ಕುಂಯ್…ಕುಂಯ್… ಎಂದು ಎಲ್ಲಾದರೂ ನಿಮಗೆ ಒಂದು ಶಬ್ಧ ಕೇಳಿಸಿದರೆ, ನಿಮ್ಮ ಮೊದಲ ಪ್ರತಿಕ್ರಿಯೆ… ಯಾವನೋ ಕಿಡಿಗೇಡಿ ಕಂತ್ರಿ ನಾಯಿಗೆ ಕಲ್ಲು ಹೊಡೆದಿರ್‌ಬೇಕು ಅಂತ ಇರತ್ತೆ. ಆದರೆ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಯಾವ ಕಿಡಿಗೇಡಿಯೂ ಈ ದುಃಸಾಹಸಕ್ಕೆ ಕೈಹಾಕುವುದಿಲ್ಲ. ಏಕೆಂದರೆ ಇಲ್ಲಿರುವ ಅನೇಕವು ಬರಿನಾಯಿಗಳಲ್ಲ.. ಸೀಳ್ನಾಯಿಗಳು ಒಮ್ಮೆ ಒಂದು ನಾಯಿ ಒಬ್ಬನ ದೇಹಕ್ಕೆ ಬಾಯಿ ಹಾಕಿದರೆ… ಮತ್ತೆ ತೆಗೆದಾಗ ಅಲ್ಲಿ ಒಂದಿಷ್ಟು ಅವನ ಮಾಂಸ ಇರಲೇ ಬೇಕು… ಹಾಗು ಆ ಜಿಲ್ಲೆ ಬಾಗಲಕೋಟೆಯಾಗಿರಲೇ ಬೇಕು!!!
ಅದೇ ಬಾಗಲಕೋಟೆ ಜಿಲ್ಲೆಯ ಮುಧೋಳದ ಬೇಟೆನಾಯಿಗಳು ಹೆಚ್ಚಾಗಿ ಕಾಣಿಸುವುದು ಈ ಮುಧೋಳದಲ್ಲಿ ಹಾಗಾಗಿ ಈ ಪ್ರದೇಶದ ನಾಯಿಗಳಿಗೆ ಪ್ರಪಂಚದ ಎಲ್ಲಾ ಭಾಗಗಳಿಂದಲೂ ಬಹಳ ಬೇಡಿಕೆಯಿದೆ. ಇದಕ್ಕಾಗಿಯೇ ಅಲ್ಲಿ ಶುದ್ಧ ತಳಿಯ ಸಂತಾನೋತ್ಪತ್ತಿ ಕೇಂದ್ರಗಳಿದ್ದು ಈ ವಿಶೇಷ ಶ್ವಾನ ಪ್ರಬೇಧವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಶ್ವಾನ ಪ್ರಬೇಧಗಳಲ್ಲಿ ನಮ್ಮ ಈ ಕರ್ನಾಟಕದ ಮುಧೋಳದ ತಳಿ ತನ್ನ ವಿಶಿಷ್ಟ ಗುಣಗಳಿಂದ ಪ್ರತ್ಯೇಕ ಹೆಸರನ್ನು ಕಾಪಾಡಿಕೊಂಡು ಬಂದಿದೆ. ಕನ್ನಡಿಗರಾದ ನಮಗೆ ಇದು ಹೆಮ್ಮೆಯ ವಿಷಯ ಕೂಡಾ.
ಇತಿಹಾಸ :
ಬ್ರಿಟೀಷ್ ಸಾಮ್ರಾಜ್ಯದಲ್ಲಿ ಮುಧೋಳ ಒಂದು ಸಾಮಾನ್ಯ ಗ್ರಾಮವಾಗಿದ್ದಿತು. ಇದು ಆಗಿನ ಬಾಂಬೆ ಪ್ರೆಸಿಡೆನ್ಸಿಯ ದಕ್ಷಿಣಕ್ಕಿದ್ದು ಮರಾಠರ ಘೋರ್ಪಡೆಗಳು ಇಲ್ಲಿ ರಾಜ್ಯಭಾರ ನಡೆಸುತ್ತಿದ್ದರು. ಭಾಷಾವಾರು ಪರಿಮಾಣದ ಮೇಲೆ ದೇಶ ವಿಭಜನೆಯಾದಾಗ ಮುಧೋಳವು ನಮ್ಮ ಕರ್ನಾಟಕಕ್ಕೆ ಸೇರಿಕೊಂಡು ಬಾಗಲಕೋಟೆಯ ಒಂದು ತಾಲೂಕಾಯಿತು.
