ಬಾಗಲಕೋಟೆ: ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ಮಾದರಿಯಲ್ಲಿ ಬಸವೇಶ್ವರ ಅಂತರಾಷ್ಟ್ರೀಯ ಮ್ಯೂಜಿಯಂ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಇಡೀ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಮ್ಯೂಜಿಯಂ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 31.93 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಕೂಡಲ ಸಂಗಮ, ಬಸವನ ಬಾಗೇವಾಡಿ ಹಾಗೂ ಚಿಕ್ಕಸಂಗಮ ಅಭಿವೃದ್ಧಿಗಾಗಿ ಒಟ್ಟು 340 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಮೊದನೇ ಹಂತವಾಗಿ 140 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಬಸವಣ್ಣನವರು ಹೇಳಿದಂತೆ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಅನೇಕ ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಬಸವಣ್ಣನವರ ವಿಚಾರಧಾರೆಗಳು ಪ್ರಭಾವ ಬೀರಿದ್ದು, ಅವರ ಜಯಂತಿಯಂದೆ ಪ್ರಮಾಣ ವಚನ ಸ್ವೀಕರಿಸಿರುವುದಾಗಿ ಹೇಳಿದರು. ಮನುಷ್ಯ ಕಾಯಕ ಜೀವಿಯಾಗುವದರ ಜೊತೆಗೆ ದಾಸೋಹ ಕೂಡ ಮಾಡಬೇಕು. ಕಾಯಕದಿಂದ ಉತ್ಪತ್ತಿಯಾಗಬೇಕು. ಉತ್ಪತ್ತಿಯಾದದ್ದು ಹಂಚಿಕೆಯಾಗಬೇಕು ಇದು ಬಸವಣ್ಣನವರ ಸಂದೇಶವಾಗಿತ್ತು ಎಂದರು.
ಬಸವಣ್ಣನವರ ನಾಡಿನಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಅಂತರರಾಷ್ಟ್ರ ಮಟ್ಟದ ಮ್ಯೂಜಿಯಂ ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಸರ್ಕಾರದ ಕಚೇರಿಯಲ್ಲಿ ಅವರ ಭಾವಚಿತ್ರ ಇರುವಂತೆ ಮಾಡಲಾಗಿದೆ. ಅಲ್ಲದೇ ವಿಜಯಪುರದಲ್ಲಿರುವ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಎಂಬ ನಾಮಕರಣ ಮಾಡಿದ್ದು, ಈ ಸರ್ಕಾರದ ಬದ್ದತೆಯಿಂದ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಬಸವಕೇಂದ್ರ ಮುರುಗಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಡಂಬಳ-ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ.ಸಿದ್ದರಾಮ ಮಹಾಸ್ವಾಮಿ, ಕೂಡಲ ಸಂಗಮದ ಜಗದ್ಗುರು ಮಾತೆ ಮಹಾದೇವಿ, ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಗಳು ವಹಿಸಿದ್ದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಬೀಳಗಿ ಶಾಸಕ ಜೆ.ಟಿ.ಪಾಟೀ ಸೇರಿದಂತೆ ಇತರರು ಉಪಸ್ಥಿತರಿದ್ದರು.