'ನಗರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದರ ಬಗ್ಗೆ ಸೂಕ್ತ ತನಿಖೆ ನಡೆಸದೇ ಜಿಲ್ಲಾಡಳಿತ ಉದಾಸೀನ ಧೋರಣೆ ತಾಳಿದೆ' ಎಂದು ಆರೋಪಿಸಿ ಎಬಿವಿಪಿ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಾಗಲಕೋಟೆ: 'ನಗರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದರ ಬಗ್ಗೆ ಸೂಕ್ತ ತನಿಖೆ ನಡೆಸದೇ ಜಿಲ್ಲಾಡಳಿತ ಉದಾಸೀನ ಧೋರಣೆ ತಾಳಿದೆ' ಎಂದು ಆರೋಪಿಸಿ ಎಬಿವಿಪಿ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿವಿವಿ ಸಂಘದ ಆವರಣದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆಯಲ್ಲಿ ಸಾಗಿದ ವಿದ್ಯಾರ್ಥಿಗಳು ಜಿಲ್ಲಾಡಳಿತ ಕೂಡಲೇ ವಿದ್ಯಾರ್ಥಿನಿಯರ ಆತ್ಮಹತ್ಯೆಯ ಬಗ್ಗೆ ತನಿಖೆಗೆ ಮುಂದಾಗಲಿ ಎಂದು ಆಗ್ರಹಿಸಿದರು. ನಂತರ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವಿದ್ಯಾರ್ಥಿನಿಯರ ಕುಟುಂಬ ವರ್ಗದವರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ ಪ್ರತಿಭಟನಾಕಾರರು, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತ್ತೆ ಆತ್ಮಹತ್ಯೆಯಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲಿ ಎಂದು ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾದ ಬೆಂಗಳೂರಿನ ವಿದ್ಯಾರ್ಥಿನಿಯ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು. ಎಬಿವಿಪಿ ರಾಜ್ಯ ಕಾರ್ಯದರ್ಶಿ ರಾಜೇಶ ಗುರಾಣಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
'ಕಠಿಣ ಶಿಕ್ಷೆಯಾಗಲಿ'
ಬನಹಟ್ಟಿ: ಶಿವಮೊಗ್ಗ ಜಿಲ್ಲೆಯ ಸಕ್ರಿಬೈಲಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ರಬಕವಿ ಬನಹಟ್ಟಿ ಎಬಿವಿಪಿ ಕಾರ್ಯಕರ್ತರು ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಎಬಿವಿಪಿ ತಾಲ್ಲೂಕು ಸಂಚಾಲಕ ವೀರಭದ್ರಶಾಸ್ತ್ರಿ ಹಿರೇಮಠ ಮಾತನಾಡಿ, ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾಗಿದ್ದ ರಾಜ್ಯದಲ್ಲಿ ಕಾಮುಕರ ಅಟ್ಟಹಾಸ ತೀವ್ರಗೊಂಡಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂರು.
ನಂತರ ತೇರದಾಳದ ವಿಶೇಷ ತಹಶೀಲ್ದಾರ್ ಎಸ್.ಎಸ್.ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅರ್ಧ ಗಂಟೆ ಕಾಲ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ರಕ್ಷಾ ಬಾಣಕಾರ, ಶ್ರೀದೇವಿ ಹಿರೇಮಠ, ಪ್ರಗತಿ ಕರಿಜಾಡರ, ಶಿವಲೀಲಾ ಗಂಜಿ, ಅಕ್ಷತಾ ಪೂಜಾರಿ, ಶ್ರೀದೇವಿ ಪಾತ್ರೋಟ, ಅಶ್ವಿನಿ ಬುದ್ನಿ, ಪ್ರಿಯಾ ತಂಬದ, ಕಾರ್ಯದರ್ಶಿ ಸಚಿನ ಅಮ್ಮಲಜೇರಿ, ಪ್ರಮೋದ ಪುಂಡೆ, ವಿನಯ ತುಬಚಿ, ಅಲೋಕ ಮುರಗೋಡ, ಮಂಜುನಾಥ ಹಾವಿನಾಳ, ವಿಶಾಲ ಕದಂ, ಮಲ್ಲೇಶ ಎಣ್ಣೆನ್ನವರ, ಸಂಗಪ್ಪ ಭುಜರುಕ, ಪ್ರವೀಣ ಟಿರ್ಕಿ, ರೋಹಿತ ಅಮ್ಮಣಗಿಮಠ, ಹೇಮಂತ ಮಳಲಿ, ವೃಷಭ ಕೋಪರ್ಡೆ, ಪ್ರವೀಣ ವಾಲೀಕಾರ, ಪ್ರವೀಣ ಹಡಗಲಿ ಸೇರಿದಂತೆ ಅನೇಕರು ಇದ್ದರು.