ಮರಾಠ ಆಡಳಿತಗಾರರ ಕಥೆ ಸಾರುವ ಮುಧೋಳ ದರ್ಬಾರ್‌ ಹಾಲ್‌

ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳ ಬಹುಭಾಗ ಮರಾಠ ಆಡಳಿತಗಾರರ ಕೈಯಲ್ಲಿತ್ತು. ವಿಜಯಪುರದಲ್ಲಿ ಆದಿಲ್‌ಶಾಹಿ ಸಂಸ್ಥಾನ ಮತ್ತು ದಕ್ಖಣದಲ್ಲಿ ಮೊಘಲರ ಆಡಳಿತ ಕೊನೆಗೊಂಡ ಬಳಿಕ ಮರಾಠರು ನೆಲಯೂರಿರ ಬೇಕು. ಶಿವಾಜಿ ಕಾಲದಲ್ಲಿ ಮತ್ತು ಅನಂತರದಲ್ಲಿ ಇವರು ಪ್ರಬಲರಾಗಿರಬೇಕು.
 
ಈ ಸಣ್ಣ ರಾಜರ ಪ್ರಾಂತಗಳು ಕೆಲವೇ ಗ್ರಾಮಗಳನ್ನು ಒಳಗೊಂಡಿದ್ದವು. ಪ್ರತಿಯೊಂದು ಪ್ರಾಂತದಲ್ಲಿಯೂ ಮರಾಠ ಆಡಳಿತಗಾರರು ಆಡಳಿತ ನಡೆಸುತ್ತಿದ್ದರು. ಇವರನ್ನು ಸರ್ದಾರ್‌ ಅಥವಾ ಪೇಶ್ವೆಗಳೆನ್ನುತ್ತಿದ್ದರು. ಇವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಅಂಕಾಲಿ, ರಾಯಭಾಗ, ಕಾಗವಾಡದಲ್ಲಿ, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ, ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಆಡಳಿತ ನಡೆಸುತ್ತಿದ್ದರು. ರಾಮದುರ್ಗ, ಜಮಖಂಡಿಯಲ್ಲಿಯೂ ಸಣ್ಣ ಪ್ರಾಂತಗಳಿದ್ದವು. 

ಈ ಮರಾಠ ಆಡಳಿತಗಾರರು ಅವರ ರಾಜವಾಡಗಳನ್ನು (ಅರಮನೆ) ನಿರ್ಮಿಸಿಕೊಂಡಿದ್ದರು. ಇದರಲ್ಲಿ ದರ್ಬಾರ್‌ ಹಾಲ್‌ ವಿಶಾಲವಾಗಿರುತ್ತಿದ್ದವು. ಮುಧೋಳದಲ್ಲಿ ಮರಾಠ ಬುಡಕಟ್ಟಿನ ಘೋರ್ಪಡೆಯವರು ಸುಮಾರು 200 ವರ್ಷಗಳ ಹಿಂದೆ ಅರಮನೆ ಕಟ್ಟಿದ್ದರು. ಈ ಪ್ರಾಂತದ ಆಡಳಿತಕ್ಕೆ ಒಳಪಟ್ಟು ಕೆಲವು ಗ್ರಾಮಗಳಿದ್ದವು, ಇವೆಲ್ಲವೂ ಕೃಷಿ ಭೂಮಿಗಳಾಗಿದ್ದವು. ಅಕ್ಕಪಕ್ಕದ ಗ್ರಾಮಗಳೊಂದಿಗೆ ಸೌಹಾರ್ದ ಸಂಬಂಧವಿರಿಸಿಕೊಳ್ಳುತ್ತಿದ್ದ ಘೋರ್ಪಡೆಯವರು ರಾಯಲ್‌ ಕೋರ್ಟ್‌ನ ಪ್ರಮುಖ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಮಂತ್ರಿಗಳನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ಮುಧೋಳದ ರಾಜರ ಬಹುತೇಕ ಅಧಿಕಾರಗಳು ಕೈತಪ್ಪಿದವು. ಮುಧೋಳದ ರಾಜರ ಗುಣನಡತೆಯಿಂದಾಗಿ ಜನರೇ ಸ್ವಯಂಪ್ರೇರಿತರಾಗಿ ತಮ್ಮ ಆಡಳಿತಗಾರರಾಗಿ ಘೋರ್ಪಡೆಯವರನ್ನು ಒಪ್ಪಿಕೊಂಡಿದ್ದರು. ಇದರಿಂದಾಗಿ ಬ್ರಿಟಿಷರು ಮುಧೋಳದ ರಾಜರಿಗೆ ಆಡಳಿತವನ್ನು ಕೊಟ್ಟಿದ್ದರು. 

ಕಾಲಕ್ರಮೇಣ ಅರಮನೆ ಶಿಥಿಲಾವಸ್ಥೆಗೆ ಬಂದಾಗ ಪಕ್ಕದಲ್ಲಿ ಇನ್ನೊಂದು ಅರಮನೆಯನ್ನು ಕಟ್ಟಿಕೊಂಡರು. ಹಳೆಯ ಅರಮನೆ ಕಟ್ಟಡ  ಪಾಳುಬಿತ್ತು. ಅಕ್ಕಪಕ್ಕದ ವರು ಒಂದೊಂದೇ ಭಾಗವನ್ನು ಅತಿಕ್ರಮಿಸಿಕೊಂಡ ಪರಿಣಾಮ ದರ್ಬಾರ್‌ ಸಭಾಂಗಣ ಮಾತ್ರ ಉಳಿದಿತ್ತು. 

