ನಮ್ಮ ಮುಧೋಳ ಅದ್ಭುತ ಸುದ್ದಿ ಓದಿ ಮತ್ತು ನೋಡಿ

Image may contain: one or more people and text



ಬ್ರಿಟಿಷರ ಜೊತೆ ಕೆಲವು ಸ್ಥಳೀಯ ರಾಜರು ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ ನಿದರ್ಶನಗಳು ಇವೆ. ಇದಕ್ಕೆ ಎದುರಾಗಿ ಬ್ರಿಟಿಷರ ಜೊತೆ ಹೋರಾಡಿದ ರಾಜರುಗಳು ಕೆಲವರಿದ್ದಾರೆ. ಟಿಪ್ಪು ಸುಲ್ತಾನ್, ಕಿತ್ತೂರಿನ ಚೆನ್ನಮ್ಮ ಅಂತಹವರಲ್ಲಿ ಕೆಲವರಾಗಿದ್ದಾರೆ. ಕಿತ್ತೂರು ಸಂಸ್ಥಾನಕ್ಕೆ ಸಹಾಯಕನಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನ ಸಾಹಸವು ಲಾವಣಿಗಳಲ್ಲಿ ಪ್ರಸಾರವಾಗಿದೆ. ಮುಧೋಳ ಕೂಡಾ ಒಂದು ಸಂಸ್ಥಾನವಾಗಿದ್ದು, ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರು ಸ್ಥಳೀಯ ರಾಜರಲ್ಲಿ, ಅಧಿಕಾರಿಗಳಲ್ಲಿ ಒಡಕು ಹುಟ್ಟಿಸುವುದರ ಮೂಲಕ, ಭೇದ ನೀತಿಯಿಂದ ಸಂಘರ್ಷ ಹಬ್ಬಿಸಿ ತಮ್ಮ ಅಧಿಕಾರವನ್ನು ವಿಸ್ತರಿಸುತ್ತಿದ್ದರು. ಇದಕ್ಕೆ ಸಾಮಂತ ಅರಸರು ಬಲಿಯಾಗುತ್ತಿದ್ದರು.
೧೮೫೭ರಲ್ಲಿ ಬ್ರಿಟಿಷರ ನಿಶ್ಯಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು. ಇದರಿಂದ ತಮ್ಮ ಮೇಲೆ ಯಾರು ತಿರುಗಿ ಬೀಳಬಾರದೆಂಬುದು ಬ್ರಿಟಿಷರ ರಾಜಕೀಯ ಹುನ್ನಾರವಾಗಿತ್ತು. ಇದಕ್ಕೆ ಸಾಮಂತ ರಾಜರು ಸಮ್ಮತಿಸಿದರು. ಸ್ಥಳೀಯ ಹಲಗಲಿಯ ಬೇಡರು ತಾವು ಪಾರಂಪರಿಕವಾಗಿ ರಕ್ಷಿಸಿಕೊಂಡು ಬಂದಿದ್ದ, ಶಸ್ತ್ರಾಸ್ತ್ರಗಳನ್ನು ಬ್ರಿಟಿಷರಿಗೆ ಒಪ್ಪಿಸದೆ, ಅವರ ವಿರುದ್ಧ ಹೋರಾಡಿ ಮಡಿದ ಸಂಗತಿಗಳನ್ನು ಹಲಗಲಿಯ ಬೇಡರ ಲಾವಣಿ ದಾಖಲಿಸುತ್ತದೆ.
ಬೇಡರು ಬೇಟೆಯನ್ನೇ ವೃತ್ತಿಯಾಗಿಸಿಕೊಂಡು ಬಂದ ಸಮುದಾಯ. ಬೇಟೆಯೆಂಬುದು ಆದಿಮಾನವನ ಮೊದಲನೆ ವೃತ್ತಿಯಾಗಿತ್ತು. ಕೃಷಿ ಇನ್ನೂ ಆವಿಷ್ಕಾರಗೊಳ್ಳದಿದ್ದ ಆ ಕಾಲ ದಲ್ಲಿ ಬೇಟೆಯಾಡಿ ಮಾಂಸಾಹಾರವನ್ನು ದೊರಕಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ‘ಬೇಟೆ ಜೀವನೋಪಯೋಗಿ ವೃತ್ತಿಯಾಗಿತ್ತು. ಕ್ರೂರ ಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಅಥವಾ ಹೊಡೆದೋಡಿಸಲು ಬೇಟೆಯಾಡುವ ಕ್ರಿಯೆ (ವಿದ್ಯೆ) ಸಹಕಾರಿಯಾಗಿತ್ತು’. ಮುಂದೆ ಕಳ್ಳ-ಕಾಕರಿಂದ ಊರನ್ನು ರಕ್ಷಿಸಲು, ಶತ್ರುಗಳನ್ನು ಹಿಮ್ಮೆಟ್ಟಿಸಲು ಬೇಟೆಗಾರರು ಮುಖ್ಯಪಾತ್ರ ವಹಿಸಿದರು. ಇದರಿಂದಾಗಿ ದೊಡ್ಡ ದೊಡ್ಡ ಸಾಮ್ರಾಜ್ಯಗಳಲ್ಲಿ ಬೇಡರ ಪಡೆಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವುದು ಅನಿವಾರ್ಯವಾಯಿತು. ಇದು ಸೈನ್ಯ ಸಮುದಾಯ ರೂಪು ಗೊಳ್ಳಲು ತಳಹದಿಯಾಗಿ ಪರಿಣಮಿಸಿತು. ಈ ಹಿನ್ನೆಲೆಯಲ್ಲಿ ಬೇಡರ ಇತಿಹಾಸ ನಮಗೆ ದೊರಕುತ್ತದೆ.
ಮುಧೋಳ ಸಂಸ್ಥಾನದಲ್ಲಿ ‘ಹಲಗಲಿ’ ಒಂದು ಚಿಕ್ಕಹಳ್ಳಿ. ಬೇಡರೇ ಹೆಚ್ಚಾಗಿರುವ ಈ ಹಳ್ಳಿಯಲ್ಲಿದ್ದ, ಪೂಜಾರಿ ಹಣಮ, ಬಾಲ, ಜಡಗ ಮತ್ತು ರಾಮ ಎಂಬ ನಾಲ್ವರು ಬ್ರಿಟಿಷರ ನಿಶ್ಯಸ್ತ್ರೀಕರಣ ಕಾಯಿದೆಯ ವಿರುದ್ಧ ಪ್ರತಿಭಟನೆ ನಡೆಸಿದರು ಎಂಬುದು ಲಾವಣಿಯಲ್ಲಿ ದಾಖಲಾಗಿದೆ. ಬ್ರಿಟಿಷರಿಗೆ ಶರಣಾಗಿ ಆಯುಧಗಳನ್ನು ತಂದೊಪ್ಪಿಸುವಂತೆ ಮುಧೋಳ ಸಂಸ್ಥಾನದ ಆದೇಶವಾದರೂ ಅದಕ್ಕೆ ಹಲಗಲಿಯ ಬೇಡರು ಒಪ್ಪಲಿಲ್ಲ. ಬೇಡರಿಗೆ ಆಯುಧವೇ ಜೀವನಾಧಾರ. ಪೂಜಾರಿ ಹಣಮ, ಬಾಲ, ಜಡಗ, ರಾಮ ಈ ನಾಲ್ವರಿಗೆ ಒಳಗಿಂದೊಳಗೇ ವಚನ ಕೊಟ್ಟಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ನಾಲ್ಕು ಜನ ಶೂರರೇ ಈ ಲಾವಣಿಯ ನಾಯಕರು. ಮಧ್ಯೆ ಯುದ್ಧದ ಸಂದರ್ಭದಲ್ಲಿ ಭೀಮ ಎಂಬ ಮತ್ತೊಂದು ಹೆಸರು ಬರುತ್ತದೆ, ಅವನೂ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸುತ್ತಾನೆ. ‘ರಾಮಿ’ ಎಂಬ ಒಂದು ಹೆಣ್ಣಿನ ಶೌರ್ಯವಂತೂ ಕಣ್ಣಿಗೆ ಕಟ್ಟುತ್ತದೆ.