ಮರಾಠರ ಕೊನೆಯ ಅರಸರಾದ ಮಾಲೋಜಿರಾವ್ ಘೋರ್ಪಡೆಯವರು ಮುಧೋಳದಲ್ಲಿ ಈ ವಿಶೇಷ ತಳಿಯ ಶ್ವಾನಗಳನ್ನು ಗುರುತಿಸಿದ್ದರು ಎಂಬುದು ಇಲ್ಲಿನ ಜನರ ಹೇಳಿಕೆ. ರಾಜಪರಿವಾರವನ್ನು ಹತ್ತಿರದಿಂದ ಬಲ್ಲ ಅರ್ಜುನ್ ಸಿಂಗ್ ಜಡೇಜರವರು ಹೇಳುವ ಪ್ರಕಾರ ಈ ಶ್ವಾನತಳಿಗಳು ಮುಧೋಳದ ಕುರಿ ಕಾಯುವ ಹುಡುಗರ ಬಳಿ ಇದ್ದು ಅವರು ಇದನ್ನು ತಮ್ಮ ಕುರಿಮಂದೆಯನ್ನು ಕ್ರೂರ ಪ್ರಾಣಿಗಳಿಂದ ದೂರವಿಡಲು ಈ ನಾಯಿಗಳನ್ನು ಉಪಯೋಗಿಸುತ್ತಿದ್ದದ್ದು ತಿಳಿದು ಕೊಂಡರು. ಇದು ಹೌಂಡ್ ತಳಿಗಳನ್ನು ಹೋಲುತ್ತಿದ್ದವಂತೆ. ಹಾಗಾಗಿ ಇವುಗಳಲ್ಲಿನ ಅತ್ಯುತ್ತಮ ತಳಿಗಳನ್ನು ಆರಿಸಿ ಅವುಗಳನ್ನು ಸಂಕರಗೊಳಿಸಿ ಬೆಳೆದ ಉತ್ತಮವಾದ ಎರಡು ಮರಿಗಳನ್ನು ಮಹಾರಾಜರು ಇಂಗ್ಲೆಂಡ್‌ಗೆ ಹೋಗಿದ್ದಾಗ ಅಲ್ಲಿನ ಮಹಾರಾಜರಾದ ಐದನೇ ಜಾರ್ಜ್‌ರಿಗೆ ಬಳುವಳಿಯಾಗಿ ಕೊಟ್ಟಿದ್ದರಂತೆ. ಈ ವಿಶೇಷ ತಳಿಗಳಿಂದ ಸಂತೋಷಗೊಂಡ ಇಂಗ್ಲೆಂಡ್ ಮಹಾರಾಜರು ಇದಕ್ಕೆ ಮುಧೋಳ್ ಹೌಂಡ್ಸ್ ಎಂದು ಕರೆದಿದ್ದರು ಎನ್ನುತ್ತಾರೆ ಜಡೇಜಾರವರು.
ಈ ಮುಧೋಳದ ತಳಿಗಳು ಸಂಪೂರ್ಣವಾಗಿ ಭಾರತದ್ದೇ ಆದರೂ ಕೆಲವರ ಅನಿಸಿಕೆಯಂತೆ ಇವು ಗ್ರೀಕ್ ಮತ್ತು ಪರ್ಷಿಯನ್ನರ ಆಕ್ರಮಣದ ಕಾಲದಲ್ಲಿ ಅವರೊಂದಿಗೆ ಬಂದಿದ್ದ ನಾಯಿಗಳ ಸಂಕರ ಎನ್ನುತ್ತಾರೆ. ಕರುಣಾ ಪ್ರಾಣಿದಯಾ ಸಂಘದ ಅಧ್ಯಕ್ಷರಾದ ಡಾ|| ಬಿ.ಸಿ.ರಾಮಕೃಷ್ಣರು ಹೊರತಂದ ಒಂದು ಅಂಕಣದ ಪ್ರಕಾರ ಈ ಮುಧೋಳದ ಶ್ವಾನತಳಿಗಳು ಮೂರು ವಿಭಿನ್ನ ತಳಿಗಳ ಸಂಕರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮೈಸೂರಿನ ಕೆನೆಲ್ ಕ್ಲಬ್‌ನ ಅಧ್ಯಕ್ಷರಾದ ಡಾ|| ಪಿ.ವಿ. ಯತೀಂದರ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇವರುಗಳ ಪ್ರಕಾರ ಈ ಮುಧೋಳ್ ತಳಿಯು ಸ್ಲೌಗಿ, ಸಾಲುಕಿ, ಮತ್ತು ಗ್ರೇ ಹೌಂಡ್‌ಗಳ ಮಿಶ್ರತಳಿ ಎಂದು. ಈ ಮೂರೂ ತಳಿಗಳು ದೃಷ್ಟಿ ಮತ್ತು ವಾಸನೆಗಳಿಂದ ಬೇಟೆಯಾಡುತ್ತದೆ ಎನ್ನುವುದು ವಿಶೇಷ. ಹಾಗೆಯೇ ನಮ್ಮ ಮುಧೋಳದ ನಾಯಿ ಕೂಡಾ ! ಸ್ಲೌಗಿ ಎಂಬುದು ಉತ್ತರ ಆಫ್ರಿಕಾ ಖಂಡದಲ್ಲಿ ಹೆಚ್ಚಾಗಿ ಕಾಣಸಿಗುವ ಶ್ವಾನ ತಳಿ. ಸಾಲುಕಿ ಎಂಬುದು ಮೆಡಿಟರೇನಿಯನ್‌ನಿಂದ ಪೂರ್ವ ಏಷಿಯಾ ಖಂಡಗಳಲ್ಲಿ ಕಾಣಸಿಗುವ ಅತ್ಯಂತ ಹಳೆಯ ಸಾಕು ನಾಯಿಯ ತಳಿ. ಗ್ರೇ ಹೌಂಡ್ ಎಂಬುದು ಯೂರೋಪ್ ಹಾಗು ಅಮೇರಿಕಾ ಖಂಡಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪ್ರಬೇಧ.
