ಮುಧೋಳ ದಲ್ಲಿ 3 ಗಂಟೆ ರಾಜ್ಯ ಹೆದ್ದಾರಿ ಬಂದ್‌

ಮುಧೋಳ: ನಗರದಲ್ಲಿ ಆದರ್ಶ ಆಂಗ್ಲ ಮಾಧ್ಯಮ ಶಾಲೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ, ನಗರದ ನಾನಾ ಸಂಘಟನೆಗಳು, ಪಾಲಕರು, ರೈತ ಸಂಘದ ಪ್ರತಿನಿಧಿಗಳು ಭಾಗವಹಿಸಿ ರಸ್ತೆ ಸಂಚಾರ ತಡೆದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೀರೇಶ ಪರೀಟ್‌ ಮಾತನಾಡಿ, ಆದರ್ಶ ವಿದ್ಯಾಲಯ ಲೋಕಾಪುರ ಸಮೀಪದ ಲಕ್ಷಾನಟ್ಟಿಗೆ ಸ್ಥಳಾಂತರಾಗಿರುವುದು ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಸರಕಾರ ಎಚ್ಚೆತ್ತು ಶಾಲೆಯನ್ನು ಇಲ್ಲಿಯೇ ಮುಂದುವರಿಸಬೇಕು. ವಿದ್ಯಾರ್ಥಿಗಳ ಹಿತ ಕಾಪಾಡಬೇಕು. ಸೈದಾಪುರ ಭಾಗದಿಂದ ಬರುವ ವಿದ್ಯಾರ್ಥಿಗಳು ಮೂರು ಬಸ್‌ಗಳನ್ನು ಬದಲಾಯಿಸಿ 3 ಗಂಟೆಗಳ ಕಾಲ ಬಸ್‌ ಪ್ರಯಾಣ ಮಾಡಿಕೊಂಡು ಶಾಲೆಗೆ ತೆರಳಲು ತೊಂದರೆಯಾಗುತ್ತದೆ ಎಂದರು.
ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಜೂ.26 ರವರಿಗೆ ಶಾಲೆಯನ್ನು ಸ್ಥಳಾಂತರ ಮಾಡಕೂಡದು. ಶಾಸಕರು, ಸಚಿವರು, ಜಿಪಂ ಸಿಇಒ, ಡಿಡಿಪಿಐ ಹಾಗೂ ಬಿಇಒ, ಪಾಲಕರು ಎಲ್ಲರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದರು.
ವಿದ್ಯಾರ್ಥಿಗಳು ಭಾಗಿ:
ಪ್ರತಿಭಟನೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿರುವುದು ಕಂಡು ಬಂತು. ಕೆಲ ವಿದ್ಯಾರ್ಥಿಗಳು ಭಾಷಣ ಮಾಡಿ ತಮಗೆ ಆಗುತ್ತಿರುವ ಕುಂದು ಕೊರತೆಗಳು ವಿವರಿಸಿದರು. ಮಲ್ಲು ದೇಸಾಯಿ, ಈರಪ್ಪ ಹಂಚಿನಾಳ, ಬಸವಂತಪ್ಪ ಕಾಂಬಳೆ, ಸುರೇಶ ಢವಳೇಶ್ವರ, ರಾಜು ಟಂಕಸಾಲಿ, ಬಸವರಾಜ ಮಾನೆ, ಪರಶು ನಿಗಡೆ, ಬಸವರಾಜ ಮಹಾಲಿಂಗೇಶ್ವರಮಠ, ಗುರುಪಾದ ಕುಳಲಿ, ಬಸು ದಾಸರ, ಕಮಲಾ ಜೇಡರ್‌, ಸ್ನೇಹಾ ಹಿರೇಮಠ, ವಂದನಾ ಕುಲಕರ್ಣಿ, ಕಲ್ಮೇಶ ಗೋಸಾರ,ಸೋನಾಪಿ ಕುಲಕರ್ಣಿ, ವೆಂಕಣ್ಣ ಮಳಲಿ, ಅನಂತ ಘೊರ್ಪಡೆ, ಅಶೋಕ ಕುಳಲಿ ಇತರರು ಇದ್ದರು.
ರಸ್ತೆ ಸಂಚಾರ ತಡೆ:
ಬೆಳಗ್ಗೆ 11ಕ್ಕೆ ಉತ್ತೂರ ಗೇಟ್‌ದಿಂದ ಗಾಂಧಿ, ಶಿವಾಜಿ, ಗಡದನ್ನವರ, ರನ್ನ ವೃತ್ತಗಳ ಮೂಲಕ ತೆರಳಿ ತಹಸೀಲ್ದಾರ್‌ ಕಚೇರಿ ಬಳಿ ಪ್ರತಿಭಟನೆ ಆರಂಭಿಸಲಾಯಿತು.
ವಿಜಯಪುರ ಧಾರವಾಡ ರಾಜ್ಯ ಹೆದ್ದಾರಿ ಸಂಚಾರವನ್ನು12ರಿಂದ 3.30 ರವರೆಗೆ ತಡೆದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಚಾರ ತಡೆಯಿಂದ ಐದಾರು ಕಿ.ಮೀವರಿಗೆ ವಾಹನಗಳ ಸಾಲು ಕಂಡುಬಂತು. ದೂರದ ಊರುಗಳಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡಬೇಕಾಯಿತು.
ಭೇಟಿ: ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಡಿಡಿಪಿಐ ಕೃಷ್ಣಾ ಕರಿಚಣ್ಣವರ, ಬಿಇಒ ಪಿ.ಬಿ.ಹಿರೇಮಠ ಭೇಟಿ ನೀಡಿದರು. ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಿಪಿಐ ಸಂಜೀವ ಕಾಂಬ್ಲೆ, ಎಸೈ.ಶಿವಶಂಕರ ಮುಕರಿ ಬಿಗಿ ಬಂದೋ ಬಸ್ತ್‌ ಏರ್ಪಡಿಸಿದ್ದರು.
ನವೀನ ಹಳೆಯದು