ಈ ಲಾವಣಿಯಲ್ಲಿ ಬರುವ ಹೋಲಿಕೆಗಳೂ ಅಷ್ಟೇ ತೀವ್ರತರ ಪರಿಣಾಮವನ್ನುಂಟು ಮಾಡುತ್ತವೆ. ‘ಹಲ್ಲ ಕಿತ್ತಿದಾ ಹಾವಿನ ಪರಿಯು……’, ‘ಸತ್ತ ಹೆಣಕ್ಕೆ ಶೃಂಗಾರ ಮಾಡಿದ ಪರಿ…..’ ಮುಂತಾದುವು ಈಗ ಕ್ಲಿಷ್ಟ ಎನ್ನಿಸಿದರೂ ‘ಮಗ್ಗಲದಾಗಿನ ಹೇಣತಿ ಕೊಟ್ಟಾಂಗ…..’ ಎನ್ನುವಲ್ಲಿ ಎದ್ದು ಕಾಣುವ ಅವರ ಆ ಗಡುಸು ಗಂಡುಸುತನ ಎಂಥ ಹೇಡಿಯನ್ನೂ ಬಡಿದೆಬ್ಬಿಸುತ್ತದೆ. “ಕಾರಕೂನನ ಕಪಾಳಕ ಬಡದರ ಶಿಪಾಯಿ ನೆಲಕ ಬಿತ್ತು” ಎಂಬ ವರ್ಣನೆ ಅಷ್ಟೇ ಗಡುಸಾಗಿಯೂ ಅದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿಯೂ ಇದೆ. ಒಂದೇ ಏಟಿಗೆ ಒಬ್ಬ ಕೆಳಕ್ಕೆ ಬೀಳುತ್ತಿದ್ದ ಎಂಬ ಸಾಮಾನ್ಯ ಅರ್ಥವೂ ಆ ಬೇಡರ ಶಕ್ತಿಯನ್ನು ವರ್ಣಿಸುವುದಾದರೆ, ಈ ಮಾತು ಅದಕ್ಕಿಂತ ಹೆಚ್ಚಿನ ಅರ್ಥವನ್ನು ಒಳಗೊಂಡಿದೆ. ಆ ಬೇಡ ಧೀರರ ಹೊಡೆತದ ಭಯಂಕರತೆ ಇಲ್ಲಿ ವ್ಯಕ್ತವಾಗುತ್ತದೆ. ಕಾರಕೂನನ ಕಪಾಳಕ್ಕೆ ಬಿದ್ದುದನ್ನು ಕಂಡ ಶಿಪಾಯಿ ಹೆದರಿ ಮೂರ್ಛೆ ಹೋಗಿ ನೆಲಕ್ಕೆ ಬಿದ್ದೆಂಬ ಅರ್ಥವನ್ನು ಧ್ವನಿಸುತ್ತಿರುವಂತಿದೆ. ಆ ಸಂದರ್ಭದಲ್ಲಿ ಲಾವಣಿಯ ೪ನೇ ನುಡಿ ಹೀಗೆ ವಿವರಿಸುತ್ತದೆ.