ಮುಧೋಳ  ರಾಜ ಮನೆತನದವರು ಜಮ ಖಂಡಿಯ ಗುಜರಾತಿ ವ್ಯಾಪಾರಿ ಓಸ್ವಾಲ್‌ ಕುಟುಂಬದವರಿಗೆ ಅಳಿದುಳಿದ ದರ್ಬಾರ್‌ ಹಾಲ್‌ ಸಹಿತ ಎಲ್ಲ ಭೂಮಿಗಳನ್ನು ಕೊಟ್ಟು ಪುಣೆಗೆ ಹೋದರು. ಹಸ್ತಶಿಲ್ಪ ಟ್ರಸ್ಟ್‌ ಓಸ್ವಾಲ್‌ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಮುಧೋಳ ಅರಮನೆಯ ದರ್ಬಾರ್‌ ಸಭಾಂಗಣವನ್ನು ಹೊಸದಿಲ್ಲಿಯ ನಾರ್ವೆ ರಾಯಭಾರ ಕಚೇರಿಯ ಸಹಕಾರದಿಂದ ಮಣಿಪಾಲಕ್ಕೆ ತಂದು ಪುನಃ ಸ್ಥಾಪಿಸಿತು. 
 
ಹಿಂದೂ ರಾಜರ ಕಟ್ಟಡಗಳಲ್ಲಿ ಮೊಘಲರ ಕಟ್ಟಡದ ಲಕ್ಷಣಗಳು ಕಾಣಸಿಗುತ್ತವೆೆ. ಬ್ರಿಟಿಷರ ಕಾಲದಲ್ಲಿ ಬ್ರಿಟಿಷರು ಇಂತಹ ಕಟ್ಟಡಗಳಿಗೆ ಪಾಶ್ಚಾತ್ಯ ಸ್ವರೂಪ ವಿನ್ಯಾಸಗಳನ್ನು ನೀಡಿದ್ದೂ ಇದೆ. ವಿಶಾಲವಾದ ಪ್ರವೇಶದ್ವಾರ, ಮರದ ಕೆತ್ತನೆಗಳು, ಕಿಂಡಿಗಳಲ್ಲಿ ಆಕರ್ಷಕ ಕೆತ್ತನೆಗಳಿವೆ. ರಾಜಸ್ಥಾನದಲ್ಲಿ ಸಭೆ ನಡೆಯುವಾಗ ರಾಜರು ಕೂರುತ್ತಿದ್ದ ಆಸನಗಳು, ತೂಗುದೀಪಗಳು, ಚಿತ್ರಕಲಾಕೃತಿಗಳು, ಟ್ರೋಫಿಗಳು, ಶಸ್ತ್ರಾಸ್ತ್ರಗಳನ್ನು ನೋಡಬಹುದು.

ಕವಿರಾಜ ರನ್ನ , ಮುಧೋಳ ನಾಯಿಗೆ ಪ್ರಸಿದ್ಧಿ
ಪ್ರಸಿದ್ಧ ಕವಿ ರನ್ನ ಮುಧೋಳದಲ್ಲಿ ಜನಿಸಿದವ. ಮುಧೋಳ ನಾಯಿ ತಳಿಯನ್ನು ಅಭಿವೃದ್ಧಿಪಡಿಸಿದ ಕೀರ್ತಿಯೂ ಮುಧೋಳ ರಾಜಮನೆತನದವರಿಗೆ ಇದೆ. ಆಗ ಬೇಟೆನಾಯಿಯಾಗಿ ಬಳಸುತ್ತಿದ್ದರು. 2003-04ರ ವೇಳೆ  ಓಸ್ವಾಲ್‌ ಕುಟುಂಬದವರೊಂದಿಗೆ ಎರಡು ಮೂರು ಬಾರಿ ಮಾತುಕತೆ ನಡೆಸಿ ಹಸ್ತಶಿಲ್ಪ ಟ್ರಸ್ಟ್‌ ಕಾರ್ಯದರ್ಶಿ ವಿಜಯನಾಥ ಶೆಣೈ ಕಟ್ಟಡವನ್ನು ಮಣಿಪಾಲಕ್ಕೆ ಸ್ಥಳಾಂತರಿಸಿದರು. ಕಟ್ಟಡವನ್ನು ಪುನಃ ನಿರ್ಮಿಸುವಾಗ ರಾಜಮನೆತನದ ಮೇನಕರಾಜೆ ಘೋರ್ಪಡೆ ಮತ್ತು ಗಂಡ ವಿಜಯರಾಜೆ ಅರಸ್‌ ಭೂಮಿ ಪೂಜೆ ನಡೆಸಿದ್ದರು. ಉದ್ಘಾಟನೆ ವೇಳೆ ಮೇನಕರಾಜೆ ಮತ್ತು ಅವರ ತಾಯಿ ಇಂದಿರಾ ರಾಜೆ ಘೋರ್ಪಡೆ ಆಗಮಿಸಿದ್ದರು. ಸುಮಾರು 15 ಕುಶಲಕರ್ಮಿಗಳು ಸುಮಾರು ಹತ್ತು ತಿಂಗಳು ಶ್ರಮ ಪಟ್ಟು ಪುನಾರಚಿಸಿದರು.

ನವೀನ ಹಳೆಯದು