“ಎಪ್ಪತ್ತು ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಹುತೇಕ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಮತ್ತು ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರು ದೇಶಕ್ಕಾಗಿ ಏನೂ ಮಾಡಲಿಲ್ಲ. ದುರಾಡಳಿತ, ಭ್ರಷ್ಟಾಚಾರ, ವಂಶಪಾರಂಪರ್ಯ ಆಡಳಿತ ಮಾಡಿ ದೇಶವನ್ನು ಲೂಟಿ ಹೊಡೆದರು. ನಮಗೆ ಕೇವಲ ೬೦ ತಿಂಗಳ ಅಧಿಕಾರ ಕೊಡಿ, ಇಡೀ ದೇಶವನ್ನು ರಾಮರಾಜ್ಯ ಮಾಡುತ್ತೇವೆ...”
-ಈ ಮಾತು, ೨೦೧೪ರ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ಮೋದಿಯವರ ಪ್ರಚಾರ ಭಾಷಣದ ಅವಿಭಾಜ್ಯ ಅಂಗವಾಗಿತ್ತು. ಈಗಲೂ, ಪ್ರಧಾನಿ ಮೋದಿಯವರು, “ನೆಹರು ಮತ್ತು ಕಾಂಗ್ರೆಸ್ ಈ ದೇಶವನ್ನು ಹಳಿತಪ್ಪಿಸಿದರು, ಹಾಳು ಮಾಡಿದರು,” ಎಂದಿದ್ದಾರೆ. ಆ ಮೂಲಕ ಸ್ವತಂತ್ರ ಭಾರತದ ಇಡೀ ಅಭಿವೃದ್ಧಿಯನ್ನು, ಸಾಧನೆಯನ್ನು ನಗಣ್ಯವೆಂಬಂತೆ ಮಾತನಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೋದಿಯವರು ಈ ಮಾತನ್ನು ತಮ್ಮ ಮಂತ್ರವಾಗಿಸಿಕೊಂಡಿದ್ದಾರೆ. ಸಂಸತ್ತಿನ ಒಳಹೊರಗೆ ಸಂದರ್ಭ ಸಿಕ್ಕಾಗೆಲ್ಲ ಇದೇ ಮಾತನ್ನು ಪುನರುಚ್ಛರಿಸುತ್ತಿದ್ದಾರೆ. ಪ್ರತಿ ಬಾರಿ ಅವರ ಮಾತಿನ ವ್ಯಂಗ್ಯ ಮತ್ತು ಕುಹಕ ತೀವ್ರತೆ ಪಡೆಯುತ್ತಲೇ ಇದೆ.
ಆ ಮೂಲಕ ಬಿಜೆಪಿ ಮತ್ತು ಸ್ವತಃ ತಮ್ಮ ಅಭಿಮಾನಿಗಳಷ್ಟೇ ಅಲ್ಲದೆ, ಇಡೀ ದೇಶದ ಜನಸಾಮಾನ್ಯರು ಕೂಡ ತಮ್ಮ ಈ ಹೊಸ ‘ಸತ್ಯಶೋಧನೆ’ಯನ್ನು ನಂಬುವಂತೆ ಮಾಡುವುದು ಅವರ ಉದ್ದೇಶ. ಆ ನಿಟ್ಟಿನಲ್ಲಿ ಈಗಾಗಲೇ ಅವರು ಸಾಕಷ್ಟು ಯಶಸ್ಸು ಕಂಡಿದ್ದಾರೆ ಕೂಡ. ದೇಶದ ಜನಸಾಮಾನ್ಯರಲ್ಲಿ ಬಹುತೇಕ ಮಂದಿ, ಅದರಲ್ಲೂ ಯುವ ಸಮೂಹ ಮೋದಿಯವರ ಈ ಮಾತನ್ನೇ ನಂಬಿದ್ದಾರೆ ಮತ್ತು ಕಾಂಗ್ರೆಸ್ ಮತ್ತು ನೆಹರೂ ವಿರುದ್ಧದ ಅಪಪ್ರಚಾರವನ್ನು ಒಂದು ಆಂದೋಲನದೋಪಾದಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ, ಇತರ ಸಾರ್ವಜನಿಕ ವೇದಿಕೆಗಳಲ್ಲಿ ಅವ್ಯಾಹತವಾಗಿ ಮುಂದುವರಿಸಲಾಗುತ್ತಿದೆ. ನೆಹರು-ಗಾಂಧಿ ಕುಟುಂಬದ ಬಗ್ಗೆ ಬಿಜೆಪಿ ನಾಯಕರಿಗೆ ಯಾವ ಮಟ್ಟಿಗಿನ ಅಸಹನೆ ಇದೆ ಎಂದರೆ, ಸಾಧ್ಯವಾದರೆ ಇಡೀ ದೇಶದ ಸಮಕಾಲೀನ ಇತಿಹಾಸದಿಂದ ಅವರ ಆಡಳಿತದ ಅವಧಿಯನ್ನೇ ಅಳಿಸಿಹಾಕಿಬಿಡುತ್ತಿದ್ದರು. ಈಗ ನಡೆಯುತ್ತಿರುವುದು ಕೂಡ ಅಂತಹ ಒಂದು ಯತ್ನವೇ ಎಂದರೆ ಅತಿಶಯೋಕ್ತಿಯಾಗಲಾರದು.
ಆದರೆ, ವಾಸ್ತವ ಏನು? ನಿಜಕ್ಕೂ ಕಾಂಗ್ರೆಸ್ ಮತ್ತು ನೆಹರೂ ಆಡಳಿತದ ಅವಧಿಯಲ್ಲಿ ದೇಶ ಅಭಿವೃದ್ಧಿ ಹೊಂದಿಲ್ಲವೇ? ಯಾವ ಪೂರಕ ಬದಲಾವಣೆಗಳೂ ಸಂಭವಿಸಲಿಲ್ಲವೇ? ಇಂದು ಉದ್ಯಮ, ವಿಜ್ಞಾನ-ತಂತ್ರಜ್ಞಾನ, ಕೃಷಿ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಹಲವು ರಂಗಗಳಲ್ಲಿ ಇಡೀ ಜಗತ್ತೇ ತಿರುಗಿ ನೋಡುವಂತೆ ಬೆಳೆದುನಿಂತಿರುವ ದೇಶದ ಪ್ರಗತಿಗೆ ನೆಹರೂ ಮತ್ತು ಕಾಂಗ್ರೆಸ್ ಸರ್ಕಾರಗಳ ಕೊಡುಗೆ ಏನೂ ಇಲ್ಲವೇ? ೭೦ ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಹುತೇಕ ೬೦ ವರ್ಷ ನಿರಂತರ ಆಡಳಿತ ನಡೆಸಿದ ಕಾಂಗ್ರೆಸ್, ಹಲವು ವೈಫಲ್ಯಗಳ ಹೊರತಾಗಿಯೂ, ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರದೆ ಹೋಗಿದ್ದರೆ, ಪ್ರಗತಿಯ ನೀಲನಕಾಶೆ ರೂಪಿಸದೆ ಹೋಗಿದ್ದರೆ, ದೇಶದ ಇಂದಿನ ಸಾಧನೆ ಸಾಧ್ಯವಿತ್ತೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಏಳು ದಶಕದ ದೇಶದ ಇತಿಹಾಸವನ್ನು ನೋಡಿದರೆ ದೊರೆಯುವ ಚಿತ್ರಣವೇ ಬೇರೆ.
