ಈ ಕೂಗು ಇನ್ನಷ್ಟು ವ್ಯವಸ್ಥಿತವಾಗಿ ಪಸರಿಸುತ್ತ ಕನ್ನಡಿಗರನ್ನು ಉತ್ತರ-ದಕ್ಷಿಣವೆಂದು ಒಡೆದು, ಹಲವು ದಶಕಗಳ ಪರಿಶ್ರಮದ ಫಲವಾಗಿ ಒಂದಾಗಿದ್ದ ಕರ್ನಾಟಕವನ್ನು ಒಡೆಯುವ ಎಲ್ಲ ಸಾಧ್ಯತೆಗಳು ನಮ್ಮ ಮುಂದಿವೆ. ಈ ಹೊತ್ತಿನಲ್ಲಿ ಕರ್ನಾಟಕದ ಏಳಿಗೆಯಲ್ಲಿನ ತಾರತಮ್ಯಕ್ಕೆ ಪ್ರತ್ಯೇಕತೆಯೇ ಪರಿಹಾರವೇ? ಏಕೀಕರಣದ ನಂತರ ಇಲ್ಲಿಯವರೆಗೆ ಏಳಿಗೆ ಆಗಿಯೇ ಇಲ್ಲವೇ? ಪ್ರಗತಿಯಲ್ಲಿರಬಹುದಾದ ಕೊರತೆಗೆ ಯಾರು ಹೊಣೆ? ಈ ಸಂದರ್ಭದಲ್ಲಿ ಕರ್ನಾಟಕ ಒಡೆದರೆ ಈ ಎಲ್ಲ ಸವಾಲುಗಳಿಗೆ ಪರಿಹಾರ ದೊರೆಯುವುದೇ? ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ದೊಡ್ಡದಾಗಿದ್ದಷ್ಟು ಏನಾದರೂ ಲಾಭವಿದೆಯೇ? ತೆಲಂಗಾಣದ ರಚನೆಯ ನಂತರ ಎರಡೂ ರಾಜ್ಯಗಳಲ್ಲಿನ ತೆಲುಗರ ಬದುಕಿನಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ತುರ್ತು ಅಗತ್ಯ ಇಂದು ಎಲ್ಲ ಕನ್ನಡಿಗರ ಮುಂದಿದೆ.
ಪ್ರತ್ಯೇಕತೆಯ ಚರ್ಚೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ “ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ, ಹೀಗಾಗಿ ಪ್ರತ್ಯೇಕ ರಾಜ್ಯ ಬೇಕು” ಅನ್ನುವ ವಾದಕ್ಕೆ ಸೀಮಿತವಾಗಿದೆ. ಈ ಬಗ್ಗೆ ಬಹಳಷ್ಟು ಪರ ವಿರೋಧದ ಬರವಣಿಗೆಯೂ ಬಂದಿದೆ. ಅವುಗಳಿಂದಾಚೆ ಈ ಚರ್ಚೆಯನ್ನು ಕೆಲವು ಬೇರೆ ಕೋನಗಳಲ್ಲಿ ನೋಡಬೇಕಿದೆ. ಮೊದಲಿಗೆ ಉತ್ತರ ಕರ್ನಾಟಕ ಅಂತ ಒಂದಿದೆಯೇ? ಏಕೀಕರಣದ ನಂತರ ಕರ್ನಾಟಕದ ಎಲ್ಲ ಭಾಗಗಳ ಪ್ರಗತಿಯನ್ನು absolute terms ಅಲ್ಲಿ ನೋಡದೇ relative terms ಅಲ್ಲಿ ಯಾಕೆ ನೋಡಬೇಕಿದೆ? ಭಾರತದ ಒಕ್ಕೂಟದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯಾಗಿರುವ ರೀತಿಯಲ್ಲೇ ಇರುವ ತೊಡಕಿಗೆ ಪರಿಹಾರವಾಗಿ ದೊಡ್ಡ ರಾಜ್ಯಗಳೇಕಿರಬೇಕು? ಕನ್ನಡಿಗರ ಏಳಿಗೆಯಲ್ಲಿ ಕನ್ನಡದ ಪಾತ್ರವೇನು, ಅದನ್ನು ಸಾಧಿಸಲು ಕನ್ನಡಿಗರ ಒಗ್ಗಟ್ಟಿನ ಪಾತ್ರವೇನು? ಇಂತಹ ಹಲವು ಹೊಸ ಪ್ರಶ್ನೆಗಳ ಸುತ್ತ ಪ್ರತ್ಯೇಕತೆಯ ಚರ್ಚೆಯನ್ನು ಹೊಸತಾಗಿ ಮಾಡಬೇಕಿದೆ.
ಯಾವುದು ಉತ್ತರ ಕರ್ನಾಟಕ?:
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಅನ್ನುವವರು ಉತ್ತರ ಕರ್ನಾಟಕ ಎಂದು ಕರೆಯುತ್ತಿರುವುದು ಯಾವುದನ್ನು? 13 ಜಿಲ್ಲೆಗಳನ್ನೊಳಗೊಂಡ ಭಾಗವನ್ನು ಉತ್ತರ ಕರ್ನಾಟಕ ಎಂದು ಕರೆಯುತ್ತಿದ್ದಾರೆ. ಯಾವುದೇ ಒಂದು ಭೂಭಾಗವನ್ನು ಒಂದು ಗುರುತಿನಿಂದ ಕರೆಯಬೇಕೆಂದರೆ ಆ ಗುರುತಿಗೆ ಒಂದು ಇತಿಹಾಸವಿರಬೇಕಲ್ಲವೇ? ಈಗ ಉತ್ತರ ಕರ್ನಾಟಕದ ಭಾಗವೆಂದು ಪ್ರತ್ಯೇಕತಾವಾದಿಗಳು ಕರೆಯುತ್ತಿರುವ ಬೀದರಿಗೂ ಉತ್ತರ ಕನ್ನಡ ಜಿಲ್ಲೆಗೂ ಏನಾದರೂ ಸಂಬಂಧವಿದೆಯೇ? ಎರಡು ಜಿಲ್ಲೆಗಳ ಪರಿಸರ, ಆಚರಣೆ, ಆಹಾರ, ಸಂಸ್ಕೃತಿ ಹೀಗೆ ಎಲ್ಲದರಲ್ಲೂ ಸಾಕಷ್ಟು ಭಿನ್ನತೆ ಇದೆ. ಇತಿಹಾಸದಲ್ಲಿ ಇಣುಕಿ ನೋಡಿದರೆ ನಿಜವಾದ ಉತ್ತರ ಕರ್ನಾಟಕ ಯಾವುದು ಅಂತ ಹುಡುಕಿದರೆ ಇವತ್ತಿನ ಪೂರ್ತಿ ಮಹಾರಾಷ್ಟ್ರ ರಾಜ್ಯವೇ ಕಾಣಿಸೀತು. ಬೀದರಿಗೂ, ಉತ್ತರ ಕನ್ನಡಕ್ಕೂ, ಬೆಂಗಳೂರಿಗೂ, ಬಳ್ಳಾರಿಗೂ ಏನಾದರೂ ಸಾಮಾನ್ಯವಾದುದು ಇದೆಯೆಂದರೆ ಅದು ಕನ್ನಡ ಮಾತ್ರ.
