‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ನಿಧನ


ಕನ್ನಡದ ಖ್ಯಾತ ಚಿತ್ರನಟ ಚಂದ್ರಶೇಖರ್ ವಿಧಿವಶರಾಗಿದ್ದಾರೆ. ಕೆನಡಾದಲ್ಲಿದ್ದ ಚಂದ್ರಶೇಖರ್ ಇಂದು ಮುಂಜಾನೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಚಂದ್ರಶೇಖರ್ ಅವರು ಪತ್ನಿ ಶೀಲಾ, ಪುತ್ರಿ ಧಾನ್ಯ ಅವರನ್ನು ಅಗಲಿದ್ದಾರೆ. ಚಂದ್ರಶೇಖರ್ ಅವರು ಹಲವಾರು ವರ್ಷಗಳಿಂದ ಕುಟುಂಬದೊಂದಿಗೆ ಕೆನಡಾದಲ್ಲೇ ವಾಸವಿದ್ದರು. 10 ದಿನಗಳ ಹಿಂದಷ್ಟೇ ಚಂದ್ರಶೇಖರ್ ಅವರು ಬೆಂಗಳೂರಿಗೆ ಬಂದು ಕೆನಡಾಕ್ಕೆ ವಾಪಸ್ಸಾಗಿದ್ದರು.

‘ಎಡಕಲ್ಲು ಗುಡ್ಡದ ಮೇಲೆ’ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ಚಂದ್ರಶೇಖರ್ ನಟಿಸಿದ್ದಾರೆ. ‘ಸಂಸ್ಕಾರ‘, ‘ಒಂದೇ ರೂಪ ಎರಡು ಗುಣ‘, ‘ಪೂರ್ವಾಪರ‘ ಮೊದಲಾದವು ಅವರ ಜನಪ್ರಿಯ ಸಿನಿಮಾಗಳಾಗಿವೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ‘3 ಗಂಟೆ  30 ದಿನ, 30 ಸೆಕೆಂಡ್’ ಸಿನಿಮಾದಲ್ಲೂ ಅವರು ನಟಿಸಿದ್ದರು. ಚಂದ್ರಶೇಖರ್ ಅವರ ಪುತ್ರಿ ಕೂಡ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.


ಚಂದ್ರಶೇಖರ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು 1973ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾ. ಅವರು ಅಭಿನಯಿಸಿದ ಕೊನೆಯ ಸಿನಿಮಾದ ಹೆಸರೂ ಕೂಡ ‘ಎಡಕಲ್ಲು ಗುಡ್ಡದ ಮೇಲೆ’. ಇತ್ತೀಚೆಗಷ್ಟೇ ಅವರು ಈ ಚಿತ್ರತಂಡದ ಜೊತೆ ಕಾಲಕಳೆದಿದ್ದರು.
ನವೀನ ಹಳೆಯದು