ಬೇಡರು ಮಾತ್ರ ಇದಕ್ಕೆ ಸಮ್ಮತಿಸುವುದಿಲ್ಲ. ಆಯುಧಗಳೆಂದರೆ ತಮಗೆ ದಿನ ನಿತ್ಯ ಆಹಾರ ಒದಗಿಸುವ ಸಾಧನಗಳೆಂದೂ ತಲೆತಲಾಂತರದಿಂದ ಅವು ತಮ್ಮ ಕುಲದೇವತೆಗಳೆಂದೂ ಆಯುಧಗಳಿಲ್ಲದೆ ತಾವು ಬದುಕುವುದು ಅಸಾಧ್ಯವೆಂದೂ, ಹಾಗಾಗಿ ತಾವು ತಮ್ಮ ಆಯುಧಗಳನ್ನು ಒಪ್ಪಿಸುವುದಿಲ್ಲವೆಂದೂ, ಗುಡುಗುತ್ತಾರೆ. ಕಾರಭಾರಿ ಕೃಷ್ಣರಾವ್ ಬುದ್ಧಿ ಹೇಳಲು ಹಲಗಲಿ ಗ್ರಾಮಕ್ಕೆ ಬಂದರೆ, ತಾವು ಆಯುಧಗಳನ್ನು ಒಪ್ಪಿಸುವುದು ಸಾಧ್ಯವೇ ಇಲ್ಲವೆಂದೂ, ಬೇಕಾದರೆ ಹೋರಾಡಿ ಸಾಯುತ್ತೇವೆ, ನಮ್ಮ ಸ್ವಾಭಿಮಾನದ, ಗೌರವದ ಸಂಕೇತವಾದ ಆಯುಧಗಳನ್ನು ಮಾತ್ರ ಕೊಡುವುದಿಲ್ಲವೆಂದೂ ಅವನನ್ನು ತಿರುಗಿ ಕಳಿಸಿದರು .
ಹತಿಯಾರ ಕೊಡಲಾಕ ಹೆಂಗಸಾಗಿ ಬಳಿ ಇಟ್ಟಿಲ್ಲ ಕಯ್ಯಾಗ
ಯಾಕ ಬಂದಿರಿ, ಜೀವ ಹೋದರೂ ಕೊಡೂದಿಲ್ಲ
ಸುಮ್ಮನ ಹೋಗರಿ ಈಗ ||
ಸಂಧಾನದ ಎಲ್ಲ ಬಾಗಿಲುಗಳೂ ಹೀಗೆ ಮುಚ್ಚಿಕೊಂಡು ಬಿಡುತ್ತವೆ. ಮುಧೋಳ ಮಹಾರಾಜರ ಶೂರ ಸೈನಿಕನಾದ ಬಾಬಾಜಿ ಬಿನ್ ಸಾವಜಿ ನಿಂಬಾಳ್ಕರ್ ಎಂಬಾತ ಈ ಬೇಡರಿಗೆ ಮಾರ್ಗದರ್ಶಕನಾಗಿ ನಿಲ್ಲುತ್ತಾನೆ. ಬೇಡರ ಹಿರಿಯರನ್ನು ಹುರಿದುಂಬಿಸಿ ಯುಧ್ಧಕ್ಕೆ ಸನ್ನದ್ಧರನ್ನಾಗಿಸಿದ. ಬೇಡರ ಪ್ರಮುಖರಾದ ಪೂಜಾರಿ ಹನುಮ, ಜಡಗಾ, ಬಾಲಾ, ರಾಮ ಎನ್ನುವ ಯುವಕರು ತಮ್ಮ ಸಮುದಾಯದ ಸ್ವಾಭಿಮಾನದ ಸಂಕೇತವಾಗಿ ಹೋರಾಡಲು ವೀರ ಪ್ರತಿಜ್ಞೆ ಮಾಡಿದರು.