ಆ ಕಾರಣಕ್ಕಾಗಿಯೇ ಕನ್ನಡದ ಸುತ್ತ ಏಕೀಕರಣದ ಚಳುವಳಿಯಾಗಿತ್ತು. ಈಗ ಕನ್ನಡದ ಕೊಂಡಿಯೇ ಬೇಡ ಅನ್ನುವುದಾದರೆ ಕರ್ನಾಟಕವನ್ನು ಒಂದಲ್ಲ ಮೂವತ್ತು ಭಾಗ ಮಾಡಿದರೂ ಅದರಲ್ಲೇನು ವಿಶೇಷವಿರುವುದಿಲ್ಲ ಅಲ್ಲವೇ? ಉತ್ತರ ಕರ್ನಾಟಕ ಅನ್ನುವ ಪ್ರಜ್ಞೆ ಐತಿಹಾಸಿಕವಾದ ಹಿನ್ನೆಲೆಯನ್ನೇನಾದರೂ ಹೊಂದಿದ್ದರೆ ಕಲಬುರಗಿ ಮತ್ತು ಧಾರವಾಡ ಎರಡೂ ಜಿಲ್ಲೆಗಳು ಹೈಕೋರ್ಟ್ ಪೀಠ ತಮ್ಮಲ್ಲೇ ಆಗಲಿ ಎಂದು ವಾದಿಸುತ್ತಿರಲಿಲ್ಲ ಅಥವಾ ಧಾರವಾಡಕ್ಕೆ ಸಿಕ್ಕ ಐಐಟಿಗಾಗಿ ರಾಯಚೂರು ಮತ್ತು ಧಾರವಾಡದ ನಾಯಕರ ನಡುವೆ ವಾಕ್ ಸಮರ ನಡೆಯುತ್ತಿರಲಿಲ್ಲ ಅಲ್ಲವೇ? ಕರ್ನಾಟಕ ಅನ್ನುವ ತತ್ವವನ್ನು ಕನ್ನಡಿಗರೆಲ್ಲರಿಗೆ ನೀಡಿದ್ದು ಏಕೀಕರಣದ ಚಳುವಳಿಯ ಮುಂದಾಳತ್ವ ವಹಿಸಿದ್ದ ಧಾರವಾಡದ ಆಲೂರು ವೆಂಕಟರಾಯರು. ಧರ್ಮ, ಜಾತಿಯ ಎಲ್ಲ ಬೇಲಿಯನ್ನು ಮೀರಿ ನಮ್ಮೆಲ್ಲರನ್ನು ಜೋಡಿಸುವನಿಜಕ್ಕೂ ಸೆಕ್ಯುಲರ್ ಆದ ಕೊಂಡಿಯೊಂದು ಇದ್ದರೆ ಅದು ಕನ್ನಡ, ಆದ್ದರಿಂದಲೇ ಕನ್ನಡದ ಸುತ್ತಲೇ ಕರ್ನಾಟಕದ ಏಕೀಕರಣವಾಯಿತು.
ಇಂದಿಗೂ ಮುಂದಿಗೂ ಕನ್ನಡಿಗರನ್ನ ಜೋಡಿಸಬಲ್ಲ ಏಕೈಕ ಶಕ್ತಿ ಕನ್ನಡವೊಂದಕ್ಕೇ ಇರುವುದು. ಅದನ್ನು ಕೈ ಬಿಟ್ಟು ರಾಜ್ಯ ವಿಭಜನೆಗೆ ಹೊರಟರೆ ಒಂದು ಕರ್ನಾಟಕ ಹಲವು ಕರ್ನಾಟಕಗಳಾಗಿ ಏಕೀಕರಣದ ಮುಂಚೆ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಏನೆಲ್ಲ ತೊಂದರೆ ಅನುಭವಿಸಿದರೋ ಅವು ಮರುಕಳಿಸುವ ಎಲ್ಲ ಸಾಧ್ಯತೆಗಳು ಇವೆ.
ಪ್ರಗತಿಯ ಹೋಲಿಕೆ:
22 ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕ ಏಕೀಕರಣಗೊಂಡಾಗ ಎಲ್ಲ ಭೂಭಾಗಗಳು ಪ್ರಗತಿಯಲ್ಲಿ ಒಂದೇ ಮಟ್ಟದಲ್ಲಿರಲಿಲ್ಲ. ಅಂತೆಯೇ ಕಳೆದ 58 ವರ್ಷಗಳಲ್ಲಿ ಆಗಿರುವ ಪ್ರಗತಿಯನ್ನು ಏಕೀಕರಣದ ಹೊತ್ತಿನಲ್ಲಿ ಇದ್ದ ಸ್ಥಿತಿಯ ಹೋಲಿಕೆಯಲ್ಲಿ ನೋಡಬೇಕಿದೆಯೇ ಹೊರತು ನೇರಾನೇರ ತುಲನೆಯಲ್ಲಲ್ಲ. ನೇರಾ ನೇರ ಹೋಲಿಕೆಯಲ್ಲಿ ಬಹಳ ಸಹಜವಾಗಿಯೇ ಒಂದು ಭಾಗದ ಏಳಿಗೆಗೂ ಇನ್ನೊಂದು ಭಾಗದ ಏಳಿಗೆಗೂ ಕೊಂಚವಾದರೂ ವ್ಯತ್ಯಾಸ ಇದ್ದೇ ಇರುತ್ತದೆ. ಈ ಮಾತು ಭಾರತದ ಬೇರೆ ಬೇರೆ ರಾಜ್ಯಗಳ ಪ್ರಗತಿಯಲ್ಲಿನ ವ್ಯತ್ಯಾಸಕ್ಕೂ ಹೇಳಬಹುದು. ಒಂದು ಜನಸಮುದಾಯದ ಏಳಿಗೆಯಲ್ಲಿ ಮುಖ್ಯ ಪಾತ್ರವಹಿಸುವ ಕೆಲವು ವಿಷಯಗಳಲ್ಲಿ, ಇಂದು ಯಾವುದನ್ನು ಉತ್ತರ ಕರ್ನಾಟಕ ಎಂದು ಕರೆಯುತ್ತಿದ್ದಾರೋ ಆ ಭಾಗಕ್ಕೂ ಉಳಿದ ಭಾಗಕ್ಕೂ ಹೋಲಿಕೆಯಲ್ಲಿ ಆಗಿರುವ ಪ್ರಗತಿಯನ್ನು ನೋಡಿದಾಗ ಖಂಡಿತವಾಗಿಯೂ ಕೆಲವು ಅಂಶಗಳು ಕಾಣಿಸೀತು.
