ಮುಧೋಳ : ಯುವಕರು ಕೃಷಿಯಲ್ಲಿ ನಿರಾಸಕ್ತಿ ತೋರುತ್ತಿರುವುದು ಒಂದೆಡೆಯಾದರೆ, ಕೆಲ ಯುವಕರು ಒಕ್ಕಲುತನದಲ್ಲಿ ಉತ್ತಮ ಆದಾಯ - ನೆಮ್ಮದಿ ಕಂಡಿದ್ದಾರೆ. ತಮ್ಮ ಕೃಷಿ ಸಾಧನೆಯೊಂದಿಗೆ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಯಲ್ಲಪ್ಪ ಶಿವಪ್ಪ ಲೋಗಾಂವಿ ಬಿಕಾಂ ಪದವೀಧರರು. ಯುವ ರೈತರೂ ಹೌದು. ರೈತರು ಒಂದೇ ಬೆಳೆ ಬೆಳೆದು ಎದುರಿಸುವ ಸಂಕಷ್ಟಗಳನ್ನು ಅರಿತ ಅವರು ಸಮಗ್ರ ಕೃಷಿಯಲ್ಲಿ ಗೆಲುವು - ನಲಿವು ಕಂಡಿದ್ದಾರೆ.
ಈ ರೈತರದು 16 ಎಕರೆ ಕೃಷಿ ಕ್ಷೇತ್ರ. ನೀರಾವರಿ ಸಾಗುವಳಿ. ತೋಟದ ಬದು ಮತ್ತು ಒಂದು ಎಕರೆಯಲ್ಲಿ ಪ್ರತ್ಯೇಕವಾಗಿ ಹೆಬ್ಬೇವು ನಾಟಿ ಮಾಡಿದ್ದಾರೆ. ಹೆಬ್ಬೇವು ಗಿಡಗಳ ಸಾಲಿನಲ್ಲಿ ನುಗ್ಗೆಯಿದೆ. ನಾಲ್ಕು ಹೆಬ್ಬೇವು ಗಿಡಗಳ ಮಧ್ಯ ಒಂದು ನುಗ್ಗೆ ಗಿಡ ನಾಟಿ ಮಾಡಿದ್ದಾರೆ. ಒಂದು ಎಕರೆ ಹೆಬ್ಬೇವಿನಲ್ಲಿ ಅಂತರಬೆಳೆಯಾಗಿ ನುಗ್ಗೆ, ಕಡಲೆ, ಗೋವಿನ ಜೋಳ ಬೆಳೆದಿದ್ದಾರೆ. ತೋಟದ ಬದುಗಳಲ್ಲಿ 200, ಎಕರೆ ಜಮೀನಿನಲ್ಲಿ 300 ಹೆಬ್ಬೇವು ಮತ್ತು 300 ನುಗ್ಗೆ ಬೆಳೆದಿದ್ದಾರೆ.
ಕೃಷಿಯ ಜತೆ ಹೈನುಗಾರಿಕೆ. 3 ಆಕಳು, 2 ಎಮ್ಮೆ, 2 ಕರುಗಳಿವೆ. ಇವುಗಳಿಗೆ 13- 35 ಅಳತೆಯ ಶೆಡ್ ನಿರ್ಮಿಸಿದ್ದಾರೆ. ಹಾಲು ಮಾರಾಟದಿಂದ ಪ್ರತಿವಾರ 2000 ದಿಂದ 3000 ಆದಾಯ ಬರುತ್ತದೆ. ಪ್ರತಿ ವರ್ಷ 40 ಟ್ರ್ಯಾಕ್ಟರ್ ಗೊಬ್ಬರ ಮಾರಾಟ ಮಾಡುತ್ತಾರೆ.
