ಮುಧೋಳ: ನಗರ ಹೊರವಲಯದ ಮಲ್ಲಾಪುರ ಕ್ರಾಸ್‌ನಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡು ಬೆಂಗಳೂರಿನಿಂದ ಬಾಗಲಕೋಟೆಗೆ ಬರುತ್ತಿದ್ದ ಡಿವೈಎಸ್ಪಿ ಸೇರಿ ಮೂವರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಸಿಐಡಿ ಡಿವೈಎಸ್ಪಿ ಬಾಳೇಗೌಡ (55), ಸಿಪಿಐ ಕೆ.ಎಚ್.ಶಿವಸ್ವಾಮಿ ಹಾಗೂ ಗೃಹರಕ್ಷಕ ದಳದ
ಚಾಲಕ ವೇಣುಗೋಪಾಲ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇಬ್ಬರು ಅಧಿಕಾರಿಗಳನ್ನು ಚುನಾವಣೆ ಆಯೋಗ ಮತದಾನದ ದಿನದಂದು ಜಿಲ್ಲೆಯಲ್ಲಿ ಪೊಲೀಸ್ ಭದ್ರತೆಯ ಉಸ್ತುವಾರಿಗಳನ್ನಾಗಿ ನೇಮಕ ಮಾಡಿತ್ತು. ಬುಧವಾರ ರಾತ್ರಿ ಬುಲೆರೋ ವಾಹನದಲ್ಲಿ ಬೆಂಗಳೂರಿನಿಂದ ಬಾಗಲಕೋಟೆಗೆ ಬರುತ್ತಿದ್ದ ವೇಳೆ ರಾತ್ರಿ 12.40ರ ವೇಳೆಗೆ ಮಲ್ಲಾಪುರ ಕ್ರಾಸ್ ಬಳಿ ಎದುರಿಗೆ ಬರುತ್ತಿದ್ದ ಲಾರಿಗೆ ಬುಲೆರೋ ಡಿಕ್ಕಿ ಹೊಡೆಯಿತು. ವಿಷಯ ತಿಳಿಯುತ್ತಿದ್ದಂತೆ ಬಾಗಲಕೋಟೆ ಎಸ್ಪಿ ಸಿ.ವಂಶಿಕೃಷ್ಣ, ಬಾಗಲಕೋಟೆ ಡಿವೈಎಸ್ಪಿ ಗಿರೀಶ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಜಿಲ್ಲಾಡಳಿತದಿಂದ ಗೌರವ ಸಲ್ಲಿಸಲಾಯಿತು.
ಐದು ನಿಮಿಷ ಮೌನ ಆಚರಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.ಅಪಘಾತದಲ್ಲಿ ಮೃತಪಟ್ಟ ಡಿವೈಎಸ್ಪಿ,ಸಿಪಿಐ ಹಾಗೂ ಚಾಲಕನ ಕುಟುಂಬಕ್ಕೆ ತಲಾ 10 ಲಕ್ಷ ರೂ.ಪರಿಹಾರವನ್ನು ಚುನಾವಣೆ ನಿಧಿಯಿಂದ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಂ ತಿಳಿಸಿದ್ದಾರೆ.