ರನ್ನ ಖ್ಯಾತಿ ಹೆಚ್ಚಿಸಿದ ಸಾಹಿತ್ಯ ಚಿನ್ನ


ಮುಧೋಳ: 'ಆದಿಕವಿ, ಶಕ್ತಿ ಕವಿ, ಕವಿಚಕ್ರವರ್ತಿ ರನ್ನನ ಹೆಸರು ವಿಶ್ವ ಮಟ್ಟದಲ್ಲಿ ಅಜರಾಮರವಾಗಿಡಲು ಸರಕಾರಗಳು ಸಾಕಷ್ಟು ಪ್ರಯತ್ನ ಮಾಡುತ್ತ ಬಂದಿವೆ. ಆದಿಕವಿಯಾಗಿದ್ದರೂ ಭವಿಷ್ಯದಲ್ಲಿಯೂ ಯುವ ಜನಾಂಗಕ್ಕೆ ರನ್ನನ ಕಾವ್ಯ, ಸಾಹಿತ್ಯ ಕೃತಿಗಳ ಜೊತೆಗೆ ಅವರ ಸಾಹಿತ್ಯ ಸೌರಭ ಪಸರಿಸಲಿ ಎಂಬ ಉತ್ಕಟ್ಟ ಆಸೆಯಿಂದ ರನ್ನವೈಭವ ಆರಂಭಿಸಲಾಗಿದೆ.

ರನ್ನ ಪ್ರತಿಷ್ಠಾನ:

ವೈಭವ ಆರಂಭಿಸುವ ಮುಂಚೆಯೇ ರನ್ನ ಪ್ರತಿಷ್ಠಾನ ರಚನೆಯಾಗಿದೆ. ಆ ಪ್ರತಿಷ್ಠಾನದ ಮೂಲಕವೇ ರನ್ನ ವೈಭವ, ಸಾಹಿತ್ಯ ಸಾಂಸ್ಕೃತಿಕ ತೇರು ಎಳೆಯಬೇಕೆಂಬ ಉದ್ದೇಶದಿಂದ ಇದೀಗ 5ನೇ ರನ್ನ ವೈಭವ ನಡೆಸಲಾಗುತ್ತಿದೆ. ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಹಾಲಿ ಶಾಸಕ ಗೋವಿಂದ ಕಾರಜೋಳರು ಮುಂದಾಲೋಚನೆ ಮಾಡಿ ರನ್ನ ಪ್ರತಿಷ್ಠಾನ ಸ್ಥಾಪಿಸಿದ್ದರು. ಅದರ ಮೂಲಕವೇ ರನ್ನ ವೈಭವ ನಡೆಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷ ತೆಯಲ್ಲಿ ಅಧಿಕಾರಿಗಳು, ಅಧಿಕಾರೇತರು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದರು. ಆಗಿನಿಂದಲೂ ಯಾವುದೇ ಸರಕಾರ ಬಂದರೂ ರನ್ನನ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ...

ರನ್ನ ವೈಭವಕ್ಕೆ ಮೆರಗು

ವಿಶ್ವ ಮಟ್ಟದಲ್ಲಿ ರನ್ನನ ಖ್ಯಾತಿ ಹೆಚ್ಚಿಸಲು ಸರಕಾರಗಳು ಮಾಡಿದ ಪ್ರಯತ್ನ ಸಾರ್ಥಕವಾಗಿದೆ. ರನ್ನವೈಭವ 2011-12 ನೇ ಸಾಲಿನಲ್ಲಿ ಆರಂಭಗೊಂಡಿತು. 2012-13, 2013-14 ಹಾಗೂ 2015 ರವರೆಗೆ ನಡೆಯಿತು. ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಅನಂತಕುಮಾರ, ಡಾ.ಚಂದ್ರಶೇಖರ ಕಂಬಾರ, ದಿ.ಎಂ.ಎಂ.ಕಲಬುರ್ಗಿಯವರು ಆಗಮಿಸಿದರು. ತದನಂತರ ಬರಗಾಲದ ನೆಪದಲ್ಲಿ ಮೂರು ವರ್ಷಗಳ ಕಾಲ ರನ್ನ ವೈಭವ ಸ್ಥಗಿತಗೊಂಡಿತ್ತು. ಇದರಿಂದ ಈ ಭಾಗದ ಜನ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಂಚಿತರಾಗಿದ್ದರಲ್ಲದೆ. ಜಿಲ್ಲೆಯಲ್ಲಿ ನಡೆಸಬೇಕಾದ ಮಹತ್ವದ ಉತ್ಸವವನ್ನು ನಡೆಸಬೇಕೆನ್ನುವ ಕೂಗು ಸಾಹಿತ್ಯಾಭಿಮಾನಿಗಳಿಂದಲೂ ಕೇಳಿ ಬಂದಿತ್ತು. ಆದರೆ ಚುನಾವಣೆ ಮಹಿಮೆಯೋ, ಒತ್ತಡದ ಪ್ರಭಾವವೋ, ಜಿಲ್ಲಾ ಉಸ್ತುವಾರಿ ಸಚಿವರ ಕಾಳಜಿಯೋ ಒಟ್ಟಾರೆ ಮೂರು ವರ್ಷ ನಿಂತು ಹೋಗಿದ್ದ ರನ್ನ ವೈಭವ ಮತ್ತೆ ನಡೆಯುವಂತಾಗಿದೆ.

