ರೈತರ ಸಾಲ ಮನ್ನಾ ಸಂಪೂರ್ಣ ಮಾಹಿತಿ


ಬೆಂಗಳೂರು: ರೈತರ ಸಾಲ ಮನ್ನಾ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 30 ಜಿಲ್ಲೆಗಳ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪ್ರಗತಿಪರ ರೈತರ ಜೊತೆ ಬುಧವಾರ ವಿಧಾನಸೌಧದಲ್ಲಿ ಸಭೆ ನಡೆಸುತ್ತಿದ್ದಾರೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಬಿಜೆಪಿ ಶಾಸಕ ಗೋವಿಂದ ಕಾರಜೋಳ, ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿ ಅನೇಕ ಶಾಸಕರು, ಅಧಿಕಾರಿಗಳು ಭಾಗಿಯಾಗಿದ್ದಾರೆ. 

‘ಚುನಾವಣೆ ಪೂರ್ವದಲ್ಲಿ ನೀಡಿದ ಮಾತಿನಂತೆ ನಡೆಯುತ್ತೇವೆ, ಹಿಂದೆ ಸರಿಯುವ ಮಾತಿಲ್ಲ. ಡಿಸಿಎಂ ಪರಮೇಶ್ವರ ಮತ್ತು ನಾನು ಇಬ್ಬರೂ ಈ ಕುರಿತು ಚರ್ಚಿಸಿದ್ದೇವೆ’ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ನಗರ ಪ್ರದೇಶದ ಅಭಿವೃದ್ಧಿಯ ಹಣವನ್ನು ರೈತರ ಸಾಲ ಮನ್ನಾಗಾಗಿ ಬಳಕೆಯಾಗಲಿದೆ. ಅದರಿಂದ ಬೆಂಗಳೂರಿನ ನಾಗರಿಕರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬುದು ಸರಿಯಲ್ಲ. ಖಜಾನೆಯೂ ಭದ್ರವಾಗಿರಲಿದೆ ಹಾಗೂ ರೈತರ ಸಾಲ ಮನ್ನಾ ಕೂಡ ಆಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಎರಡು ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 10 ರೈತರ ಕುರಿತು ಪೂರ್ಣ ವರದಿ ಪಡೆದಿದ್ದೇನೆ ಎಂದರು. 

ಇದು ರೈತರ, ಜನರ ಸರ್ಕಾರ. ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ಅಲ್ಲ. 

ಸಾವಿಗೀಡಾಗಿರುವ ರೈತ ಮುಖಂಡರು ಹಾಗೂ ರೈತರಿಗೆ ಮೌನಾಚರಿಸುವ ಮುಖೇನ ಗೌರವ ಸೂಚಿಸಲಾಯಿತು. 

‘ಯಶಸ್ವಿನಿ ಯೋಜನೆ ಮೇ 31 ಮುಗಿದಿದೆ. ಈ ಸಂಬಂಧ ಮುಖ್ಯಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಯಶಸ್ವಿನಿ ಯೋಜನೆ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ’ ಎಂದು ಕುಮಾರಸ್ವಾಮಿ ಹೇಳಿದರು. 

‘ವಿಶೇಷ ವಿಮಾನ ಬಳಕೆಯನ್ನು ಕಡಿಮೆ ಮಾಡುತ್ತಿದ್ದೇನೆ, ಐಷಾರಾಮಿ ಹೋಟೆಲ್‌ ರೂಂಗಳಲ್ಲಿ ವಾಸ್ತವ್ಯ ಹೂಡಿಕೆಯನ್ನು ಮಾಡುತ್ತಿಲ್ಲ. ಈ ರೀತಿಯೂ ಹಣ ಉಳಿಕೆ ಮಾಡುತ್ತಿದ್ದೇನೆ. ನನ್ನ ಯೋಚನೆಗಳೇ ಬೇರೆ ಇದೆ. ಮಾತು ನೀಡಿದಂತೆ ರೈತರ ಸಾಲ ಮನ್ನಾ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಕುರಿತು ಇಲ್ಲಿ ಚರ್ಚೆ ಮಾಡಬೇಡಿ’ ಎಂದು ಕುಮಾರಸ್ವಾಮಿ ರೈತರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಗೊಂದಲ ಉಂಟಾಗುತ್ತಿದ್ದಂತೆ, ತರ್ಕ ಮಾಡುವುದಿದ್ದರೆ, ಅಪ್ರಯೋಗಿಕ ಚರ್ಚೆ ಮಾಡುವುದಿದ್ದರೆ ಕಬ್ಬನ್‌ ಪಾರ್ಕ್‌ಗೆ ಹೋಗಿ ಎಂದು ಕುಮಾರಸ್ವಾಮಿ ರೈತರ ವಿರುದ್ಧ ಸಿಡುಕಿದರು. 

