ಮುಧೋಳ : ಖಡಕ್‌ ರೊಟ್ಟಿ ಊರಿನ ಹುಡುಗ



ರೊಟ್ಟಿ ತಿಂದವ ಜಟ್ಟಿಯಾಗ್ತಾನೆ ಎಂಬ ಮಾತು ಬಾಗಲಕೋಟೆ ಸೀಮೆಯಲ್ಲಿ ಚಾಲ್ತಿಯಲ್ಲಿದೆ. ಈ ಮಾತನ್ನು ಅದೇ ಬಾಗಲಕೋಟೆ ಜಿಲ್ಲೆ ಮುಧೋಳದ ಹುಡುಗ ಸಂದೀಪ್‌ ನಿಜ ಮಾಡಿದ್ದಾರೆ. ಕುಸ್ತಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಈತ, ಮುಂದೊಂದು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬ ಮಹದಾಸೆ ಹೊಂದಿದ್ದಾನೆ.

ಊರಲ್ಲಿರುವ ಕುಸ್ತಿ ಪೈಲ್‌ವಾನರನ್ನು ನೋಡಿಯೇ ಆ ಬಾಲಕನಿಗೆ ಕುಸ್ತಿಯ ಮೇಲೆ ಮೋಹ ಬೆಳೆಯಿತು. ಅಕ್ಕಪಕ್ಕದ ಊರಲ್ಲಿ ನಡೆಯುವ ಕುಸ್ತಿ ಸ್ಪರ್ಧೆಗೆ ಈ ಬಾಲಕ ಹಾಜರ್‌. ಈತನಲ್ಲಿರುವ ಕುಸ್ತಿ ಹುಚ್ಚನ್ನು ನೋಡಿದ ತಂದೆ ಮಗನನ್ನು ಗರಡಿ ಮನೆಗೆ ಬಿಟ್ಟರು. ಇದೀಗ ಆ ಗರಡಿ ಮನೆಯ ಬಾಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪದಕಗಳನ್ನು ಗೆಲ್ಲುತ್ತ ರಾಜ್ಯಕ್ಕೆ ಕೀರ್ತಿ ತರುತ್ತಿದ್ದಾನೆ. ಅವನೇ ಸಂದೀಪ್‌ ಕಾಟೆ.

ಊರಲ್ಲಿ ಕುಸ್ತಿ ಪೈಲ್‌ವಾನರ ಸಂಖ್ಯೆ ಹೆಚ್ಚಿರುವುದರಿಂದ ಸಜವಾಗಿಯೇ ಕುಸ್ತಿ ಸಂದೀಪ್‌ನನ್ನು ಆಕರ್ಷಿಸಿತು. ಹೆಚ್ಚಿನ ತರಬೇತಿ ಇಲ್ಲದಿದ್ದರೂ ಈತ ಜೂನಿಯರ್‌ ವಿಭಾಗದಲ್ಲಿ ರಾಷ್ಟ್ರೀಯ ಪದಕವನ್ನು ಗೆದ್ದ. ಇದನ್ನು ನೋಡಿದ ಆತನ ತಂದೆಗೆ ಖುಷಿ ಜತೆಗೆ ಅಚ್ಚರಿ. ಈತನಿಗೆ ಕುಸ್ತಿಯಲ್ಲಿ ಭವಿಷ್ಯವಿದೆ ಅನ್ನುವುದನ್ನು ಅರಿತು ಮಗನನ್ನು ಪ್ರೋತ್ಸಾಹಿಸಿದರು.

12ನೇ ವರ್ಷದಲ್ಲಿಯೇ ಅಖಾಡಕ್ಕೆ

ಅದು, 12ರ ವಯಸ್ಸು, ಅಕ್ಕಪಕ್ಕದ ಮನೆಯ ಮಕ್ಕಳು ಕ್ರೀಡಾಂಗಣದಲ್ಲಿ ಆಡುತ್ತಿದ್ದರೆ, ಸಂದೀಪ್‌ ಗರಡಿ ಮನೆಯಲ್ಲಿ ಗುದ್ದಾಡುತ್ತಿದ್ದ. ತನಗಿಂತ ದೊಡ್ಡವರ ಜತೆಗೆ ತೊಡೆ ತಟ್ಟಿ ಕುಸ್ತಿ ಆಡುತ್ತಿದ್ದ. ಕ್ಷಣ ಮಾತ್ರದಲ್ಲಿ ಎದುರಾಳಿಯ ತಂತ್ರಗಳನ್ನು ಅರಿತು ಪ್ರತಿತಂತ್ರ ಹೆಣೆಯುವ ಚಾಣಾಕ್ಷತನ ಬೆಳೆಸಿಕೊಂಡಿದ್ದ. ನಂತರ ಧಾರವಾಡಕ್ಕೆ ಬಂದು ಕ್ರೀಡಾ ಹಾಸ್ಟೆಲ್‌ಗೆ ಸೇರಿಕೊಂಡ. ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪರ ರಾಜ್ಯ, ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ ಪದಕ ಗೆದ್ದಿದ್ದಾರೆ.

