ಮುಧೋಳ ( ಬಾಗಲಕೋಟೆ ) : ಸ್ವಾಮಿ ವಿವೇಕಾನಂದರು ಇಂದಿನ ಯುವಕವರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಜೀವನದಲ್ಲಿ ಅವರ ತತ್ವಾದರ್ಶಗಳನ್ನು ಯುವಕರು ಪಾಲಿಸಬೇಕೆಂದು ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಕುಸ್ತಿ ಪಟು ಸಂದೀಪ ಕಾಟೆ ಹೇಳಿದ್ದಾರೆ.
ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆ ನಿರ್ದೇಶಕ ಶಿಶಿರ ಮಲಘಾಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಭವ್ಯ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಇಂದಿನ ಯುವಕರು ದುಶ್ವಟಗಳಿಗೆ ದಾಸರಾಗದೆ ಸಚ್ಛಾರಿತ್ಯ್ರವಂತರಾಗಿ ದೇಶಕ್ಕೆ ಒಳ್ಳೆಯ ಕೊಡುಗೆ ನೀಡಬೇಕು. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಡುತ್ತೇವೆ ಅನ್ನುವುದು ಮುಖ್ಯ ಎಂದರು.
ಬಾಲಕ ಕಾರ್ತಿಕ ಕಳ್ಳೆನ್ನವರ ಮಾತನಾಡಿ, ಸ್ವಾಮಿ ವಿವೇಕಾನಂದ ಅವರ ಬಾಲ್ಯ, ಅವರ ದೇಶಪ್ರೇಮ ಹಾಗೂ ದೇಶಕ್ಕಾಗಿ ಅವರ ತ್ಯಾಗ ಮತ್ತು ಅವರ ತತ್ವಾದರ್ಶಗಳ ಕುರಿತು ವಿವರಿಸಿದನು.ಬಾಗಲಕೋಟ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ ತಿಮ್ಮಾಪೂರ ಮಾತನಾಡಿ, ಭವ್ಯ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವವಾದದ್ದು. ಚಿಕ್ಕ ವಯಸ್ಸಿನಲ್ಲಿಯೇ ವಿಶ್ವಕ್ಕೆ ಭಾರತೀಯ ಸಂಸ್ಕೃತಿ ಪರಿಚಯಿಸಿ ಭಾರತಕ್ಕೆ ಗೌರವ ತಂದು ಕೊಡುವಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಅತ್ಯಂತ ದೊಡ್ಡದಿದೆ. ಅವರ ಸಾಧನೆ ಇಂದಿನ ಯುವಕರಿಗೆ ಅನುಕರಣೀಯ ಎಂದು ಬಣ್ಣಿಸಿದರು.
ವೇದಿಕೆ ಮೇಲೆ ಪತ್ರಕರ್ತ ಮಹಾಂತೇಶ ಕರೆಹೊನ್ನ, ಎಂ.ಯು ಅಂತರಗೊಂಡ ಸೇರಿ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಕುಸ್ತಿ ಕ್ರೀಡೆಯಲ್ಲಿ ಬೆಳ್ಳಿ ಪದಕ ವಿಜೇತ ಸಂದೀಪ ಕಾಟೆ ಅವರನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪೂಜಾ ಚಿಕದಾನಿ, ತನಿಷ್ಕ ಮುಜಾವರ ನಿರೂಪಿಸಿದರು. ನಿತ್ಯನಂದಿನಿ ಸ್ವಾಗತಿಸಿ, ಸ್ಫೂರ್ತಿ ಲಕ್ಷಾಣಿ ವಂದಿಸಿದರು.