ಮುಧೋಳ: ಉತ್ತರ ಕರ್ನಾಟಕದ ಬಹುತೇಕ ಬಸ್ ನಿಲ್ದಾಣಗಳ ಆಧುನೀಕರಣಕ್ಕೆ ಸರಕಾರ ಒತ್ತು ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದ ಬಸ್ ನಿಲ್ದಾಣದಲ್ಲಿ ನೂತನ ನಿಲ್ದಾಣ ಕಾಮಗಾರಿಗೆ ಬುಧವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಮುಧೋಳ ಬಸ್ ನಿಲ್ದಾಣ ಕಾಮಗಾರಿಗೆ ಈಗಾಗಲೇ 2.5 ಕೋಟಿ ಹಾಗೂ ಲೋಕಾಪುರ ನಿಲ್ದಾಣಕ್ಕೆ 1ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಲೋಕಾಪುರ ನಿಲ್ದಾಣ 2018 ರ ಜನವರಿಯಲ್ಲಿ ಉದ್ಘಾಟನೆಗೆ ಸಜ್ಜಾಗಲಿದೆ. ಆದರೆ ಮುಧೋಳ ನಿಲ್ದಾಣ ಕಾಮಗಾರಿ ಸ್ವಲ್ಪ ವಿಳಂಬವಾಗಲಿದೆ ಎಂದರು.
ವಸತಿ ಗೃಹ:
ಮುಧೋಳದ 6 ಎಕರೆ ಜಾಗೆಯಲ್ಲಿ ಸುಸಜ್ಜಿತ ನೌಕರರ ವಸತಿ ಸಮುಚ್ಚಯ ನಿರ್ಮಿಸಲಾಗುವುದು. ಮುಧೋಳದಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ ಶೀಘ್ರವೇ ಆರಂಭಿಸಲು ಕ್ರಮ ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಮುಧೋಳ ಘಟಕದಲ್ಲಿ 19 ಹೊಸ ಬಸ್ ನೀಡಲಾಗುವುದು. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಿ ದೂರು ಬಾರದಂತೆ ನೌಕರರು ಎಚ್ಚರವಹಿಸಬೇಕು ಎಂದರು.
ತಿಂಗಳಲ್ಲಿ ಉದ್ಘಾಟನೆ:
ನವನಗರ, ಬಾಗಲಕೋಟ, ಬಾದಾಮಿ ಸೇರಿದಂತೆ ನೂತನ ಬಸ್ ನಿಲ್ದಾಣಗಳನ್ನು ತಿಂಗಳಲ್ಲಿ ಉದ್ಘಾಟನೆಗೊಳಿಸಲಾಗುವುದು ಎಂದ ಸಚಿವರು, ಸಂಕೇಶ್ವರ, ಮುಧೋಳ, ಹಳಿಯಾಳ, ಮುಳಗುಂದ, ಗುಳೇದಗುಡ್ಡ, ಜಮಖಂಡಿ, ರಾಮದುರ್ಗ, ಅಂಕಲಗಿ, ಗದಗ, ನರಗುಂದ, ರಾಣೆಬೆಣ್ಣೂರ ಬಸ್ ಘಟಕ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ನಿಗಮದ 24 ಸಾವಿರ ಬಸ್‌ಗಳಲ್ಲಿ 1 ಕೋಟಿ 12 ಲಕ್ಷ ಜನರು ನಿತ್ಯ ಪ್ರಯಾಣಿಸುತ್ತಿದ್ದಾರೆ ಎಂದರು.
ನಿಗಮದ ಅಧ್ಯಕ್ಷ ಸದಾನಂದ ಡಂಗನ್ನವರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ರಾಮಲಿಂಗಾರೆಡ್ಡಿಯವರು 1050 ಹೊಸ ಬಸ್‌ಗಳನ್ನು ರಾಜ್ಯದ ನಾನಾ ಘಟಕಗಳಿಗೆ ಒದಗಿಸಲಿದ್ದಾರೆ. ಪ್ರಯಾಣಿಕರಲ್ಲೂ ಬಸ್ ನಮ್ಮವು ಎನ್ನುವ ಭಾವನೆ ಬರಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಶಾಸಕ ಗೋವಿಂದ ಕಾರಜೋಳ ಮಾತನಾಡಿ, ನಗರ ಸಾರಿಗೆ ಬಸ್‌ಗಳನ್ನು ಮುಧೋಳದಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಬೇಕು. ಸಾರಿಗೆ ಸಂಸ್ಥೆಯ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಮಾತನಾಡಿ, ಮುಧೋಳ ಹಾಗೂ ಲೋಕಾಪುರ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಸಚಿವರಲ್ಲಿ ಮನವಿ ಮಾಡಿಕೊಂಡಾಗ ತಕ್ಷಣ ಮಂಜೂರು ನೀಡಿದ್ದಾರೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ ಅವರೇ ಈ ಬಸ್ ನಿಲ್ದಾಣ ಉದ್ಘಾಟನೆಗೂ ಆಗಮಿಸಲಿದ್ದಾರೆ ಎಂದರು.
ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಜಿಪಂ ಸದಸ್ಯ ಮಹಾಂತೇಶ ಉದಪುಡಿ, ಗುರುರಾಜ ಕಟ್ಟಿ, ಲೋಕಣ್ಣ ಕೊಪ್ಪದ, ಎಚ್.ಎ.ಕಡಪಟ್ಟಿ, ಕೆ.ಆರ್.ಮಾಚಪ್ಪನ್ನವರ, ರಫಿಕ್ ಭೈರಕದಾರ, ದಯಾನಂದ ಪಾಟೀಲ, ನಂದುಗೌಡ ಪಾಟೀಲ, ಮುತ್ತಣ್ಣ ಹಿಪ್ಪರಗಿ, ಪ್ರಕಾಶ ಲಿಂಬಿಕಾಯಿ, ಗಿರೀಶ ಮೇತ್ರಿ, ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯಕ, ಜಿಲ್ಲಾ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ, ಘಟಕ ವ್ಯವಸ್ಥಾಪಕ ಪ್ರಶಾಂತ ಸುರಪುರ ಮತ್ತಿತರರಿದ್ದರು.
ಟ್ರಾಫಿಕ್ ಜಾಮ್
ಮುಧೋಳ ಬಸ್ ನಿಲ್ದಾಣದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ ವೇಳೆ ಟ್ರಾಫಿಕ್ ಜಾಮ್ ನಿರ್ಮಾಣವಾಗಿ ಕಿಲೋ ಮೀಟರ್‌ಗಟ್ಟಲೇ ವಾಹನ ನಿಂತಿದ್ದವು. ಇದರಿಂದ ಪ್ರಯಾಣಿಕರು ಪ್ರಯಾಸಪಟ್ಟರು. ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರು ಕಾರ್ಯಕ್ರಮಕ್ಕೆ ಗೈರು ಆಗಿದ್ದು ಕಂಡುಬಂತು.
ಲೋಕಾಪುರದಲ್ಲಿ ಶಂಕುಸ್ಥಾಪನೆ
ಲೋಕಾಪುರ: ಪಟ್ಟಣದಲ್ಲಿ ಬಹುನಿರೀಕ್ಷಿತ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕು ಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು, ಅಂದಾಜು 1 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ. ಪ್ರಯಾಣಿಕರ ಸೌಲಭ್ಯಕ್ಕಾಗಿ ನಿಲ್ದಾಣದಲ್ಲಿ ಉಪಹಾರ ಗೃಹ, ನಿಯಂತ್ರಕರ ಕೊಠಡಿ, ಮಹಿಳೆಯರಿಗೆ ವಿಶ್ರಾಂತಿ ಗೃಹ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.
ಶಾಸಕ ಗೋವಿಂದ ಕಾರಜೋಳ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಜಿಪಂ ಸದಸ್ಯ ಮಹಾಂತೇಶ ಉದಪುಡಿ, ತಾಪಂ ಸದಸ್ಯ ರಫಿಕ್ ಭೈರಕದಾರ, ಯಮನಪ್ಪ ಹೊರಟ್ಟಿ, ಮಹಾನಿಂಗಪ್ಪ ಹುಂಡೇಕಾರ, ಕೆ.ಆರ್. ಮಾಚಪ್ಪನವರ, ಬಿ.ಎಲ್.ಬಬಲಾದಿ, ಆನಂದ ಹಿರೇಮಠ, ಪ್ರಕಾಶ ಚುಳಕಿ, ದಯಾನಂದ ಪಾಟೀಲ, ಲೋಕಣ್ಣ ಕೊಪ್ಪದ, ಭೀಮಶಿ ಹಲಕಿ, ಮಾರುತಿ ರಂಗಣ್ಣವರ ಮತ್ತಿತರರಿದ್ದರು.
ಮಾತಿನ ಚಕಮಕಿ
ಲೋಕಾಪುರ ನೂತನ ಬಸ್ ನಿಲ್ದಾಣದ ಶಂಕು ಸ್ಥಾಪನೆ ವೇಳೆ ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ ಬಂದಿರಲಿಲ್ಲ. ಈ ವೇಳೆ ಶಂಕು ಸ್ಥಾಪನೆಗೆ ಮುಂದಾದಾಗ, ಜಿಪಂ ಸದಸ್ಯ ಮಹಾಂತೇಶ ಉದಪುಡಿ ತಡೆ ಹಿಡಿದರು. ಆಗ ಶಾಸಕ ಗೋವಿಂದ ಕಾರಜೋಳ ಮತ್ತು ಉದಪುಡಿ ನಡುವೆ ಮಾತಿನ ಚಕಮಕಿ ನಡೆಯಿತು. ಸಾರಿಗೆ ಸಚಿವರ ಸಮಾಧಾನಪಡಿಸುವ ವೇಳೆಗೆ ಆರ್.ಬಿ. ತಿಮ್ಮಾಪೂರ ಆಗಮಿಸಿದರು. ಇಬ್ಬರನ್ನು ಕರೆದುಕೊಂಡು ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.