ಸ್ವಾತಂತ್ರ್ಯಕ್ಕೆ ನಮ್ಮ ತಾಲೂಕಿನ ಹಳ್ಳಿಯ ಕೊಡುಗೆ

ಸಾವಿರಾರು ದೇಶಭಕ್ತರ ಬಲಿದಾನ, ತ್ಯಾಗ, ಅಪ್ರತಿಮ ಶೌರ್ಯದ ಫಲವಾಗಿ ಕೊನೆಗೂ ಮೂನ್ನುರು ವರ್ಷಷಗಳ ಬ್ರೀಟಿಷರ ಗುಲಾಮಗಿರಿಯಿಂದ ನಮಗೆ ಮುಕ್ತಿಸಿಕ್ಕಿತು. ಸ್ವಾತಂತ್ರ್ಯ ಹೋರಾಟವೆಂದ ತಕ್ಷಣ ನಮಗೆ ನೆನಪಿಗೆ ಬರುವುದು 1857 ರ ಸಿಪಾಯಿ ದಂಗೆ. ಭಾರತದ ಇತಿಹಾಸದಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟವೆಂದೆ ಬಿಂಬಿತವಾದ ಈ ದಂಗೆಯು ಸೂರ್ಯಮುಳುಗದ ಸಾಮ್ರಾಜ್ಯವೆಂದು ಬೀಗುತ್ತಿದ್ದ ಬ್ರಿಟೀಷರನ್ನು ನಡುಗಿಸಿದ್ದು ಸುಳ್ಳಲ್ಲ. ಮಂಗಲ್ ಪಾಂಡೆ ಹೊತ್ತಿಸಿದ ಆ ಕಿಡಿಯು ಇಡೀ ಉತ್ತರಭಾರತದಲ್ಲಿ ಮಹಾಜ್ವಾಲೆಯಾಗಿ ಹಬ್ಬಿ ಅಷ್ಟೇ ಬೇಗ ನಂದಿಹೋಯಿತು.ಸಿಪಾಯಿ ದಂಗೆಯ ನಂತರ ಎಚ್ಚೆತ್ತುಕೊಂಡ ಬ್ರಿಟೀಷರು ಭಾರತೀಯರನ್ನು ನಿರಾಯುಧರನ್ನಾಗಿ ಮಾಡಲು ಇಡೀ ದೇಶದಾದ್ಯಂತ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯನ್ನು ಜಾರಿಗೆ ತರುತ್ತದೆ. ಈ ಕಾಯಿದೆಯ ಪ್ರಕಾರ ಭಾರತೀಯರು ತಮ್ಮಲ್ಲಿರುವ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಬ್ರೀಟಿಷರಿಗೆ ಹಿಂದುರುಗಿಸಬೇಕಾಗಿತ್ತು.ಇದರ ವಿರುದ್ಧ ಇಡೀ ದೇಶದಾದ್ಯಂತ ಅನೇಕ ಹೋರಾಟಗಳು, ದಂಗೆಗಳಾದವು. ಅವುಗಳಲ್ಲಿ ಅತ್ಯಂತ ಗಮನಾರ್ಹವಾದುದು ಹಲಗಲಿ ಬೇಡರ ದಂಗೆ..

