ಸಸಾಲಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲಿ


ಬಹುದಿನಗಳ ಕನಸಾದ ಸಸಾಲಟ್ಟಿ ಏತ ನೀರಾವರಿ ಯೋಜನೆ ಈಗ ನನಸಾಗಬೇಕಾದ ಕಾಲ ಸನ್ನಿಹಿತವಾಗಿದೆ ಎಂಬ ಅಭಿಪ್ರಾಯ ರೈತರಿಂದ ವ್ಯಕ್ತವಾಗುತ್ತಿದೆ.

ಸಸಾಲಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡರೆ ಮುಧೋಳ, ಜಮಖಂಡಿ, ಬೀಳಗಿ ಹಾಗೂ ರಾಯಬಾಗ್ ತಾಲೂಕಿನ ಜನತೆ ಕುಡಿವ ನೀರಿಗಾಗಿ 8.47ಟಿಎಂಸಿ ನೀರು ಬಳಸಿಕೊಳ್ಳಬಹುದು. ಜತೆಗೆ 36856ಹೆಕ್ಟೇರ್ ಜಮೀನು ನೀರಾವರಿ ಆಗಲಿದೆ.

ಮೊದಲು ಹಿರಣ್ಯಕೇಶಿ ನದಿ ನೀರನ್ನು ಘಟಪ್ರಭ ಎಡದಂಡೆ ಕಾಲುವೆಗೆ ಹರಿಸಿ ನೀರಾವರಿ ಸೌಕರ್ಯ ಪಡೆಯಲಾಗುತ್ತಿತ್ತು. ಆದರೆ ಈಗ ಘಟಪ್ರಭ ಬಲದಂಡೆ ಕಾಲುವೆ ಚಾಲನೆ ಹಂತದಲ್ಲಿ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ನೀರಿನ ಕೊರತೆ ಉಂಟಾಗುವುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸಸಾಲಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಬೇಕು ಎಂಬುದು ರೈತರ ಅಭಿಪ್ರಾಯ.
ಕೃಷ್ಣಾ, ಘಟಪ್ರಭ ಹಾಗೂ ಮಲಪ್ರಭಾ ನದಿಗಳು ಹರಿದಿದ್ದರೂ ಈ ಭಾಗದ ಅಂದಾಜು 40ಸಾವಿರ ಹೆಕ್ಟೇರ್ ಜಮೀನಿಗೆ ಸಮರ್ಪಕ ನೀರಾವರಿ ಸೌಕರ್ಯ ಇಲ್ಲ. ವ್ಯರ್ಥವಾಗಿ ಸಮುದ್ರ ಸೇರುವ ನದಿ ನೀರನ್ನು ಸರಿಯಾಗಿ ಬಳಸಿಕೊಳ್ಳುವ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕು ಎಂಬುದು ಈ ಭಾಗದ ಜನತೆ ಆಗ್ರಹ.

ಮುಂಗಾರು ಮಳೆ ಕೊರತೆಯಾದಾಗ ರೈತರಿಗೆ ಹಾಗೂ ಸಾರ್ವಜನಿಕರಿಗೆ ಈ ಯೋಜನೆ ವರದಾನವಾಗಲಿದೆ.

ಈ ಯೋಜನೆ ವೆಚ್ಚ ಅಂದಾಜು 140ಕೋಟಿ. 62.40ಕಿ.ಮೀ. ಉದ್ದದ ಕಾಲುವೆ ನಿರ್ಮಿಸಿ ಕೃಷ್ಣಾ ನದಿಯ ಹಿಪ್ಪರಗಿ ಬ್ಯಾರೇಜ್ ಹಿಂಭಾಗದ ನೀರು, ಜೂನ್ ತಿಂಗಳಲ್ಲಿ ನದಿಗೆ ಬರುವ ಹೆಚ್ಚುವರಿ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ತೇರದಾಳ ಹಂಚು ಕಾಲುವೆಗೆ ಹರಿಸಿದಾಗ ಮುಧೋಳ, ಜಮಖಂಡಿ, ಬೀಳಗಿ ಹಾಗೂ ರಾಯಬಾಗ್ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಾಗಿ 8.47ಟಿಎಂಸಿ ನೀರು ಲಭ್ಯವಾಗುತ್ತದೆ. ಪ್ರತಿ ಎಕರೆಗೆ 64ಕ್ಯೂಸೆಕ್‌ನಂತೆ ಪ್ರತಿದಿನ 16ಗಂಟೆ ನೀರು ಲಿಫ್ಟ್ ಮಾಡಿದರೆ 90ದಿನಗಳವರೆಗೆ ನೀರು ಪೂರೈಸಬಹುದು. ಜತೆಗೆ ಕೃಷ್ಣಾ ಕೊಳ್ಳದ ‘ಬಿ’ ಸ್ಕೀಮ್ ನೀರನ್ನು ಕೂಡ ಬಳಸಿಕೊಳ್ಳಬಹುದು.

ಈ ಭಾಗದ ರೈತರು ನೀರಾವರಿ ಇಲಾಖೆ ಅಭಿಯಂತರರ ಸಹಾಯದಿಂದ ಯೋಜನೆ ಅಂದಾಜುಪತ್ರಿಕೆ ಮತ್ತು ನೀಲನಕ್ಷೆ ಸಿದ್ಧಪಡಿಸಿ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ನವೀನ ಹಳೆಯದು