ಮುಧೋಳ : ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮತದಾನದ ಬಗ್ಗೆ ಜಾಗೃತಿ


ಮುಧೋಳ (ಬಾಗಲಕೋಟೆ) : ಪದವಿ ಶಿಕ್ಷಣ ಓದುತ್ತಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮತದಾನ ಹಕ್ಕನ್ನು ಪಡೆದಿರುತ್ತಾರೆ. ಮತದಾನದ ಮೂಲಕ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂದು ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಉಮೇಶ ಆತನೂರೆ ಹೇಳಿದರು.
ನಗರದ ಎಸ್.ಆರ್.ಕಂಠಿ ಕಾಲೇಜ್‍ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮತದಾರ ದಿನಾಚರಣೆ ನಿಮಿತ್ತ ಮಹಾವಿದ್ಯಾಲಯದ ಸಭಾಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಂವಿಧಾನದಡಿಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆದಿರುವ ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಎಲ್ಲ ದಾನಕ್ಕಿಂತ ಮತದಾನ ಬಹುದೊಡ್ಡದಾಗಿದ್ದು ಯಾವುದೇ ಕಾರಣಕ್ಕೂ ತಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡದೆ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಯಾವುದೇ ಆಸೆ-ಆಮಿಷಕ್ಕೆ ಬಲಿಯಾಗಬಾರದು,ಯುವಕರು ದೇಶಕಟ್ಟುವಲ್ಲಿ ಪ್ರಮುಖ ಸ್ಥಾನ ಹೊಂದಿರುತ್ತಾರೆ ಎಂಬುದನ್ನು ಅರಿತು ಮತದಾನ ಮಾಡಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಮನ್ನಯ್ಯನವರಮಠ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎ.ಯು.ರಾಠೋಡ, ಎ.ಎಸ್.ಐ ವಿಶ್ವನಾಥ ಇಟಗಿ, ಚುನಾವಣಾ ವಿಭಾಗದ ಶಿರಸ್ತೆದಾರ ಬಿ.ಬಿ. ಕುಂಬಾರ, ಶಿರಸ್ಥೆದಾರ ಶಶಿಧರ ಚಲವಾದಿ, ಪ್ರೊ.ಜಿ.ಬಿ. ಅಣೆಪ್ಪನವರ, ಪ್ರೊ.ಎಸ್.ಎಸ್. ಬಿರಾದಾರ, ಡಾ.ಎಂ.ಆರ್. ಜರಕುಂಟಿ, ಪ್ರೊ.ಎಂ.ಎಂ. ಹಿರೇಮಠ,ಪ್ರೊ.ವಿ.ಎಸ್.ಮುನವಳ್ಳಿ, ಪ್ರೊ.ಎಸ್.ವಿ.ಶಿಂಧೆ, ಪ್ರೊ.ಎ.ವೈ.ಮುನ್ನೋಳ್ಳಿ, ಪ್ರೊ.ಎಸ್.ಕೆ.ಸಾರವಾಡ, ಪ್ರೊ.ವಿ.ವೈ.ಮಡಿವಾಳರ ಉಪಸ್ಥಿತರಿದ್ದರು.

ನವೀನ ಹಳೆಯದು