ಹಂತ ಹಂತವಾಗಿ ಸಾಲ ಮನ್ನಾ ಮಾಡುವ ಕುರಿತಾದ ಯೋಜನೆ ಇರುವುದಾಗಿಯೂ ಇದೇ ಸಂದರ್ಭದಲ್ಲಿ ಹೇಳಿದರು. 

‘ಉಸಿರಾಡುವುದಕ್ಕೂ ಸಮಯ ಕೊಡದಿದ್ದರೆ ಸರ್ಕಾರ ನಡೆಸುವುದು ಹೇಗೆ? ಹಲವಾರು ಸಮಸ್ಯೆಗಳಿವೆ, ಅದನ್ನೂ ಪರಿಹರಿಸಬೇಕಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಕಾಂಗ್ರೆಸ್‌ನ ವಿಶ್ವಾಸದೊಂದಿಗೆ ನಾನು ತೀರ್ಮಾನಿಸಬೇಕಿದೆ. ಆ ಕೆಲಸವನ್ನು ಮಾಡಲಿದ್ದೇನೆ. ಇಂಥ ಸುವರ್ಣ ಅವಕಾಶದ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು' ಎಂದರು.

2017ರ ಡಿಸೆಂಬರ್ 31 ರವರೆಗೆ ರೈತರು ಮಾಡಿರುವ ಎಲ್ಲಾ ಬೆಳೆ ಸಾಲ‌ಮನ್ನಾ, ಶ್ರೀಮಂತ ರೈತರು, 3 ವರ್ಷದ ಆದಾಯ ತೆರಿಗೆ ಪಾವತಿಸಿರುವ ರೈತರು, ವ್ಯಾಪಾರದ ಜತೆಗೆ ಕೃಷಿ ಮಾಡುತ್ತಿರುವ ರೈತರ ಸಾಲ ಮನ್ನಾ ಮಾಡಬೇಕೆ, ಕೃಷಿಯೇತರ ಉದ್ದೇಶಕ್ಕೆ ಮಾಡಿರುವ ಸಾಲ ಮನ್ನಾ ಮಾಡಬೇಕೆ ಎಂಬ ಬಗ್ಗೆ ಚರ್ಚಿಸಲಿದ್ದೇವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಲಹೆಯನ್ನೂ ಪಡೆಯಬೇಕಿದ್ದು, ಇನ್ನು 15 ದಿನದೊಳಗೆ ಸೂಕ್ತ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

‘ರಾಜ್ಯದ ಬಜೆಟ್‌ ₹2 ಲಕ್ಷ ಕೋಟಿ. ಇದರಲ್ಲಿಯೇ ಸಾಲಮನ್ನಾ ಮಾಡಿ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ, ಶಿಕ್ಷಣ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳ ಯೋಜನೆಗಳಿಗೂ ಅನುದಾನ ನೀಡಬೇಕಿದೆ’ ಎಂದರು. 

