ಬಾಗಲಕೋಟೆ: ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಆಗಸ್ಟ್ 2ರಂದು ಕರೆಯಲಾಗಿದ್ದ ಬಂದ್ ಕರೆಯನ್ನು ಉತ್ತರ ಕರ್ನಾಟಕ ಹೋರಾಟ ಸಮಿತಿ ಹಿಂದಕ್ಕೆ ಪಡೆದಿದೆ.
ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರ ಕೃಷ್ಣೆಯ ನಾಡಿನ ಜನರ ಮೇಲೆ ಯಾವಾಗಲೂ ಮಲತಾಯಿ ಧೋರಣೆಯನ್ನು ತಾಳುತ್ತಾ ಬರುತ್ತಿದೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಬಂದ್ ಕರೆ ನೀಡಲಾಗಿತ್ತು.
ಉತ್ತರ ಕರ್ನಾಟಕ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಈ ಭಾಗದ ಜನರ ಬೇಡಿಕೆಗಳಿಗೆ ಸ್ಪಂದಿಸುವೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಎಲ್ಲಾ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ಗುರುವಾರ ನೀಡಿದ್ದ ಬಂದ್ ಕರೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಎ.ಎ.ದಾಂಡಿಯಾ 'ಪ್ರಜಾವಾಣಿ'ಗೆ ತಿಳಿಸಿದರು.
ಮೊದಲು ಕರೆ ನೀಡಿದ್ದಂತೆ ಜಿಲ್ಲೆಯಾದ್ಯಂತ ಬಂದ್ ಸೇರಿದಂತೆ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.