ಹೊಸದಿಲ್ಲಿ: ಕಥುವಾ, ಸೂರತ್‌ನಲ್ಲಿನ ಮಕ್ಕಳ ಮೇಲಿನ ಹಾಗೂ ಉನ್ನಾವ್‌ನ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳ ಬಿಸಿ ತಾರಕಕ್ಕೇರಿರುವ ಬೆನ್ನಲ್ಲೇ 12 ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿನ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಿದೆ.
ಈ ಪ್ರಕರಣಗಳ ಸಂಬಂಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ವಿವಿಧೆಡೆ ಇನ್ನೂ ಅತ್ಯಾಚಾರಿಗಳಿಗೆ ಮಕ್ಕಳು ಬಲಿಯಾಗುತ್ತಿರುವುದು ಮುಂದುವರಿದೇ ಇದೆ. ಹೀಗಾಗಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಗೆ ತಿದ್ದುಪಡಿ ಮಾಡಲು ಅಧ್ಯಾದೇಶ ತರಲಾಗಿದೆ. ಐದು ದಿನಗಳ ವಿದೇಶ ಪ್ರವಾಸಕ್ಕೆಂದು ತೆರಳಿದ್ದ ಪ್ರಧಾನಿ ಮೋದಿ ಶನಿವಾರ ದಿಲ್ಲಿಗೆ ವಾಪಸ್ ಆದ ಒಂದೆರಡು ಗಂಟೆಗಳಲ್ಲಿ ಕೇಂದ್ರ ಸಂಪುಟ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಅಧ್ಯಾದೇಶವನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗಿದೆ.
ಸದ್ಯದ ಮಟ್ಟಿಗೆ ಜೀವಾವಧಿ ಅಥವಾ ನಿಗದಿತ ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮಾತ್ರವೇ ಅತ್ಯಾಚಾರಿಗಳಿಗೆ ನೀಡಬಹುದಾಗಿರುವ ಗರಿಷ್ಠ ಶಿಕ್ಷೆಯಾಗಿರುವುದರಿಂದ ಈ ಕಾನೂನಿನಲ್ಲಿ ಗರಿಷ್ಠ ಶಿಕ್ಷೆಯನ್ನು ಮರಣ ದಂಡನೆಗೆ ಹೆಚ್ಚಿಸಲು, ಭಾರತೀಯ ದಂಡ ಸಂಹಿತೆ (ಐಪಿಸಿ), ಸಾಕ್ಷ್ಯಾಧಾರ ಕಾಯ್ದೆ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಅಧ್ಯಾದೇಶದಲ್ಲಿ ವಿವರಿಸಲಾಗಿದೆ.
ಇಂತಿಷ್ಟೇ ದಿನದಲ್ಲಿ ಪ್ರಕರಣದ ತನಿಖೆ, ವಿಚಾರಣೆ ಮುಗಿಸಿ ಶಿಕ್ಷೆ ಪ್ರಮಾಣ ಘೋಷಿಸಬೇಕು ಎಂಬ ಅಂಶವನ್ನೂ ಸೇರಿಸಲಾಗಿದ್ದು, ನಿರೀಕ್ಷಣಾ ಜಾಮೀನು ಅವಕಾಶವನ್ನೇ ತೆಗೆದು ಹಾಕಲಾಗಿದೆ. ಅಲ್ಲದೆ, ವೇಗಗತಿಯಲ್ಲಿ ಪ್ರಕರಣದ ತನಿಖೆ ಪೂರ್ಣಗೊಳ್ಳಬೇಕು ಎಂಬ ಕಾರಣಕ್ಕಾಗಿ ದೇಶದ ಎಲ್ಲ ಪೊಲೀಸ್ ಠಾಣೆ ಮತ್ತು ಆಸ್ಪತ್ರೆಗಳಿಗೆ ವಿಧಿವಿಜ್ಞಾನ ಕಿಟ್ ನೀಡಲೂ ಒಪ್ಪಿಗೆ ಸೂಚಿಸಲಾಗಿದೆ.
ಜಾಮೀನಿಗೆ ನಿಬಂಧನೆಗಳು
16 ವರ್ಷದೊಳಗಿನವರ ಮೇಲೆ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ಎಸಗಿರುವವರಿಗೆ ನಿರೀಕ್ಷಣಾ ಜಾಮೀನು ಇಲ್ಲ.
ಆರೋಪಿ ಸಲ್ಲಿಸುವ ಜಾಮೀನು ಅರ್ಜಿಯನ್ನು ಇತ್ಯರ್ಥಗೊಳಿಸುವ ಮುನ್ನ ನ್ಯಾಯಾಧೀಶರು, ಸರಕಾರಿ ಅಭಿಯೋಜಕರಿಗೆ ಹಾಗೂ ಆರೋಪಿ ಪರ ವಕೀಲರಿಗೆ 15 ದಿನಗಳಲ್ಲಿ ಅಹವಾಲು ಸಲ್ಲಿಸಲು ನೋಟಿಸ್ ಜಾರಿ ಮಾಡಬೇಕು.
ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಹೈಕೋರ್ಟ್ ಗಳ ಜತೆ ಸಮಾಲೋಚನೆ ನಡೆಸಿ ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪನೆ.
ತ್ವರಿತ ವಿಚಾರಣೆಗಾಗಿ ನೂತನ ಸರಕಾರಿ ಅಭಿಯೋಜಕರ ನೇಮಕ ಹಾಗೂ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸುವುದು
ಎಲ್ಲ ಪೊಲೀಸ್ ಠಾಣೆಗಳಿಗೆ, ಆಸ್ಪತ್ರೆಗಳಿಗೆ ವಿಶೇಷ ವಿಧಿವಿಜ್ಞಾನ ಕಿಟ್ ನೀಡಿಕೆ.
ತನಿಖೆಗಾಗಿ ನಿಗದಿತ ಅವಧಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕ ಸಿಬಂದಿ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯಲ್ಲಿ ಲೈಂಗಿಕ ಅಪರಾಧಿ ಗಳಿಗಾಗಿ ಪ್ರತ್ಯೇಕ ಡೇಟಾಬೇಸ್.
ನಿಗದಿತ ಕಾಲಘಟ್ಟದಲ್ಲಿ ಡೇಟಾಬೇಸ್‌ನಲ್ಲಿನ ಅಪರಾಧಿಗಳ ಮಾಹಿತಿ ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ರವಾನೆ.
ಸಂತ್ರಸ್ತೆಯರ ನೆರವಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ "ಒನ್ ಸ್ಟಾಪ್' ಕೇಂದ್ರಗಳನ್ನು ಎಲ್ಲ ಜಿಲ್ಲೆಗಳಲ್ಲಿ ತೆರೆಯುವುದು.