ಕೆಚ್ಚೆದೆಯ ಕಲಿಗಳು…

ಹಲಗಲಿ ಈಗಿನ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಗುಡ್ಡದ ಓರೆಯಲ್ಲಿರುವ ಸಣ್ಣಗ್ರಾಮ.ಈ ಹಲಗಲಿ ಗ್ರಾಮದಲ್ಲಿ ಬೇಟೆಯನ್ನೆ ತಮ್ಮ ಕಸುಬಾಗಿ ಜೀವನ ಸಾಗಿಸುತ್ತಿದ್ದವರು ಬೇಡರು.ಜಗತ್ತಿನ ಅರಿವಿಲ್ಲದೇ ತಮ್ಮ ಪಾಡಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಬೇಡರ ಬದುಕಿನಲ್ಲಿ ಬಿರುಗಾಳಿಯಾಗಿ ಬಂದದ್ದು ಈ ಶಸ್ತ್ರಾಸ್ತ್ರ ನಿಷೇಧ ಕಾಯ್ದೆ.ಹಾಗೆ ನೋಡಿದರೆ ಈ ಬೇಡರು ಕೇವಲ ಬೇಟೆಯ ಉದ್ದೇಶಕ್ಕಾಗಿಯೇ ಆಯುಧಗಳನ್ನು ಹೊಂದಿದ್ದರೆ ಹೊರತು ಬ್ರಿಟೀಷರ ವಿರುದ್ಧ ಹೋರಾಡಲು ಅಲ್ಲ. ಕಂಪನಿ ಸರಕಾರದ ಕಾಯ್ದೆಯು ಅವರ ಜೀವನೋಪಾಯಕ್ಕೆ ಸಂಚಕಾರ ತಂದಿತ್ತು. ಈ ದಬ್ಬಾಳಿಕೆಯನ್ನು ಸಹಜವಾಗಿ ಅವರು ವಿರೋಧಿಸಿದರು.ಈ ನಡುವೆ ಕಂಪನಿ ಸರಕಾರ ಮತ್ತು ಹಲಗಲಿಯ ಹೋರಾಟಗಾರರ ನಡುವೆ ಮಧ್ಯಸ್ಥಿಕೆಗಾರನಾಗಿ ಕಣದರಗಿಯ ಕೃಷ್ಣರಾವ್ ಎಂಬ ಅಧಿಕಾರಿ ಸಂಧಾನಕ್ಕೆ ಪ್ರಯತ್ನಿಸಿದರೂ ಅವನ ಸಂಧಾನ ಫಲಕಾರಿಯಾಗಲಿಲ್ಲ. ಜೀವ ಹೋದರೂ ಸರಿ, ಆದರೆ ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಯಾವುದೇ ಕಾರಣಕ್ಕೂ ಹಿಂದುರುಗಿಸುವುದಿಲ್ಲ ಎಂದು ಬೇಡರು ಎಚ್ಚರಿಸಿದರು.ಅವರಿಗೆ ಮರಾಠಾ ಸೈನಿಕ ಬಾಬಾಜಿ ನಿಂಬಾಳಕರ ಎಂಬುವವನು ಬ್ರಿಟೀಷರ ವಿರುದ್ಧ ಹೋರಾಡುವಂತೆ ಪ್ರೋತ್ಸಾಹಿಸಿದ.ತಾವು ಎದುರಿಸುತ್ತಿರುವವರು ಎಷ್ಟು ಶಕ್ತಿಶಾಲಿಗಳಾಗಿದ್ದಾರೆ ಎಂಬುದರ ಅರಿವಿಲ್ಲದ ಮುಗ್ಧ ಬೇಡರು ಬ್ರೀಟಿಷ್ ಸರಕಾರದ ದಬ್ಬಾಳಿಕೆ ದಮನಕಾರಿ ಪ್ರವೃತ್ತಿಗೆ  ಮುಕ್ತಾಯ ಹಾಡಲು ತಮಗರಿವಿಲ್ಲದೇ ಬಲಾಢ್ಯ ಬ್ರೀಟಿಷ್ ಸಾಮ್ರಾಜ್ಯದ ಜೇನುಗೂಡಿಗೆ ಕಲ್ಲೆಸೆದು ಕೆಣಕಿದರು.ನಾವು ಭಾರತದ ಸ್ವಾತಂತ್ರ್ಯ ಚಳುವಳಿಯ ಅವಿಭಾಜ್ಯ ಅಂಗವಾಗುತ್ತಿದ್ದೇವೆ ಎಂಬ ಪರಿಕಲ್ಪನೆಯೇ ಇಲ್ಲದೇ ಕೆಚ್ಚೆದೆಯ ಕಲಿಗಳ ಈ ಬಂಡಾಯ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ತಮ್ಮ ಕಾಯ್ದೆಯನ್ನು ಉಲ್ಲಂಘಿಸಿದ ಹಲಗಲಿ ಬೇಡರ ಮೇಲೆ ಕ್ರಮ ತೆಗೆದುಕೊಳ್ಳಲು ಬ್ರೀಟಿಷರು ಮುಂದಾಗುತ್ತಾರೆ. ಅದರ ಪರಿಣಾಮ ಮಾತ್ರ ಘೋರ.ಮುಂದಿನದು ಮಾತ್ರ ರಕ್ತರಂಜಿತ ಅಧ್ಯಾಯ.




