ಮುಧೋಳ: ನಗರದ ರನ್ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 'ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ' ಕೃಷಿ ಅಭಿಯಾನ ಹಾಗೂ ಕೃಷಿ ಮೇಳ-2017ಕ್ಕೆ ಉತ್ತಮ ಸ್ಪಂದನೆ ದೊರಕಿದೆ.
ಎರಡನೇ ದಿನವಾದ ಗುರುವಾರ ಅಧಿಕ ಸಂಖ್ಯೆಯ ಜನರು ಜಮಾಯಿಸಿದ್ದರು. ಮಹಿಳೆಯರು, ವಿದ್ಯಾರ್ಥಿಗಳು ತಾವು ಕಡಿಮೆ ಇಲ್ಲ ಎಂಬಂತೆ ಭಾಗವಹಿಸಿದ್ದರು.
ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೃಷಿ ಸಂಶೋಧನಾ ಕೇಂದ್ರ ಮುಧೋಳ ಮತ್ತು ಕೃಷಿಕ ಸಮಾಜ ಮುಧೋಳ, ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳು, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಮೇಳ ಆಯೋಜಿಸಲಾಗಿದೆ.
150 ವಿವಿಧ ಮಳಿಗೆಗಳಲ್ಲಿ, ಕೃಷಿ ಉಪಕರಣ, ಯಂತ್ರೋಪಕರಣ, ಟ್ರ್ಯಾಕ್ಟರ್, ಹನಿ ನಿರಾವರಿ, ಪೋಷಕಾಂಶಗಳು, ಶ್ರೀಗಂಧ, ಹೆಬ್ಬೇವು ತಳಿಗಳ ಮಾಹಿತಿ, ಸುಧಾರಿತ ಹೆಚ್ಚಿನ ಇಳುವರಿಯ ಬೀಜಗಳು, ಪುಷ್ಪ ಬೀಜಗಳು, ಕ್ರಿಮಿನಾಶಕಗಳು, ತರೇವಾರಿ ವಸ್ತುಗಳ ಪ್ರದರ್ಶನ ಜೋರಾಗಿತ್ತು.
ಸಹಾಯಕ ಕೃಷಿ ನಿರ್ದೇಶಕ ಆರ್.ಜಿ.ನಾಗಣ್ಣವರ ಹಾಗೂ ಸಿಬ್ಬಂದಿ ಸ್ಥಳದಲ್ಲೆ ಇದ್ದು ಕೃಷಿಕರಿಗೆ ಮಾಹಿತಿ ನೀಡುತ್ತಿದ್ದರು.