೧೯೬೨ರ ಚೀನಾ ಯುದ್ಧದಲ್ಲಿ ಆದ ಸೋಲು ಮತ್ತು ೧೯೭೫ರ ತುರ್ತು ಪರಿಸ್ಥಿತಿಯಂತಹ ಐತಿಹಾಸಿಕ ಪ್ರಮಾದಗಳು, ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಹೊತ್ತಲ್ಲೂ ಕಾಡುತ್ತಿರುವ ಅಪೌಷ್ಟಿಕತೆ, ಕೃಷಿ ಬಿಕ್ಕಟ್ಟು, ಆದಿವಾಸಿಗಳು, ದಲಿತರು, ಕೆಲ ಅಲ್ಪಸಂಖ್ಯಾತ ವರ್ಗಗಳ ಮೇಲಿನ ದಬ್ಬಾಳಿಕೆ-ದೌರ್ಜನ್ಯಗಳು, ಪ್ರಾಥಮಿಕ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ವಲಯದ ಅವ್ಯವಸ್ಥೆಗಳಿಗೆ ಆರಂಭಿಕ ಆಡಳಿತ ಅವಜ್ಞೆ ಮತ್ತು ಲೋಪಗಳು ಕೂಡ ಕಾರಣ ಎಂಬುದನ್ನು ತಳ್ಳಿಹಾಕಲಾಗದು.
ಆದರೆ, ಅಷ್ಟುಮಾತ್ರಕ್ಕೆ ಸ್ವತಂತ್ರ ಭಾರತದ ಏಳು ದಶಕದ ಆಡಳಿತದಲ್ಲಿ ದೇಶ ಪ್ರಗತಿಯನ್ನೇ ಕಂಡಿಲ್ಲ ಎನ್ನಲಾದೀತೇ? ವಸಾಹತುಶಾಹಿ ಆಡಳಿತದಿಂದ ಸ್ವತಂತ್ರ ಗಳಿಸಿ ತನ್ನ ಅಭಿವೃದ್ಧಿ, ಪ್ರಗತಿಯ ಹಾದಿಯನ್ನು ತಾನೇ ಕಂಡುಕೊಂಡ, ದೇಶದ ಬಹುಧರ್ಮ, ಬಹುಸಂಸ್ಖೃತಿ, ಬಹುಭಾಷೆ, ಬಹುನಂಬಿಕೆಯ ಸಾಮಾಜಿಕ ಭಿನ್ನತೆಯ ಹೊರತಾಗಿಯೂ, ತೀರಾ ಕನಿಷ್ಠ ಶೈಕ್ಷಣಿಕ ಮಟ್ಟದ ಹೊರತಾಗಿಯೂ, ದೇಶವಿಭಜನೆ, ಕೋಮುವಾದ, ಕಡುಬಡತನ, ಮೌಢ್ಯ, ತಾರತಮ್ಯ, ಅಸಮಾನತೆಗಳ ಹೊರತಾಗಿಯೂ ದೇಶವನ್ನು ಒಗ್ಗೂಡಿಸಿ, ಒಗ್ಗಟ್ಟಿನ ಬಲದ ಮೇಲೆ ಬೃಹತ್ ಉದ್ಯಮ, ಜಲಾಶಯ, ರಸ್ತೆ, ರೈಲ್ವೆ, ಬ್ಯಾಹಾಕಾಶ ತಂತ್ರಜ್ಞಾನಗಳಲ್ಲಿ ಭದ್ರ ಬುನಾದಿ ಹಾಕಿದ್ದು ಸಾಧನೆಯಲ್ಲವೇ? ದೇಶದ ಎಲ್ಲ ವರ್ಗ, ಜಾತಿ-ಜನಾಂಗಗಳನ್ನು ಸಮಾನತೆಯ ಮತ್ತು ಭಾತೃತ್ವದ ಅಡಿಯಲ್ಲಿ ಬೆಸೆದ ಸಂವಿಧಾನವನ್ನು ಮತ್ತು ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದು ನೆಹರೂ ಅವರ ಸಾಧನೆಯಲ್ಲವೇ?
