ಕೇರಳಕ್ಕೆ ಅಡಿಇಟ್ಟ ಮುಂಗಾರು

ಕೇರಳಕ್ಕೆ ಅಡಿಇಟ್ಟ ಮುಂಗಾರು

ಕೇರಳ ಮಾತ್ರವಲ್ಲದೇ ತಮಿಳುನಾಡಿನ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಈಶಾನ್ಯ ರಾಜ್ಯಗಳಾದ  ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳಲ್ಲೂ ನೈರುತ್ಯ ಮುಂಗಾರು ಮಳೆ ಸುರಿಸಿದೆ.
ಕೇರಳಕ್ಕೆ ಅಡಿಇಟ್ಟ ಮುಂಗಾರು
ತಿರುವನಂತಪುರ: ನಿರೀಕ್ಷೆಯಂತೆಯೇ ವಾಡಿಕೆಗಿಂತ ಎರಡು ದಿನ ಮೊದಲು ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಮಂಗಳವಾರ ಮಳೆ ಸುರಿಯಲು ಆರಂಭವಾಗಿದೆ.
ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಕರ್ನಾಟಕದ ಕರಾವಳಿ ಮತ್ತು ಒಳನಾಡು ಪ್ರದೇಶಗಳಿಗೂ ಮುಂಗಾರು  ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಕೇರಳ ಮಾತ್ರವಲ್ಲದೇ ತಮಿಳುನಾಡಿನ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಈಶಾನ್ಯ ರಾಜ್ಯಗಳಾದ  ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳಲ್ಲೂ ನೈರುತ್ಯ ಮುಂಗಾರು ಮಳೆ ಸುರಿಸಿದೆ.
ಬಾಂಗ್ಲಾದೇಶ ಕರಾವಳಿಯನ್ನು ಮಂಗಳವಾರ ಹಾದು ಹೋದ  ‘ಮೊರಾ’ ಚಂಡಮಾರುತ, ಈಶಾನ್ಯ ಭಾಗಗಳಲ್ಲಿ ನೈರುತ್ಯ ಮುಂಗಾರಿನ ಪ್ರವೇಶಕ್ಕೆ ಒತ್ತಾಸೆ ನೀಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
‘ಕಳೆದ 48 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ ಮಳೆಯಾಗಿರುವ ಬಗ್ಗೆ,  ಶೇ 78ರಷ್ಟು ಮಳೆ ಮಾಪನ ಕೇಂದ್ರಗಳು ಮಾಹಿತಿ ನೀಡಿವೆ. ರಾಜ್ಯದ ಇನ್ನಷ್ಟು ಭಾಗಗಳಿಗೆ  ನೈರುತ್ಯ ಮುಂಗಾರು ಮಂಗಳವಾರ ವ್ಯಾಪಿಸಿದೆ’ ಎಂದು ಅದು ಹೇಳಿದೆ. ‘ಉತ್ತಮ ಮಳೆಯಾಗುವುದಕ್ಕೆ ಅಗತ್ಯವಾದ ಪೂರಕ ವಾತಾವಾರಣ ನಿರ್ಮಾಣವಾಗಿದೆ’ ಎಂದು ಇಲಾಖೆಯ ತಿರುವನಂತಪುರ ವಿಭಾಗದ ನಿರ್ದೇಶಕ ಎಸ್‌. ಸುದೇವನ್‌  ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದ ಕೆಲ ವರ್ಷಗಳಿಂದ ಬರದಿಂದ ಬಸವಳಿದಿರುವ ರಾಜ್ಯಕ್ಕೆ ಮಳೆಯು ನವ ಉತ್ಸಾಹ ತುಂಬಲಿದೆ. ನಮ್ಮ ಜಲಾಶಯಗಳೆಲ್ಲ ಬರಿದಾಗಿವೆ. ಆದರೆ, ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಗಾಳಿಯು ಪ್ರಬಲವಾಗಿದೆ’ ಎಂದು ಅವರು ಹೇಳಿದರು.
ಈ ಬಾರಿ ದೀರ್ಘಾವಧಿ ಸರಾಸರಿ ಮಳೆಯ ಪ್ರಮಾಣ ಶೇ 96ರಷ್ಟು ಇರಲಿದೆ ಎಂದು ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿತ್ತು.
ಕಳೆದ ವರ್ಷ ನೈರುತ್ಯ ಮುಂಗಾರು ಮುನ್ಸೂಚನೆ ನೀಡಿದ್ದಕ್ಕಿಂತ ಒಂದು ದಿನ ತಡವಾಗಿ, ಅಂದರೆ ಜೂನ್‌ 8ಕ್ಕೆ ಕೇರಳ ಪ್ರವೇಶಿಸಿತ್ತು. ಸಾಮಾನ್ಯವಾಗಿ ಜೂನ್‌ 1 ರಂದು ನೈರುತ್ಯ ಮುಂಗಾರು ಕೇರಳಕ್ಕೆ ಕಾಲಿಡುತ್ತದೆ.
13 ಸೆಂ.ಮೀ ಮಳೆ: ಕೇರಳದ ದಕ್ಷಿಣ ಮತ್ತು ಮಧ್ಯ ಭಾಗದ ಜಿಲ್ಲೆಗಳಲ್ಲಿ ಸತತ ಮೂರನೇ ದಿನವೂ ಭಾರಿ ಮಳೆಯಾಗಿದೆ. ಆಲಪ್ಪುಳ (ಆಲೆಪ್ಪಿ) ಜಿಲ್ಲೆಯ ಮಾವೇಲಿಕ್ಕರ ಎಂಬಲ್ಲಿ ಮಂಗಳವಾರ 13 ಸೆಂ.ಮೀ ಮಳೆ ಬಿದ್ದಿದೆ. ಇದೇ ಜಿಲ್ಲೆಯ ಹರಿಪಾಡ್‌ ಮತ್ತು ಕಾಯಂಕುಳದಲ್ಲಿ 9 ಸೆಂ.ಮೀಗಳಷ್ಟು ಮಳೆಯಾಗಿದೆ.
ಚೆನ್ನೈ ವರದಿ: ತಮಿಳುನಾಡಿನ  ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ನೈರುತ್ಯ ಮುಂಗಾರು ಭಾರಿ ಮಳೆ ಸುರಿಸಿದೆ.
ಆದರೆ, ರಾಜಧಾನಿ ಚೆನ್ನೈ, ತಿರುವಳ್ಳೂರು ಮತ್ತು ಕಾಂಚೀಪುರಗಳಲ್ಲಿ ತೀವ್ರವಾಗಿ ಬೀಸುತ್ತಿರುವ ಬಿಸಿಗಾಳಿ ಜನರ ಬದುಕನ್ನು ದುಸ್ತರವನ್ನಾಗಿಸಿದೆ. ಈ ಭಾಗಗಳಲ್ಲಿ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್‌ ಇತ್ತು.
ನವೀನ ಹಳೆಯದು