ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಗುರುವಾರ ಮುಂಜಾನೆ ನಿಧನರಾಗಿದ್ದಾರೆ. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು.
ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾಶೀನಾಥ್ ಹೊಸ ಅಲೆಯ ಚಿತ್ರಗಳ ಮೂಲಕ ಮನೆಮಾತಾದವರು. ಉಪೇಂದ್ರ, ಮನೋಹರ್, ಸುನೀಲ್‍ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು ಖ್ಯಾತಿ ಕಾಶಿನಾಥ್ ಅವರಿಗೆ ಸಲ್ಲುತ್ತದೆ. [ಕಂಬನಿ ಮಿಡಿದ ಚಿತ್ರರಂಗ]
ಕೇವಲ ನಟ, ನಿರ್ದೇಶಕ ಮಾತ್ರವಲ್ಲದೆ ಸಂಗೀತ ನಿರ್ದೇಶನ ಹಾಗೂ ಚಿತ್ರನಿರ್ಮಾಣದಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. ಅನಂತನ ಅವಾಂತರ, ಅನುಭವ, ಹೆಂಡತಿ ಎಂದರೆ ಹೇಗಿರಬೇಕು ಅವರಿಗೆ ಜನಪ್ರಿಯತೆ ತಂದುಕೊಟ್ಟ ಸಿನಿಮಾಗಳು. ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ.
ಕಾಶಿನಾಥ್ ಕಡಿಮೆ ಬಜೆಟ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸಿ ಅವನ್ನು ಗೆಲ್ಲಿಸುತ್ತಿದ್ದ ಕಲೆ ಅವರಿಗೆ ಸಿದ್ಧಿಸಿತ್ತು. ಕಾಶಿನಾಥ್ ಅಭಿನಯದ ಅಜಗಜಾಂತರ (1991) ಹಿಂದಿಗೆ ಜುದಾಯಿ ಹೆಸರಿನಲ್ಲಿ ರೀಮೇಕ್ ಆಗಿದೆ. ಆ ಸಿನಿಮಾದಲ್ಲಿ ಅನಿಲ್ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಮಾತೋಂಡ್ಕರ್ ಅಭಿನಯಿಸಿದ್ದಾರೆ.
ಕಾಶಿನಾಥ್ ಒಟ್ಟು 11 ಕನ್ನಡ, 1 ಹಿಂದಿ ಹಾಗೂ ತೆಲುಗು ಚಿತ್ರಗಳನ್ನು ನಿರ್ಮಿಸಿದ್ದು 37 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಚಿತ್ರಕಥೆ ನಿರ್ದೇಶನ ಮಾಡಿದ ಚಿತ್ರಗಳ ಸಂಖ್ಯೆ ಕನ್ನಡ (12), ಹಿಂದಿ ಮತ್ತು ತೆಲುಗಿನಲ್ಲಿ ತಲಾ ಒಂದು. ಒಟ್ಟು 7 ಕನ್ನಡ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಚಿತ್ರಗೀತೆಗಳನ್ನೂ ರಚಿಸಿ, ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.