ದಂತಕತೆಗಳು :
ಮುಧೋಳ ಪ್ರಬೇಧದ ತಳಿಗಳು ಪ್ರಖ್ಯಾತವಾಗುತ್ತಿದ್ದಂತೆಯೇ ಅವುಗಳ ಹಿಂದಿನ ದಂತಕತೆಗಳೂ ಪ್ರಚಲಿತವಾಗುತ್ತಿದೆ. ಮುಧೋಳ ನಾಯಿಗಳ ಪ್ರಿಯರ ಒಂದು ದೊಡ್ಡ ತಂಡವೇ ಇದೆ. ಇವರು ಹೇಳುವ ಪ್ರಕಾರ ೧೭ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ರಾಯಘಡದಲ್ಲಿದ್ದಾಗ ಈ ತಳಿಯ ನಾಯಿಗಳು ಅವರ ಬಳಿ ಇದ್ದಿತು ಎನ್ನುತ್ತಾರೆ. ಮತ್ತೊಂದು ಕತೆಯ ಪ್ರಕಾರ ೨೦ನೇ ಶತಮಾನದಲ್ಲಿ ಕೊಲ್ಹಾಪುರದ ಮಹಾರಾಜರಾಗಿದ್ದ ಪಹುಜಿ ಮಹಾರಾಜರನ್ನು ಹುಲಿಯಿಂದ ಕಾಪಾಡಿದ ನಾಯಿ ಇದಾಗಿತ್ತು ಎನ್ನುವುದು. ಇತಿಹಾಸ ಏನೇ ಹೇಳಲಿ, ಈ ವಿಭಿನ್ನ ತಳಿಯ ಬೇಟೆ ನಾಯಿಗಳು ನಮ್ಮ ಕರ್ನಾಟಕ ಪ್ರಾಂತ್ಯದ ಆಸ್ತಿ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರ
ಮುಧೋಳದ ಹತ್ತಿರದ ತಿಮ್ಮಾಪುರದಲ್ಲಿರುವ Canine Research and Information Centre(CRIC) ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರವು ೪೦ ಎಕರೆ ಜಾಗದಲ್ಲಿ ತನ್ನ ಸಂಶೋಧನೆ ನಡೆಸುತ್ತಿದೆ. ಈ ತಳಿಯ ಬೇಟೆ ನಾಯಿಗಳಿಗೆ ಹೆಚ್ಚಾಗಿ ಓಡುವ ಸೌಲಭ್ಯವಿರಬೇಕು ಎನ್ನುವ ನಿಟ್ಟಿನಿಂದ ಇಷ್ಟು ವಿಶಾಲವಾದ ಪರಿಸರ ಅನಿವಾರ್ಯ.
ಇಲ್ಲಿ ಸುಮಾರು ೨೮ ಮುಧೋಳದ ನಾಯಿಗಳು ಪೋಷಿಸಲ್ಪಟುತ್ತಿವೆ. ಇವುಗಳನ್ನು ಪ್ರತಿಯೊಂದು ಶ್ವಾನ ಪ್ರದರ್ಶನಗಳಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಈ ಸಂಸ್ಥೆಯು ಬಿದರ್‌ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ಹಾಗು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಒಂದು ಅಂಗ. ಇದು ೨೦೦೩ರಲ್ಲಿಯೇ ಅನುಮೋದಿಸಲ್ಪಟ್ಟರೂ ಸಹ ೨೦೧೦ರಲ್ಲಿ ತನ್ನ ಕಾರ್ಯ ನಿರ್ವಹಣೆಯನ್ನು ಪ್ರಾರಂಭಿಸಿತು. ಮುಧೋಳ ಪ್ರಬೇಧದ ಶುದ್ಧ ತಳಿಗಳ ಉತ್ಪತ್ತಿಯೇ ಈ ಸಂಸ್ಥೆಯ ಮುಖ್ಯ ಉದ್ದೇಶ. ಸಂಶೋಧಕರು ಇಡೀ ಭಾರತದಲ್ಲಿ ಒಟ್ಟು ೨೩ ಜಾತಿಯ ಪ್ರಬೇಧದ ನಾಯಿಗಳಿದ್ದು ಅವುಗಳಲ್ಲಿ ಕೇವಲ ೭ ಜಾತಿಯವು ಮಾತ್ರ ಈಗ ಆಸ್ತಿತ್ವದಲ್ಲಿ ಸಿಗುತ್ತಿವೆ. ಉತ್ತರ ಕರ್ನಾಟಕದ ಪಶ್ಮಿ, ತಮಿಳುನಾಡಿನ ರಾಜಪಾಳ್ಯಂ, ಮಹಾರಾಷ್ಟ್ರದ ಕಾರಾವಾನ್ ಹೌಂಡ್, ಆಂಧ್ರಪ್ರದೇಶದ ಜನನಾಂಗಿ, ತಮಿಳುನಾಡಿನ ಚಿಪ್ಪಿಪ್ಪರೈ, ಉತ್ತರ ಪ್ರದೇಶದ ರಾಮ್‌ಪುರ ಹೌಂಡ್‌ಗಳು ಆ ಅವಸಾನದಲ್ಲಿರುವ ತಳಿಗಳು. ಇವುಗಳಲ್ಲಿ ಅನೇಕವು ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಶ್ವಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಶಂಸೆ-ಪುರಸ್ಕಾರಗಳನ್ನು ಕಳೆದೆರಡು ದಶಕಗಳಿಂದ ಪ್ರಸಿದ್ಧಿಯಾಗಿದೆ.