ಇಂದು ಭಾರತವು ಜಗತ್ತಿನ ಪ್ರಭಾವಿ ರಾಷ್ಟ್ರಗಳಿಗೆ ಪ್ರತಿಸ್ಪರ್ಧೆಯೊಡ್ಡುವ ಮಟ್ಟಿಗೆ ಸಶಕ್ತವಾಗಿದೆ ಎಂದರೆ, ಅದರ ಬಹಳಷ್ಟು ಶ್ರೇಯಸ್ಸು ಸಲ್ಲಬೇಕಾಗಿರುವುದು ಸ್ವತಂತ್ರ ಭಾರತದ ಆರಂಭಿಕ ವರ್ಷಗಳಲ್ಲಿ ದೇಶವನ್ನು ಒಗ್ಗೂಡಿಸಿ, ಪ್ರಗತಿಯ ನಕಾಶೆ ಹಾಕಿಕೊಟ್ಟ ನಾಯಕರಿಗೆ ಎಂಬುದು ಇತಿಹಾಸಕಾರರ ಅಭಿಪ್ರಾಯ.
೭೦ ವರ್ಷಗಳಲ್ಲಿ ದೇಶದ ಜಿಡಿಪಿ ದರ, ತಲಾ ಆದಾಯ, ಜೀವನ ಗುಣಮಟ್ಟ, ಶಿಶುಮರಣ ಪ್ರಮಾಣ, ಆಹಾರ ಉತ್ಪಾದನೆ ವಿಷಯಗಳಲ್ಲಿ ಆಗಿರುವ ಪ್ರಗತಿ ಏನು ಎಂಬುದನ್ನು ಸರ್ಕಾರದ ಅಂಕಿಅಂಶಗಳೇ ಹೇಳುತ್ತಿವೆ. ೧೯೪೭ರಲ್ಲಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಈ ವಿಷಯಗಳಲ್ಲಿ ದೇಶ ಇದ್ದ ಪರಿಸ್ಥಿತಿ ಗಮನಿಸಿದ ಯಾರೂ, ಅಂದು ಇವತ್ತಿಗೆ ಈ ಸ್ಥಿತಿಯಲ್ಲಿ ದೇಶವನ್ನು ಊಹಿಸಲು ಸಾಧ್ಯವಿರಲಿಲ್ಲ. ಈ ವಲಯಗಳಲ್ಲಿ ದೇಶದ ಇಂದಿನ ಸಾಧನೆಯನ್ನು ಸಾರುವ ಅಂಕಿಅಂಶಗಳು, ಮಾಹಿತಿಯನ್ನು ನೋಡಿದ ಬಳಿಕವೂ, ಅದಕ್ಕೆ ಕಾರಣವಾದ ಸ್ವಾತಂತ್ರ್ಯದ ಆರಂಭದ ವರ್ಷಗಳ ನಾಯಕರ ದೂರದೃಷ್ಟಿ, ಪರಿಶ್ರಮದ ಮೇಲೆ ರೂಪುಗೊಂಡ ಸಾಮಾಜಿಕ, ರಾಜಕೀಯ, ಆರ್ಥಿಕ ನೀಲನಕ್ಷೆಯ ಫಲಿತಾಂಶ ಇದು ಎಂಬುದನ್ನು ತಳ್ಳಿಹಾಕುವುದು ಸಾಧ್ಯವೇ?
