ಮುಧೋಳ ನಗರದ ಸಮೀಪ ಕೆ.ಆರ್.ಲಕ್ಕಂ ಶಾಲೆಯ ಬಳಿ ಕಾರು ಪಲ್ಟಿಯಾಗಿ ಗವಿಮಠದ ಶ್ರೀ ಜಗದ್ಗುರು ಮೃತ್ಯುಂಜಯ ಸ್ವಾಮೀಜಿ (65)ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶ್ರೀಗಳನ್ನು ಬಾಗಲಕೋಟ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಚಾಲಕನ ನಿರ್ಲಕ್ಷ್ಯದಿಂದ ಕಾರು ಉರುಳಿದೆ ಎಂದು ಭಕ್ತರು ಆರೋಪಿಸಿದ್ದಾರೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.ನಗರ ಸೇರಿದಂತೆ ನಾನಾ ಕಡೆ ಅಧ್ಯಾತ್ಮದ ಚಿಂತನೆ ಮೂಡಿಸಿದ್ದ, ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಹಸ್ರಾರು ಮಕ್ಕಳಿಗೆ ವರವಾಗಿದ್ದ ಗವಿಮಠದ ಜಗದ್ಗುರು ಮೃತ್ಯುಂಜಯ ಶ್ರೀಗಳು (65) ಮಂಗಳವಾರ ರಸ್ತೆ ಅಪಘಾತದಲ್ಲಿ ವಿಧಿವಶರಾದರು.
indow=true" style="height: 240px; width: 120px;">
ನಗರದ ಲೋಕಾಪುರ ರಸ್ತೆಯ ಬಳ್ಳೂರ ಪುನರ್ವಸತಿ ಕೇಂದ್ರದ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಕಾರ್ ಪಲ್ಟಿಯಾದ ಪರಿಣಾಮ ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆ್ಯಂಬುಲನ್ಸ್ ಮೂಲಕ ಬಾಗಲಕಟೋದ ಬಸವೇಶ್ವರ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಇಹಲೋಕ ತೊರೆದರು.
ಅನಾರೋಗ್ಯ ಹಿನ್ನೆಲೆ ಭಾನುವಾರವಷ್ಟೇ ಚಿಕಿತ್ಸೆ ಪಡೆಯಲು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಚಿಕಿತ್ಸೆ ಪಡೆದು ಸೋಮವಾರ ತಡರಾತ್ರಿ 2 ಗಂಟೆಗೆ ಮುಧೋಳದತ್ತ ತೆರಳುತ್ತಿದ್ದರು. ನಸುಕಿನ ಜಾನ 5.30ರ ವೇಳೆ ಕಾರ್ ಪಲ್ಟಿಯಾಗಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ಚಾಲಕ ಅವಿನಾಶ ಪುರಾಣಿಕ ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಲಕನ ನಿರ್ಲಕ್ಷ್ಯದಿಂದ ಕಾರ್ ಪಲ್ಟಿಯಾಗಿದೆ ಎಂದು ಎಸೈ ಸಂತೋಷ ಹಳ್ಳೂರ ತಿಳಿಸಿದ್ದಾರೆ. ಸಿಪಿಐ ಸಂಜೀವ ಕಾಂಬ್ಳೆ ತನಿಖೆ ಆರಂಭಿಸಿದ್ದಾರೆ.
----
ಭಕ್ತ ಸಮೂಹ ಕಂಬನಿ
ವಿರಕ್ತಮಠ ಜಗದ್ಗುರು ಮೃತ್ಯುಂಜಯ ಶ್ರೀಗಳು ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ತಿಳಿದ ಕೂಡಲೇ ಅಪಾರ ಭಕ್ತ ಸಮೂಹ ಹಾಗೂ ನಾನಾ ಮಠಗಳ ಸ್ವಾಮೀಜಿಗಳು, ಉದ್ಯಮಿ, ಜನಪ್ರತಿನಿಧಿಗಳು ಶ್ರೀಮಠಕ್ಕೆ ಧಾವಿಸಿ ಕಂಬನಿ ಮಿಡಿದರು. ಬಾಗಲಕೋಟ ಆಸ್ಪತ್ರೆಯಿಂದ ಶ್ರೀಗಳ ಪಾರ್ಥಿವ ಶರೀರವನ್ನ ಪಟ್ಟಣಕ್ಕೆ ಸಾಯಂಕಾಲ 4 ಗಂಟೆಗೆ ತರಲಾಯಿತು. ಬಳಿಕ ವಿರಕ್ತಮಠದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಭಕ್ತರು ಬಿಕ್ಕಿಬಿಕ್ಕಿ ಕಣ್ಣೀರು ಸುರಿಸುವುದು ಕಂಡುಬಂತು. ಈ ಭಾಗದ ಹರ-ಗುರು-ಚರಮೂರ್ತಿಗಳು, ಗಣ್ಯರು, ಭಕ್ತರು ಅಂತಿಮ ದರ್ಶನ ಪಡೆದರು.
