ಶ್ವಾನಗಳ ಸ್ವಭಾವ, ಚುರುಕುತನ, ಮಾಲೀಕರು ನೀಡುವ ಸೂಚನೆಗಳ ಪಾಲನೆಯ ಆಧಾರದಲ್ಲಿ ಸ್ಪರ್ಧೆ ನಡೆಸಲಾಯಿತು. ಚಿಕ್ಕಗಾತ್ರದ ಶ್ವಾನಗಳಿಂದ ಹಿಡಿದು ದೈತ್ಯಾಕಾರದ ಶ್ವಾನಗಳ ಚಟುವಟಿಕೆ ಪ್ರೇಕ್ಷಕರ ಮನಸೂರೆಗೊಂಡಿತು.ಬೆಂಗಳೂರು: ದೇಶ, ವಿದೇಶಗಳ ವಿವಿಧ ತಳಿಗಳ ಶ್ವಾನಗಳು ಅಲ್ಲಿದ್ದವು. ಸ್ಪರ್ಧಾ ಕಣದಲ್ಲಿ ಮಾಲೀಕರ ಜತೆ ಅತ್ತಿತ್ತ ಓಡಾಡುತ್ತಿದ್ದ ಅವುಗಳ ಗತ್ತು ಗೈರತ್ತನ್ನು ಕಣ್ತುಂಬಿಕೊಳ್ಳಲು ಭಾರಿ ಜನಸಮೂಹವೇ ಅಲ್ಲಿ ನೆರದಿತ್ತು.
ಕೆಲವು ದೈತ್ಯಾಕಾರದ ನಾಯಿಗಳ ದೇಹದಾರ್ಢ್ಯ ಕಂಡು ಜನ ಹುಬ್ಬೇರಿಸಿದರು. ಅಳುಕುತ್ತಲೇ ಅವುಗಳ ಬಳಿ ನಿಂತು ಸೆಲ್ಫಿ ತೆಗೆಸಿಕೊಂಡರು. ಯುವಕ–ಯುವತಿಯರು ಶ್ವಾನಗಳನ್ನು ವಿಶಿಷ್ಟ ಹೆಸರುಗಳಿಂದ ಕರೆಯುತ್ತಾ ಮುದ್ದಿಸುತ್ತಿದ್ದ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು.
ಸಿಲಿಕಾನ್ ಸಿಟಿ ಕೆನೆಲ್ ಕ್ಲಬ್ (ಮೈಸೂರು ಕೆನೆಲ್ ಕ್ಲಬ್) ವತಿಯಿಂದ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳಿವು.
ವಿವಿಧ ತಳಿಗಳ 275 ಶ್ವಾನಗಳನ್ನು ಒಂದೇ ಕಡೆ ನೋಡುವ ಅವಕಾಶವನ್ನು ಈ ಪ್ರದರ್ಶನ ಒದಗಿಸಿಕೊಟ್ಟಿತು.
ಶ್ವಾನಗಳ ಸ್ವಭಾವ, ಚುರುಕುತನ, ಮಾಲೀಕರು ನೀಡುವ ಸೂಚನೆಗಳ ಪಾಲನೆಯ ಆಧಾರದಲ್ಲಿ ಸ್ಪರ್ಧೆ ನಡೆಸಲಾಯಿತು. ಚಿಕ್ಕಗಾತ್ರದ ಶ್ವಾನಗಳಿಂದ ಹಿಡಿದು ದೈತ್ಯಾಕಾರದ ಶ್ವಾನಗಳ ಚಟುವಟಿಕೆ ಪ್ರೇಕ್ಷಕರ ಮನಸೂರೆಗೊಂಡಿತು.