ರೈತರ ಒತ್ತಾಯ:

* ಪ್ರಕೃತಿ ವಿಕೋಪ, ಬರಗಾಲ, ಅರ್ಧ ಬೆಲೆಗೆ ಬೆಳೆ ಮಾರಾಟದಿಂದ ರೈತರು ನಷ್ಟ ಅನುಭವಿಸುತ್ತಿದ್ದೇವೆ. ಯಾವತ್ತಿಗೂ ಯಾರನ್ನೂ ಬೇಡದ ರೈತ ಕುಲವು ಈಗ ಸಾಲ ಮನ್ನಾ ಬೇಡಿಕೆ ಮುಂದಿಡುತ್ತಿದ್ದೇವೆ. ದೊಡ್ಡ, ಸಣ್ಣ ಎಲ್ಲ ರೈತರ ಸಾಲ ಮನ್ನಾ ಆಗಬೇಕು.

₹1.14 ಲಕ್ಷ ಕೋಟಿ ಸಾಲ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ಕೂಡ ಇದರಲ್ಲಿ ಪಾಲು ತೆಗೆದುಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು.

ಕೇಂದ್ರ ಸರ್ಕಾರವು ಇದರಲ್ಲಿ ಜವಾಬ್ದಾರಿ ವಹಿಸದಿದ್ದರೆ, ಕೇಂದ್ರದ ವಿರುದ್ಧವೂ ಪ್ರತಿಭಟನೆ ಮಾಡಬೇಕಾಗುತ್ತದೆ.

* ಬೆಳೆಗೆ ಸೂಕ್ತ ಬೆಳೆ ನಿಗದಿಗೆ ತಜ್ಞರ ಅಭಿಪ್ರಾಯ ಪಡೆದು ನಿಯಮ ರೂಪಿಸಬೇಕು.

* ಸ್ಟೀಲ್‌ ಬ್ರಿಡ್ಜ್‌ ಸೇರಿ ಇತರೆ ಯೋಜನೆಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡಲು ಸರ್ಕಾರ ಯೋಚಿಸುವುದಿಲ್ಲ. ಆದರೆ, ಕರ್ನಾಟಕದ ಮುಕ್ಕಾಲು ಭಾಗವಾಗಿರುವ ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸರ್ಕಾರ ಇಷ್ಟೊಂದು ಚಿಂತಿಸುತ್ತಿರುವುದು ಸರಿಯಲ್ಲ. ಕುಟುಂಬದ ಚಿನ್ನ–ಬೆಳ್ಳಿ ಅಡವಿಟ್ಟು ಬೆಳೆಗಾಗಿ ಸಾಲ ಮಾಡಿರುವ ಅನೇಕ ರೈತರಿದ್ದಾರೆ.

* ಸಿದ್ದರಾಮಯ್ಯ ಸರ್ಕಾರದಲ್ಲಿ ಘೋಷಿಸಿದ ರೈತರ ₹50 ಸಾವಿರ ವರೆಗಿನ ಸಾಲ ಮನ್ನಾವನ್ನು ಪೂರ್ಣಗೊಳಿಸಬೇಕು.

* ಖಾಸಗಿಯವರ ಬಳಿ ಪಡೆದಿರುವ ಸಾಲದ ಮನ್ನಾ ಹೇಗೆ? ಕೇರಳ ಸರ್ಕಾರ ಮಾಡಿದಂತೆ ಖಾಸಗಿಯವರ ಬಳಿ ರೈತರು ಮಾಡಿರುವ  ಸಾಲವನ್ನು ಮನ್ನಾ ಮಾಡಬೇಕು.

* ಸಾಲ ಮನ್ನಾ ಆಗುವವರೆಗೂ ಸಾಲ ಹಿಂಪಡೆಯಲು ರೈತರ ಮೇಲೆ ಬ್ಯಾಂಕ್‌ಗಳು ಒತ್ತಾಯ ಹೇರದಂತೆ ಸರ್ಕಾರ ಸುತ್ತೋಲೆ ಹೊರಡಿಸಬೇಕು.

* ಸಾಲದಿಂದ ಮುಕ್ತಗೊಳಿಸುವುದು ಮಾತ್ರವಲ್ಲ. ಸಾಲಗಾರ ಆಗದ ರೀತಿಯಲ್ಲಿ ಯೋಜನೆ ರೂಪಿಸುವುದು ಮುಖ್ಯ.

ನವೀನ ಹಳೆಯದು