- ಸ್ವಾತಂತ್ರ್ಯದ ಹೊತ್ತಿನಲ್ಲಿ ಕೇವಲ ಕರ್ನಾಟಕದ ಸಾಕ್ಷರತೆ ಪ್ರಮಾಣ ಕೇವಲ 20%ನಷ್ಟಿತ್ತು. ಅದು 2011ರ ಜನಗಣತಿಯ ಹೊತ್ತಿಗೆ ಅದು 75.6% ತಲುಪಿದೆ. ಕರ್ನಾಟಕದ ನಾಲ್ಕು ಆಡಳಿತ ವಲಯಗಳಾದ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಲಯಗಳಲ್ಲಿ 2011ರ ಹೊತ್ತಿಗೆ ಸಾಕ್ಷರತೆ ಪ್ರಮಾಣ ಈಗ ಕ್ರಮವಾಗಿ 76.15%, 77.05%, 75.38%, 63.95% ತಲುಪಿದೆ. 60 ವರ್ಷದ ಅವಧಿಯಲ್ಲಿ ನಾಲ್ಕೂ ಆಡಳಿತ ವಲಯದಲ್ಲಿ ಏಕಪ್ರಮಾಣದಲ್ಲಿ ಸಾಕ್ಷರತೆಯ ಪ್ರಗತಿಯಾಗಿಲ್ಲ ಅನ್ನುವುದು ದಿಟವೇ ಆದರೂ ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಈ ಭಾಗಗಳು ಇದ್ದ ಸ್ಥಿತಿಯಿಂದ ಇವತ್ತಿಗೆ ಆಗಿರುವ ಬದಲಾವಣೆಯನ್ನು ಹೋಲಿಸಿದಾಗ ಮಾತ್ರವೇ ಇಲ್ಲಾಗಿರುವ ಪ್ರಗತಿಯನ್ನು ಕಾಣಬಹುದು. ಇನ್ನು ಇಲ್ಲಿ ಕಲ್ಪಿತವಾಗಿರುವ ಸೌಲಭ್ಯಗಳಲ್ಲಿರುವ ಕೊರತೆಯಲ್ಲಿರಬಹುದು, ಕಲಿಕೆಯ ಗುಣಮಟ್ಟದಲ್ಲಿರುವ ತೊಡಕುಗಳಿರಬಹುದು, ಈ ತೊಂದರೆಗಳು ಕರ್ನಾಟಕದ ಎಲ್ಲ ಭಾಗದಲ್ಲೂ ಹೆಚ್ಚು ಕಡಿಮೆ ಒಂದೇ ತೆರನಾಗಿವೆ. ಪ್ರತಿ ವರ್ಷ ಪ್ರಕಟವಾಗುವ ಅಸರ್ ವರದಿ ಇದನ್ನು ಎತ್ತಿ ತೋರುತ್ತದೆ.
- ಸುಮಾರು 191 ಲಕ್ಷ ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಕರ್ನಾಟಕದಲ್ಲಿ 126 ಲಕ್ಷ ಹೆಕ್ಟೇರ್ ಒಕ್ಕಲುತನಕ್ಕೆ ಯೋಗ್ಯವಾಗಿದೆ. ಅದರಲ್ಲಿ ಸುಮಾರು 45 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಬಹುದಾಗಿದೆ. ಇದರಲ್ಲಿ ಇಲ್ಲಿಯವರೆಗೆ ಸುಮಾರು 30 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ. ನೀರಾವರಿಗೆ ಒಳಪಡಿಸಲಾದ 65.6% ಪ್ರದೇಶ (19.6 ಲಕ್ಷ ಹೆಕ್ಟೇರ್) ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿದ್ದರೆ, 33.2% (9.96 ಲಕ್ಷ ಹೆಕ್ಟೇರ್) ಪ್ರದೇಶ ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿದೆ. ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯಪೂರ್ವ ನೀರಾವರಿಗೊಳಪಟ್ಟ ಜಾಗ ಏಳುವರೆ ಲಕ್ಷ ಹೆಕ್ಟೇರಿನಷ್ಟಿತ್ತು ಅನ್ನುವ ಅಂಶ ಗಮನಿಸಿದಾಗ ಸ್ವಾತಂತ್ರ್ಯ ನಂತರ ಮೈಸೂರು-ಬೆಂಗಳೂರು ವಿಭಾಗದ ಜಿಲ್ಲೆಗಳಲ್ಲಿನೀರಾವರಿಯ ಯಾವ ದೊಡ್ಡ ಯೋಜನೆಯೂ ಜಾರಿಯಾಗಿಲ್ಲ ಅನ್ನುವುದನ್ನು ಕಾಣಬಹುದು. ಸ್ವಾತಂತ್ರ್ಯ ಬಂದ ನಂತರ ಕರ್ನಾಟಕ ಸರ್ಕಾರ ಕೈಗೊಂಡ 65-70% ನೀರಾವರಿ ಯೋಜನೆಗಳು ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿವೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರ ಇಲ್ಲಿಯವರೆಗೆ ಖರ್ಚು ಮಾಡಿದ ಪ್ರತಿ ನೂರು ರೂಪಾಯಿಯಲ್ಲಿ 65-70 ರೂಪಾಯಿ ಈ ಭಾಗಗಳ ನೀರಾವರಿ ಯೋಜನೆಗಳಿಗೆಂದೇ ಕೊಟ್ಟಿದೆ. ನೀರಾವರಿಯ ಪ್ರಗತಿಯಲ್ಲಿ ಆಗಿರಬಹುದಾದ ಯಾವುದೇ ಕೊರತೆ ಮತ್ತು ವಿಳಂಬಕ್ಕೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣವೆಂದರೆ ತಪ್ಪಾಗದು.
- ಕರ್ನಾಟಕದ ಜಿ.ಡಿ.ಪಿ(ಅಂತರಿಕ ಉತ್ಪನ್ನ)ಯನ್ನು ವಿಭಾಗವಾರು ವಿಶ್ಲೇಷಣೆ ಮಾಡಿದರೆ ಸರ್ಕಾರಕ್ಕೆ ಬರುವ ಪ್ರತಿ ನೂರು ರೂಪಾಯಿ ಆದಾಯದಲ್ಲಿ ಬೆಂಗಳೂರು ವಿಭಾಗದಿಂದ 51, ಮೈಸೂರು ವಿಭಾಗದಿಂದ 20, ಬೆಳಗಾವಿ ವಿಭಾಗದಿಂದ 17 ಮತ್ತು ಕಲಬುರಗಿ ವಿಭಾಗದಿಂದ 12 ರೂಪಾಯಿ ಆದಾಯವಿದೆ. ಬೆಂಗಳೂರನ್ನು ಹೊರಗಿಟ್ಟು ವಿಭಾಗವಾರು ಜಿ.ಡಿ.ಪಿ ವಿಶ್ಲೇಷಣೆ ಮಾಡಿದರೆ ಸರ್ಕಾರಕ್ಕೆ ಬರುವ ಪ್ರತಿ ನೂರು ರೂಪಾಯಿ ಆದಾಯದಲ್ಲಿ ಬೆಳಗಾವಿ ವಿಭಾಗದಿಂದ 26, ಮೈಸೂರು ವಿಭಾಗದಿಂದ 31, ಬೆಂಗಳೂರು ವಿಭಾಗದಿಂದ 25, ಮತ್ತು ಕಲಬುರಗಿ ವಿಭಾಗದಿಂದ 18 ರೂಪಾಯಿ ಆದಾಯವಿದೆ. ಬೆಂಗಳೂರಿನ ಪ್ರಗತಿಯನ್ನೇ ದಕ್ಷಿಣ ಕರ್ನಾಟಕದ ಪ್ರಗತಿಯೆನ್ನುವ ವಾದ ತಪ್ಪೆನ್ನುವುದನ್ನು ಇಲ್ಲಿ ಕಾಣಬಹುದು. ಕರ್ನಾಟಕದ ಇತರೆ ಭಾಗಗಳಲ್ಲಿನ ಅಭಿವೃದ್ಧಿಗೆ ಬೇಕಿರುವ ಸಂಪನ್ಮೂಲ ಜೋಡಿಸುವಲ್ಲಿ ಬೆಂಗಳೂರು ದೊಡ್ಡ ಪಾತ್ರ ವಹಿಸಿದೆ. ಇಂತಹ ಬೆಂಗಳೂರನ್ನು ಕನ್ನಡಿಗರ ಕೈಯಿಂದಲೇ ಕಿತ್ತು ಕೇಂದ್ರಾಡಳಿತ ಪ್ರದೇಶವಾಗಿಸಬೇಕು ಅನ್ನುವ ಶಕ್ತಿಗಳಿಗೆ ಕರ್ನಾಟಕದ ವಿಭಜನೆ ಒಂದು ದೊಡ್ಡ ವರವಾಗಬಹುದು. ಬೆಂಗಳೂರು ಕನ್ನಡಿಗರೆಲ್ಲರಿಗೂ ಸೇರಿದ್ದು, ಅಲ್ಲಿ ಕರ್ನಾಟಕದ ಎಲ್ಲ ಭಾಗದ ಕನ್ನಡಿಗರೂ ನೆಲೆ ಕಂಡುಕೊಂಡಿದ್ದಾರೆ. ಕನ್ನಡಿಗರು ಒಡೆದು ಹಂಚಿ ಹೋದಷ್ಟು ನಮ್ಮ ಒಡಕಿನ ಲಾಭ ಪರಭಾಷಿಕರಿಗೆ ನೇರವಾಗಿ ಸಿಗಲಿದೆ ಅನ್ನುವ ಅಪಾಯವನ್ನು ದಕ್ಷಿಣ ಕರ್ನಾಟಕದಲ್ಲೂ ಪ್ರತ್ಯೇಕ ರಾಜ್ಯದ ಕನಸು ಕಾಣುತ್ತಿರುವವರು ಅರಿತಿದ್ದಂತಿಲ್ಲ.