“ಎಲ್ಲ ವೈರುಧ್ಯಗಳು, ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ಹತ್ತು ಹಲವು ಭಾಷೆ, ಗಡಿಗಳ ಹೆಸರಲ್ಲಿ ಹರಿದುಹಂಚಿ ಹೋಗಿದ್ದ ಈ ದೇಶವನ್ನು ಒಟ್ಟುಗೂಡಿಸಿ, ಅದಕ್ಕೊಂದು ಸಶಕ್ತ ಆಡಳಿತ ವ್ಯವಸ್ಥೆ, ಆಡಳಿತ ವ್ಯವಸ್ಥೆಗೊಂದು ಸಂವಿಧಾನದ ಚೌಕಟ್ಟು ರೂಪಿಸದೇ ಹೋಗಿದ್ದರೆ, ಸ್ವತಃ ಮೋದಿಯವರು ಈ ದೇಶದ ಪ್ರಧಾನಿಯಾಗುವುದು ಕೂಡ ಸಾಧ್ಯವಿರಲಿಲ್ಲ,” ಎನ್ನುತ್ತಾರೆ ಇತಿಹಾಸಕಾರ ರಾಮಚಂದ್ರ ಗುಹಾ. ತಮ್ಮ ‘ಇಂಡಿಯಾ ಆಫ್ಟರ್ ಗಾಂಧಿ’ ಕೃತಿಯಲ್ಲಿ ಸ್ವತಂತ್ರ ಭಾರತ ಚರಿತ್ರೆಯನ್ನು ದಾಖಲಿಸಿರುವ ಅವರು, “ಜವಾಹರ ಲಾಲ್ ನೆಹರು, ಸರ್ದಾರ್ ವಲ್ಲಭಾಬಾಯ್ ಪಟೇಲ್ ಮತ್ತು ಬಿ ಆರ್ ಅಂಬೇಡ್ಕರ್ ಅವರು ೧೯೪೮ರಿಂದ ೧೯೫೨ರವರೆಗೆ ನಾಲ್ಕು ವರ್ಷಗಳ ಕಾಲ ಮಾಡಿದ ಅಭೂತಪೂರ್ವ ಕಾರ್ಯದ ಫಲವಾಗಿ ಇಂದು ಈ ದೇಶ ಬಲಿಷ್ಠ ಪ್ರಜಾಪ್ರಭುತ್ವ ಒಕ್ಕೂಟ ರಾಷ್ಟ್ರವಾಗಿ ಉಳಿದಿದೆ,” ಎನ್ನುತ್ತಾರೆ.
“ದೇಶದ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸಿ ಸಮಗ್ರತೆ ತಂದದ್ದು, ದೇಶವಿಭಜನೆಯ ಪರಿಣಾಮವಾಗಿ ಉಂಟಾದ ವಲಸೆ ಬಿಕ್ಕಟ್ಟನ್ನು ಪರಿಹರಿಸಿದ್ದು, ಸಮಸಮಾಜದ ಆಶಯದ ಸಂವಿಧಾನ ಸಿದ್ಧಪಡಿಸಿದ್ದು, ಆರ್ಥಿಕ ಅಭಿವೃದ್ಧಿಯ ಪಥ ರೂಪಿಸಿದ್ದು, ಮೊದಲ ಸಾರ್ವತ್ರಿಕ ಚುನಾವಣೆ ನಡೆಸಿದ್ದೂ ಸೇರಿದಂತೆ ಆ ಮೂವರು ನಡೆಸಿದ ಹಲವು ಐತಿಹಾಸಿಕ ಮಹತ್ವದ ಕಾರ್ಯಗಳು ದೇಶದ ಏಳಿಗೆಗೆ ಭದ್ರ ಬುನಾದಿ ಹಾಕಿದವು ಎಂಬುದನ್ನು ಇತಿಹಾಸದ ಮತ್ತು ಅಭಿವೃದ್ಧಿಯ ಅರಿವಿರುವ ಯಾರೊಬ್ಬರೂ ತಳ್ಳಿಹಾಕಲಾರರು,” ಎನ್ನುತ್ತಾರೆ ಗುಹಾ.
