ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ
ಬಾಗಲಕೋಟ: ತೀವ್ರ ಬರದಿಂದ ಕಂಗಾಲಾಗಿರುವ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರೈತರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು.
ಜಿಲ್ಲಾಡಳಿತ ಭವನಕ್ಕೆ ರಾರಯಲಿ ಮೂಲಕ ಆಗಮಿಸಿದ ರಾಜ್ಯ ರೈತರ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ರೈತರ ಹಿತರಕ್ಷಣೆ ಘಟಕದ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ಧರಣಿ ನಡೆಸಿದರು. ರೈತರನ್ನುದ್ದೇಶಿಸಿ ಮಾತನಾಡಿದ ಮುಖಂಡ ವೀರಣ್ಣ ಹಳೆಗೌಡರ 'ರಾಜ್ಯದೆಲ್ಲೆಡೆ ಬರ ಆವರಿಸಿದ್ದು, ರೈತರ ಜೀವನ ಸಂಕಷ್ಟಕರವಾಗಿದೆ. ಜಾನುವಾರುಗಳಿಗೆ ಹಾಗೂ ಜನರಿಗೆ ಕುಡಿವ ನೀರು ಒದಗಿಸಲು ತಕ್ಷಣ ಬೋರ್‌ವೆಲ್‌ಗಳನ್ನು ಕೊರೆಸಬೇಕು. ರೈತರ ಕೃಷಿಗೆ ನೀರು ಪೂರೈಸಬೇಕು. ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಸರಕಾರವಿದ್ದರೂ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ' ಎಂದು ಎಚ್ಚರಿಸಿದರು. ರೈತ ಮುಖಂಡರು ಮಾತನಾಡಿ 'ತೀವ್ರ ಬರವಿದ್ದರೂ ಅಧಿಕಾರಿಗಳು ಸಾಕಷ್ಟು ಮೇವು ಲಭ್ಯವಿದೆ ಎಂದು ವರದಿ ನೀಡಿದ್ದಾರೆ. ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳು ವಿಳಂಬವಾಗುತ್ತಿವೆ. ಸರಕಾರ ತಕ್ಷಣ ರೈತರ ಸಾಲ ಮನ್ನಾ ಮಾಡಬೇಕು, ಪ್ರತಿ ಪಂಚಾಯಿತಿಗೆ ತಲಾ ಒಂದು ಮೇವು ಬ್ಯಾಂಕ್ ಆರಂಭಿಸಬೇಕು. ಜೂನ್ ತಿಂಗಳೊಳಗಾಗಿ ಬರ ಪರರಿಹಾರ ಕಾಮಗಾರಿ ಪೂರ್ಣಗೊಳಿಸಬೇಕು. ರೈತರ ಹಿತ ಕಾಪಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಬರ ಸ್ಥಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಬೇಕು' ಎಂದು ಒತ್ತಾಯಿಸಿದರು. ರೈತ ಸಂಘದ ಕಾರ್ಯದರ್ಶಿ ಎಸ್.ವಿ.ಜೀರಗಾಳ, ಆರ್.ಎಚ್.ಸುನಗದ, ಮುತ್ತಪ್ಪ ಹಿರೇಕುಂಬಿ, ಗುರುಬಸಪ್ಪ ವಡ್ಡರಕಲ್ಲ, ರಾಯಪ್ಪ ಹೊರಪೇಟಿ ಮುಂತಾದವರು ಭಾಗವಹಿಸಿದ್ದರು.