ಅಂತೂ ಇಂತೂ ಬನ್ನಿದಿನ್ನಿ ಬ್ಯಾರೇಜ್‌ಗೆ ನೀರು ಬಂತು


ಬಾಗಲಕೋಟ: ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿ ಮೂಲಕ ಜನ-ಜಾನುವಾರುಗಳ ಕುಡಿವ ನೀರಿನ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಿದ ನೀರು ಶನಿವಾರ ಬನ್ನ್ನಿದಿನ್ನಿ ಬ್ಯಾರೇಜ್‌ ತಲುಪಿದ್ದು, 2ತಿಂಗಳವರೆಗೆ ನಗರದ ಜನತೆಗೆ ಕುಡಿವ ನೀರಿನ ಚಿಂತೆ ತಪ್ಪಿದಂತಾಗಿದೆ.

ಬೇಸಿಗೆಯಲ್ಲಿ ಕುಡಿವ ನೀರಿನ ತೊಂದರೆ ಆಗಬಾರದೆಂದು ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ನಡೆಸಿದ ಪ್ರಯತ್ನ ಸಾರ್ಥಕವಾಗಿದ್ದು, 2.27ಟಿಎಂಸಿ ನೀರು ಬನ್ನಿದಿನ್ನಿ ಬ್ಯಾರೇಜ್‌ ತಲುಪಿದೆ. ಇದರಿಂದ ಮುಧೋಳ, ಬೀಳಗಿ ತಾಲೂಕಿನ ನದಿ ತೀರದ ಗ್ರಾಮಗಳು, ಬಾಗಲಕೋಟ ಪಟ್ಟಣಕ್ಕೆ ನೀರು ಪೂರೈಕೆ ಉದ್ದೇಶ ಸಫಲವಾಗಿದೆ. ನದಿ ತೀರದ ಬ್ರಿಡ್ಜ್‌ ಕಂ ಬ್ಯಾರೇಜ್‌ನಲ್ಲಿ ಪೊಲೀಸರ ಸರ್ಪಗಾವಲು ಹಾಕಿದ್ದು, ಜನ ಹಾಗೂ ಜಾನುವಾರುಗಳಿಗೆ ನೀರು ಒದಗಿಸಲು ಜಮಖಂಡಿ ಎಸಿ ರವೀಂದ್ರ ಕರಲಿಂಗಣ್ಣವರ ಹಾಗೂ ಬಾಗಲಕೋಟ ಎಸಿ ಶಂಕರಗೌಡ ಸೋಮನಾಳ ಸೇರಿದಂತೆ ಪೊಲೀಸ್‌, ನೀರಾವರಿ, ಬಿಟಿಡಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.


ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಘಟಪ್ರಭಾ ನದಿಗೆ 12ಬ್ಯಾರೇಜ್‌ಗಳಿದ್ದು, ಡವಳೇಶ್ವರ, ಮಿರ್ಜಿ, ಚನಾಳ, ಉತ್ತೂರ, ಜಾಲಿಬೇರು, ಮುಧೋಳ ಬ್ಯಾರೇಜ್‌ಗಳಲ್ಲಿ ಶೇ.60ರಷ್ಟು ನೀರು ಸಂಗ್ರಹವಾಗಿದೆ. ನಂತರದ ಬ್ಯಾರೇಜ್‌ಗಳಲ್ಲಿ ನೀರಿನ ಸಂಗ್ರಹಣೆ ಇಲ್ಲದಿರುವುದರಿಂದ ನದಿ ದಡದ 35ಗ್ರಾಮಗಳ ಜನ ನೀರಿನ ತೊಂದರೆ ಎದುರಿಸುತ್ತಿದ್ದಾರೆ ಎಂದು ಜಮಖಂಡಿ ಎಸಿ ವರದಿ ಸಲ್ಲಿಸಿದ್ದರು.

ಜೀರಗಾಳ ಬ್ಯಾರೇಜ್‌ದಿಂದ ಹಿರೇಅಲಗುಂಡಿ ಬ್ಯಾರೇಜ್‌ವರೆಗೆ ನದಿಯಲ್ಲಿ ನೀರು ಇರುವುದಿಲ್ಲ. 0.60ಟಿಎಂಸಿ ನೀರಿನ ಅವಶ್ಯಕತೆ ಇದೆ. ಬೀಳಗಿ ತಾಲೂಕಿನ ನದಿ ದಡದ ಗ್ರಾಮಗಳು, ಬಹುಗ್ರಾಮ ಕುಡಿವ ನೀರಿನ ಯೋಜನೆ ಗ್ರಾಮಗಳು ಹಾಗೂ ಪುನರ್ವಸತಿ ಕೇಂದ್ರಗಳು ಸೇರಿ 39 ಗ್ರಾಮಗಳ ಜನ-ಜಾನುವಾರುಗಳಿಗೆ ನೀರು ಬಿಡುಗಡೆ ಮಾಡುವಂತೆ ಡಿಸಿ ಕೋರಿದ್ದರು.

ಇದನ್ನು ಪರಿಶೀಲಿಸಿದ ಪ್ರಾದೇಶಿಕ ಆಯುಕ್ತರು ಒಟ್ಟು 86ಗ್ರಾಮಗಳೂ ಸೇರಿದಂತೆ ನಗರದ ಜನತೆಗೆ ನೀರಿನ ಬವಣೆ ನೀಗಿಸಲು ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿ ಮೂಲಕ ನೀರು ಹರಿಸುವಂತೆ ಆದೇಶ ಹೊರಡಿಸಿದ್ದರು. ಸದ್ಯ ಬನ್ನಿದಿನ್ನಿ ಬ್ಯಾರೇಜ್‌ನಲ್ಲಿ ನೀರು ಸಂಗ್ರಹವಾಗಿದ್ದು, ಜನರ ಬವಣೆ ದೂರವಾಗಿದೆ.

ನವೀನ ಹಳೆಯದು