ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ 2018 ಮೇ 12ರಂದು ನಡೆಯಲಿದೆ. ಇಂದು ಬೆಳಗ್ಗೆ ಚುನಾವಣಾ ಆಯೋಗ ನಡೆಸಿದ ಸುದ್ದಿಗೋಷ್ಠಿಯಲ್ಲಿ ದಿನಾಂಕ ಪ್ರಕಟಿಸಲಾಗಿದೆ. ಮೇ ತಿಂಗಳ 15ರಂದು ಮತ ಎಣಿಕೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ದಿನಾಂಕ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, ಕರ್ನಾಟಕದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಒಟ್ಟು 4.96 ಕೋಟಿ ಮತದಾರರಿದ್ದಾರೆ. ಒಂದೇ ಒಂದು ಹಂತದ ಮತದಾನ ಇಲ್ಲಿ ನಡೆಯಲಿದ್ದು, 56,000 ಮತಗಟ್ಟೆಗಳಿರಲಿವೆ. ಈ ಬಾರಿ ಇವಿಎಂ ಜತೆ ವಿವಿ ಪ್ಯಾಟ್ (ಮತ ಖಾತರಿ ಯಂತ್ರ) ಇರಲಿದೆ. ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ವಿಶೇಷ ಸೌಲಭ್ಯವಿರಲಿದೆ.
ಪಕ್ಷಗಳ ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿಯಿರುವುದಿಲ್ಲ, ಆದರೆ ಅಭ್ಯರ್ಥಿಯೊಬ್ಬರ ಚುನಾವಣಾ ವೆಚ್ಚ ₹28 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ.
ಈಗಿರುವ 224 ಸದಸ್ಯರ ಕರ್ನಾಟಕ ವಿಧಾನಸಭೆಯ ಕಾಲಾವಧಿ ಮೇ 28ರಂದು ಅಂತ್ಯಗೊಳ್ಳಲಿದೆ. ಮೇ ತಿಂಗಳು ಮುಗಿಯುವುದರೊಳಗೆ ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆಗಳು ಪೂರ್ತಿಗೊಳ್ಳಬೇಕಿದೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಯೇರಲು ಬಿಜೆಪಿ ಯತ್ನಿಸುತ್ತಿದೆ. ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದರೆ, ಇತ್ತ ಕಾಂಗ್ರೆಸ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಣಕ್ಕಿಳಿದಿದೆ.
ಏನಿದು ವಿವಿ ಪ್ಯಾಟ್?
ಮತದಾರ ತಾನು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಸಾಕು ಮತಯಂತ್ರದ ಪಕ್ಕದಲ್ಲಿಯೇ ಇಡಲಾಗುವ ಮತ ಖಾತರಿಪಡಿಸುವ ವೋಟರ್ ವೆರಿಫೈಡ್ ಪೇಪರ್ ಆಡಿಟ್ (ವಿವಿ ಪ್ಯಾಟ್) ಯಂತ್ರದಲ್ಲಿ ನಾವು ಮತ ಹಾಕಿದ ಅಭ್ಯರ್ಥಿಯ ಹೆಸರಿನಲ್ಲಿ ಪ್ರಿಂಟ್ ಆದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಆಗ ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು.