ರಾಜ್ಯ ಸರ್ಕಾರದಿಂದ ದ್ವೇಷ ರಾಜಕಾರಣ : ಕಾರಜೋಳ ಟೀಕಾ ಪ್ರಹಾರ

ರಾಜ್ಯ ಸರ್ಕಾರದಿಂದ ದ್ವೇಷ ರಾಜಕಾರಣ : ಕಾರಜೋಳ ಟೀಕಾ ಪ್ರಹಾರ

 

ಬೆಂಗಳೂರು,ಮಾ.1-ಕಾನೂನು ಬಾಹಿರ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಸಿಎಜಿ ವರದಿ ಆಧರಿಸಿ ರಾಜ್ಯ ಸರ್ಕಾರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ದ ಸುಪ್ರೀಂಕೋರ್ಟ್‍ನಲ್ಲಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಮುಂದಾಗಿ ರುವುದು ದ್ವೇಷದ ರಾಜಕಾರಣಕ್ಕೆ ಮುನ್ನುಡಿ ಬರೆಯಲಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.   ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯ ದಾಖಲಿಸಿದ್ದ ಎಫ್‍ಐಆರ್‍ಗಳನ್ನು ಹೈಕೋರ್ಟ್ ಪೀಠ ವಜಾಗೊಳಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಹೆಚ್ಚುವರಿ ದಾಖಲೆಗಳ ಸಲ್ಲಿಕೆ ಏಕೆ ಎಂದು ಪ್ರಶ್ನಿಸಿದರು.

ಸಿಬಿಐ ವಿಶೇಷ ನ್ಯಾಯಾಲಯ ಹಾಗೂ ಹೈಕೋರ್ಟ್ ಅವರ ಮೇಲಿದ್ದ ಪ್ರಕರಣ ಗಳನ್ನು ಈಗಾಗಲೇ ರದ್ದುಪಡಿಸಿದೆ. ಡಿನೋಟಿಫಿ ಕೇಷನ್ ನಿರಂತರವಾದ ಪ್ರಕ್ರಿಯೆಯಾಗಿದ್ದು , ಯಡಿಯೂರಪ್ಪ ಅಧಿಕಾರಕ್ಕೆ ಬರಬಾರದು ಎಂಬ ಏಕೈಕ ಕಾರಣಕ್ಕಾಗಿ ಸರ್ಕಾರ ದ್ವೇಷ ರಾಜಕಾರಣ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದರು.   1999ರಿಂದ 2016ರವರೆಗೆ ಒಟ್ಟು 600 ಎಕರೆ ಡಿನೋಟಿಫಿಕೇಷನ್ ಮಾಡಲಾಗಿದೆ. ಈ ಅವಧಿಯಲ್ಲಿ ಎಲ್ಲ ಮುಖ್ಯಮಂತ್ರಿಗಳು ಡಿನೋಟಿಫಿಕೇಷನ್ ಮಾಡಿರುವಾಗ ಕೇವಲ ಬಿಎಸ್‍ವೈ ಅವರನ್ನೇ ಏಕೆ ಸರ್ಕಾರ ಟಾರ್ಗೆಟ್ ಮಾಡಿದೆ ಎಂದು ಕಾರಜೋಳ ಪ್ರಶ್ನಿಸಿದರು.

ಸಿಎಜಿ ವರದಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಪ್ರತಿ ವರ್ಷವೂ ಇದರ ಆಡಿಟ್ ನಡೆ ಯುತ್ತಿರುತ್ತದೆ. ವರದಿ ಗೌಪ್ಯ ನಡೆದಿರುವ ನಿದರ್ಶನಗಳಿವೆ. ಸಿಎಜಿ ವರದಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಸರ್ಕಾರ ಇದನ್ನೇ ಮುಂದಿಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಿಎಜಿ ವರದಿ ಅಂತಿಮವಲ್ಲ ಎಂಬುದು ಸರ್ಕಾರಕ್ಕೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಈ ವರದಿಯನ್ನು ಮಂಡಿಸಿ ನಂತರ ಸಮಿತಿಯು ತನ್ನ ಅಭಿಪ್ರಾಯ ನೀಡಬೇಕು. ಬಳಿಕ ವಿಧಾನಮಂಡಲದ ಉಭಯ ಸದನಗಳಲ್ಲಿ ಇದನ್ನು ಮಂಡಿಸಿದರೆ ಮಾತ್ರ ಕ್ರಮಕೈಗೊಳ್ಳಲು ಸಾಧ್ಯ. ಯಡಿಯೂರಪ್ಪನವರ ಜನಪ್ರಿಯತೆ ಹಾಗೂ ಅವರು ಮುಂದಿನ ಬಾರಿ ಮುಖ್ಯ ಮಂತ್ರಿಯಾಗಬಾರದೆಂಬ ಕಾರಣಕ್ಕೆ ಸರ್ಕಾರ ಈ ಷಡ್ಯಂತ್ರ ನಡೆಸಿದೆ ಎಂದು ಟೀಕಾ ಪ್ರಹಾರ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರ ದೆಂಬುದು ಕಾಂಗ್ರೆಸ್‍ನ ಕುತಂತ್ರವಾಗಿದೆ. ಅದಕ್ಕಾಗಿ ಮುಚ್ಚಿ ಹೋಗಿರುವ ಪ್ರಕರಣಗಳಿಗೆ ಮತ್ತೆ ಜೀವ ಕೊಡುವ ಹುನ್ನಾರ ನಡೆಯುತ್ತಿದೆ. ಇದರಿಂದ ನಮ್ಮ ಪಕ್ಷಕ್ಕೆ ಯಾವ ಆತಂಕವೂ ಇಲ್ಲ. ಚುನಾವಣೆಯಲ್ಲಿ ಈ ಕುತಂತ್ರಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿರುವುದರಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಜನರು ಉದ್ಯೋಗವಿಲ್ಲದೆ ಗುಳೇ ಹೋಗುತ್ತಿದ್ದಾರೆ.  ಮರಳು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವ ಬದಲು ಸರ್ಕಾರ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಸತತ ಮೂರು ವರ್ಷ ಬರಗಾಲ ಬಂದರೂ ಸರ್ಕಾರ ಇದರ ಬಗ್ಗೆ ಗಮನಹರಿಸಲಿಲ್ಲ. ಮರಳು ಮಾಫಿಯಾ ತಡೆಗಟ್ಟಲು ವಿಫಲವಾಗಿದ್ದು , ಅಧಿಕಾರಿಗಳ ಮೇಲೆ ಗೂಂಡಾಗಳು ಹಲ್ಲೆ ನಡೆಸುತ್ತಿದ್ದಾರೆ. ಮೊದಲು ಗೋಶಾಲೆ, ಮೇವು ಬ್ಯಾಂಕ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು.   ಕಳೆದ ಎರಡು ತಿಂಗಳಿನಿಂದ ಸೀಮೆಎಣ್ಣೆ ವಿತರಣೆ ಮಾಡದೆ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಜನರು ತೊಂದರೆ ಅನುಭವಿಸು ತ್ತಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಪಡಿತರಧಾನ್ಯಗಳು ವಿತರಣೆಯಾಗುವುದಿಲ್ಲ. ಇದರ ವಿರುದ್ಧ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಗೋವಿಂದ ಕಾರಜೋಳ ಹೇಳಿದರು.   ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ನಮ್ಮ ಪಕ್ಷದ ಹೈಕಮಾಂಡ್‍ಗೆ ಹಣ ನೀಡಿರುವ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

ನವೀನ ಹಳೆಯದು