ಹರಿಯಿತು ರಕ್ತ….

         ಬ್ರಿಟೀಷರ ವಿರುದ್ಧ ಹೋರಾಡುವುದಕ್ಕೆಂದು ಬೇಡರು ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ.ಆದರೆ ಬ್ರೀಟಿಷರು ಮೊದಲೇ ಅಧಿಕಾರದ ಅಮಲಿನ ಅಲೆಯ ಮೇಲೆ ತೇಲುತ್ತಿದ್ದರು.ಅವರು ಹಲಗಲಿಯ ಬೇಡರ ಸಹಜವಾದ ಆಸೆ ಮತ್ತು ಅಭಿಮಾನವನ್ನು ಅಪಾರ್ಥ ಮಾಡಿಕೊಂಡರು.ಬೇಡರ ಈ ನಿರಾಕರಣೆಗೆ ಕಂಪನಿ ಸರಕಾರ 1857ರ ನವೆಂಬರ್ 26ರಂದು ಮಧ್ಯರಾತ್ರಿ ಅಶ್ವಾರೂಢ ಸೈನಿಕರೊಂದಿಗೆ ಹಲಗಲಿಯನ್ನು ಮುತ್ತಿದ್ದರು.ದಾಳಿಗೆ ಹೆದರದ ಬೇಡರು ಅವರ ಮೇಲೆ ಪ್ರತಿದಾಳಿ ಮಾಡಿದರು.ದಾಳಿಯ ನೇತೃತ್ವವನ್ನು ಪೂಜೇರಿ ಹನುಮ, ಬ್ಯಾಡರ ಬಾಲ ಹಾಗೂ ಜಡಗರಾಮ ಎಂಬ ಬೇಡರು ವಹಿಸಿಕೊಂಡರು. ರಾತ್ರಿಯ ಹೊತ್ತು ಭೀಕರ ಹೋರಾಟವೇ ನಡೆಯಿತು. ಫಸ್ಟ್ ಅಸಿಸ್ಟಂಟ್ ಮ್ಯಾಜಿಸ್ಟ್ರೇಟ್ ವಿಲಿಯಂ ಹೆನ್ರಿ ಹೇಮಲಾಕ್ ಎಂಬ ಅಧಿಕಾರಿ ಈ ದಾಳಿಯಲ್ಲಿ ಹತನಾದ.ಸಣ್ಣ ಊರಾದರೂ, ಸ್ವಲ್ಪವೇ ಜನರಿದ್ದರೂ ಕೆಚ್ಚೆದೆಯ ಬೇಡರು ಅಕ್ಷರಶಃ ಬ್ರೀಟಿಷರ ಮೇಲೆ ಮುಗಿಬಿದ್ದರು.ಇದರಿಂದ ಬೆಚ್ಚಿಬಿದ್ದ ಕರ್ನಲ್ ನೆಟನ್ ಕರ್ ಹೆಚ್ಚಿನ ಸೈನ್ಯ ಕಳಿಸುವಂತೆ ಕಂಪನಿ ಸರಕಾರಕ್ಕೆ ಕೇಳಿಕೊಂಡ.ಮರುದಿನ ಇನ್ನಷ್ಟು ಭೀಕರ ಹೋರಾಟ ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿದವು.ಕೆಚ್ಚೆದೆಯ ಕಲಿಗಳ ಹೋರಾಟಕ್ಕೆ ಬೆಚ್ಚಿಬಿದ್ದ ಬ್ರೀಟಿಷರ ಸೇನೆ ಮಧ್ಯರಾತ್ರಿ ಊರಿಗೆ ಬೆಂಕಿಹಚ್ಚಿದರು.