ನಾಲ್ಕು ದಿನ ಕಳೆದರೂ ಈರುಳ್ಳಿ ಖರೀದಿ ಇಲ್ಲ! 



ಬಾಗಲಕೋಟೆ: ಜಿಲ್ಲೆಯಲ್ಲಿ ನವೆಂಬರ್ 4ರಿಂದ ಈರುಳ್ಳಿ ಖರೀದಿ ಕೇಂದ್ರ ಆರಂಭಿಸುವುದಾಗಿ ಸರ್ಕಾರ ಹೇಳಿದ್ದರೂ ವಾಸ್ತವವಾಗಿ ನಾಲ್ಕು ದಿನ ಕಳೆದರೂ ಇನ್ನೂ ಒಂದು ಕಿಲೋ ಈರುಳ್ಳಿ ಖರೀದಿಯಾಗಿಲ್ಲ!

 

ಖರೀದಿಯ ನಂತರ ನಿರ್ವಹಣೆ ಹಾಗೂ ಫಸಲನ್ನು ಬೇರೆಡೆ ಮಾರಾಟಕ್ಕೆ ಸಾಗಣೆ ಮಾಡಲು ರಾಜ್ಯ ಸಹಕಾರ ಮಾರಾಟ ಮಂಡಳ ಅಗತ್ಯ ಸಿದ್ಧತೆ ಮಾಡಿಕೊಳ್ಳದ ಕಾರಣ ಇನ್ನೂ ಈರುಳ್ಳಿ ಖರೀದಿ ಅಧಿಕೃತವಾಗಿ ಆರಂಭವಾಗಿಲ್ಲ ಎನ್ನಲಾಗುತ್ತಿದೆ. 

 

‘ಸರ್ಕಾರ ಸೂಚನೆ ನೀಡಿತು ಎಂಬ ಕಾರಣಕ್ಕೆ ಖರೀದಿ ಕೇಂದ್ರ ಆರಂಭಿಸಿ ದೆವು. ಆದರೆ ಪೂರ್ವಸಿದ್ಧತೆ ಮಾಡಿ ಕೊಳ್ಳದೇ ಖರೀದಿಗೆ ಮುಂದಾಗಿದ್ದು ನಮ್ಮ ತಪ್ಪು’ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

 

ಹಾಗಿದ್ದ ಮೇಲೆ ಖರೀದಿ ಕೇಂದ್ರ ಆರಂಭವಾಗಿದೆ ಎಂದು ಬೆಳೆಗಾರರಿಗೆ ಜಿಲ್ಲಾಡಳಿತದ ಮೂಲಕ ತಪ್ಪು ಮಾಹಿತಿ ಕೊಡಿಸಿದ್ದೇಕೆ ಎಂದು ಪ್ರಶ್ನಿಸಿದರೆ ಮೌನಕ್ಕೆ ಶರಣಾಗುತ್ತಾರೆ.

 

ಬಾಗಲಕೋಟೆ, ಬೀಳಗಿ ಹಾಗೂ ಹುನಗುಂದ ಸೇರಿದಂತೆ ಜಿಲ್ಲೆಯ ಮೂರು ಎಪಿಎಂಸಿ ಪ್ರಾಂಗಣಗಳಲ್ಲಿ ಕಳೆದ ಶುಕ್ರವಾರವೇ ಖರೀದಿ  ಕೇಂದ್ರಗಳ ತೆರೆಯಲಾಗಿದೆ. ಬಾದಾಮಿ ಹಾಗೂ ಮುಧೋಳ ಎಪಿಎಂಸಿಯಲ್ಲಿ ಸೋಮ ವಾರದಿಂದ ಖರೀದಿ ಆರಂಭಿಸಲಾಗುವುದು ಎಂದು ಹೇಳಲಾಗಿತ್ತು. ವಿಶೇಷವೆಂದರೆ ಬಾಗಲಕೋಟೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ಮೇಘಣ್ಣವರ ಅವರು ಈರುಳ್ಳಿ ಖರೀದಿ ಕೇಂದ್ರಕ್ಕೆ ಚಾಲನೆ          ನೀಡಿದ್ದರು. 

 

‘ಖರೀದಿ ಕೇಂದ್ರಗಳನ್ನು ನೆಪ ಮಾತ್ರಕ್ಕೆ ಆರಂಭಿಸಿದ್ದರು. ಆದರೆ ಖರೀದಿ ಆರಂಭಿಸಿರಲಿಲ್ಲ. ಅದೆಲ್ಲಾ ನಮ್ಮ ಕಣ್ಣೊರೆಸುವ ತಂತ್ರ’ ಎಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಾರೆ.

 

ನಾಳೆಯಿಂದ ಆರಂಭ?:  ಈರುಳ್ಳಿ ಖರೀದಿಯ ವೇಳೆ ನಿರ್ವಹಣೆ ನಂತರ ಸಂಗ್ರಹಣೆ ಹಾಗೂ ಬೇರೆಡೆಗೆ ಕೊಂಡೊ ಯ್ಯಲು ಸಾರಿಗೆ ಏಜೆನ್ಸಿಗಳಿಗಾಗಿ ಜಿಲ್ಲಾಡಳಿತದಿಂದ ಟೆಂಡರ್ ಕರೆಯಲಾಗಿತ್ತು. ಅದು ಸೋಮವಾರ ಅಂತಿಮಗೊಂಡಿದೆ. ಮಂಗಳವಾರ ದಿಂದ ಖರೀದಿ ಆರಂಭವಾಗಲಿದೆ ಎಂದು ರಾಜ್ಯ ಸಹಕಾರ ಮಾರಾಟ ಮಂಡಳದ ಜಿಲ್ಲಾ ವ್ಯವಸ್ಥಾಪಕ ಡಿ.ಕೆ.ಕಾಂಬಳೆ ಹೇಳುತ್ತಾರೆ.

 

ಹೆಸರು ನೋಂದಾಯಿಸಲಿ: ಈರುಳ್ಳಿ ಖರೀದಿಗೆ ಪಹಣಿಪತ್ರ, ಬ್ಯಾಂಕ್‌ ಪಾಸ್‌ ಬುಕ್ ಹಾಗೂ ತೋಟಗಾರಿಕೆ ಇಲಾಖೆಯಿಂದ ದೃಢೀಕರಣ ಪತ್ರ ಮತ್ತಿತರ ಅಗತ್ಯ ದಾಖಲೆಗಳನ್ನು ತಂದು ಹಿಂದಿನ ದಿನವೇ ಬೆಳೆಗಾರರು ಹೆಸರು ನೋಂದಾಯಿಸಿಕೊಳ್ಳಲಿ. ಜೊತೆಗೆ ಸ್ಯಾಂಪಲ್‌ಗೆ ಈರುಳ್ಳಿ ತರಲಿ. ಅದು ಒಪ್ಪಿಗೆಯಾದ ಮರು ದಿನ ಫಸಲು ತರಲಿ ಎಂದು ಕಾಂಬಳೆ ಮನವಿ ಮಾಡುತ್ತಾರೆ.

 

 

**

ಖರೀದಿ ಕೇಂದ್ರ ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಬೆಳೆಗಾರರ ಕಣ್ಣಿಗೆ ಮಣ್ಣೆರಚುವ ಕಾರ್ಯ ಸರ್ಕಾರದಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. 

–ಶಿವಾನಂದ ಕೋಗಿಲ

ರೈತ ಸಂಘದ ಮುಖಂಡ

 

**

ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಖರೀದಿ ಆರಂಭಿಸಿರಲಿಲ್ಲ. ಈಗ ಆ ಪ್ರಕ್ರಿಯೆ ಪೂರ್ಣಗೊಂಡಿದೆ. ಹಾಗಾಗಿ ಮಂಗಳವಾರದಿಂದ ಅಧಿಕೃತ ವಾಗಿ ಖರೀದಿ ಕೇಂದ್ರಗಳು ಕಾರ್ಯಾ ರಂಭ ಮಾಡಲಿವೆ

–ಡಿ.ಕೆ.ಕಾಂಬಳೆ

ಸಹಕಾರ ಮಹಾಮಂಡಳದ ವ್ಯವಸ್ಥಾಪಕ

ನವೀನ ಹಳೆಯದು