- ಏಕೀಕರಣದ ನಂತರ ಇಲ್ಲಿಯವರೆಗೆ ಕಳೆದ 62 ವರ್ಷಗಳಲ್ಲಿ ಕರ್ನಾಟಕದಲ್ಲಿ 20 ಜನರು ಮುಖ್ಯಮಂತ್ರಿಗಳಾಗಿ ಆಳಿದ್ದಾರೆ. ಇದರಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳ ಎಂಟು ಜನರಿದ್ದಾರೆ. ಇವರ ನಡುವೆ ಸುಮಾರು 24 ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವಿತ್ತು. ಇದಲ್ಲದೇ ವಿಧಾನಸಭೆಯಲ್ಲಿ ಅಂದಿಗೂ, ಇಂದಿಗೂ ಅರ್ಧದಷ್ಟು ಶಾಸಕ ಸ್ಥಾನ ಭರ್ತಿಯಾಗುವುದು ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳ ಜನಪ್ರತಿನಿಧಿಗಳಿಂದ. ಬಹುತೇಕ ಬಾರಿ ಈ ಭಾಗಗಳಲ್ಲಿ ಗೆದ್ದ ಪಕ್ಷವೇ ಕರ್ನಾಟಕದ ಅಧಿಕಾರ ಚುಕ್ಕಾಣಿ ಹಿಡಿಯುತ್ತೆ. ಏಕೀಕರಣ ನಂತರದ 15 ವಿಧಾನಸಭೆಯ ಅವಧಿಯಲ್ಲಿ ರಚಿತವಾದ ಬೇರೆ ಬೇರೆ ಸಚಿವ ಸಂಪುಟಗಳಲ್ಲಿ ಶಿಕ್ಷಣ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಗೃಹ, ಸಾರಿಗೆ, ಲೋಕೊಪಯೋಗಿ, ಹಣಕಾಸಿನಂತಹ ಮಹತ್ವದ ಖಾತೆಗಳು ಈ ಭಾಗಗಳ ಜನಪ್ರತಿನಿಧಿಗಳಿಗೆ ಲಭಿಸಿವೆ. ಇಷ್ಟಾಗಿಯೂ ಅಲ್ಲಿ ಅಂದುಕೊಂಡಷ್ಟು ವೇಗದಲ್ಲಿ ಪ್ರಗತಿಯಾಗಿಲ್ಲವೆಂದರೆ ಅದರ ಹೊಣೆಯನ್ನು ಯಾರು ಹೊರಬೇಕು? ಜನಪ್ರತಿನಿಧಿಗಳಿಂದಲೇ ಆಡಳಿತ ವ್ಯವಸ್ಥೆ ರೂಪುಗೊಳ್ಳುವುದಲ್ಲವೇ? ಹೊಸ ರಾಜ್ಯವಾದರೆ ಅದನ್ನು ಆಳುವ ಜನಪ್ರತಿನಿಧಿಗಳು ಹೊಸತಾಗಿ ಹೊರಗಿನಿಂದ ಕರೆತರಲಾದೀತೆ? ಬೆಳಗಾವಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಮೀಸಲಿಟ್ಟ ಸಮಯದಲ್ಲಿ ಅಲ್ಲಿನ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಹೇಗಿತ್ತು ಅನ್ನುವ ಇತಿಹಾಸ ತೆಗೆದು ನೋಡಿದರೆ ಸಮಸ್ಯೆಯ ಮೂಲ ಎಲ್ಲಿದೆ ಅನ್ನುವುದು ಸ್ಪಷ್ಟವಾಗಿ ಕಂಡೀತು.
- ಕರ್ನಾಟಕದೆಲ್ಲೆಡೆಯ ಪ್ರಗತಿಯಲ್ಲಿನ ಕೊರತೆಗಳ ಬಗ್ಗೆ ಅಧ್ಯಯನ ಮಾಡಲು ರಚಿತವಾದ ನಂಜುಂಡಪ್ಪ ವರದಿಯಲ್ಲಿ ಬೆಳಗಾವಿ ವಲಯದ 31, ಕಲಬುರಗಿ ವಲಯದ 28, ಮೈಸೂರು ವಲಯದ 22ಮತ್ತು ಬೆಂಗಳೂರು ವಲಯದ 33 ತಾಲೂಕುಗಳನ್ನು ಹಿಂದುಳಿದಿವೆ ಎಂದು ಗುರುತಿಸಲಾಗಿದೆ. “ಅತಿ ಹಿಂದುಳಿದ” ತಾಲೂಕುಗಳು ಕಲಬುರಗಿ ವಲಯ ಬಿಟ್ಟರೆ ಬೆಂಗಳೂರು ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. “ಹೆಚ್ಚು ಹಿಂದುಳಿದ” ತಾಲೂಕುಗಳು ಬೆಂಗಳೂರು ವಲಯದಲ್ಲೇ ಹೆಚ್ಚಿವೆ ಎಂದೂ ಸಮಿತಿಯ ವರದಿ ತಿಳಿಸಿದೆ. ಬೆಂಗಳೂರು ನಗರದ ಏಳಿಗೆಯನ್ನೇ ದಕ್ಷಿಣ ಕರ್ನಾಟಕದ ಏಳಿಗೆ ಎಂದು ನಂಬಿಸಲು ಯತ್ನಿಸುವವರು ಬೆಂಗಳೂರಿನಿಂದ ಕೂಗಳತೆಯ ದೂರದಲ್ಲಿರುವ ಇರುವ ಕನಕಪುರ ಮತ್ತು ಮಾಗಡಿ ತಾಲೂಕುಗಳು ಅತೀ ಹಿಂದುಳಿದ ತಾಲೂಕಿನ ಪಟ್ಟಿಯಲ್ಲಿದೆ ಅನ್ನುವುದನ್ನು ಗಮನಿಸಿದ್ದಾರೆಯೇ? ಪ್ರಗತಿಯಲ್ಲಿನ ಕೊರತೆ ಕರ್ನಾಟಕದ ಎಲ್ಲ ಭಾಗಗಳಲ್ಲೂ ಹರಡಿಕೊಂಡಿವೆ ಅನ್ನುವುದನ್ನು ನಂಜುಂಡಪ್ಪ ವರದಿ ತಿಳಿಸಿತ್ತು. ಪ್ರತ್ಯೇಕತೆಯೇ ಇದೆಲ್ಲದಕ್ಕೂ ಪರಿಹಾರವಾದರೆ ಕರ್ನಾಟಕವನ್ನು ಎಷ್ಟು ಭಾಗವಾಗಿಸಬೇಕಾಗಬಹುದು?