ಈ ಸಂಸ್ಥೆಯು ಮುಖ್ಯಸ್ಥರಾದ ಡಾ|| ಮಹೇಶ್.ಎಸ್. ದೊಡ್ಡಮನಿಯವರು ಮುಧೋಳ ತಳಿಗಳ ಬಗ್ಗೆ ಅಪಾರ ವಿಷಯಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಅವರು ೨೦೧೦ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಬಾಗಲಕೋಟೆ ಜಿಲ್ಲೆಯಲ್ಲಿ ಸುಮಾರು ೫೦೦ ಕುಟುಂಬಗಳಲ್ಲಿ ೭೫೦ ಮುಧೋಳತಳಿಯ ನಾಯಿಗಳನ್ನು ಬೆಳೆಸುತ್ತಿದ್ದುದ್ದು ತಿಳಿದು ಬಂದಿದೆ. ಕುರುಬರ ವಂಶದವರು ಹೆಚ್ಚಾಗಿ ಈ ತಳಿಯ ನಾಯಿಗಳನ್ನು ತಮ್ಮ ಕುರಿಮಂದೆ ಹಾಗು ಹಸುಕರುಗಳನ್ನು ಕಾಯಲು ಬೆಳೆಸುತ್ತಾರೆ. ಇವುಗಳಲ್ಲಿ ಶ್ರೇಷ್ಠವಾದ ೧೦೦ ನಾಯಿಗಳನ್ನು ಆರಿಸಿ ಅವುಗಳಲ್ಲಿ ಸಂತಾನೋತ್ಪತ್ತಿ ಮಾಡಿ ಅತ್ಯುತ್ತಮ ಮುಧೋಳ ತಳಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾಗಿ ಡಾ|| ದೊಡ್ಡಮನಿ ತಿಳಿಸುತ್ತಾರೆ.
ಸರ್ಕಾರ-ಸವಲತ್ತು
KVAFSU ಸಂಸ್ಥೆಯವರು ಒಂದು ವಿಶಿಷ್ಠ ರೀತಿಯಯೋಜನೆ ಪ್ರಾರಂಭಿಸಿದ್ದಾರೆ. ಇದರಲ್ಲಿ ಅದು ಸ್ಥಳೀಯ ರೈತರಿಂದ ಶುದ್ಧ ತಳಿಗಳನ್ನು ಸಂಕ್ಷಿಸಲು ಸಹಾಯ ಕೋರಿದ್ದಾರೆ. ಇವರು ಬೆಳೆಸಿದ ಮರಿಗಳನ್ನು ಶ್ವಾನಪ್ರಿಯರಿಗೆ ಮಾರಿ ಅದರಿಂದ ಕೌಟುಂಬಿಕ ಆದಾಯ ಹೆಚ್ಚಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಹಸು, ಕುರಿ, ಹಂದಿ, ಕೋಳಿ ಹಾಗು ಇತರ ಜಾನುವಾರುಗಳಂತೆ ಮುಧೋಳ ತಳಿಗಳನ್ನೂ ಸಹ ಕೌಟುಂಬಿಕ ಆದಾಯಕ್ಕಾಗಿ ಬೆಳೆಸುವಂತೆ ಸಹಾಯ ಮಾಡುತ್ತಿದೆ. ಸರ್ಕಾರದಿಂದಲೂ ಸಹ ಕೆಲ ಕುಟುಂಬಗಳಿಗೆ ಒಂದು ಜೊತೆ ಅತ್ಯುತ್ತಮ ತಳಿಯನ್ನು ನೀಡಿ ಅದರ ಸಂತಾನೋತ್ಪತ್ತಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನೂ ನೀಡಿದೆ. ಈ ಯೋಜನೆಯನ್ನು ೨೦೧೨ರಲ್ಲಿ ಕಾರ್ಯರೂಪಕ್ಕೆ ತಂದು ಸುಮಾರು ೧೩೪ ಕುಟುಂಬಗಳು ಈ ಸವಲತ್ತು ಪಡೆದು ಯಶಸ್ವಿಯಾಗಿವೆ. ಒಮ್ಮೆ ಸಂತಾನೋತ್ಪತ್ತಿಯಾದಾಗ ಸುಮಾರು ೮-೧೨ ಮರಿಗಳನ್ನು ಕುಟುಂಬದವರು ಪಡೆಯುತ್ತಾರೆ. ಹಾಗು ಪ್ರತಿ ಮರಿಯನ್ನು೬,೦೦೦ ದಿಂದ ರೂಪಾಯಿ ೮,೦೦೦ವರೆಗೆ ಮಾರಾಟಮಾಡುತ್ತಾರೆ. ಹಾಗಾಗಿ ಪ್ರತಿ ಕುಟುಂಬದವರು ಏನಿಲ್ಲವೆಂದರೂ ೫೦,೦೦೦ ರೂಪಾಯಿಗಳ ಲಾಭ ಪಡೆಯುತ್ತಿದ್ದಾರೆ.
