ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?

ನವದೆಹಲಿ, ನವೆಂಬರ್ 08 : ಇಡೀ ಭಾರತದಲ್ಲಿ ಜನಸಾಮಾನ್ಯರಲ್ಲಿ, ಫೇಸ್ ಬುಕ್ಕಿನಲ್ಲಿ, ವಾಟ್ಸಾಪಿನಲ್ಲಿ ಒಂದೇ ಚರ್ಚೆ. ಅದು 500 ಮತ್ತು 1000 ರು. ನೋಟುಗಳ ಹಿಂತೆಗೆತದ ಕುರಿತು. ಹಿಂಗಾದ್ರೆ ಹೆಂಗೆ, ನಮ್ಮಲ್ಲಿರುವ ನೋಟುಗಳನ್ನು ಏನು ಮಾಡಬೇಕು... ಇತ್ಯಾದಿಗಳ ಬಗ್ಗೆ ಬಿಸಿಬಿಸಿ ಮಾತುಕತೆ ನಡೆಯುತ್ತಿದೆ.

ಕಪ್ಪು ಹಣಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಘೋಷಿಸಿದ್ದಾರೆ. ಆದರೆ, ಇದು ಜನಸಾಮಾನ್ಯರಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.

ಈ ಸುದ್ದಿ ಕೇಳುತ್ತಲೇ ಹಲವಾರು ಕಪ್ಪು ಹಣ ಹೊಂದಿರುವವರು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆದರೆ, ಮುಂದಿನ ಮೂರು ದಿನಗಳ ಕಾಲ, ಅಂದರೆ 72 ಗಂಟೆಗಳ ಕಾಲ ಆಸ್ಪತ್ರೆಗೂ ಕಪ್ಪು ಹಣವನ್ನು ನೀಡಬಹದು ಎಂಬಿತ್ಯಾದಿ ಜೋಕುಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. [500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್]


ಆದರೆ, ಜನಸಾಮಾನ್ಯರು ತಿಳಿಯಬೇಕಾಗಿರುವುದೇನು?

* 10ನೇ ನವೆಂಬರ್ ನಿಂದ 30ನೇ ಡಿಸೆಂಬರ್ ವರೆಗೆ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು, ಯಾವುದೇ ಮಿತಿಯಿಲ್ಲದೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಡೆಪಾಸಿಟ್ ಮಾಡಬಹುದು.

* ಎಟಿಎಂಗಳಲ್ಲಿ ದಿನಕ್ಕೆ 10,000 ಮತ್ತು ವಾರಕ್ಕೆ 20,000 ರು.ಗಳನ್ನು ಹಿಂತೆಗೆಯಲು ಸದ್ಯಕ್ಕೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.

* ಗುರುತಿನ ಚೀಟಿ ತೋರಿಸಿ ಹಳೆಯ 500 ರು. ಮತ್ತು 1000 ರು. ನೋಟುಗಳನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ವಿನಿಮಯ ಮಾಡಿಕೊಳ್ಳಬಹುದು. 24ನೇ ನವೆಂಬರ್ ವರೆಗೆ ಮಿತಿ 4000 ಮಾತ್ರ ಇರುತ್ತದೆ.

* ಮುಂದಿನ 72 ಗಂಟೆಗಳ ಕಾಲ ಆಸ್ಪತ್ರೆ, ವಿಮಾನ ನಿಲ್ದಾಣ, ಪೆಟ್ರೋಲ್ ಬಂಕ್, ರೈಲು ನಿಲ್ದಾಣಗಳಲ್ಲಿ ವಿಶೇಷವಾಗಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ.

* ಹೊಸ 500 ರು ಮತ್ತು 2000 ರು. ನೋಟುಗಳನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ.

* ನಗದಿಲ್ಲದ ವಹಿವಾಟು ಅಂದ್ರೆ, ಚೆಕ್, ಡಿಮಾಂಡ್ ಡ್ರಾಫ್ಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಗೆ ಅಥವಾ ಎಲೆಕ್ಟ್ರಾನಿಕ್ ಹಣ ರವಾನೆಗೆ ಯಾವುದೇ ನಿರ್ಬಂಧವಿರುವುದಿಲ್ಲ.

* 9ನೇ ನವೆಂಬರ್ ಮತ್ತು ಕೆಲವೆಡೆ 10ನೇ ನವೆಂಬರ್ ರಂದು ಎಟಿಎಂ ಕಾರ್ಯನಿರ್ವಹಿಸುವುದಿಲ್ಲ. ಕೆಲ ದಿನಗಳ ಕಾಲ ಪ್ರತಿದಿನ 2000 ರು.ಗಿಂತ ಹೆಚ್ಚು ಹಣವನ್ನು ಹಿಂತೆಗೆಯಲು ಸಾಧ್ಯವಾಗುವುದಿಲ್ಲ.

ನವೀನ ಹಳೆಯದು