- ಕರ್ನಾಟಕದ ಎರಡು ದೊಡ್ಡ ಜಾತಿ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರು ಏಕೀಕರಣವಾದ ದಿನದಿಂದಲೂ ಅತೀ ಹೆಚ್ಚಿನ ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಸಂವಿಧಾನ ಕೊಟ್ಟ ಒತ್ತಿನಿಂದಾಗಿ ಇತರೆ ಸಮುದಾಯಗಳಿಗೂ ರಾಜಕೀಯ ಪ್ರತಿನಿಧಿತ್ವ ಸಿಕ್ಕಿದ್ದರೂ ಆಡಳಿತದ ಚುಕ್ಕಾಣಿ ಈ ಎರಡು ಪ್ರಭಾವಿ ಸಮುದಾಯಗಳ ಕೈಯಲ್ಲೇ ಇರುವುದು ಸತ್ಯ. ಈಗ ಕರ್ನಾಟಕವನ್ನು ಒಡೆದು ಎರಡು ಭಾಗ ಮಾಡಿದರೆ ಒಂದು ಭಾಗದಲ್ಲಿ ಲಿಂಗಾಯತರು, ಇನ್ನೊಂದು ಭಾಗದಲ್ಲಿ ಒಕ್ಕಲಿಗರು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವುದರ ಜೊತೆ ಇತರೆ ಸಮುದಾಯಗಳು ಶಾಶ್ವತವಾಗಿ ಆಡಳಿತದ ಚುಕ್ಕಾಣಿ ಹಿಡಿಯುವುದರಿಂದ ವಂಚಿತರಾಗಬಹುದು. ಇದು ಕನ್ನಡಿಗರನ್ನು ಇನ್ನಷ್ಟು ಜಾತಿಯ ಘರ್ಷಣೆಯಲ್ಲಿ ಮುಳುಗಿಸಬಹುದು.
ಮುಂದಿನ ಭಾಗದಲ್ಲಿ ಇನ್ನಷ್ಟು ಅವಲೋಕನ, ವಿಶ್ಲೇಷಣೆ, ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರವನ್ನು ನಿರೀಕ್ಷಿಸಿ.
ಚಿಕ್ಕ ರಾಜ್ಯಗಳು ಆಡಳಿತಕ್ಕೆ ಸುಲಭ ಅನ್ನುವ ವಾದ ಮಾಡುವವರು ಭಾರತದ ಒಕ್ಕೂಟ ವ್ಯವಸ್ಥೆಯನ್ನು, ಅಲ್ಲಿ ರಾಜ್ಯ ಮತ್ತು ಕೇಂದ್ರಗಳ ನಡುವೆ ಮಾಡಲಾಗಿರುವ ಅಧಿಕಾರ ಹಂಚಿಕೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಭಾರತದ ಸಂವಿಧಾನ ರಾಜ್ಯ ಮತ್ತು ಕೇಂದ್ರಗಳ ನಡುವೆ ಅಧಿಕಾರ ಹಂಚಿಕೆಯನ್ನು ಮೂರು ವಿಧದಲ್ಲಿ ಮಾಡಿದೆ. ಕೇಂದ್ರ, ರಾಜ್ಯ ಮತ್ತು ಜಂಟಿ ಪಟ್ಟಿ ಅನ್ನುವ ಮೂರು ಹೆಸರಿನಲ್ಲಿ ಅಧಿಕಾರದ ಹಂಚಿಕೆಯಾಗಿದೆ. ಜಂಟಿ ಪಟ್ಟಿಯಲ್ಲಿರುವ ಎಲ್ಲ ವಿಷಯಗಳ ಬಗ್ಗೆ ಕಾನೂನು ರೂಪಿಸುವ ಅಧಿಕಾರ ರಾಜ್ಯ ಮತ್ತು ಕೇಂದ್ರ ಎರಡಕ್ಕೂ ಇದ್ದರೂ ರಾಜ್ಯ-ಕೇಂದ್ರದ ನಡುವೆ ಭಿನ್ನಾಭಿಪ್ರಾಯ ಬಂದಾಗ ಕೇಂದ್ರದ ಮಾತೇ ಅಂತಿಮ ಎಂದು ಬರೆಯಲಾಗಿದೆ.
ಜೊತೆಯಲ್ಲೇ ಯಾವಾಗ ಬೇಕಿದ್ದರೂ ರಾಜ್ಯ ಪಟ್ಟಿಯಲ್ಲಿರುವ ವಿಷಯವನ್ನು ಕೇಂದ್ರ ತನ್ನ ಹಿಡಿತಕ್ಕೆ ತೆಗೆದುಕೊಂಡು ಜಂಟಿ ಪಟ್ಟಿಗೆ ಸೇರಿಸುವ ಅಧಿಕಾರ ಹೊಂದಿದೆ. ಇದರ ಜೊತೆ ಆರ್ಥಿಕ ಸಂಪನ್ಮೂಲದ ಮೇಲೆ ಬಹುಪಾಲು ಹಿಡಿತ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಇಂತಹದೊಂದು ಅತಿಯಾದ ಕೇಂದ್ರಿಕೃತ ವ್ಯವಸ್ಥೆಯಲ್ಲಿ ಕೇಂದ್ರ ಹೇಳಿದ್ದನ್ನು ಮಾಡುವ, ಒಂದು ರೀತಿಯ ಅತಿರಂಜಿತ ಮುನ್ಸಿಪಾಲಿಟಿ ಮಟ್ಟದಲ್ಲಿ ರಾಜ್ಯಗಳಿವೆ. ಇದರ ಜೊತೆಯಲ್ಲೇ ಜನಸಂಖ್ಯೆಯ ಆಧಾರದ ಮೇಲೆ ಸಂಸತ್ತಿನಲ್ಲಿ ರಾಜಕೀಯ ಪ್ರತಿನಿಧಿತ್ವ ಕಲ್ಪಿಸಿರುವ ಕಾರಣದಿಂದಾಗಿ ದೆಹಲಿಯಲ್ಲಿ ಹಿಂದಿ ಭಾಷಿಕರ ಪ್ರಾಬಲ್ಯವಿದೆ. ಬೇರೆ ಬೇರೆ ಭಾಷಿಕ ಸಮುದಾಯಗಳು ಒಟ್ಟಾಗಿ ಭಾರತವೆನ್ನುವ ಒಕ್ಕೂಟ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಾಗ ಎಲ್ಲ ಪಾಲುದಾರ ಭಾಷಿಕರಿಗೂ ಸಮಾನ ರಾಜಕೀಯ ಪ್ರತಿನಿಧಿತ್ವ ಸಿಗಬೇಕಿತ್ತಲ್ಲವೇ?