ಸರ್ಕಾರದಿಂದ ಹಾಗೂ CRIC ಸಂಸ್ಥೆಯಿಂದ ಪ್ರತಿ ಕುಟುಂಬದವರೂ ಸಹ ತಮ್ಮ ಶ್ವಾನಗಳಿಗೆ ಬೇಕಾದ ಪೂರಕ ಆಹಾರಗಳು, ಲಸಿಕೆಗಳು ಹಾಗು ಇನ್ನಿತರ ಖರ್ಚುಗಳ ಹಣ ಪಡೆಯುತ್ತಿದ್ದಾರೆ. ಪ್ರತಿ ಕುಟುಂಬದವರು ಇದನ್ನು ಬೆಳೆಸಬೇಕಷ್ಟೆ !
ಲಾಭ ಬಂತು !
ದೊಡ್ಡ ನಾಯಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಒಂದೊಂದು ನಾಯಿಯೂ ಸುಮರು ೧.೩೫ ಲಕ್ಷಕ್ಕೆ ಮಾರಾಟವಾಗಿರುವುದುಂಟು. ನನಗೆ ೨೦೧೨ರಲ್ಲಿ ಒಂದು ಜೊತೆ ಮುಧೋಳ ತಳಿ ನೀಡಲಾಗಿತ್ತು. ಅದರಿಂದ ನನಗೆ ಸುಮಾರು ೫೪೦೦೦ ರೂಪಾಯಿಗಳ ಲಾಭ ಬಂದಿತು. ಇದು ಕುಟುಂಬಕ್ಕೆ ಬಹಳ ಸಹಾಯವಾಗಿದೆ. ಎಂದು ತಿಮ್ಮಾಪುರದ ನಿವಾಸಿ ಶಂಕರ ಸುರೇಶ ಅರಳಿಕಟ್ಟಿ ಹೇಳುತ್ತಾರೆ.
ಮಾಲಿಕನಿಗೆ ಋಣಿಯಾಗಿರುವ ಜಾತಿ !
CRIC ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಲೋಕೇಶ್‌ಮಾತಿನಂತೆ…ನಮಗೆ ಈ ತಳಿಗಳನ್ನು ಬೆಳೆಸುವುದರಲ್ಲಿಯಾವುದೇ ಹೆಚ್ಚಿನ ಖರ್ಚಿಲ್ಲ. ನಾವೇನು ತಿನ್ನುತ್ತೀವೊ ಅದನ್ನೇ ನಾಯಿಗಳಿಗೂ ಬಡಿಸುತ್ತೇವೆ. ಹಾಗಾಗಿ ಇದರ ಪೋಷಣೆಯ ಚಿಂತೆ ಇಲ್ಲ… ಎನ್ನುತ್ತಾರೆ. ಮುಧೋಳ ಜಾತಿಯ ನಾಯಿಗಳು ಅತ್ಯಂತ ವಿಶ್ವಾಸ ತೋರುವ ತಳಿಗಳು. ತಮ್ಮನ್ನು ಸಾಕಿದ ಮಾಲಿಕನಿಗೆ ಋಣಿಯಾಗಿರುವ ಜಾತಿ ಇವು. ಬೇಟೆಯಾಡುವುದರಲ್ಲಿ ನಿಸ್ಸೀಮ.
CRIC ತನ್ನ ಮೂಲ ಉದ್ದೇಶದಂತೆ ಶುದ್ಧ ತಳಿಯ ಮುಧೋಳ ನಾಯಿಗಳನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದೆ. ಹಾಗೆ ಸ್ಥಳೀಯ ಕುಟುಂಬಗಳಿಗೆ ಆದಾಯ ಹೆಚ್ಚಿಸುವ ಸಹಾಯವನ್ನೂ ಮಾಡುತ್ತಿದೆ. ಇದೇ ಯೋಜನೆಯನ್ನು ಭಾರತದಾದ್ಯಂತ ಮಾಡುವ ಕನಸು ಈ ಸಂಸ್ಥೆಗೆ ಇದೆ. ಇದಕ್ಕಾಗಿ ನಮ್ಮ ಬೆಂಬಲ ನೀಡೋಣ…ಕರ್ನಾಟಕದ ಶ್ವಾನ ತಳಿಯನ್ನು ಸಂರಕ್ಷಿಸೋಣ.