ಹಲಗಲಿ ಅಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತು
ಪೂಜಾರಿ ಹಣಮ ಬಾಲ ಜಡಗ ರಾಮ ಮಾಡ್ಯಾರ ಮಸಲತ್ತು
ಕೈನ ಹತಾರ ಕೊಡಬಾರದೊ ನಾವು ನಾಲ್ಕು ಮಂದಿ ಜತ್ತು
ಹತಾರ ಹೋದ್ ಇಂದ ಬಾರದ ನಮ್ಮ ಜೀವ ಸತ್ ಓಗುದು ಗೊತ್ತು
ಸುತ್ತಿನ ಹಳ್ಳಿ ಮತ್ತ ಧೋರಿಗಳಿಗೆ ತಿಳಿಶೆರ ಹೀಗ್ ಅಂತು
ಮಾಡರಿ ಜಗಳಾ ಕೂಡ್ ಇರತೇವು ಕುಮಕಿ ಯಾವತ್ತು
ವೊಳಗಿಂದ್ ಒಳಗ ವಚನ ಕೊಟ್ಟರೂ ಬ್ಯಾಡರ್ ಎಲ್ಲ ಕಲಿತು
ಕಾರಕೂನನ ಕಪಾಳಕ ಬಡದರ ಶಿಪಾಯಿ ನೆಲಕ ಬಿತ್ತು ||ಚ್ಯಾಲ||
ಬೇಡರನ್ನು ಒಲಿಸಲು ಬಂದ ಕಾರಬಾರಿನ ಕಪಾಳಕ್ಕೆ ಹೊಡೆದು ಕಳುಹಿಸಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ನಾವೂ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವುದು ತಪ್ಪಾದರೆ, ನಿಮ್ಮ ಶಸ್ತ್ರಾಸ್ತ್ರ ಗಳನ್ನು ಏಕೆ ಇಟ್ಟುಕೊಳ್ಳುತ್ತೀರಿ? ಬ್ರಿಟೀಷ್ ಅಧಿಕಾರಿಗಳಿಗೆ ಪ್ರಶ್ನಿಸಿದ ಸಂಗತಿಯು ಲಾವಣಿ ಯಲ್ಲಿ ದಾಖಲಾಗಿದೆ. ಇದಕ್ಕೆ ‘ಕೃಷ್ಣಾನಾಯಕ ಗೌಡ ಕುಂದರಗಿ’ ಎಂಬಾತ ಹೀಗೆ ಹಠ ಹಿಡಿಯುವುದು ಒಳ್ಳೆಯದಲ್ಲ, ನಿಮ್ಮ ಆಯುಧಗಳನ್ನು ಸಾಹೇಬರಿಗೆ ಒಪ್ಪಿಸಿರಿ ಎಂದು ಸಂಧಾನದ ಮಾತುಗಳನ್ನು ಆಡುತ್ತಾನೆ. ಅದಕ್ಕೆ ನಾಲ್ವರು ಹಲಗಲಿಯ ಬೇಡರು ಖಾರ ವಾಗಿಯೇ ಪ್ರತಿಕ್ರಿಯಿಸುತ್ತಾರೆ.
ಹತಾರ ಕೊಡಲಿಕೆ ಹೆಂಗಸ್ ಆಗಿ ಬಳಿಯ್ ಇಟ್ಟಿಲ ಕೈಯಾಗ
ಯಾವ ಬಂದೀರಿ ಜೀವ ಹೋದರು ಕೊಡುವುದಿಲ್ಲ ಸುಮ್ಮನ್ ಹೋಗರಿ ಈಗ
ಅಂದ ಮಾತ ಯೆಲ್ಲ ಬಂದ ಹೇಳಿದಾನ ಆವಾಗ ಸಾಹೆಬಗ
ಶಿಟ್ಟಿಲಿ ಮುಂಗೈ ಕಟ್ಟನೆ ಕಡಕೊಂಡ ಹುಕುಮ ಕೊಟ್ಟರ್ ಆಗ
ಕುದರಿಯಮಂದಿ ಕೂಡಿ ಮುಟ್ಟಿತೊ ಹಲಗಲಿ ಸ್ಥಳದ ಮೇಗ
ವೊಳಗಿನ ಮಂದಿ ವೊಟ್ಟರಲೆ ಹೊಡೆದರ ಮುಂಗಾರಿ ಮಳಿ ಸುರದ್ ಅಂಗ
ಹೊರಗಿನ ಮಂದಿ ಗುಂಡ ಹತ್ತಿಕೆರೆ ತಿರಿಗೆರ ಆವಾಗ
ಕಾಗದ ಬರದ ಕಳವೆರ ಬೇಗನ ದಂಡ ಬರಲ್ ಎಂತ ಹೀಂ ||ಚ್ಯಾಲ||
ಅಧಿಕಾರ ನಡೆಸುವವರು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವುದು ಸಾಧ್ಯವೆಂದರೆ ನಾವೇಕೆ ಶಸ್ತ್ರಾಸ್ತ್ರಗಳ್ನು ಹೊಂದಬಾರದೆಂಬುದು ಹಲಗಲಿಯ ಬೇಡರ ಮುಖ್ಯ ಪ್ರಶ್ನೆ. ಮೇಲಾಗಿ ಬ್ರಿಟಿಷರು ಭಾರತದಲ್ಲಿ ಅಧಿಕಾರ ಶಸ್ತ್ರಾಸ್ತ್ರಗಳ ಮೂಲಕವೆ, ಅವರೆಂದೂ ಅಹಿಂಸೆಯನ್ನು ಒಂದು ಮೌಲ್ಯವಾಗಿ ಪ್ರತಿಪಾದಿಸಲಿಲ್ಲ. ಹೀಗಿರುವಾಗ ಹಲಗಲಿಯ ಬೇಡರು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸದೇ ಅವರ ವಿರುದ್ಧ ಕೆಚ್ಚದೆಯಿಂದ ಹೋರಾಡಿದುದು ಐತಿಹಾಸಿಕವಾಗಿ ಮಹತ್ವದ್ದಾಗಿದೆ.