ಹಿಂದಿ ಭಾಷಿಕ ಉತ್ತರ ಪ್ರದೇಶಕ್ಕೆ 80 ಸ್ಥಾನಗಳು, ಕನ್ನಡ ಮಾತನಾಡುವ ಕರ್ನಾಟಕಕ್ಕೆ 28 ಸ್ಥಾನಗಳು ಸಂಸತ್ತಿನಲ್ಲಿ ಇರುವುದು ಬಹಳ ಸಹಜವಾಗಿಯೇ ಹಿಂದಿ ಭಾಷಿಕರ ಪ್ರಾಬಲ್ಯಕ್ಕೆ ಅವಕಾಶ ಕಲ್ಪಿಸಿದೆ. ಇನ್ನೊಂದಡೆ ಒಂದೋ ಎರಡೋ ಸಂಸತ್ ಸ್ಥಾನವಿರುವ ಮಣಿಪುರ, ಮಿಜೋರಾಂ, ತ್ರಿಪುರ ತರದ ರಾಜ್ಯಗಳು ದೆಹಲಿಯಲ್ಲಿ ಇದ್ದು ಇಲ್ಲದಂತಿವೆ. ಇಂತಹದೊಂದು ಅಸಮಾನ ನೆಲೆಯ ಪ್ರತಿನಿಧಿತ್ವ ಇರುವ ಸಂಸತ್ತಿನಲ್ಲಿ ಒಂದು ರಾಜ್ಯ ಎಷ್ಟು ದೊಡ್ಡದಾಗಿರುತ್ತೋ ಅದರ ದನಿಯೂ ಸಂಸತ್ತಿನಲ್ಲಿ ಅಷ್ಟೇ ದೊಡ್ಡದಾಗಿರುತ್ತೆ. ಈಗ ಕರ್ನಾಟಕ ಒಡೆದು ಮೂರ್ನಾಲ್ಕು ಭಾಗವಾದರೆ ಐದೋ ಎಂಟೋ ಸಂಸತ್ ಸದಸ್ಯರ ಈ ಹೊಸ ರಾಜ್ಯಗಳಿಗೆ ಎಷ್ಟು ಬೆಲೆ ದೊರೆತೀತು?
ತೆಲಂಗಾಣವಾದ ನಂತರ ಎರಡೂ ತೆಲುಗು ರಾಜ್ಯಗಳು ದೆಹಲಿಯಲ್ಲಿ ಇದ್ದ ಎಲ್ಲ ಪ್ರಭಾವವನ್ನು ಕಳೆದುಕೊಂಡು ಅಪ್ರಸ್ತುತಗೊಂಡಿರುವುದು ಕಾಣಿಸುತ್ತಿಲ್ಲವೇ? ಈ ಆಯಾಮ ಪ್ರತ್ಯೇಕತೆಯ ಚರ್ಚೆಯಲ್ಲೆಲ್ಲೂ ಕರ್ನಾಟಕದಲ್ಲಿ ಕಾಣಬರುತ್ತಿಲ್ಲ ಅಂದರೆ ತಪ್ಪಾಗದು. ಇದಲ್ಲದೇ ಚಿಕ್ಕ ರಾಜ್ಯವಾದಾಕ್ಷಣ ಆಡಳಿತ ಸುಲಭ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವುದು ಸುಲಭ ಎಂದು ಬಿಂಬಿಸುವವರು ಭಾರತದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ಚಿಕ್ಕ ರಾಜ್ಯಗಳ ಸ್ಥಿತಿಯನ್ನು ಅರಿಯಬೇಕಿದೆ. 2000ದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್, ಛತ್ತೀಸಗಢ್, ಉತ್ತರಾಖಂಡ್ ಈ ಮೂರೂ ರಾಜ್ಯಗಳು ಆಡಳಿತಕ್ಕೆ ಕೇಂದ್ರದ ಹಣ ಸಹಾಯವನ್ನೇ ನೆಚ್ಚಿಕೊಂಡಿವೆ. 2006-13ರ ನಡುವೆ ಛತ್ತೀಸಗಢ್ ರಾಜ್ಯದ ಆದಾಯದ ಪ್ರತಿ ನೂರು ರೂಪಾಯಿಯಲ್ಲಿ ಕೇಂದ್ರ ಕೊಟ್ಟ ಪಾಲು 44.07 ರೂಪಾಯಿಗಳಾಗಿತ್ತು. ಜಾರ್ಖಂಡ್ ಮತ್ತು ಉತ್ತರಾಖಂಡ್ ರಾಜ್ಯದಲ್ಲಿ ಇದು ಕ್ರಮವಾಗಿ 56.74 ರೂಪಾಯಿಗಳು ಮತ್ತು 55.89 ರೂಪಾಯಿಗಳಾಗಿತ್ತು. ಚಿಕ್ಕ ರಾಜ್ಯವಾದಷ್ಟು ದೆಹಲಿಯ ಹಿಡಿತದಲ್ಲಿ ಸರ್ಕಾರ ನಡೆಸಬೇಕಾಗುವುದು ಅನ್ನುವುದನ್ನು ಇವು ಸಾಬೀತು ಮಾಡಿವೆ.
ಅಲ್ಲದೇ ಇದೇ ಅವಧಿಯಲ್ಲಿ ಛತ್ತೀಸಗಢ್ ರಾಜ್ಯದಲ್ಲಿ ನಕ್ಸಲ್ ಹಾವಳಿ ತೀವ್ರ ಸ್ವರೂಪದಲ್ಲಿ ಹೆಚ್ಚಾಗಿ, ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರದ ಅಸ್ತಿತ್ವವೇ ಇಲ್ಲದಿರುವ ಬೆಳವಣಿಗೆಯುಂಟಾಗಿದ್ದರೆ, ಜಾರ್ಖಂಡ್ ರಾಜ್ಯದಲ್ಲಿ ನಕ್ಸಲ್ ಹಾವಳಿಯ ಜೊತೆಗೆ ತೀವ್ರ ಸ್ವರೂಪದ ರಾಜಕೀಯ ಅಸ್ಥಿರತೆ ಉಂಟಾಗಿ 14 ವರ್ಷಗಳಲ್ಲಿ 10 ಬಾರಿ ಮುಖ್ಯಮಂತ್ರಿ ಬದಲಾವಣೆ ಮತ್ತು ಮೂರು ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು ಅನ್ನುವುದನ್ನು ಇಲ್ಲಿ ಗಮನಿಸಬೇಕಿದೆ.
ಕರ್ನಾಟಕ ಒಡೆದು ಬೇರಾದರೆ ದೆಹಲಿಯಲ್ಲಿ ಎದುರಾಗುವ ಸಮಸ್ಯೆ ಒಂದು ತೆರನಾದರೆ ಕರ್ನಾಟಕದ ಒಳಗೇ ಏರ್ಪಡುವ ಸಮಸ್ಯೆಗಳು ಹಲವಿವೆ. ಈಗಾಗಲೇ ಕರಾವಳಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಪಕ್ಕದ ರಾಜ್ಯದವರ ವಿಪರೀತ ವಲಸೆಯಿಂದ ಅಲ್ಲಿನ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲಿನ ತುಳು, ಕೊಡವ ಭಾಷೆ ಮತ್ತು ಸಂಪ್ರದಾಯಗಳು ಈ ವಲಸೆಯ ಒತ್ತಡವನ್ನು ಅನುಭವಿಸುತ್ತಿವೆ. ಇವು ಚಿಕ್ಕ ರಾಜ್ಯಗಳಾದರೆ ಅಲ್ಲಿನ ಜನಲಕ್ಷಣದ ಚಹರೆಯೇ ಬದಲಾಗಿ ಹೋಗಬಹುದು ಮತ್ತು ಇದರ ಬೆನ್ನಲ್ಲೇ ಬೆಳಗಾವಿಯಲ್ಲಿರುವಂತೆ ಅಲ್ಲಿ ಭಾಷಾ ಅಲ್ಪಸಂಖ್ಯಾತರ ಮತಬ್ಯಾಂಕ್ ರಾಜಕೀಯ ಶುರುವಾಗಬಹುದು.