ಬಾಕ್ಸ್ ಗಳಲ್ಲಿ
ಮುಧೋಳ ನಾಯಿಯ ಲಕ್ಷಣಗಳು :
ಮುಧೋಳ್ ಅಥವಾ ಕಾರವಾನ್ ಹೌಂಡ್ ಸುಸ್ಪಷ್ಟ ಗುಣಲಕ್ಷಣಗಳನ್ನು ಹೊಂದಿದೆ. ತಲೆ ಒಂದು ತುದಿಯಲ್ಲಿ ಉದ್ದ ಮತ್ತು ಸಂಕುಚಿತವಾಗಿರುತ್ತದೆ. ಎರಡೂ ಕಿವಿಗಳನಡುವೆ ವಿಶಾಲ ದೂರವಿದೆ. ದವಡೆಗಳು ದೀರ್ಘವಾಗಿದ್ದು ಶಕ್ತಿಯುತವಾಗಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದುಅಂಡಾಕಾರದಲ್ಲಿದೆ. ಕಿವಿಗಳು ತ್ರಿಭುಜಾಕೃತಿಯಲ್ಲಿದ್ದು ಜೋತು ಬಿದ್ದಿರುತ್ತದೆ. ಕುತ್ತಿಗೆ ಉದ್ದವಾಗಿದ್ದು ಶಕ್ತಿಯುತ ಸ್ನಾಯುಗಳನ್ನು ಹೊಂದಿದೆ. ಮುಂಗಾಲುಗಳು ಉದ್ದವಾಗಿದ್ದು ನೇರವಾಗಿರುತ್ತದೆ. ಹಿಂಗಾಲುಗಳು ಮಾಂಸಖಂಡಗಳನ್ನು ಹೊಂದಿದ್ದು ಸಧೃಢವಾಗಿರುತ್ತದೆ. ಬಾಲ ಸಾಕಷ್ಟು ಉದ್ದವಾಗಿರದೆ ಕೊನೆಯಲ್ಲಿ ತಿರುವುಪಡೆದಿರುತ್ತೆ. ಕಪ್ಪು, ಕಂದು, ಕೆಂಪು, ಬಿಳಿ ಮತ್ತು ಬೂದುಬಣ್ಣಗಳಲ್ಲಿ ಇವು ಕಾಣಸಿಗುತ್ತವೆ.
ಮನೋಧರ್ಮ :
ಬೇಟೆಯಾಡುವ ಗುಣ ಹೊಂದಿದ್ದು ಇವು ಬಹಳಧೈರ್ಯಶಾಲಿ ಮನೋಭಾವ ಇದ್ದು ಅತ್ಯಂತ ವೇಗ ಹಾಗು ತೀಕ್ಷ್ಣ ದೃಷ್ಟಿಯಿಂದ ಪ್ರಸಿದ್ಧಿ ಪಡೆದಿದೆ. ಇವು ತುಂಬಾ ಬುದ್ಧಿ ಶಾಲಿಗಳಾಗಿದ್ದು ಸ್ವತಂತ್ರವಾಗಿರಲು ಅಪೇಕ್ಷಿಸುತ್ತದೆ. ಹೊಸಬರೊಂದಿಗೆ ಹೊಂದಿಕೊಳ್ಳುವುದು ವಿರಳ. ಪ್ರತಿದಿನ ಇವಕ್ಕೆ ದೈಹಿಕ ವ್ಯಾಯಾಮಕ್ಕೆ ಅತ್ಯಗತ್ಯ ಜಾಗ ಬೇಕಾಗುತ್ತದೆ. ಇವುಗಳು ತಮ್ಮ ಯಜಮಾನನಿಂದ ಗೌರವ ಮತ್ತು ಪ್ರೀತಿ ಅಪೇಕ್ಷಿಸುತ್ತದೆ. ಇವುಗಳ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಂಡರೆ ಇವುಗಳ ರೌದ್ರರೂಪವನ್ನೂ ನೋಡಬಹುದು. ಅದು ಅತ್ಯಂತ ಅಪಾಯಕಾರಿ !
ಬೆಳವಣಿಗೆಯ ಪರಿಸರ :
ಭಾರತದಲ್ಲಿ ಅತಿ ಹೆಚ್ಚು ಕಾಣಸಿಗುವ ಈ ಮುಧೋಳ್ ನಾಯಿಗಳು ಇಲ್ಲಿನ ಪರಿಸರಕ್ಕೆ ಪೂರಕವಾಗಿ ಎಲ್ಲಾ ಹವಾಮಾನಗಳಿಗೂ ಒಗ್ಗಿಕೊಳ್ಳುತ್ತದೆ. ಚಿಕ್ಕಚಿಕ್ಕ ಮನೆಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಇವುಗಳನ್ನು ಬೆಳೆಸುವುದು ಸೂಕ್ತವಲ್ಲ. ಅತ್ಯಧಿಕ ದೈಹಿಕ ಪರಿಶ್ರಮ ಬೇಡುವ ಈ ಬೇಟೆ ನಾಯಿಗಳಿಗೆ ಫಾರ್ಮ್ ಹೌಸ್‌ಗಳು, ರೆಸಾರ್ಟ್‌ಗಳು, ತೋಟಗಳು ಹಾಗು ವಿಶಾಲ ಬಯಲುಭೂಮಿಗಳಲ್ಲಿರಲು ಸೂಕ್ತ. ಒಳಾಂಗಣಕ್ಕಿಂತ ಹೊರಾಂಗಣವನ್ನು ಪ್ರೀತಿಸುವ ಈ ನಾಯಿಗಳು ಕುಟುಂಬದಿಂದ ಬೇರ್ಪಟ್ಟು ಜೀವಿಸಲು ಇಷ್ಟ ಪಡುವುದಿಲ್ಲ. ಅತ್ಯಂತ ಶೀತಲ ಪರಿಸರ ಅಥವಾ ಹಿಮಾವೃತಗೊಂಡ ಪ್ರದೇಶಗಳನ್ನು ಅಷ್ಟಾಗಿ ಪ್ರೀತಿಸುವುದಿಲ್ಲ.