ಬಯೋಡೈಜಸ್ಟರ್ ಘಟಕ ನಿರ್ಮಿಸಿಕೊಂಡಿದ್ದು ಇದರಿಂದ ಭೂಮಿಗೆ ರಾಸಾಯನಿಕ ಬಳಕೆ ಕಡಿಮೆಯಾಗಿದೆ. ಜಮೀನಿನಲ್ಲಿ ಸಿಗುವ ಕಸ- ಕಡ್ಡಿ, ದನಗಳ ಮೂತ್ರವನ್ನು ಹಾಕಿ ಪ್ರತಿ 45 ದಿನಕ್ಕೆ ಒಮ್ಮೆ ಡ್ರಿಪ್ ಮೂಲಕ ಭೂಮಿಗೆ ಬಿಡುತ್ತಾರೆ. ಕಬ್ಬಿನ ಜತೆ ಅಂತರ ಬೆಳೆಯಾಗಿ ಕಲ್ಕತ್ತಾ ತಳಿಯ ಚೆಂಡು ಹೂವು ಬೆಳೆಸಿದ್ದರು. ಇದು ಮೂರೂವರೆ ತಿಂಗಳ ಬೆಳೆ. 5 ಎಕರೆಯಲ್ಲಿ 20 ಟನ್ ಹೂವು ಸಿಕ್ಕಿದ್ದು, ಕಿಲೋಗೆ 20 ರೂ. ದರದಲ್ಲಿ ಮಾರಾಟ ಮಾಡಿದ್ದಾರೆ. ಚೆಂಡು ಹೂವಿನಿಂದ ಒಟ್ಟು 4 ಲಕ್ಷ ರೂ. ಆದಾಯ ಪಡೆದಿದ್ದಾರೆ.
20 ಗುಂಟೆಯಲ್ಲಿ ನೆರಳು ಪರದೆ (ನೆಟ್ ಹೌಸ್) ನಿರ್ಮಿಸಿ ಜಿ4 ತಳಿಯ ಮೆಣಸಿನಕಾಯಿ ಬೆಳೆದಿದ್ದರು. ಇದು ರಫ್ತು ಗುಣಮಟ್ಟದ ಉತ್ಪನ್ನ. ಸಾಂಗ್ಲಿಯ ವ್ಯಾಪಾರಿ ಜತೆ ಖರೀದಿ ಒಪ್ಪಂದ ಮಾಡಿಕೊಂಡಿದ್ದರು. ಕಿಲೋಗೆ 20 ರೂ. ದರ. ಐದೂವರೆ ತಿಂಗಳ ಬೆಳೆಯಿಂದ 2.20 ಲಕ್ಷ ರೂ. ಆದಾಯ. 60 ಸಾವಿರ ಖರ್ಚು. 11 ಟನ್ ಇಳುವರಿ ಬಂದಿದೆ. ಪರಾಗಸ್ಪರ್ಷ ಸರಿಯಾಗಿ ಆಗದ ಕಾರಣ ನಿರೀಕ್ಷಿತ ಇಳುವರಿ ಬಂದಿಲ್ಲ. ಆದರೆ, ಈ ಬೆಳೆಯಿಂದ ನಷ್ಟವಾಗಿಲ್ಲ ಎನ್ನುತ್ತಾರೆ.
ಎರಡು ಎಕರೆಯಲ್ಲಿ ಕಲ್ಲಂಗಡಿ ಬೆಳೆದು 2 ಲಕ್ಷ ರೂ. ನಿವ್ವಳ ಲಾಭ ಕಂಡಿದ್ದಾರೆ. ಒಟ್ಟು 55 ಟನ್ ಕಲ್ಲಂಗಡಿ ಸಿಕ್ಕಿತ್ತು. ಬೇಸಾಯ ವೆಚ್ಚ 1.20 ಲಕ್ಷ ರೂಪಾಯಿ. 5 ತಿಂಗಳ ಅವಧಿಯ ಬದನೆ ಬೆಳೆಯಲ್ಲಿ 2.15 ಲಕ್ಷ ರೂ. ಲಾಭ ಪಡೆದದ್ದು ಈ ರೈತರ ವಿಶೇಷ. 1 ಎಕರೆಯಲ್ಲಿ ಬದನೆ ಬೆಳೆದದ್ದು 35 ಟನ್ ಇಳುವರಿ ಸಿಕ್ಕಿತ್ತು. ಜಿಗ್‌ಜಾಗ್ ಪದ್ಧತಿಯಲ್ಲಿ ಪಾಸ್ಟಿಕ್ ಮಲ್ಚಿಂಗ್ ಮುಚ್ಚಿಗೆಯಲ್ಲಿ ಬದನೆ ಬೆಳೆದಿದ್ದರು.
ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ಇದರಲ್ಲಿ 96,0000 ಲೀಟರ್ ನೀರು ಸಂಗ್ರಹಣೆ ಆಗುತ್ತದೆ. ಕೊಳವೆಬಾವಿಯಿಂದ ನೀರನ್ನು ಎತ್ತಿ ಕೃಷಿ ಹೊಂಡದಲ್ಲಿ ತುಂಬಿಸಿಕೊಳ್ಳುತ್ತಾರೆ. ಕೃಷಿ ಹೊಂಡದಲ್ಲಿ 600 ಮೀನುಮರಿಗಳನ್ನು ಸಾಕಾಣೆ ಮಾಡಿದ್ದಾರೆ. 5 ಎಕರೆಯಲ್ಲಿ ಕಬ್ಬಿನ ಬೆಳೆಯಿದೆ. ನೀರಾವರಿಗೆ ಡ್ರಿಪ್ ವ್ಯವಸ್ಥೆಯಿದೆ. 6 ಅಡಿ ಸಾಲಿನ ಅಂತರದಲ್ಲಿ ಕಬ್ಬು ಬೆಳೆಯುತ್ತಾರೆ. ಎಕರೆಗೆ ಸರಾಸರಿ 70 ಟನ್ ಇಳುವರಿ ಪಡೆಯುತ್ತಿದ್ದಾರೆ. ರವದಿ ಸುಡುವುದಿಲ್ಲ. ಹೆಚ್ಚು ಸಾವಯವ ಗೊಬ್ಬರ ನೀಡುತ್ತಾರೆ. ಅಂತರಬೆಳೆಯಾಗಿ ಚಂಡು ಹೂ, ಸ್ವೀಟ್‌ಕಾರ್ನ್, ಕಡಲೆ, ತರಕಾರಿ ಬೆಳೆಯುತ್ತಾರೆ.
ಬೆಳೆ ಪದ್ಧತಿ: ಏಕಬೆಳೆಯಾಗಿ ಗೋವಿನಜೋಳ, ಬಹುಬೆಳೆಯಾಗಿ ಹಣ್ಣು, ಹೂವು, ತರಕಾರಿ, ನೆಡುತೋಪು, ಸಾಂಬಾರು ಬಾಳೆ ಹಾಗೂ ಬಾರೆ ಗಿಡಗಳಿವೆ. ಅಂತರ ಬೆಳೆ - ಚೆಂಡು ಹೂ, ಸ್ವೀಟ್‌ಕಾರ್ನ್, ಕಡಲೆ ಇತ್ಯಾದಿ. ಮಿಶ್ರ ಬೆಳೆ - ಚೆಂಡು ಹೂವು, ಕೊತ್ತಂಬರಿ, ಮೆಂತೆ, ಪಾಲಕ್. ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆ ನಿರ್ವಹಣೆಗೆ ಕೊಟ್ಟಿಗೆ ಕೊಬ್ಬರ, ಕೋಳಿ/ಕುರಿ/ಹಂದಿ/ಹಸಿರೆಲೆ/ಎರೆಹುಳು ಗೊಬ್ಬರಗಳನ್ನು ಕಾಲಕಾಲಕ್ಕೆ ನೀಡುತ್ತಾರೆ. ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜೆಟೋಬ್ಯಾಕ್ಟರ್, ರಂಜಕ ಇವುಗಳನ್ನು ಸಸಿ ನಾಟಿ ಮಾಡುವ ಸಂದರ್ಭದಲ್ಲಿ ಹಾಗೂ ಸಿಂಪರಣೆ ಮಾಡುತ್ತಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿ, ಕೃಷಿ ಇಲಾಖೆಯ ಆತ್ಮಾ ಯೋಜನೆಯ ಶ್ರೇಷ್ಠ ಕೃಷಿಕ ಪ್ರಶಸ್ತಿ, ಮುಧೋಳ ತಾಲೂಕು ಶ್ರೇಷ್ಠ ರೈತ ಪ್ರಶಸ್ತಿ ಈ ಯುವ ರೈತರಿಗೆ ಸಂದಿವೆ.
ಪೂರಕ ಸೌಲಭ್ಯ
ಆಯಾ ಬೆಳೆ ಮತ್ತು ಅವಶ್ಯಕತೆಗೆ ತಕ್ಕಂತೆ ಹನಿ ನೀರಾವರಿ, ತುಂತುರು ನೀರಾವರಿ ಮತ್ತು ಹರಿ ನೀರಾವರಿ ವ್ಯವಸ್ಥೆಯಿದೆ. ತೋಟಗಾರಿಕೆ ಬೆಳೆಗಳಿಗೆ ಮಲ್ಚಿಂಗ್ ಬಳಸುತ್ತಾರೆ. ಹೊಲವನ್ನು ಸಮಪಾತಳಿ ಮಾಡಿಕೊಂಡಿದ್ದು, ಬದುವಿಗೆ ಅರಣ್ಯ ಬೆಳೆಗಳನ್ನು ಹಾಕಿದ್ದಾರೆ. ಮಳೆ ನೀರು ಕೊಯ್ಲು ಹಾಗೂ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ.
ಮಾಹಿತಿಗೆ ಮೊ. 9686306155