ಇನ್ನೊಂದೆಡೆ ಕಿತ್ತೂರು ಕರ್ನಾಟಕದ ಭಾಗದಲ್ಲಿ ಇಂದು ಎಮ್.ಈ.ಎಸ್ ತರದ ಮರಾಠಿ ಸಂಘಟನೆಗಳ ಪುಂಡಾಟಿಕೆ ಬೆಳಗಾವಿಯ ಗಡಿ ಭಾಗಕ್ಕೆ ಸೀಮಿತವಿದೆ. ಆದರೆ ನಾಳೆ ಪ್ರತ್ಯೇಕ ರಾಜ್ಯವಾದರೆ 50-60 ಶಾಸಕರನ್ನು ಹೊಂದುವ ಈ ರಾಜ್ಯದಲ್ಲಿ ಆರು ಜನ ಎಮ್.ಈ.ಎಸ್ ಶಾಸಕರು ಗೆದ್ದರೂ ಸಾಕು, ಅಲ್ಲಿ ಮರಾಠಿಗರ ಹಂಗಿನಲ್ಲೇ ಸರ್ಕಾರ ನಡೆಸಬೇಕಾದ ಪರಿಸ್ಥಿತಿ ಬಂದೊದಗಬಹುದು. ಹಿಂದೆ ಮುಂಬೈ ಪ್ರೆಸಿಡೆನ್ಸಿ ಕಾಲದಲ್ಲಿ ಮುಧೋಳ, ಜಮಖಂಡಿ, ಸವಣೂರು, ರಾಮದುರ್ಗ ಸೇರಿದಂತೆ ಹಲವು ಸಂಸ್ಥಾನಗಳಲ್ಲಿ ಬಹುಸಂಖ್ಯಾತ ಕನ್ನಡಿಗರನ್ನು ಮರಾಠಿಗರು ಆಳುತ್ತಿದ್ದ ದಿನಗಳು ಹೊಸ ಸ್ವರೂಪದಲ್ಲಿ ಇಲ್ಲಿ ಮರುಕಳಿಸಬಹುದು.
ತೆಲಂಗಾಣದ ನಂತರ ತೆಲುಗರ ಪಾಡು:
ತೆಲುಗರ ನಡುವಿನ ಭಿನ್ನಾಭಿಪ್ರಾಯಗಳನ್ನು ತಮ್ಮಲ್ಲೇ ಬಗೆಹರಿಸಿಕೊಳ್ಳದೇ ಹೋದ ಪರಿಣಾಮವಾಗಿ ಆಂಧ್ರಪ್ರದೇಶ ವಿಭಜನೆಯಾಯಿತು. ಈ ವಿಭಜನೆಯ ಕೊನೆಯ ಹಂತದಲ್ಲಿ ಸಂಸತ್ತಿನಲ್ಲಿ ನಡೆದ ವಿದ್ಯಮಾನಗಳು ರಾಜಕೀಯ ಲಾಭಕ್ಕಾಗಿ ದೆಹಲಿಯ ಪಕ್ಷಗಳು ಯಾವ ಹಂತಕ್ಕೂ ಇಳಿಯಬಲ್ಲವು ಅನ್ನುವುದನ್ನು ತೋರಿಸಿಕೊಟ್ಟಿತ್ತು. ದೆಹಲಿಯ ಪಕ್ಷಗಳಿಗೆ ಆಂಧ್ರದ ವಿಭಜನೆ ತರುವ ರಾಜಕೀಯ ಲಾಭದ ಲೆಕ್ಕಾಚಾರವೇ ಮುಖ್ಯವಾಗಿತ್ತು. ಅಂತೆಯೇ ತೆಲುಗರ ವಿಧಾನಸಭೆಯ ನಿರ್ಣಯವನ್ನು ಬದಿಗೊತ್ತಿ ಕೇಕ್ ಕತ್ತರಿಸುವಂತೆ ಆಂಧ್ರಪ್ರದೇಶದ ವಿಭಜನೆಗೆ ಸಂಸತ್ತು ಮುದ್ರೆಯೊತ್ತಿತ್ತು. ಸಂಸತ್ತಿನಲ್ಲಿ ಈ ಬಗ್ಗೆ ಪ್ರತಿಭಟಿಸುತ್ತಿದ್ದ ಸಂಸದರನ್ನೆಲ್ಲ ಹೊರ ಹಾಕಿ, ಕಲಾಪದ ಪ್ರಸಾರ ಮಾಡುತ್ತಿದ್ದ ವಿಡಿಯೋ ಕ್ಯಾಮರಾಗಳನ್ನು ಆರಿಸಿ ತೆಲಂಗಾಣ ರಾಜ್ಯ ರಚನೆ ಮಸೂದೆ ಪಾಸಾಯಿತು.
ಅವಸರದ ರಾಜಕೀಯ ಲೆಕ್ಕಾಚಾರದಲ್ಲಿ ಆದ ಈ ವಿಭಜನೆ ಇಂದು ಎರಡೂ ರಾಜ್ಯದ ತೆಲುಗರ ನಡುವಿನ ಒಗ್ಗಟ್ಟಿಗೆ ತೀವ್ರ ಏಟು ನೀಡಿದೆ. ತೆಲಂಗಾಣ ಅಸ್ತಿತ್ವಕ್ಕೆ ಬಂದ ನಾಲ್ಕು ವರ್ಷದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಎದ್ದಿರುವ ವಿವಾದಗಳು, ದಿನ ನಿತ್ಯದ ಜಗಳಗಳ ಪಟ್ಟಿ ಮಾಡುತ್ತ ಹೋದರೆ ಹನುಮಂತನ ಬಾಲವೇ ಆದೀತು. ಹೊಸತಾಗಿ ರಾಜ್ಯಗಳಾದಾಗ ಕೆಲ ಕಾಲ ಇದು ಸಹಜ ಅನ್ನುವ ಅನಿಸಿಕೆಗಳು ಇರಬಹುದಾದರೂ ದ್ವೇಷ ಕಾರುತ್ತಲೇ ಹುಟ್ಟಿಕೊಂಡ ಎರಡು ರಾಜ್ಯಗಳು ಪ್ರತಿಯೊಂದು ವಿಷಯದಲ್ಲೂ ಕಚ್ಚಾಡುವ ಮೂಲಕ ತೆಲುಗರ ಒಗ್ಗಟ್ಟು ಮತ್ತು ತೆಲುಗರ ಅಸ್ಮಿತೆಗೆ ಮರ್ಮಾಘಾತವನ್ನೇ ನೀಡಿವೆ. ತೆಲುಗರೇ ಕೂತು ಬಗೆಹರಿಸಿಕೊಳ್ಳಬಹುದಾಗಿದ್ದ ವಿಷಯಗಳೆಲ್ಲದರಲ್ಲೂ ಈಗ ಮೂರನೆಯವರ ಪ್ರವೇಶವಾಗುತ್ತಿದೆ.
ತೆಲುಗರ ನಡುವಿನ ವಿದ್ಯುತ್, ನೀರಾವರಿ, ಗಡಿ, ಆದಾಯ ಹಂಚಿಕೆ, ಸಿಬ್ಬಂದಿ ಹಂಚಿಕೆ ಹೀಗೆ ಹಲವು ವಿಷಯಗಳಲ್ಲಿ ದಿನವೂ ಜಗಳ ನಡೆಯುತ್ತಿದ್ದು, ತೆಲುಗರನ್ನು ಒಬ್ಬರಿಗೊಬ್ಬರ ಶತ್ರುಗಳು ಎಂಬಂತೆ ಬಿಂಬಿಸುವ ಕೆಲಸವಾಗುತ್ತಿದೆ. ಅಲ್ಲದೇ ಎರಡೂ ರಾಜ್ಯಗಳ ನಡುವಿನ ಎಲ್ಲ ವಿವಾದಗಳನ್ನು ಬಗೆಹರಿಸುವ ಪಾತ್ರ ತಾನೇ ತಾನಾಗಿ ಕೇಂದ್ರದ ಕೈಗೆ ಜಾರಿದ್ದು, ತೆಲುಗರ ಭವಿಷ್ಯವನ್ನು ಮೂರನೆಯವರು ನಿರ್ಧರಿಸುವ ರೀತಿಯ ಸ್ಥಿತಿ ಏರ್ಪಟ್ಟಿದೆ. ಹತ್ತು ಕೋಟಿ ತೆಲುಗರು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ತಮ್ಮದೇ ಬಲ ಹೊಂದಿದ್ದರು.