ಮನಸ್ಸಲ್ಲಿ ವಿಶೇಷ ಸ್ಥಾನ ಪಡೆದ ಅಂತಾರಾಷ್ಟ್ರೀಯ ಪದಕ

ಪ್ರತಿಯೊಬ್ಬ ಕ್ರೀಡಾಪಟುವಿಗೂ ತಾನು ಗೆದ್ದ ಮೊದಲ ಅಂತಾರಾಷ್ಟ್ರೀಯ ಪದಕಕ್ಕೆ ವಿಶೇಷ ಸ್ಥಾನ ಇರುತ್ತದೆ.  2010ರಲ್ಲಿ ನಡೆದ ಜೂನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಬೆಳ್ಳಿ ಪದಕ, ಮತ್ತೂಂದು 2015ರಲ್ಲಿ ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದಿರುವ ಬೆಳ್ಳಿ ಪದಕಗಳು ನನ್ನ ಪಾಲಿಗೆ ಅಮೂಲ್ಯವಾದವು. ಈ ಎರಡೂ ಪದಕಗಳಿಂದ ನನಗಷ್ಟೇ ತಂದೆ, ತಾಯಿಗೂ ಹೆಸರು ಬಂತು ಎಂಬ ಖುಷಿ ಸಂದೀಪ್‌ಗಿದೆ. ಅದೇ ರೀತಿ 2011ರಲ್ಲಿ ದಸರಾ ಕೇಸರ ಪ್ರಶಸ್ತಿ ಗೆದ್ದ ಖುಷಿಯೂ ಸೇರಿಕೊಂಡಿದೆ.

ಉದ್ಯೋಗ ಸಿಕ್ಕ ಮೇಲೆ ಆರ್ಥಿಕ ಸುಧಾರಣೆ

ಕುಸ್ತಿ ಪೈಲ್ವಾನ್‌ ಆಗುವುದೆಂದರೆ ಸುಮ್ಮನೆ ಮಾತಲ್ಲ. ಅದಕ್ಕೆ ತಾಲೀಮು ನಡೆಸಬೇಕು. ತರಬೇತಿ ಪಡೆಯಬೇಕು. ಇದೆಲ್ಲದಕ್ಕೂ ಅಣ ಅಗತ್ಯವಾಗಿಬೇಕಿತ್ತು. ಆರಂಭದ ದಿನಗಳಲ್ಲಿ ಸಂದೀಪ್‌ಗೆ ಮನೆಯಲ್ಲಿ ನೀಡುತ್ತಿದ್ದ ಹಣವೇ ಆಧಾರವಾಗಿತ್ತು. ಮುಂದೆ ಕುಸ್ತಿಯಲ್ಲಿ ಪದಕಗಳನ್ನು ಗೆಲ್ಲುತ್ತಾ ಹೋದಾಗ, 2015ರಲ್ಲಿ ರೈಲ್ವೆ ಇಲಾಖೆಯಲ್ಲಿ ನೌಕರಿ ಸಿಕ್ಕಿತು. ಸದ್ಯ ಮುಂಬೈ ವೆಸ್ಟರ್ನ್ ರೈಲ್ವೇಸ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಅಲ್ಲಿಯೇ ಇರುವ ಸಾಯ್‌ ಕೇಂದ್ರದಲ್ಲಿ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ.

