ದೇಶ ಸೇವೆ ಆಯ್ತು...ಈಗ ಅರಣ್ಯ ಕಾವಲಿಗೆ ನಮ್ಮ.ಮುಧೋಳ ನಾಯಿ

ಧಾರವಾಡ ಜಿಲ್ಲೆ ಮೊದಲಿನಿಂದಲೂ ಶ್ರೀಗಂಧ ಬೆಳೆಗೆ ಪ್ರಸಿದ್ಧಿ. ಸ್ಥಳೀಯ ಕಾಡುಗಳಲ್ಲಿ ಬೆಳೆಯುವ ಶ್ರೀಗಂಧ ಉತ್ತಮ ಗುಣಮಟ್ಟದ ಕಾರಣಕ್ಕೆ ಭಾರೀ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಕಳ್ಳರು ಶ್ರೀಗಂಧದ ಮರಗಳನ್ನು ಕದಿಯುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿದೆ. ಈ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಗುಂಗರಗಟ್ಟಿ ಗ್ರಾಮದ ಶ್ರೀಗಂಧ ತೋಪನ್ನು ಕಾಯುವುದಕ್ಕೆ ಮುಧೋಳ ನಾಯಿಗಳ ಮೊರೆ ಹೋಗಿದ್ದಾರೆ. ಚಾಕಚಕ್ಯತೆ, ನಿಷ್ಠೆಗೆ ಹೆಸರಾದ ಮುಧೋಳ ನಾಯಿಯನ್ನು ದೇಶದ ಗಡಿ ರಕ್ಷಣೆಗೆ ಇತ್ತೀಚೆಗೆ ಸೇರಿಸಿಕೊಳ್ಳಲಾಗಿತ್ತು. ವಿಶಿಷ್ಟ ಕೌಶಲ್ಯದಿಂದ ಸಾಕಷ್ಟು ಹೆಸರಾಗಿರುವ ಈ ನಾಯಿಯ ತಳಿ ಇದೀಗ ಅರಣ್ಯ ಇಲಾಖೆಗೆ ಸೇರಿದ ಶ್ರೀಗಂಧದ ತೋಪನ್ನು ಕಾಪಾಡುವುದಕ್ಕೂ ಬಳಕೆಯಾಗುತ್ತಿವೆ.

ಧಾರವಾಡ ತಾಲೂಕಿನ ಗುಂಗರಗಟ್ಟಿ ಅರಣ್ಯ ಪ್ರದೇಶದಲ್ಲಿ 1998ರಿಂದ ಶ್ರೀಗಂಧ ಗಿಡಗಳನ್ನು ಬೆಳೆಸುತ್ತಾ ಬರಲಾಗುತ್ತಿದೆ. 28 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧದ ಜೊತೆಗೆ ಇತರೆ ಮರಗಳು ಇವೆ. ಆದರೆ ಕಳ್ಳರ ಕೈ ಚಳಕದ ಕಾರಣಕ್ಕೆ ಉಳಿಯುತ್ತಿದ್ದದು ಬೆರಳೆಣಿಕೆಯ ಗಿಡಗಳು. ರಾತ್ರೋರಾತ್ರಿ ತೋಪಿನ ಪ್ರದೇಶಕ್ಕೆ ನುಗ್ಗಿ ಶ್ರೀಗಂಧ ಗಿಡಗಳನ್ನು ಕತ್ತರಿಸುತ್ತಿದದ್ದು ಅಧಿಕಾರಿಗಳಿಗೆ ತಲೆ ನೋವಾಗಿತ್ತು. ರಾತ್ರಿ ಎಷ್ಟು ನಿದ್ದೆಗೆಟ್ಟು ಪಹರೆ ಕಾಯ್ದರೂ ಕೆಲವೊಮ್ಮೆ ಕಳ್ಳರ ನಿಯಂತ್ರಣ ಸಾಧ್ಯವಾಗದೇ ಹೋಯಿತು. ಇದರಿಂದ ಮುಧೋಳ ನಾಯಿಗಳನ್ನು ಪಹರೆಗೆ ಬಳಸಿಕೊಳ್ಳುವ ಉಪಾಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದರು. ಇದೀಗ 28 ಹೆಕ್ಟೇರ್ ಪ್ರದೇಶದಲ್ಲಿರುವ ಗಂಧದ ಮರಗಳ ರಕ್ಷಣೆಗೋಸ್ಕರ ಎರಡು ಮುಧೋಳ ನಾಯಿಗಳಿಗೆ ತರಬೇತಿ ನೀಡಿ, ಗುಂಗರಗಟ್ಟಿ ನೆಡುತೋಪಿನ ಪ್ರದೇಶದಲ್ಲಿ ಬಿಡಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಹಗಲು-ರಾತ್ರಿ ಮರಗಳನ್ನು ಕಾಯುವಲ್ಲಿ ಎರಡು ನಾಯಿಗಳು ಸಹಕಾರಿಯಾಗಿವೆ. ಜೊತೆಗೆ ತೋಪಿನಲ್ಲಿ ಯಾವುದೇ ಪ್ರಾಣಿಗಳು, ಮನುಷ್ಯರು ಬಂದರೂ ಈ ಎರಡು ನಾಯಿಗಳು ವಾಸನೆ ಮೂಲಕವೇ ಗ್ರಹಿಸುತ್ತವೆ. ವಾಸನೆ ಬಂದ ಕಡೆ ನಾಯಿಗಳೆರಡು ಓಡಿ ಹೋಗಿ ಅಲ್ಲಿರುವುದೇನು ಎಂದು ಪತ್ತೆ ಹಚ್ಚುತ್ತವೆ. ಒಂದೂವರೆ ವರ್ಷದ ಒಂದು ಗಂಡು ಹಾಗೂ ಒಂದು ಹೆಣ್ಣು ನಾಯಿಗೆ ಇದೀಗ ಸಂಪೂರ್ಣ ತರಬೇತಿ ನೀಡಲಾಗಿದೆ. ಹಗಲು ಹೊತ್ತಿನಲ್ಲಿ ಸಿಬ್ಬಂದಿಯೊಂದಿಗೆ ಇರುವ ಶ್ವಾನಗಳನ್ನು ರಾತ್ರಿಯಾಗುತ್ತಲೇ ಸ್ವತಂತ್ರವಾಗಿ ಬಿಡಲಾಗುತ್ತದೆ. “ಮುಧೋಳ ನಾಯಿಗಳು ಬಂದಾಗಿನಿಂದ ರಾತ್ರಿ ಹೊತ್ತು ಪಹರೆ ಕೆಲಸ ಸರಳವಾಗಿದೆ. ಜೊತೆಗೆ ಅವುಗಳು ಜೊತೆಗಿದ್ದರೆ ನಮಗೂ ಸುರಕ್ಷತೆ,” ಎನ್ನುತ್ತಾರೆ ಪಹರೆ ಕೆಲಸದಲ್ಲಿರುವ ಜಗದಣ್ಣವರ್.

ಕೋಟ್ ಮುಧೋಳ ನಾಯಿ ತಮ್ಮದೇ ಆದ ಬುದ್ಧಿಮತ್ತೆಗೆ ಹೆಸರುವಾಸಿ. ಅವುಗಳ ದೇಹ ವಿನ್ಯಾಸ ಮತ್ತು ಎತ್ತರ ಪಹರೆಯಂಥ ಕೆಲಸಕ್ಕೆ ಹೇಳಿ ಮಾಡಿಸಿದಂತಿದೆ. ಜೊತೆಗೆ ನಮ್ಮ ಸಿಬ್ಬಂದಿಗೆ ಅವುಗಳ ಗ್ರಹಣ ಶಕ್ತಿ ನೆರವಾಗಲಿದೆ ಎಂದು ಮುಧೋಳ ತಳಿಯ ನಾಯಿಗಳನ್ನು ಪಹರೆಗೆ ಬಳಸಿಕೊಳ್ಳುತ್ತಿದ್ದೇವೆ.
ವಿಜಯಕುಮಾರ್, ಆರ್ ಎಫ್ ಓ, ಧಾರವಾಡ
ನವೀನ ಹಳೆಯದು