ಆರೋಗ್ಯ ವಿಚಾರ :
ಈ ಮುಧೋಳದ ನಾಯಿಗಳು ಮೊದಲಿನಿಂದಲೂ ಕಷ್ಟಕರದ ಪರಿಸ್ಥಿತಿಗಳನ್ನು ಎದುರಿಸಿ ಜೀವಿಸುವ ಗುಣಹೊಂದಿರುತ್ತದೆ. ಹಾಗಾಗಿ ಇತರ ನಾಯಿಗಳಂತೆ ಸಣ್ಣಪುಟ್ಟ ಖಾಯಿಲೆಗಳಿಗೆ ಜೋತು ಬೀಳುವ ಪ್ರಾಣಿ ಇದಲ್ಲ. ಸಧೃಡ ಮೈಕಟ್ಟು ಹಾಗು ಆರೋಗ್ಯ ಹೊಂದಿರುತ್ತದೆ. ಹಾಗಾಗಿ ಇವುಗಳ ಜೀವಿತಾವಧಿ ೧೦-೧೫ವರ್ಷಗಳಾಗಿರುತ್ತದೆ.
ಇವುಗಳ ಆರೋಗ್ಯ ಕೆಡಬೇಕಾದರೆ ಅದು ಚರ್ಮಸಂಬಂಧಿ ಖಾಯಿಲೆಗಳು ಹೆಚ್ಚು. ಇವುಗಳಿಗೆ ಗಟ್ಟಿ ಪದರದ ಚರ್ಮ ಹಾಗು ಕೂದಲು ಇಲ್ಲದಿರುವುದರಿಂದ ಶೀತಲವಾತಾವರಣಗಳಲ್ಲಿ ಚರ್ಮವ್ಯಾಧಿಗಳಿಗೆ ತುತ್ತಾಗುವುದು ಸಹಜ. ಹಾಗೆಯೇ ಅತಿ ಸೂಕ್ಷ್ಮ ಸೂರ್ಯನ ಕಿರಣಗಳ ಕೆಲವು ಸಮಯ ಈ ನಾಯಿಗಳ ಚರ್ಮದ ಮೇಲೆ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಮತ್ತೊಂದು ಆರೋಗ್ಯ ಸಮಸ್ಯೆ ಎಂದರೆ ಮರಾಸ್ಮಸ್ ಇದು ಲಿವರ್ ಮೇಲೆ ದುಷ್ಪರಿಣಾಮ ಬೀರಿ ಆಹಾರಸರಿಯಾಗಿ ಪಚನವಾಗದೇ ತೊಂದರೆ ಕೊಡುವ ಸಾಧ್ಯತೆಇದೆ. ಈ ಸಮಯದಲ್ಲಿ ನಾಯಿಗಳು ಹೆಚ್ಚಾಗಿ ತಿಂದರೂ ಸಹ ಮೈಭಾರವಾಗದೇ ಹಾಗೇ ಇರುತ್ತದೆ. ದೇಹದ ತೂಕಹೆಚ್ಚುವುದಿಲ್ಲ. ಅನಾರೋಗ್ಯ ಎದ್ದು ಕಾಣುವಂತಾಗುತ್ತದೆ.
ವ್ಯಾಯಾಮ :
ಇವುಗಳು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸಮತೋಲನದಲ್ಲಿರಬೇಕಾದರೆ ಇವುಗಳಿಗೆ ವ್ಯಾಯಾಮ ಅತ್ಯವಶ್ಯಕ. ದೀರ್ಘವಾದ ನಡಿಗೆ ಅನಿವಾರ್ಯ. ವೇಗದ ಓಟ ಇವುಗಳಿಗೆ ಅತ್ಯಂತ ಪ್ರಿಯ. ಹಾಗಾಗಿ ಸಾಕುನಾಯಿಗಳಿಗೆ ದೊಡ್ಡ ಕಾಂಪೊಂಡ್ ಇರುವ ರೆಸಾರ್ಟ್‌ಗಳು ಅಥವಾ ತೋಟದ ಮನೆಗಳಲ್ಲಿ ವೇಗದ ಓಟ ಲಭ್ಯ. ಒಮ್ಮೆ ಓಡುವ ವ್ಯಾಯಾಮಕ್ಕೆ ಕಾಡುಮೇಡುಗಳಲ್ಲಿ ಆಕಸ್ಮಾತ್ ಬಿಟ್ಟರೆ ಯಜಮಾನನು ಕೂಗಿಕೊಂಡರೂ ಅಥವಾ ಬೇಲಿ ಹಾಕಿರುವ ನಿಮ್ಮ ಜಾಗ ಸೂಕ್ತ.
ಹಾಗಾಗಿ ಚಿಕ್ಕ ಮನೆಯಲ್ಲಿರುವವರು ಮುಧೋಳವನ್ನು ಸಾಕದೇ ಇರುವುದೇ ಕ್ಷೇಮ.
ಸಾಕುವಿಕೆ :
ಇವುಗಳನ್ನು ಸಾಕುವುದು ತುಂಬಾ ಸುಲಭ ಮತ್ತು ಕಮ್ಮಿ ಖರ್ಚಾಗುತ್ತದೆ. ಮೈಕೂದಲುಗಳು ಆಗಾಗ ಉದುರುವುದರಿಂದ ವಾರಕ್ಕೊಮ್ಮೆಯಾದರೂ ಬ್ರಷಿಂಗ್ ಅನಿವಾರ್ಯ. ವಾರಕೊಮ್ಮೆ ಬ್ರಷಿಂಗ್ ಮಾಡಿದರೆ ಚರ್ಮದ ಗುಣ ಕಾಪಾಡಿಕೊಳ್ಳುಬಹುದು. ಮೈಲ್ಡ್ ಸೋಪ್ ಉಪಯೋಗಿಸಿ ಸ್ನಾನ ಮಾಡಿಸಿದರೆ ಒಳ್ಳೆಯದು. ಅನೇಕ ಬಾರಿ ಸ್ನಾನ ಮಾಡಿಸುವುದು ಹಾಗು ಹಾರ್ಷ್ ಶ್ಯಾಂಪೂಗಳನ್ನು ಉಪಯೋಗಿಸಿದರೆ ಧರ್ಮ ಹಾಳಾಗುವುದರಲ್ಲಿ ಸಂಶಯವಿಲ್ಲ. ಇದಲ್ಲದೇ ಕಾಲಾನುಕ್ರಮದಲ್ಲಿ ಹಲ್ಲುಜ್ಜುವಿಕೆ ಇರಲೇಬೇಕು. ವಾರಕೊಮ್ಮೆ ಮಾಡಿದಾಗ ಹಲ್ಲುಗಳ ಗುಣಮಟ್ಟಕಾಪಾಡಿಕೊಳ್ಳ ಬಹುದು. ಉಸುರಿನ ದುರ್ವಾಸನೆಯನ್ನೂ ತಡೆಯಬಹುದು.
ತರಬೇತಿ :
ಅತ್ಯಂತ ಶಿಸ್ತುಗಾರ ನಿರ್ವಾಹಕ ಮಾತ್ರ ಒಂದು ಮುಧೋಳ್ ನಾಯಿಗೆ ತರಬೇತಿ ಕೊಡಲು ಸಾಧ. ಈನಾಯಿಗಳಿಗೆ ಮಾನಸಿಕ ಸ್ಥಿಮಿತ ಕಮ್ಮಿ ಇರುವುದರಿಂದ ಕಠಿಣ ತರಬೇತಿಗಳಿಗೆ ಇವು ಒಗ್ಗಿಕೊಳ್ಳುವುದಿಲ್ಲ. ಹಾಗಾಗಿ ಚಿಕ್ಕವಯಸ್ಸಿನಿಂದಲೇ ಒಳ್ಳೆಯ ಸೌಮ್ಯ ರೀತಿಯಲ್ಲಿ ತರಬೇತಿಕೊಟ್ಟರೆ ದೊಡ್ಡದಾದ ಮೇಲೆ ಸುಶಿಕ್ಷಿತ ಬೇಟೆ ನಾಯಿಲಭ್ಯ. ಇದಕ್ಕಿಂತ ಚಿಕ್ಕ ಪ್ರಾಣಿಗಳೊಡನೆ ಸೌಮ್ಯವಾಗಿ ವರ್ತಿಸುವುದಕ್ಕೆ ತರಬೇತಿ ಕೊಡಬೇಕಾಗುತ್ತದೆ. ಏಕೆಂದರೆ ಇವುಗಳು ಬೇಟೆ ನಾಯಿಗಳಾಗಿರುವುದರಿಮದ ಇವಕ್ಕಿಂತ ಚಿಕ್ಕ ಪ್ರಾಣಿಗಳನ್ನು ಆಹಾರದ ರೂಪದಲ್ಲಿ ನೋಡುವುದೇ ರೂಢಿಯಾಗಿರುತ್ತದೆ.
ವಿಶೇಷತೆಗಳು :
೧. ಇವುಗಳ ದೃಷ್ಟಿ ಅತ್ಯಂತ ತೀಕ್ಣ್ಷವಾಗಿದ್ದು ಸುಮಾರು ೨೭೦೦ ಪರಿಸರ ನೋಡಲು ಶಕ್ಯವಾಗಿದೆ. ಇದು ಬೇರೆನಾಯಿಗಳಿಗೆ ಸಾಧ್ಯವಿಲ್ಲ. ಇದು ಸಾಮಾನ್ಯವಾಗಿ ಮನುಷ್ಯರದೃಷ್ಠಿ ಕೋನದ ದುಪ್ಪಟ್ಟು.
೨. ಭಾರತ ಸರ್ಕಾರ ಈ ಮುಧೋಳ ನಾಯಿಗಳ ಪ್ರಸಿದ್ಧಿ ಅರಿತು ೫ ರೂಪಾಯಿ ಮೌಲ್ಯದ ಅಂಚೆ ಚೀಟಿ ಹೊರತಂದಿತು.