---
ಪಂಚಭೂತಗಳಲ್ಲಿ ಲೀನ
ಬಳಿಕ ಗವಿಮಠದ ಆವರಣದಲ್ಲಿ ಮಂಗಳವಾರ ಸಂಜೆ ಭಕ್ತ ಸಮೂಹದ ಮಧ್ಯೆ ನಡೆದ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಜಗದ್ಗುರು ಮೃತ್ಯುಂಜಯ ಶ್ರೀಗಳು ಪಂಚಭೂತಗಳಲ್ಲಿ ಲೀನವಾದರು. ಅಂತ್ಯಕ್ರಿಯೆಲ್ಲಿ ಮಂಟೂರ, ಶಿರೋಳ, ಕಸಬಾಜಂಬಗಿ, ಹುಬ್ಬಳ್ಳಿ, ಹಂದಿಗುಂದ ಆಡಿ, ಮರೆಗುದ್ದಿ, ಯಡಹಳ್ಳಿ ಹಾಗೂ ಬೆಳಗಲಿ ಸೇರಿದಂತೆ ನಾನಾ ಪೂಜ್ಯರು, ಜನಪ್ರತಿನಿಧಿಗಳು, ಉದ್ಯಮಿಗಳು ಭಾಗವಹಿಸಿದ್ದರು.
----
ಸರಳ, ಸಜ್ಜನಿಕೆ ಶ್ರೀಗಳು
ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ತಂದೆ ಶಿವಲಿಂಗಯ್ಯ, ತಾಯಿ ಶಿವಲಿಂಗವ್ವ ಅವರ ಉದರದಲ್ಲಿ ಮೂರನೇ ಸುಪುತ್ರನಾಗಿ ಜ.1ರಂದು 1953ರಲ್ಲಿ ಜನಿಸಿದರು.
ಆಗ ಶ್ರೀಗಳಿಗೆ ಗಂಗಾಧರಯ್ಯ ಎಂದು ನಾಮಕರಣ ಮಾಡಲಾಗಿತ್ತು. ವಿಜಯಪುರದಲ್ಲಿ ತಂದೆ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದರು. ಮೊದಲಿಂದಲೂ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ಐಷಾರಾಮಿ ಜೀವನದಲ್ಲಿ ಕಾಲ ಕಳೆಯಬಹುದಿತ್ತು. ತಂದೆ ಇಚ್ಛೆಯನ್ನು ಗಮನಿಸಿ ತಮ್ಮ 5ನೇ ವರ್ಷದಿಂದಲೇ ಅಧ್ಯಾತ್ಮಿಕ ನೆಲಗಟ್ಟಿನಲ್ಲಿ ಬೆಳೆದಿದ್ದರು. ಶಿವಯೋಗ ಮಂದಿರದಲ್ಲಿ ಬಾಲ್ಯದ ಶಿಕ್ಷ ಣ ಪಡೆದರು. ಬಳಿಕ ಹುಬ್ಬಳ್ಳಿ ಮೂರುಸಾವಿರ ಮಠದ ಶಾಖಾಮಠ ಮುಧೋಳದಲ್ಲಿ 1994ರಲ್ಲಿ ಮೃತ್ಯಂಜಯ ಶ್ರೀಗಳು ಇವರಿಗೆ ಪೀಠಾಧಿಪತಿಯಾಗಲು ಅವಕಾಶ ಮಾಡಿಕೊಟ್ಟರು. ಸರಳ ಸಜ್ಜನಿಕೆ ವ್ಯಕ್ತಿಯಾಗಿ ಸಾವಿರಾರು ಭಕ್ತ ಸಮೂಹಕ್ಕೆ ಮೆಚ್ಚುಗೆಯಾಗಿದ್ದರು.
ಅಧ್ಯಾತ್ಮ ಸೇವೆ
ಮುಧೋಳ ಶ್ರೀಮಠದ ಪೀಠಾಧಿಪತಿಗಳಾದ ಬಳಿಕ ನಗರದ ವಿರಕ್ತಮಠದಲ್ಲಿ ಭಕ್ತ ಸಮೂಹ ಹೆಚ್ಚಿತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾನಾ ಸಂಘಟನೆ ಮಾಡಿಕೊಂಡು ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಐಟಿಐ ಶಿಕ್ಷ ಣ ಸಂಸ್ಥೆಯನ್ನು ಹುಟ್ಟುಹಾಕಿದರು. ಸರಕಾರೇತರ ಸಂಸ್ಥೆಗಳನ್ನು ತೆರೆದರು. ಸಾಹಿತ್ಯ, ಸಂಗೀತ, ಸಾಮಾಜಿಕ, ಧಾರ್ಮಿಕ ಹೋರಾಟಗಳಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುತ್ತಿದ್ದರು.
ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಸ್ವತಃ ಶ್ರೀಗಳು ಹೋರಾಟಕ್ಕೆ ಬೆಂಬಲ ಸೂಚಿಸಿ, ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಾಗಲಕೋಟ- ಕುಡುಚಿ ರೈಲು ನಿರ್ಮಾಣಕ್ಕೆ ಒತ್ತಾಯಿಸಿ, ಪ್ರತಿಭಟನೆಯಲ್ಲೂ ಪಾಲ್ಗೊಂಡದ್ದು ಸ್ಮರಣೀಯ.
----
ಅಧ್ಯಾತ್ಮಿಕ, ಧಾರ್ಮಿಕ ಶೈಕ್ಷ ಣಿಕ ರಂಗದಲ್ಲಿ ಸಾಧನೆ ಮಾಡಿದ ಶ್ರೀಗಳು ಅನಿರೀಕ್ಷಿತವಾಗಿ ವಿಧಿವಶರಾಗಿದ್ದು ತುಂಬಾನೋವು ತಂದಿದೆ. ಶ್ರೀಗಳ ಆಶೀವರ್ಚನ, ಮಾರ್ಗದರ್ಶನದಿಂದ ಮಠ ಸಾಕಷ್ಟು ಅಭಿವೃದ್ಧಿಯಾಗಿದೆ.
- ಸದಾನಂದ ಶ್ರೀಗಳು, ಸಿದ್ದಾರೂಢ ಮಠ, ಮಂಟೂರ
ನಗರದ ವಿರಕ್ತಮಠವೊಂದು ಅಧ್ಯಾತ್ಮಿಕ ಶಕ್ತಿ ಕೇಂದ್ರವಾಗಿತ್ತು. ಶ್ರೀಗಳು ಪ್ರತಿಯೊಂದು ಕಾರ್ಯಕ್ರಮ, ಹೋರಾಟದಲ್ಲಿ ಭಾಗಿಯಾಗಿ ಪ್ರೋತ್ಸಾಹ ತುಂಬುತ್ತಿದ್ದರು. ಅವರು ನೆನಪಿಡುವ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
- ಗುರುಪಾದ ಕುಳಲಿ, ಅಧ್ಯಕ್ಷ ರು, ಶ್ರೀರಾಮ ಸೇನೆ ಮುಧೋಳ
ಚಿಕ್ಕದಿಂದಲೂ ಮನೆ ತೊರೆದು ಪೀಠಾಧಿಪತಿಗಳಾದ ಬಳಿಕ ಬಂಧು ಬಳಗವನ್ನು ನೋಡಿಕೊಳ್ಳಲಿಲ್ಲ. ಜವಾಬ್ದಾರಿ ತೆಗೆದುಕೊಂಡ ಬಳಿಕ ಎಲ್ಲವನ್ನು ತ್ಯಾಗ ಮಾಡಿದರು. ಇನ್ನಷ್ಟು ದಿನಗಳ ಕಾಲ ಇರಬೇಕಾಗಿತ್ತು.
- ಉಮೇಶ ಶಿ.ಹಿರೇಮಠ, ಶ್ರೀಗಳ ಹಿರಿಯ ಸಹೋದರ ಧಾರವಾಡ