ಒಳ್ಳೆ ಸುದ್ದಿ : ನಾಡಾ ಚಂಡಮಾರುತದ ಆಯಸ್ಸು 12 ಗಂಟೆ ಮಾತ್ರ
ತಮಿಳುನಾಡು, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಭಾರಿ ಮಳೆ ಭೀತಿ ಹುಟ್ಟಿಸಿರುವ 'ನಾಡಾ' ಚಂಡಮಾರುತದ ಆಯಸ್ಸು 12 ಗಂಟೆ ಮಾತ್ರ. 12 ಗಂಟೆಗಳ ಬಳಿಕ ಚಂಡಮಾರುತದ ಆರ್ಭಟ ತಗ್ಗಲಿದೆ
ಚೆನ್ನೈ, ನವೆಂಬರ್ 30: ತಮಿಳುನಾಡು, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಭಾರಿ ಮಳೆ ಭೀತಿ ಹುಟ್ಟಿಸಿರುವ 'ನಾಡಾ' ಚಂಡಮಾರುತದ ಆಯಸ್ಸು 12 ಗಂಟೆ ಮಾತ್ರ. 12 ಗಂಟೆಗಳ ಬಳಿಕ ಚಂಡಮಾರುತದ ಆರ್ಭಟ ತಗ್ಗಲಿದೆ ಎಂದು ಹವಾಮಾನ ಇಲಾಖೆ ಗುರುವಾರ ಹೇಳಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಗುರುವಾರದಿಂದಲೇ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಮಳೆ ಆರಂಭವಾಗಿದೆ. ಡಿಸೆಂಬರ್ 2ರಂದು ತಮಿಳುನಾಡಿನ ಕರಾವಳಿಗೆ 'ನಾಡಾ' ಅಪ್ಪಳಿಸಲಿದೆ.
ಚೆನ್ನೈನಿಂದ 770 ಕಿ.ಮೀ ದೂರದಲ್ಲಿತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿ ನಾಡಾ ಚಂಡಮಾರುತ ಏಳಲಿದ್ದು, ಡಿಸೆಂಬರ್ 2ರಂದು ಕಡಲೂರು ಮೂಲಕ ಭಾರತವನ್ನು ಪ್ರವೇಶಿಸಿ ಉತ್ತರ ತಮಿಳುನಾಡು ಕರಾವಳಿ ಮೂಲಕ ಹಾದು ಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲೂ ಮಳೆ: ತಮಿಳುನಾಡಿನಲ್ಲಿ ಬುಧವಾರ ಸಾಧಾರಣ ಮಳೆ, ಗುರುವಾರದಿಂದ ಮೂರು ದಿನ ಭಾರೀ ಮಳೆ ನಿರೀಕ್ಷೆಯಿದೆ. ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ಮುನ್ನಚ್ಚರಿಕೆ ಸಂದೇಶ: ತಮಿಳುನಾಡು ಮತ್ತು ಪುದುಚೇರಿ ವ್ಯಾಪ್ತಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಿಲ್ಲುಸುವಂತೆ ಸೂಚಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ತೀರ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಸಾಗಿದೆ.