ಗಣರಾಜ್ಯೋತ್ಸವ ಪರೇಡ್‌ಗೆ ಮುಧೋಳ ನಾಯಿ!

ಗಣರಾಜ್ಯೋತ್ಸವ ಪರೇಡ್‌ಗೆ ಮುಧೋಳ ನಾಯಿ!



ಬಾಗಲಕೋಟೆ: ಭಾರತೀಯ ಸೇನೆಯ ಶ್ವಾನ ದಳಕ್ಕೆ ಸೇರ್ಪಡೆಯಾಗಿದ್ದ ಮುಧೋಳ ತಳಿಯ 10 ನಾಯಿಗಳು ಇದೀಗ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿವೆ.

ಬೀದರ್‌ನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗವಾದ ಮುಧೋಳ ತಾಲ್ಲೂಕು ತಿಮ್ಮಾಪುರದ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರದ ಈ ನಾಯಿಗಳನ್ನು 2015ರ ಫೆಬ್ರುವರಿ 24ರಂದು ಸೇನೆಯ ಶ್ವಾನದಳಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ನಂತರ ಅವುಗಳಿಗೆ ಉತ್ತರ ಪ್ರದೇಶದ ಮೀರಠ್‌ನಲ್ಲಿರುವ ಭಾರತೀಯ ಸೇನೆಯ ರಿಮೌಂಟ್ ವೆಟರ್ನರಿ ಕಾರ್ಪ್‌ (ಆರ್‌ವಿಸಿ) ಕೇಂದ್ರದಲ್ಲಿ 10 ತಿಂಗಳ ಕಾಲ ಕಠಿಣ ತರಬೇತಿ ನೀಡಲಾಗಿದೆ.

‘ತರಬೇತಿ ಅವಧಿಯಲ್ಲಿ ಈ ಶ್ವಾನಗಳಿಗೆ ಮೂಲ ಆದೇಶಗಳ ಪಾಲನೆ, ಸ್ಫೋಟಕಗಳ ಪತ್ತೆ, ಅಪರಾಧಿಗಳ ಜಾಡು ಹಿಡಿಯುವುದು, ರಾತ್ರಿ ವೇಳೆ ಕಾರ್ಯಾಚರಣೆ, ಕಾವಲು ಕಾಯುವುದು, ಶತ್ರುವಿನ ನೆಲೆ ಗುರುತಿಸುವಿಕೆ ಸೇರಿದಂತೆ ವಿವಿಧ ನೈಪುಣ್ಯ ಕಲಿಸಲಾಗಿದೆ. ಸೇನೆಯ ದೈನಂದಿನ ಸೇವೆಗೆ ತೆರಳುವ ಮುನ್ನ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅವು ಭಾಗವಹಿಸುತ್ತಿವೆ’ ಎಂದು ಕೇಂದ್ರದ ಮುಖ್ಯಸ್ಥ ಡಾ. ಮಹೇಶ ಎಸ್. ದೊಡ್ಡಮನಿ ಹೇಳುತ್ತಾರೆ.

ಅಧಿಕೃತ ಆಹ್ವಾನ ಬಾಕಿ: ಮುಧೋಳ ತಳಿ ನಾಯಿಗಳಿಗೆ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವ ಬಗ್ಗೆ ಅವುಗಳನ್ನು ತರಬೇತಿಗೆ ಒಯ್ದಿದ್ದ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಸುರೇಂದ್ರ ಸೈನಿ ತಿಳಿಸಿದ್ದಾರೆ.

‘ಇನ್ನು ಸೇನೆಯಿಂದ ಅಧಿಕೃತ ಆಹ್ವಾನ ಮಾತ್ರ ಬಾಕಿ ಇದೆ. ಶ್ವಾನ ದಳದಲ್ಲಿ ಬಳಕೆ ಮಾಡಿಕೊಳ್ಳಲು ಮುಧೋಳ ತಳಿ ಅರ್ಹ ಎಂಬ ಪ್ರಮಾಣಪತ್ರವನ್ನು ಸೇನೆ ಅದೇ ದಿನ ವಿಶ್ವವಿದ್ಯಾಲಯಕ್ಕೆ ನೀಡಲಿದೆ’ ಎಂದು ಡಾ.ಮಹೇಶ ತಿಳಿಸಿದರು.

ತಿಮ್ಮಾಪುರದಲ್ಲಿ ಮುಧೋಳ ನಾಯಿಗಳ ತಳಿ ಅಭಿವೃದ್ಧಿ ಹಾಗೂ ಸಂಶೋಧನೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಅಲ್ಲಿ 65 ನಾಯಿಗಳು ಇವೆ. ಅದರಲ್ಲಿ 30 ದಿನದಿಂದ 45 ದಿನಗಳ ವಯೋಮಾನದ 25 ಮರಿಗಳು ಸೇರಿವೆ.

ಹೆಚ್ಚಿದ ಬೇಡಿಕೆ: ಭಾರತೀಯ ಸೇನೆಗೆ ಸೇರ್ಪಡೆಯಾದ ನಂತರ ಮುಧೋಳ ತಳಿ ನಾಯಿಗಳಿಗೆ ಬೇಡಿಕೆ ಹೆಚ್ಚಿದೆ. ಖಾಸಗಿಯವರು ಮನೆಯಲ್ಲಿ ಸಾಕಲು ಹಾಗೂ ಹೊಲ, ಗದ್ದೆ, ತೋಟಗಳಲ್ಲಿ ಕಾವಲು ಕಾಯಲು ಮುಧೋಳ ತಳಿಯನ್ನು ಆಯ್ಕೆ ಮಾಡುತ್ತಿದ್ದಾರೆ.  ಪ್ರತಿದಿನ 4ರಿಂದ 6 ಮರಿಗಳು ಮಾರಾಟವಾಗುತ್ತಿವೆ. ಈಗ ಮೂರು ತಿಂಗಳ ವಯೋಮಾನದ ನಾಯಿ ಮರಿಯನ್ನು ₹ 25 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ, ಹಿಮಾಚಲಪ್ರದೇಶ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಿಂದ ಇಲ್ಲಿಗೆ ಬಂದು ನಾಯಿಗಳನ್ನು ಕೊಂಡೊಯ್ಯುತ್ತಿದ್ದಾರೆ.

ಅರೆಸೇನಾ ಪಡೆ ಬೇಡಿಕೆ: ‘ಅರೆಸೇನಾ ಪಡೆ ಹಾಗೂ ಬೇರೆ ಬೇರೆ ತನಿಖಾ ಸಂಸ್ಥೆಗಳಿಂದಲೂ ಬೇಡಿಕೆ ಬಂದಿದೆ. ಇಂಡೊ–ಟಿಬೆಟ್‌ ಬಾರ್ಡರ್ ಪೊಲೀಸ್ (ಐಟಿಬಿಪಿ) ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳಿಂದಲೂ (ಸಿಐಎಸ್‌ಎಫ್) ನಾಯಿಗಳನ್ನು ಪೂರೈಸುವಂತೆ ಬೇಡಿಕೆ ಸಲ್ಲಿಸಿವೆ’ ಎಂದು ಡಾ.ಮಹೇಶ್ ತಿಳಿಸಿದರು.

ನವೀನ ಹಳೆಯದು