ಪೂಜಾರಿ ಹನುಮ ಬಾಲಾ ಜಡಗ ರಾಮ
ಮಾಡಿಯಾರ ಮಸಲತ್ತು
ಕೈಯಾನ ಹತಿಯಾರ ಕೊಡಬಾರದು ನಾವು
ನಾಲ್ಕು ಮಂದಿ ಜತ್ತು
ಸುತ್ತಲಿನ ಎಲ್ಲ ಬೇಡರು ಇವರಿಗೆ ಬೆಂಗಾವಲಾಗಿ ನಿಂತು ಹೋರಾಡುವ ನಿರ್ಧಾರ ಮಾಡಿದರು. ಸುದ್ದಿ ತಿಳಿದ ಆಂಗ್ಲರು ವಿಜಾಪುರದಿಂದ ಅಶ್ವದಳ ತಂದು ಹಲಗಲಿಯ ಮೇಲೆ ಲಗ್ಗೆ ಹಾಕಿದರು. ೧೮೫೭ ನವಂಬರ್ ೨೯ ರ ರಾತ್ರಿ ವೇಳೆ ಹಲಗಲಿಯನ್ನು ಸುತ್ತುವರಿದ ಆಂಗ್ಲ ಸೇನೆ ಸಣ್ಣ ಗ್ರಾಮವಾದ ಹಲಗಲಿಯ ಜನ ಇವರ ಮೇಲೆ ಮುಗಿಬಿದ್ದ ರೀತಿಯಿಂದ ಗಾಬರಿಯಾಗಿಬಿಟ್ಟರು. ಹೆಣ್ಣು ಗಂಡುಗಳೆನ್ನದೆ ಇಡೀ ಊರಿನ ಜನ ಹೋರಾಡುವುದನ್ನು ಕಂಡು ಅವರಿಗೆ ಅಚ್ಚರಿಯಾಯಿತು.
ಒಳಗಿನ ಮಂದಿ ಒತ್ತರಲೇ ಹೊಡದರ
ಮುಂಗಾರಿ ಮಳೆ ಸುರಿದಂಗ
ಹೊರಗಿನ ಮಂದಿ ಗುಂಡ ಹತ್ತಿರಕ ತಿರಗ್ಯಾರ ಆವಾಗ
ಎದುರಾಳಿಗಳ ಬಲ ಹೆಚ್ಚಾದಾಗ ಹಿಂದೆ ಸರಿದಂತೆ ಮಾಡಿದ ಆಂಗ್ಲರು ಬಾಗಲಕೋಟ, ಕಲಾದಗಿ, ಹಾಗೂ ಬೆಳಗಾವಿಗಳಿಂದ ಇನ್ನಷ್ಟು ಸೈನ್ಯ ತರಿಸಿ ಮರುದಿನ ಮತ್ತೆ ಎಗರಿದರು. ಆದರೂ ಬಲಾಡ್ಯರಾದ ಬ್ರಿಟಿಷರ ವಿರುಧ್ಧ ಬೇಡರ ಹೋರಾಟ ಅಸಮಾನ್ಯವೇ ಆಗಿತ್ತು. ಜಡಗಾ- ಬಾಲಾ ಎಂಬ ವೀರ ಬೇಡರ ಜೋಡಿ ರಕ್ತದ ಹೊಳೆಯನ್ನೇ ಹರಿಸಿತು. ಅದನ್ನು ಲಾವಣಿಕಾರ ವರ್ಣಿಸಿದ ರೀತಿಯೇ ರೋಮಾಂಚಕ. ಜಡಗಾ ಹೊಡೆದ ಏಟಿಗೆ ಆಂಗ್ಲ ಅಧಿಕಾರಿ ಹ್ಯಾವಲಾಕ್ ನೆಲಕಚ್ಚಿದ. ಅದರಿಂದ ಕೋಪಗೊಂಡ ಅಲೆಕ್ಸಾಂಡರ್ ಕೆರ್ರ್ ಎಂಬಾತ ಇಡೀ ಊರಿಗೆ ಬೆಂಕಿ ಇಡುವಂತೆ ತನ್ನ ಸೈನಿಕರಿಗೆ ಆದೇಶ ನೀಡಿದ. ಸುತ್ತಲೂ ಸೈನಿಕರು ಮುತ್ತಿ ರಾತ್ರಿ ಇಡೀ ಊರಿಗೆ ಬೆಂಕಿ ಇಟ್ಟರು. ಹತ್ತಿಕಟಗಿಯಲ್ಲಿ ಬಚ್ಚಿಟ್ಟುಕೊಂಡಿದ್ದವರು ಅಲ್ಲೇ ಸುಟ್ಟು ಕರಕಲಾದರು. ಮನೆ, ಗುಡಿಸಲುಗಳಲ್ಲಿ ಮಲಗಿದ್ದ ಹೆಂಗಸರು ಮಕ್ಕಳು, ಮುದುಕರು ಸುಟ್ಟು ಬೂದಿಯಾದರು. ಬ್ರಿಟಿಷರ ಅಟ್ಟಹಾಸ ಬೆಳಗಾಗುವವರೆಗೂ ಸಾಗಿತು. ಬೇಡರ ಕೃಷಿ ಉಪಕರಣಗಳು ಆಹಾರ ಪದಾರ್ಥಗಳು ಮನೆಯಲ್ಲಿ ದಿನನಿತ್ಯ ಬಳಸುತ್ತಿದ್ದ ವಸ್ತುಗಳು, ಸ್ರೀಯರ ಮಂಗಳಸೂತ್ರ, ಬೀಸುವ ಕಲ್ಲು ಅಂದರೆ ಹಲಗಲಿ ಬೇಡರ ಊರಿನಲ್ಲಿ ಮನೆಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ಬ್ರಿಟಿಷರು ದೋಚಿದರು.
ಯಾರು ಯಾರು ಇಲ್ಲವಾಯಿತು | ಊರೆಲ್ಲ ಲೂಟಿ ಆಗಿ ಹೋತು ||
ಮಂದಿ ಮನಿ ಹೊಕ್ಕು ಹುಡುಕಿತು | ದನಕರ ಲಯಾ ಆತು ||
ಸಣ್ಣ ಕೂಸುಗಳು ಹೋದವು ಸತ್ತು | ಬೆಂಕಿ ಹಚ್ಯಾರ ಊರ ಸುಟ್ಟತು ||
ಕತ್ತಿ ಕುದರಿ ಮತ್ತ ಮಾಣಿಕ ಯಾವದು ಬಿಡಲಿಲ್ಲ |
ಬೆಳ್ಳಿ ಬಂಗಾರ ಹರಳಿನುಂಗುರ ಹೊನ್ನುಂಗುರ ಗೋಲ |
ಸರಗಿ ಸರ್ದಳಿ ಬುಗುಡಿ ಬಾವಲಿ ಬಿಡಲಿಲ್ಲಾ |
ಕಡಗ ಕಂಕಣ ನಡುವಿನ ಡಾಬ ನಡಕಟ್ಟು ರುಮಾಲ |
ಉಪ್ಪ ಎಣ್ಣಿ ಅರಿಶಿಣ ಜೀರಿಗಿ ಅಕ್ಕಿ ಸಕ್ಕರೆ ಬೆಲ್ಲ |
ಗಂಗಳ ಚರಿಗಿ ಮಂಗಳಸೂತ್ರ ತಗೊಂಡು ಹೋದರು ಬೀಸುಕಲ್ಲಾ |
ಬೂದಿ ಮಾಡ್ಯಾರ ಹಲಗಲಿ ಸುಟ್ಟ ಹಲಗಲಿ ಗುರ್ತ ಎಳ್ಳಷ್ಟು |
ಕಾಣಸ್ತ ಹೋದಿತೋ ಕೆಟ್ಟು ವರ್ಣಿಸಿ ಹೇಳಲಿ ಎಷ್ಟು ||
ಹೋರಾಟದ ಕೊನೆಗೆ ಉಳಿದದ್ದು ಸುಟ್ಟು ಬೂದಿಯಾದ ಹಲಗಲಿ ಎಂಬ ಶೂರರ ಊರು ಮಾತ್ರ. ಅಷ್ಟಕ್ಕೇ ಬಿಡದ ಆಂಗ್ಲರು ಇನ್ನೂರೈವತ್ತು ಜನರನ್ನು ಬಂಧಿಸಿ ಸೆರೆಗೆ ಅಟ್ಟಿದರು. ಮುಂಚೂಣಿಯಲ್ಲಿ ನಿಂತು ಹೋರಾಡಿದ ಜಡಗಾ, ಬಾಲಾ, ರಾಮ, ಹನುಮ ಮೊದಲ್ಗೊಂಡು ಹದಿಮೂರು ಜನರನ್ನು ವಿಚಾರಣೆಗೆ ಗುರಿಪಡಿಸುವ ನಾಟಕವಾಡಿ, ದಿನಾಂಕ ೧೧-೧೨-೧೮೫೭, ಶುಕ್ರವಾರ ‘ಸಂತೆಯ ದಿನ’ ಮುಧೋಳದ ‘ಉತ್ತರ ಗೇಟ್’ ಎಂದು ಈಗ ಕರೆಯಿಸಿಕೊಳ್ಳುವ ಸ್ಥಳದಲ್ಲಿ ಹಾಡೇ ಹಗಲು ಗಲ್ಲಿಗೇರಿಸಿದರು, ಅವರ ವಿರುದ್ಧ ಬಂಡಾಯ ಮಾಡಿದವರ ಗತಿ ಏನಾಗುತ್ತದೆ ಎಂಬುದನ್ನು ಜಾಹೀರು ಮಾಡಲು. ಮುಂದೆ ಮೂರು ದಿನ ಬಿಟ್ಟು ಮತ್ತೆ ಆರು ಜನರನ್ನು ಹಲಗಲಿಯಲ್ಲಿ ಗಲ್ಲಿಗೇರಿಸಿದರು. ಇತಿಹಾಸದ ಒಂದು ರಕ್ತಸಿಕ್ತ ನಿಷ್ಕರುಣಿ ಅಧ್ಯಾಯ ಕೊನೆಗೊಂಡಿತು.
ಹೀಗೆ, ಅನೇಕ ಸಾವುಗಳಲ್ಲಿ ಪರ್ಯವಸಾನಗೊಂಡ ಸ್ವಾಭಿಮಾನದ ಒಂದು ಹೋರಾಟ ತನಗರಿವಿಲ್ಲದೆ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ದಾಖಲೆಯಾಗಿಬಿಟ್ಟಿತು.
ಇದನ್ನು ದಾಖಲಿಸಿದ ಅನಾಮಧೇಯ ಲಾವಣಿಕಾರನಿಗೊಂದು ಗೌರವ ತುಂಬಿದ ಕೃತಜ್ಞತೆ.
ಕೊನೆಗೆ ಒಂದೆರಡು ಪ್ರಶ್ನೆಗಳು.
-ಒಂದು ದೊಡ್ಡ ಶಕ್ತಿಯ ವಿರುದ್ಧ ಹೋರಾಟಕ್ಕಿಳಿದ ಆ ಬೇಡರಿಗೆ ತಾವು ಸೋಲುವುದು ಖಚಿತ ಎಂದು ಗೊತ್ತಿರಲಿಲ್ಲವೆ?
-ಸೋತರೆ ತಾವು ಸಾಯುತ್ತೇವೆಂದು ಗೊತ್ತಿರಲಿಲ್ಲವೆ?
-ಉಳಿದ “ಜಾಣರಂತೆ” ತಾವೂ ಆಯುಧಗಳನ್ನು ‘ಕೊಟ್ಟಂತೆ ಮಾಡಿ’ ಬದುಕಬಹುದೆಂದು ಗೊತ್ತಿರಲಿಲ್ಲವೆ?
ಇವೆಲ್ಲಕ್ಕೂ ಒಂದೇ ಉತ್ತರ
“ಗೊತ್ತಿತ್ತು”
ಆದರೂ ಅವರು ಹೋರಾಟ ಮಾಡಿದ್ದು ತಮ್ಮ ಹಕ್ಕಿಗಾಗಿ, ಸ್ವಾಭಿಮಾನಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಎನ್ನುವುದನ್ನು ನೆನೆದಾಗ ರೋಮಾಂಚನವಾಗುತ್ತದೆ. ಧನ್ಯತೆಯ ಗೌರವದ ಭಾವ ಮೂಡುತ್ತದೆ.