ಬ್ರಿಟಿಷರರು ತಮ್ಮ ಅಧಿಕಾರವನ್ನು ಪ್ರಶ್ನೆ ಮಾಡಿದವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಸಂಧಾನದ ಮೂಲಕವೋ, ಸೈನ್ಯದ ಮೂಲಕವೋ ಎದುರಾಳಿಯನ್ನು ಬಗ್ಗು ಬಡಿಯು ತ್ತಿದ್ದರು. ಸೈನ್ಯದ ತುಕಡಿಯೊಂದಿಗೆ ಪುಟ್ಟ ಹಳ್ಳಿ ಹಲಗಲಿಯನ್ನು ಮುತ್ತಿದಾಗ ನಾಲ್ವರು ಬೇಡರು ತಮ್ಮ ಸಹಾಯಕರೊಂದಿಗೆ ವೀರಾವೇಶದಿಂದ ಹೋರಾಡಿದ ಸಂಗತಿ ದಾಖಲಾಗಿದೆ. ಆ ಸಾಲುಗಳು ಹೀಗಿವೆ :
ಬೆತ್ತ ಹತ್ತಿ ತಿರಿವಿ ಕಡದರೊ ಯೋನು ಉಳಿಯದ್ ಅಂಗ
ನಡವಿ ಹಾಕಿಕೊಂಡ ಹೊಡದರ ಗುಂಡ ದರಜ ಇಲ್ಲದ್ ಹಾಂಗ
ಕವಾತ ಫೈರ್ ಸುತ್ತಗಟ್ಟಿ ತಂಬು ನುಡಿಶಾರ ಆವಾಗ
ತೋಪು ತುಬಾಕಿ ಕರುಲಿ ಪಿಸ್ತುಲ ಬಾಕ ನಡವಿನಾಗ
ಶಿಡಿಲಿನ ಹಂತ ಗುಂಡ ಹೊಡವುತ ಕತ್ತಿಲಿ ಕಡದರ ವೊಲತ್ ಅಂಗ
ನಡುಗಿತು ಬ್ಯಾಡಕಿ-ಕೆನ್ ಧೂಳ ಹರಿದ್-ಅಂಗ ಕಡದಾಟವು ಹ್ಯಾಂಗ ||



ಹಲಗಲಿಯ ಬೇಡರ ವೀರಾವೇಷದ ಹೋರಾಟವನ್ನು ಹತ್ತಿಕ್ಕಲು ಬೆಳಗಾವಿಯಿಂದ ಇನ್ನಷ್ಟು ಸುಸಜ್ಜಿತ ಸೈನ್ಯದ ತುಕಡಿಯನ್ನು ತರಿಸಲಾಯಿತು. ಬ್ರಿಟಿಷರ ಕಾರ್ ಸಾಹೇಬ್ ಎಂಬಾತನು ಈ ಸೈನ್ಯದ ಉಸ್ತುವಾರಿ ವಹಿಸಿ ಹಲಗಲಿಯನ್ನು ಸುತ್ತಿನಿಂದಲೂ ಮುತ್ತಿದರು. ಹಣಮ, ಭೀಮ, ರಾಮ ಮತ್ತು ಜಡಗ ಬ್ರಿಟಿಷ್ ಸೈನ್ಯವನ್ನು ವೀರಾವೇಶದಿಂದ ಎದುರಿಸಿದ ರೀತಿ ರೋಮಾಂಚನಕಾರಿಯಾದುದು. ಈ ಸಂದರ್ಭದಲ್ಲಿ ‘ರಾಮಿ’ ಎಂಬ ಹೆಣ್ಣುಮಗಳು ಮೂರು ಮಂದಿ ಬ್ರಿಟಿಷ ಸೈನಿಕರನ್ನು ಕೊಂದುದಲ್ಲದೆ ಆರು ಕುದುರೆಗಳನ್ನು ಕಡಿದು ಹಾಕುತ್ತಾಳೆ. ಭೀಮನು ೫೦೦ ಮಂದಿಗೆ ಎದುರಾಗಿ ನಿಂತ ಎಂಬುದು, ರಾಮನು ರಕ್ತದ ಕಾಲುವೆ ಹರಿಸಿದನೆಂಬುದು, ಬಾಲನು ಹತ್ತಾರು ಕುದುರೆಗಳನ್ನು ಹಿಮ್ಮೆಟ್ಟಿಸಿದನೆಂಬುದು ಲಾವಣಿಯಲ್ಲಿ ಬರುತ್ತದೆ. ತುಂಬಿ ಬಂದ ಸೈನ್ಯದ ಎದುರು ಇವರ ವೀರಾವೇಶದ ಹೋರಾಟ ಬಹಳ ಹೊತ್ತು ನಡೆಯಲಿಲ್ಲವೆಂಬುದು ಬೇರೆ ಮಾತು. ಬ್ರಿಟಿಷರ ಸೈನ್ಯ ಎಷ್ಟು ಕ್ರೂರ ವಾಗಿತ್ತೆಂದರೆ ಇಡೀ ಊರನ್ನು ಲೂಟಿ ಮಾಡಿತ್ತು. ಈ ಯುದ್ಧದಲ್ಲಿ ನಾಲ್ವರು ಬೇಡರು ವೀರ ಮರಣವನ್ನು ಅಪ್ಪಿದರು.
ರಾಜಕೀಯ ಇತಿಹಾಸದಲ್ಲಿ ದೊಡ್ಡ ದೊಡ್ಡ ರಾಜರ ಯುದ್ಧ ವರ್ಣನೆಗಳನ್ನು ನಾವು ಕೇಳುತ್ತೇವೆ. ರಾಜರುಗಳು ನಿಜವಾಗಿ ಯುದ್ಧ ಮಾಡುತ್ತಿದ್ದರೋ ಇಲ್ಲವೋ ಅದು ಬೇರೆ ಮಾತು (ಸೈನಿಕರು ಯುದ್ಧ ಮಾಡಿರಬಹುದು), ಆದರೆ ಹಲಗಲಿಯ ಬೇಡರು ಪಾರಂಪರಿಕವಾಗಿ ಉಳಿಸಿಕೊಂಡು ಬಂದ ಶಸ್ತ್ರಾಸ್ತ್ರಗಳನ್ನು ಬ್ರಿಟಿಷರಿಗೆ ಒಪ್ಪಿಸದೆ ವೀರಾವೇಶ ದಿಂದ ಹೋರಾಡಿದುದು ಲಾವಣಿಗಳಲ್ಲಿ ದಾಖಲಾಗಿದೆ. ಸ್ಥಳೀಯ ಇತಿಹಾಸವನ್ನು ಸಾರುವ ಹಲಗಲಿಯ ಬೇಡರ ಲಾವಣಿ ಚಾರಿತ್ರಿಕವಾಗಿ ಮಹತ್ವ ಪಡೆದಿದೆ
ನವೀನ ಹಳೆಯದು