ನಮ್ಮ ಮುಧೋಳಗೆ ಮತ್ತೊಂದು ಹೆಮ್ಮೆಯ ಸುದ್ದಿ ಕನ್ನಡದ ಕಬೀರ ಇಬ್ರಾಹಿಂ ಸುತಾರಗೆ ಹುಡುಕಿ ಬಂದ ಪದ್ಮಶ್ರೀ

ಮುಧೋಳ :ದೇಶದ ಅತ್ಯುನ್ನತ್ತ ಪ್ರಶಸ್ತಿಗೆ ಕನ್ನಡದ ಕಬೀರ ಇಬ್ರಾಹಿಂ ಸುತಾರ ಪಾತ್ರರಾಗಿದ್ದಾರೆ. ಆಧುನಿಕ ಸಂತ ಎಂದೇ ಹೆಸರುವಾಸಿಯಾದ ಇಬ್ರಾಹಿಂ ಸಹಬಾಳ್ವೆ, ಭಾವೈಕ್ಯತೆಗೆ ಸಮಾಜಕ್ಕೆ ಮಾದರಿ ವ್ಯಕ್ತಿ.




ಮುಧೋಳ ತಾಲೂಕಿನ ಮಹಾಲಿಂಗಪುರದ ಇಬ್ರಾಹಿಂ ಜನಿಸಿದ  ಇಬ್ರಾಹಿಂ ಸುತಾರ(78) ಅವರು ನಾಡು ಕಂಡ ಅತ್ಯದ್ಭುತ ಪ್ರವಚನಕಾರರು. ಉತ್ತರ ಕರ್ನಾಟಕ ಖ್ಯಾತ ಪಾರಿಜಾತ ಕಲೆಯನ್ನು ಭಜನೆಗೆ ಅಳವಡಿಸಿ ಸಂವಾದ ರೂಪದಲ್ಲಿ ಹೊಸ ಸಂಗೀತ ಪ್ರವಚನದಿಂದ ರಾಜ್ಯ, ದೇಶ, ವಿದೇಶದಲ್ಲೂ ಹೆಸರು ಮಾಡಿದವರು.
ವೇದ, ಪುರಾಣ, ತತ್ವಶಾಸ್ತ್ರ, ಮಹಾಕಾವ್ಯ, ಧರ್ಮಗ್ರಂಥಗಳ ಸಾರವನ್ನು ಸರಳವಾಗಿ ಎಂಥಹ ನಿರುಕ್ಷರಿಗಳಿಗೂ ಅರಿಯುವಂತೆ ಪ್ರವಚನದ ಮೂಲಕ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿರುವ ಸುತಾರ ಅವರು, ಜಾತ್ಯತೀತವಾಗಿ ಮನಸ್ಸುಗಳನ್ನು ಕಟ್ಟುವಲ್ಲಿ ನಿರತರಾಗಿದ್ದಾರೆ.
ಇವರ ತಂದೆ ನಬೀಸಾಬ, ತಾಯಿ ಅಮೀನಾಬಿ. ತಮ್ಮ ಮನೆತನದ ಕುಲ ಕಸುಬು ಬಡಿಗತನ (ಸುತಾರ) ದ ಹೆಸರು ಇವರ ನಾಮಧೇಯದೊಂದಿಗೂ ತಳಕು ಹಾಕಿಕೊಂಡಿದೆ.  ‘ಬಿಸ್ತಿ’ ಎಂದೆ ಹಲವರಿಗೆ ಪರಿಚಯವಾಗಿರುವ ಇವರು ಓದಿದ್ದು ಉರ್ದು ಮಾಧ್ಯಮದಲ್ಲಿ 3ನೇ ತರಗತಿಯನ್ನಷ್ಟೇ.  ಆದರೂ ಇವರ ಜ್ಞಾನ ಭಂಡಾರ ಅಗಾಧ. ಬಾಲ್ಯದಿಂದಲೂ ಎಲ್ಲ ಧರ್ಮಗಳ ಸಾರವನ್ನು ಅರ್ಥಮಾಡಿಕೊಳ್ಳಬೇಕು ಎನ್ನುವ ಇವರ ತುಡಿತವೇ ಅವರನ್ನು ಸರ್ವಧರ್ಮ ಪಾರಂಗತರನ್ನಾಗಿ ಮಾಡಿತು.
ಕುರಾನ್, ಭಗವದ್ಗೀತೆ, ಬೈಬಲ್, ವಚನ ಸಾಹಿತ್ಯ ಮುಂತಾದ ವಿಷಯಗಳಲ್ಲಿ ಪಾಂಡಿತ್ಯವನ್ನು ಪಡೆದು, ಅದರ ಸಿದ್ಧಾಂತವನ್ನು ಸರಳವಾಗಿ ತಮ್ಮ ಪ್ರವಚನದಲ್ಲಿ ಅಳವಡಿಸಿಕೊಂಡು ಮನಮುಟ್ಟುವಂತೆ ತಿಳಿಸುವುದರಲ್ಲಿ ಪರಿಣಿತರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿಯೂ (1998-2001) ಸೇವೆ ಸಲ್ಲಿಸಿದ್ದಾರೆ. ಹಿಂದೂ ಮುಸ್ಲಿಂರಲ್ಲಿ ಭಾವೈಕ್ಯತೆ ಬೆಸೆಯುವ ಕಾರ್ಯದಲ್ಲಿ ನಿರತರಾದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ, ಇಂಚಲ ಮಠದಿಂದ ಕನ್ನಡದ ಕಬೀರ, ಆಳ್ವಾ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಇದೀಗ ಭಾರತ ಸರ್ಕಾರದಿಂದ ಪದ್ಮಶ್ರೀ ಕ್ಕೂ ಪಾತ್ರರಾಗಿದ್ದಾರೆ.
ನವೀನ ಹಳೆಯದು