ವಿಶೇಷವಾಗಿ ಸಿಂಗಾರಗೊಂಡಿದ್ದ ಶ್ವಾನಗಳು ತೀರ್ಪುಗಾರರ ಮುಂದೆ ಬಿಂಕದಿಂದ ಸಾಗಿ ಬರುತ್ತಿದ್ದಂತೆಯೇ ಚಪ್ಪಾಳೆಯ ಸುರಿಮಳೆ. ನೆಚ್ಚಿನ ನಾಯಿ ಜನಮೆಚ್ಚುಗೆಗೆ ಪಾತ್ರವಾದ ಬಗ್ಗೆ ಮಾಲೀಕರಲ್ಲಿ ಏನೋ ಪುಳಕ. ಮುದ್ದಿನ ನಾಯಿ ಪ್ರಶಸ್ತಿ ಗಿಟ್ಟಿಸಿದಾಗಲಂತೂ ಅವರ ಹರ್ಷಕ್ಕೆ ಪಾರವೇ ಇರಲಿಲ್ಲ. ಬಹುಮಾನ ಗಿಟ್ಟಿಸಲು ವಿಫಲವಾದ ಶ್ವಾನಗಳ ಮಾಲೀಕರು ಸಪ್ಪೆ ಮೋರೆ ಹಾಕಿ ಅಲ್ಲಿಂದ ನಿರ್ಗಮಿಸಿದರು.
ಶ್ವಾನಗಳ ಕುತ್ತಿಗೆಗೆ ಹಾಕುವ ಬೆಲ್ಟ್, ಆಹಾರ, ಔಷಧಿ, ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮಳಿಗೆಗಳಿಗೆ ಮುಗಿಬಿದ್ದರು.
ಮುಧೋಳ್ ನಾಯಿಗೆ ಪ್ರಶಸ್ತಿ ಗರಿ
ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಬಸವರಾಜ್ ಉಳ್ಳಾಗಡ್ಡೆ ಅವರ ಮುಧೋಳ ತಳಿಯ ಮೂರು ವರ್ಷದ ರಾಕಿಯಾ ಶ್ವಾನವು ‘ಪ್ರದರ್ಶನದಲ್ಲಿ ಅತ್ಯುತ್ತಮ’ ಹಾಗೂ ‘ತಳಿಯಲ್ಲಿ ಅತ್ಯುತ್ತಮ’ ಪ್ರಶಸ್ತಿಯನ್ನು ಪಡೆಯಿತು. ಈ ಎರಡು ಪ್ರಶಸ್ತಿಗಳೂ ತಲಾ ₹ 5,000 ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿವೆ.
‘ಮುಧೋಳ ಶ್ವಾನ ದೇಶದ ಅತ್ಯುತ್ತಮ ತಳಿ. ಭಾರತೀಯ ಸೇನೆಗೆ ಎಂಟು ನಾಯಿಗಳನ್ನು ನೀಡಿದ್ದೇವೆ. ಈ ನಾಯಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ತಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂಬುದೇ ನಮ್ಮ ಉದ್ದೇಶ. ಅದಕ್ಕಾಗಿ ತಯಾರಿ ನಡೆಸಿದ್ದೇವೆ’ ಎಂದು ಬಸವರಾಜ್ ತಿಳಿಸಿದರು.
‘ಈ ತಳಿಯ ಮರಿಗೆ ₹10 ಸಾವಿರ ಬೆಲೆ ಇದೆ. ದೊಡ್ಡ ನಾಯಿಗಳು ₹1 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತವೆ. ಸಣ್ಣ ಫಾರ್ಮ್ ಇಟ್ಟುಕೊಂಡು, ಅಲ್ಲಿ 13 ನಾಯಿಗಳನ್ನು ಸಾಕುತ್ತಿದ್ದೇನೆ’ ಎಂದರು. ರಾಕಿಯಾ ಅತ್ಯಂತ ಚುರುಕು. ಅದಕ್ಕೆ ವಿಶೇಷ ಆರೈಕೆ ಮಾಡಿಲ್ಲ ಇತರ ನಾಯಿಗಳಿಗೆ ನೀಡುವಂತೆ ಅದಕ್ಕೂ ಹಾಲು, ರೊಟ್ಟಿ, ಮೆಕ್ಕೆ ಜೋಳದ ನುಚ್ಚು, ಮೊಟ್ಟೆ ಹಾಗೂ ಕೆಲವೊಮ್ಮೆ ಮಾಂಸ ನೀಡುತ್ತೇನೆ’ ಎಂದರು.