ಹಿಂದಿನ ಕೇಂದ್ರದ ಸಮ್ಮಿಶ್ರ ಸರ್ಕಾರಗಳಲ್ಲಿ ನಿರಂತರವಾಗಿ ದೆಹಲಿಯಲ್ಲಿ ತೆಲುಗರ ಕೆಲಸಗಳಾಗುತ್ತಿದ್ದವು. ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರದಲ್ಲಿ ಕಿಂಗ್ ಮೇಕರ್ ಆಗಿ ವಿಜೃಂಭಿಸಿದ್ದ ಚಂದ್ರಬಾಬುನಾಯ್ಡು ಈಗ ಹೊಸ ರಾಜ್ಯ ಕಟ್ಟಲು ಪ್ಯಾಕೇಜ್ ಕೊಡಿ, ವಿಶೇಷ ಸ್ಥಾನಮಾನ ಕೊಡಿ, ಸಂಬಳ ಕೊಡಲು ಹಣವಿಲ್ಲ ಎಂದು ಕೇಂದ್ರದ ಮುಂದೆ ಅಂಗಲಾಚುತ್ತಲೇ ತಮ್ಮ ಅಧಿಕಾರದ ಅವಧಿ ಮುಗಿಸುವ ಹಂತಕ್ಕೆ ಬಂದಿದ್ದಾರೆ. ಒಂದೆಡೆ ರಾಜಕೀಯ ಅಧಿಕಾರ ಕಳೆದುಕೊಂಡು, ಇನ್ನೊಂದೆಡೆ ಆರ್ಥಿಕ ಸ್ವಾವಲಂಬನೆ ಕಳೆದುಕೊಂಡಿರುವ ತೆಲುಗರು ಇಂದು ಭಾರತ ಒಕ್ಕೂಟದಲ್ಲಿ ಅತ್ಯಂತ ಬಲಹೀನರಾಗಿ ಕಾಣುತ್ತಿದ್ದಾರೆ.
ಇದೆಲ್ಲವೂ ನಮ್ಮಲ್ಲಿನ ವ್ಯತ್ಯಾಸಗಳನ್ನು ನಾವೇ ಬಗೆಹರಿಸಿಕೊಳ್ಳಬೇಕೇ ಹೊರತು ಆತುರಕ್ಕೆ ಬಿದ್ದು ನಾಡೊಡೆಯುವ ಹಂತಕ್ಕೆ ಹೋದರೆ ತೆಲುಗರ ಸ್ಥಿತಿಯೇ ನಮಗೂ ಬಂದೊದಗಬಹುದು ಅನ್ನುವ ನೀತಿಪಾಠ ಹೇಳುತ್ತಿವೆ.
ಕರ್ನಾಟಕದ ಯಾವುದೇ ಭಾಗದಲ್ಲಿ ಪ್ರಗತಿಯ ಕೊರತೆ ಇದೆಯೆಂದರೂ ಅದನ್ನು ಒಪ್ಪಿಕೊಳ್ಳೊಣ. ಪ್ರಗತಿಯ ಕೊರತೆಯೇ ಆಗಿಲ್ಲ ಅನ್ನುವ ಆತ್ಮವಂಚನೆಯ ವಾದ ಬೇಡ. ಆದರೆ ಈ ಕೊರತೆಗಳನ್ನು ತುಂಬಿಕೊಳ್ಳುವಲ್ಲಿ ಪ್ರತ್ಯೇಕತೆ ಹೇಗೆ ಪರಿಹಾರ ಅನ್ನುವ ಪ್ರಶ್ನೆಯನ್ನು ಒಂದಲ್ಲ ಹತ್ತು ಬಾರಿ ಎಲ್ಲ ಕನ್ನಡಿಗರು ಯೋಚಿಸಬೇಕಿದೆ. ಕುಂಬಾರನಿಗೆ ವರುಶ, ದೊಣ್ಣೆಗೆ ನಿಮಿಷ ಎಂಬಂತೆ ಕಟ್ಟುವುದು ಕಷ್ಟದ ಕೆಲಸ, ಆದರೆ ಒಡೆಯುವುದು ನಿಮಿಷದ ಕೆಲಸ. ಹೊಯ್ಸಳರು ಮತ್ತು ಸೇವುಣರ ನಡುವಿನ ಯುದ್ಧದಲ್ಲಿ ಒಡೆದು ಹಂಚಿ ಹೋಗಿದ್ದ ಕನ್ನಡಿಗರು ಮತ್ತೆ ಒಂದಾಗಲು 750 ವರ್ಷಗಳ ಕಾಲ ಕಾಯಬೇಕಾಯಿತು.
ಈ ಒಗ್ಗಟ್ಟನ್ನು ಸಾಧಿಸಲು ನೂರಾರು ಕನ್ನಡಿಗರು ತಮ್ಮ ಜೀವವನ್ನೇ ತೇಯ್ದಿದ್ದಾರೆ. ಹೀಗಾಗಿ ಕರ್ನಾಟಕವನ್ನು ಒಂದಾಗಿರಿಸಿಕೊಂಡೇ ನಮ್ಮ ನಡುವಿನ ವ್ಯತ್ಯಾಸಗಳನ್ನು ನಾವೇ ಬಗೆಹರಿಸಿಕೊಳ್ಳುವ ಜಾಣ್ಮೆ ಕನ್ನಡಿಗರು ಒಂದು ನುಡಿ ಸಮುದಾಯವಾಗಿ ತೋರಬೇಕಿದೆ. ಜಾಗತೀಕರಣದ ಈ ದಿನದಲ್ಲಿ ಜ್ಞಾನಾಧಾರಿತ ಈ ಪ್ರಪಂಚದಲ್ಲಿ ಮುಂದುವರೆದ ನಾಡುಗಳೆಲ್ಲ ತಮ್ಮ ತಮ್ಮ ನುಡಿಯಲ್ಲೇ ತಮ್ಮೆಲ್ಲ ಕಲಿಕೆ, ದುಡಿಮೆ ಮತ್ತು ರಾಜಕೀಯದ ವ್ಯವಸ್ಥೆಗಳನ್ನು ಕಟ್ಟಿಕೊಂಡು ಮುನ್ನಡೆಯುತ್ತಿವೆ. ಕನ್ನಡ ನಾಡು ಇಂದಲ್ಲ ಇನ್ನೊಂದು ಇಪ್ಪತ್ತೈದು ವರ್ಷಕ್ಕಾದರೂ ಅಂತಹದೊಂದು ಹಂತ ತಲುಪಬೇಕೆಂದರೆ ಕನ್ನಡಿಗರ ನಡುವೆ ಒಗ್ಗಟ್ಟು ಇರುವುದು ಅತೀ ಮುಖ್ಯ. ಪ್ರತ್ಯೇಕತಾವಾದಿಗಳು ಇದನ್ನೆಲ್ಲ ಅರಿಯಲಿ.