ನೋವು ನೀಡಿದ 2017

ಕಳೆದ ವರ್ಷದ ಆರಂಭದಲ್ಲಿಯೇ ಕಾಣಿಸಿಕೊಂಡಿದ್ದು, ಮಂಡಿ ನೋವು. ಸೂಕ್ತ ಚಿಕಿತ್ಸೆ ಪಡೆದು ಅಬ್ಟಾ! ಬಚಾವ್‌ ಆದೆ ಅನ್ನುವ ಹಂತದಲ್ಲಿಯೇ ಮತ್ತೆ ಮತ್ತೆ ಉದ್ಭವಿಸುತ್ತಿತ್ತು ನೋವು. ಮಂಡಿ ನೋವಿನ ಕಾರಣದಿಂದಲೇ 2017ರಲ್ಲಿ ಒಂದೇ ಒಂದು ರಾಷ್ಟ್ರೀಯ ಕ್ರೀಡೆಯಲ್ಲಿಯೂ ಪಾಲ್ಗೊಳ್ಳದಂತಾಯಿತು. ಕೊನೆಯಲ್ಲಿ ರೈಲ್ವೇಸ್‌ ಕ್ರೀಡೆಯಲ್ಲಿ ಮಾತ್ರ ಪಾಲ್ಗೊಂಡು ಬೆಳ್ಳಿ ಪದಕ ಗೆದ್ದ ತೃಪ್ತಿ ಸಿಕ್ಕಿದೆ ಎನ್ನುತ್ತಾರೆ ಸಂದೀಪ್‌.

ನರಸಿಂಗ್‌ ಮಾರ್ಗದರ್ಶನ

ಅನುಭವಿ ಕುಸ್ತಿಪಟು, ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ನರಸಿಂಗ್‌ ಯಾದವ್‌ ಮತ್ತು ಸಂದೀಪ್‌ ಕಾಟೆ ಮುಂಬೈನಲ್ಲಿ ಒಂದೇ ಅಖಾಡದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇದರಿಂದ ನರಸಿಂಗ್‌ ಆತ್ಮೀಯ. ಕುಸ್ತಿಯ ಹೊಸ ಹೊಸ ತಂತ್ರಗಳ ಬಗ್ಗೆ ನರಸಿಂಗ್‌ ಕಿರಿಯ ಕುಸ್ತಿಪಟುಗಳಿಗೆ ಮಾಹಿತಿ ನೀಡುತ್ತಾರೆ, ಯಾವ ರೀತಿ ಆಡಬೇಕು, ಎದುರಾಳಿಯ ತಂತ್ರಗಳನ್ನು ಅರಿಯುವುದು ಹೇಗೆ ಅನ್ನುವುದನ್ನು ತಿಳಿಸುತ್ತಾರೆ.

ಸುಶೀಲ್‌ ಗೆದ್ದ ಪದಕವೇ ಸ್ಫೂರ್ತಿ

ಸಂದೀಪ್‌ಗೆ ಕುಸ್ತಿಯಲ್ಲಿ ವಿಪರೀತ ಆಸಕ್ತಿ ಇತ್ತು ನಿಜ. ಆದರೆ ಇಂಥದ್ದೇ ಸಾಧನೆ ಮಾಡಬೇಕು ಅನ್ನುವ ಗುರಿ ಇರಲಿಲ್ಲ. ಆ ಗುರಿ ಸಿಕ್ಕಿದ್ದು, ಸುಶೀಲ್‌ ಕುಮಾರ್‌ ಅವರಿಂದ. 2008 ರಲ್ಲಿ ಬೀಜಿಂಗ್‌ನಲ್ಲಿ ಸುಶೀಲ್‌ ಕುಮಾರ್‌ ಪದಕ ಗೆದ್ದಾಗ, ತಾನೂ ಅವರಂತಾಗಬೇಕು ಅನ್ನುವ ಕನಸು ಸಂದೀಪನಲ್ಲಿ ಉದ್ಭವಗೊಂಡಿದೆ. ಹೀಗಾಗಿ ಶ್ರದ್ಧೆಯಿಂದ ಪ್ರತಿ ದಿನ ಅಭ್ಯಾಸಕ್ಕೆ ಹಾಜರಾಗುತ್ತಿದ್ದಾರೆ. ಮುಂದೊಂದು ದಿನ ತಾನು ಒಲಿಂಪಿಕ್ಸ್‌ ಪದಕ ಗೆಲ್ಲಬೇಕು ಅನ್ನುವ ಗುರಿಯನ್ನು ಸಂದೀಪ್‌ ಇಟ್ಟುಕೊಂಡಿದ್ದಾರೆ.