ಮತ್ತೊಬ್ಬ ಇತಿಹಾಸಕಾರ ಸುನಿಲ್ ಖಿಲ್ನಾನಿ, “೧೯೪೭ರ ನಂತರದ ಭಾರತದ ಇತಿಹಾಸದ ಕಾಲಘಟ್ಟವನ್ನು ಪ್ರಜಾಪ್ರಭುತ್ವ ಎಂಬ ರಾಜಕೀಯ ಚಿಂತನೆಯ ಪ್ರಯೋಗದ ಅವಧಿ,” ಎಂದೇ ಗುರುತಿಸಬಹುದು ಎಂದು ತಮ್ಮ ‘ದಿ ಐಡಿಯಾ ಆಫ್ ಇಂಡಿಯಾ’ ಕೃತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಮತ್ತು ಫ್ರೆಂಚ್ ಕ್ರಾಂತಿಗಳಿಗೆ ಹೋಲಿಸಿದರೆ, ಭಾರತದ ಈ ಪ್ರಯೋಗ ಅತ್ಯಂತ ಅಲ್ಪಾವಧಿಯಲ್ಲಿ ಫಲ ಕೊಟ್ಟಿದೆ. ಆದರೆ, ಅವೆಲ್ಲಕ್ಕಿಂತ ಹೆಚ್ಚು ಮಹತ್ವದ ಪ್ರತಿಫಲವನ್ನೇ ನೀಡಿದೆ,” ಎನ್ನುತ್ತಾರೆ ಅವರು.
“ನೆಹರು ಅವರ ಆಸಕ್ತಿಯ ಕಾರಣಕ್ಕೆ ರೂಪುಗೊಂಡ ಸಂಪೂರ್ಣ ಸ್ವತಂತ್ರ ಪ್ರಜಾಪ್ರಭುತ್ವ ಆಶಯದ ಸಂವಿಧಾನ ರೂಪುಗೊಂಡದ್ದು; ನೆಹರು, ಪಟೇಲ್ ಮತ್ತು ಅಂಬೇಡ್ಕರರ ಆಶಯದಂತೆ ಅದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಪಷ್ಟಪಡಿಸಿಕೊಂಡು ಅಳವಡಿಸಿಕೊಂಡದ್ದು; ಆ ಸಂವಿಧಾನದ ಆಧಾರದ ಮೇಲೆ ರೂಪುಗೊಂಡ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಗಳು ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲೇ ಎಲ್ಲ ರಂಗಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದವು. ಅಂತಹ ಭದ್ರ ಬುನಾದಿ ಇಲ್ಲದೆಹೋಗಿದ್ದರೆ ನಾವು ಇಂದು ಕಾಣುತ್ತಿರುವ ಜಿಡಿಪಿ ದರದ ಬೆಳವಣಿಗೆಯಾಗಲೀ, ೧೯೯೧ರ ಆರ್ಥಿಕ ಸುಧಾರಣೆಗಳನ್ನಾಗಲೀ ಕಾಣಲು ಸಾಧ್ಯವಿರಲಿಲ್ಲ,” ಎಂಬುದು ಗುಹಾ ಅವರ ಸ್ಪಷ್ಟ ಅಭಿಪ್ರಾಯ.
ಆರ್ಥಿಕ ಮತ್ತು ಕೃಷಿ ವಲಯದ ಯೋಜಿತ ಬೆಳವಣಿಗೆಯ ರೂಪುರೇಷೆಗಳನ್ನು ಸಿದ್ಧಪಡಿಸಿದ ನೆಹರು ಅವರ ಕೊಡುಗೆಯ ಕಾರಣಕ್ಕೆ ದೇಶ ಇಂದು ಆರ್ಥಿಕ ಮತ್ತು ಕೃಷಿರಂಗದ ಸಾಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಅಗ್ರ ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಿದೆ. ಸಾರ್ವಜನಿಕ ವಲಯದ ಬೃಹತ್ ಉದ್ದಿಮೆಗಳು, ಬೃಹತ್ ಜಲಾಶಯಗಳು, ಹೆದ್ದಾರಿ-ರೈಲ್ವೆ ಮಾರ್ಗಗಳು, ಐಐಟಿಗಳು, ಇಸ್ರೋದಂಥ ವೈಜ್ಞಾನಿಕ ಸಂಸ್ಥೆಗಳನ್ನು ರೂಪಿಸಿದ ನೆಹರು ಅವರ ವೈಜ್ಞಾನಿಕ ದೃಷ್ಟಿಕೋನ ಮತ್ತು ಸಮಾಜವಾದಿ ಚಿಂತನೆಯ ಹಿನ್ನೆಲೆಯಲ್ಲೇ ದೇಶ ಈವರೆಗೆ ಹೋಳಾಗದೆ, ಹಾಳಾಗದೆ ಮುಂದುವರಿದುಕೊಂಡು ಬಂದಿದೆ. ಪ್ರಗತಿಯ ಹಳಿಯ ಮೇಲೆ ಹಳಿತಪ್ಪದೇ ಸಾಗಿಬಂದಿದೆ.