ರನ್ನ ಪ್ರಶಸ್ತಿ

ಪ್ರತಿ ವರ್ಷ ರನ್ನ ವೈಭವಕ್ಕೆ ಪೂರಕವಾಗಿ ರನ್ನನ ಕುರಿತು ಸಂಶೋಧನೆ, ಹಳಗನ್ನಡದಲ್ಲಿ ಸಾಹಿತ್ಯ ಸೇವೆ ಮಾಡಿದವರಿಗೆ 'ರನ್ನ ಪ್ರಶಸ್ತಿ' ನೀಡಲಾಗುತ್ತಿದೆ. 2015ರಲ್ಲಿ ನಡೆದ ವೈಭವದಲ್ಲಿ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರಿಗೆ ಮೊದಲನೇ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಪ್ರಶಸ್ತಿ ಮೌಲ್ಯ 1ಲಕ್ಷ ರೂ. ಪದಕ ಒಳಗೊಂಡಿದೆ.

ಸದ್ಯ ಪ್ರತಿಷ್ಠಾನ:

ಜಿಲ್ಲಾಧಿಕಾರಿಗಳು (ಅಧ್ಯಕ್ಷ ರು), ಜಿಪಂ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿಗಳು, ಲೋಕೊಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗಳು, ಸದಸ್ಯ ಸಂಚಾಲಕ ಬಿ.ಪಿ.ಹಿರೇಸೋಮನ್ನವರ, ಕಂಠಿ ಹಣಮಂತರಾಯ, ಎಸ್‌.ಆರ್‌.ಕಾಳಗಿ, ಇಬ್ರಾಹಿಂ ಸುತಾರ, ಎಂ.ಎಸ್‌.ಹುಲಗಬಾಳಿ, ಎಸ್‌.ಆರ್‌.ಯಡಹಳ್ಳಿ, ಡಾ.ಗಿರೀಶ ಮಾಸೂರಕರ, ವಿ.ಎಸ್‌.ವಂಶಾಕೃತಮಠ, ಸದಸ್ಯ ಕಾರ್ಯದರ್ಶಿ ಶಶಿಕಲಾ ಹುಡೇದ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿನ್ನದಂತ ರನ್ನನ ಕೃತಿಗಳು

ಶಕ್ತಿ ಕವಿ ರನ್ನ ಕ್ರಿ.ಶ.949 ರಲ್ಲಿ ಜನಿಸಿದನು. ತಂದೆ ಜಿನವಲ್ಲಬೇಂದ್ರ, ತಾಯಿ ಅಬ್ಬಲಬ್ಬೆ, ಅಜಿತಸೇನಾಚಾರ್ಯ ರನ್ನನ ಗುರುವಾಗಿದ್ದರು. ಜಕ್ಕಿ ಹಾಗೂ ಶಾಂತಿ ಎಂಬ ಮಡದಿಯರಿದ್ದರು. ರಾಯ ಹಾಗೂ ಅಬ್ಬೇ ಇಬ್ಬರು ಮಕ್ಕಳಿದ್ದರು. ಚಾಲುಕ್ಯ ಚಕ್ರವರ್ತಿ ತೈಲಪ ಆಶ್ರಯದಾತನಾಗಿದ್ದ. ರನ್ನ ರಚಿಸಿದ 4 ಕೃತಿಗಳು ಚಿನ್ನದಂತಿವೆ. ಅದಕ್ಕಾಗಿಯೇ ಅವರು ಗತಿಸಿದರೂ ಅವರ ಸಾಹಿತ್ಯ ಸೆಲೆ ಇಂದಿಗೂ ಅವರಿರುವಿಕೆಯನ್ನು ಸ್ಮರಿಸುತ್ತಿದೆ.ಅಜಿತ ಪುರಾಣ, ಸಾಹಸಭೀಮ ವಿಜಯ, ಚಕ್ರೇಶ್ವರ ಚರಿತಂ ಹಾಗೂ ಪರಶುರಾಮ ಚರಿತಂ ಕೃತಿಗಳನ್ನು ಹಳಗನ್ನಡದಲ್ಲಿ ರಚಿಸಿದ್ದಾರೆ.

ರನ್ನ ಪ್ರತಿಷ್ಠಾನದಿಂದ ವರ್ಷದಲ್ಲಿ ರಾಜ್ಯ, ಹೊರರಾಜ್ಯದಲ್ಲಿಯೂ ರನ್ನನ ಕುರಿತು ಕಾರ್ಯಕ್ರಮ ನಡೆಸಲಾಗುತ್ತಿದೆ. ರನ್ನ ಕುರಿತು ರಚಿಸಿದ ಕೃತಿಗಳನ್ನು ಹೊರ ತರಲಾಗುತ್ತಿದೆ

ನವೀನ ಹಳೆಯದು