79 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಸಜ್ಜು

ಇಲ್ಲಿಯವರೆಗೆ ಸಂದೀಪ್‌ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಇದೀಗ ಹೊಸದಾಗಿ 79 ಕೆಜಿ ವಿಭಾಗದ ಸ್ಪರ್ಧೆ ಆರಂಭಗೊಂಡಿದೆ. ಹೀಗಾಗಿ ಮುಂದಿನ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 

79 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತೇನೆ. ಈ ನಿಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೇನೆ ಅನ್ನುತ್ತಾರೆ ಸಂದೀಪ್‌.

ದಿನಕ್ಕೆ 6 ಮೊಟ್ಟೆ, 3 ಲೀಟರ್‌ ಹಾಲು

ಪ್ರತಿಯೊಬ್ಬ ಕ್ರೀಡಾಪಟುವಿಗೂ ಆಹಾರ ಪದ್ಧತಿ ಅತೀ ಮಹತ್ವದ್ದು. ಆ ನಿಟ್ಟಿನಲ್ಲಿ ಸಂದೀಪ್‌ ಕೂಡ ತುಂಬಾ ಕಟ್ಟು ನಿಟ್ಟು. ಪ್ರತಿದಿನ ಬೆೆಳಿಗ್ಗೆ 3 ತಾಸು, ಮಧ್ಯಾಹ್ನ 3 ತಾಸು ಅಭ್ಯಾಸ. ದಿನಕ್ಕೆ 6 ಮೊಟ್ಟೆ, 3 ಲೀಟರ್‌ ಹಾಲು, ದಿನಬಿಟ್ಟು ದಿನಕ್ಕೆ ಚಿಕನ್‌, ಮಟನ್‌. ಹೆಚ್ಚಿನ ಮಸಾಲೆ ಪದಾರ್ಥ ಮತ್ತು ಸಿಹಿ ತಿಂಡಿಗೆ ಬ್ರೇಕ್‌. ಬಾದಾಮಿ, ವಿವಿಧ ರೀತಿಯ ಹಣ್ಣುಗಳನ್ನು ಪ್ರತಿ ದಿನ ಸೇವಿಸುವಿಕೆ. ಇದುವೇ ಸಂದೀಪ್‌ ಆಹಾರ ಪದ್ಧತಿ.

ಸಂದೀಪ್‌ ಕಾಟೆ ಯಾರು?

ಬಾಗಲಕೋಟೆ ಜಿಲ್ಲೆಯ ಮುಧೋಳದ ಬಸವಂತ ಕಾಟೆ ಮತ್ತು ಪುಷ್ಪಾವತಿ ದಂಪತಿ ಮಗ ಸಂದೀಪ್‌ ಕಾಟೆ. ಪ್ರಾಥಮಿಕ ಶಿಕ್ಷಣ ಮುಧೋಳ, ನಂತರ ಪ್ರೌಢ, ಪದವಿ ಶಿಕ್ಷಣ ಧಾರವಾಡದಲ್ಲಿ. ಆರಂಭದಲ್ಲಿ ಗರಡಿ ಮನೆಯಲ್ಲಿ ಬಾಬುರಾವ್‌ ರಾಣೆ, ನಿಂಗಪ್ಪ, ಶಂಕರಪ್ಪ ಅವರಲ್ಲಿ ತರಬೇತಿ. ಇದೀಗ ರೈಲ್ವೇಸ್‌ನಲ್ಲಿ ಉದ್ಯೋಗ. ಮುಂಬೈನಲ್ಲಿ ಜಗ್ಮಾಲ್‌ ಸಿಂಗ್‌ ಅವರಿಂದ ತರಬೇತಿ. 1 ಅಂತಾರಾಷ್ಟ್ರೀಯ, 9 ರಾಷ್ಟ್ರೀಯ ಪದಕ ಗೆದ್ದ ಹಿರಿಮೆ. ರಾಜ್ಯ ಸರ್ಕಾರದಿಂದ ಕೆಒಎ ಪ್ರಶಸ್ತಿ ಪುರಸ್ಕೃತ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕ ಗೆಲ್ಲಬೇಕು, ರಾಜ್ಯಕ್ಕೆ ವಿಶೇಷವಾಗಿ ಬಾಗಲಕೋಟೆಗೆ ಕೀರ್ತಿ ತರಬೇಕು ಅನ್ನುವ ಗುರಿ ಹೊಂದಿರುವ ವ್ಯಕ್ತಿ.

ನವೀನ ಹಳೆಯದು