ಇತಿಹಾಸಕಾರರು ಮತ್ತು ಆರ್ಥಿಕ ತಜ್ಞರು ನೆಹರು ಮತ್ತು ೧೯೯೧ರವರೆಗಿನ ಎಲ್ಲ ಕಾಂಗ್ರೆಸ್ ಸರ್ಕಾರಗಳಲ್ಲೂ ಕೆಲವು ನ್ಯೂನತೆಗಳನ್ನು, ಲೋಪಗಳನ್ನು ಕಂಡಿದ್ದಾರೆ. ಆದರೆ, ಆರ್ಥಿಕ ಮತ್ತು ಆಡಳಿತಾತ್ಮಕ ಮಿತಿ, ಲೋಪಗಳ ಹೊರತಾಗಿಯೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಆ ಎಲ್ಲ ಸರ್ಕಾರಗಳು ಗಣನೀಯ ಕೊಡುಗೆ ನೀಡಿವೆ ಎಂಬುದನ್ನು ಮರೆಯುಂತಿಲ್ಲ. ಅದೇ ವೇಳೆ, ೧೯೭೦ರ ದಶಕದ ಇಂದಿರಾ ಗಾಂಧಿ ಆಡಳಿತದ ತುರ್ತು ಪರಿಸ್ಥಿತಿ ಹೇರಿಕೆ ಸೇರಿದಂತೆ ಕೆಲವು ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೆಟ್ಟು ಕೊಟ್ಟವು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅದು ೭೦ರ ದಶಕದ ಹಸಿರು ಕ್ರಾಂತಿ ಇರಬಹುದು, ಆ ಬಳಿಕದ ಕ್ಷೀರ ಕ್ರಾಂತಿ ಇರಬಹುದು, ೮೦ರ ದಶಕದ ಟೆಲಿಕಾಂ ಕ್ರಾಂತಿ ಇರಬಹುದು, ಎಲ್ಲವೂ ಈ ದೇಶದ ಜನಸಾಮಾನ್ಯರ ಬದುಕಿನಲ್ಲಿ ತಂದಿರುವ ಬದಲಾವಣೆಯನ್ನು, ಜೀವನಮಟ್ಟದಲ್ಲಿ ತಂದಿರುವ ಸುಧಾರಣೆಯನ್ನು ತಳ್ಳಿಹಾಕಲಾಗದು.
ಇನ್ನೂ ಸಾಗಬೇಕಿರುವ ಹಾದಿ ಸಾಕಷ್ಟಿದೆ, ತಲುಪಬೇಕಿರುವ ಗಮ್ಯ ದೂರವಿದೆ ಎಂಬ ವಾಸ್ತವದ ಹೊರತಾಗಿಯೂ, ಸಾಗಿಬಂದಿರುವ ಹಾದಿಯ ಪಯಣದ ಸಾಧನೆ ಕೂಡ ದೊಡ್ಡದಿದೆ ಎಂಬುದನ್ನು ಮರೆಯದಿರುವ ವಿವೇಕ ಮೆರೆಯೋಣ.