ಮುಧೋಳ : ಆಗಸ್ಟ್ 21ರಂದು ಸಂಪೂರ್ಣ ಸೂರ್ಯ ಗ್ರಹಣ. 38 ವರ್ಷಗಳ ಬಳಿಕ ಅಂದ್ರೆ 1979ರ ಬಳಿಕ ಸಂಭವಿಸುತ್ತಿರುವ ಮೊದಲ ಅತೀ ದೊಡ್ಡ ಸೂರ್ಯ ಗ್ರಹಣ ಇದಾಗಿದ್ದು ಅಮೆರಿಕಾ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಮಾತ್ರ ಇದರ ದರ್ಶನ ಆಗಲಿದೆ.
ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05 ಗಂಟೆಗೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸೂರ್ಯಗ್ರಹಣ ಸಂಭವಿಸಿದಾಗ ಭಾರತದಲ್ಲಿ ರಾತ್ರಿ ಆಗಿರುತ್ತದೆ. ಹೀಗಾಗಿ ಭಾರತದಲ್ಲಿ ಇದರ ಪರಿಣಾಮವಿರಲ್ಲ.
ಪೂರ್ಣ ಗ್ರಹಣದ ವೇಳೆ ಗ್ರಹಣ ಕಾಣಿಸುವ ದೇಶದ ಬಹುತೇಕ ಭಾಗಗಳಲ್ಲಿ ಕತ್ತಲು ಆವರಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವ ಮೂಲಕ ಭೂಮಿಯ ಮೇಲೆ ಚಂದ್ರನ ನೆರಳು ಆವರಿಸುವ ಈ ವಿದ್ಯಮಾನವು ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ. 2 ನಿಮಿಷ 40 ಸೆಕೆಂಡ್‍ಗಳ ಕಾಲ ಸೂರ್ಯನನ್ನು ಚಂದ್ರ, ಭೂಮಿ ಸಂಪೂರ್ಣವಾಗಿ ಮರೆ ಮಾಡಲಿದೆ. ಆಫ್ರಿಕಾ ಮತ್ತು ಯೂರೋಪ್‍ನಿಂದಲೂ ಪಾರ್ಶ್ವ ಗ್ರಹಣ ದರ್ಶನವಾಗಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.
ಈ ಖಗ್ರಾಸ ಸೂರ್ಯಗ್ರಹಣವನ್ನು ಬರೀಗಣ್ಣಿನಿಂದ ನೋಡಬೇಡಿ. ಯಾಕೆಂದರೆ ಇದರಿಂದ ಕಣ್ಣಿನ ರೆಟಿನಾ (ಅಕ್ಷಿಪಟಲ) ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಉಂಟಾಗಬಹುದು ಎಂದು ಪರಿಣತ ತಜ್ಞರು ಎಚ್ಚರಿಕೆ ನೀಡಿದ್ದಾರೆ.