ಬೆಂಕಿಯ ದಳ್ಳುರಿಗೆ ಸಿಕ್ಕು ಆರ್ತನಾದಗೈದ ಮಕ್ಕಳ ದನಕರುಗಳ ರಕ್ಷಣೆಗೆ ಮುಂದಾದ ಬೇಡರ ಪಡೆಯ ವೀರರನ್ನು ಸೇನೆ ಗುಂಡಿಕ್ಕಿ ಕೊಂದಿತು. ಹಲಗಲಿಯ ಬೇಡರ ಸಹಾಯಕ್ಕಾಗಿ ಜಡಾಗಾಬಾಲ ಗ್ರಾಮದ ಬೇಡರು ಧಾವಿಸಿದರೂ ಬ್ರೀಟಿಷರ ವಿರುದ್ಧ ನಿಲ್ಲಲಾಗಲಿಲ್ಲ.ದಾಳಿಯಿಂದ ತಪ್ಪಿಸಿಕೊಳ್ಳಲು ಹತ್ತಿಕಟ್ಟಿಗೆಯಲ್ಲಿ ಅವಿತುಕೊಂಡಿದ್ದ 23 ಜನರನ್ನು ಸೇನೆ ಸುಟ್ಟುಹಾಕಿತು.ಹೀಗೆ ಒಂದು ರಕ್ತರಂಜಿತ ಅಧ್ಯಾಯ ಕೊನೆಗೊಂಡಿತು.ನಂತರ ಬ್ರೀಟಿಷರ ಸೇನೆ ಸುಮಾರು 290 ಜನರನ್ನು ಸೆರೆಹಿಡಿಯಿತು.ಇವರಲ್ಲಿ ಜಡಾಗಾಬಾಲಾದ ಬೇಡರನ್ನು ಸೇರಿದಂತೆ ಅನೇಕರನ್ನು ಮುಧೋಳ ಮತ್ತು ಹಲಗಲಿಯಲ್ಲಿ ಗಲ್ಲಿಗೇರಿಸಿತು.ಹೀಗೆ ಹಲಗಲಿ ಬೇಡರ ಬಂಡಾಯವನ್ನು ಅತ್ಯಂತ ಅಮಾನುಷವಾಗಿ ಹತ್ತಿಕ್ಕಿದರು.

      ಬ್ರೀಟಿಷರ ವಿರುದ್ಧ ಸಿಡಿದೆದ್ದು ಹೋರಾಡಿದ ಈ ವೀರರ ಸಾಹಸ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿಯೇ ಉಳಿಯುತ್ತದೆ.ಇಂಂದಿಗೂ ಉತ್ತರ ಕರ್ನಾಟಕದಲ್ಲಿ ಈ ವೀರರ ಸಾಹಸ ಕುರಿತ ಅನೇಕ ಜನಪದ ಲಾವಣಿಗಳನ್ನು ಹಾಡಲಾಗುತ್ತದೆ.

ಹೊತ್ತು ಬಂದಿತು ಮತ್ತ ನೋಡಿರಿ ಕತ್ತಿ ಹಿಡಿಯುವ ಜನಕ

ಸಿಟ್ಟಿನ ಮಂದಿ ಹಲಗಲಿ ಬೇಡರು ಮುಟ್ಟಲಿಲ್ಲೋ ದಡಕ

ಈ ಲಾವಣಿಯು ಹಲಗಲಿಯ ಬೇಡರು ಬ್ರೀಟಿಷರ ವಿರುದ್ಧ ಹೇಗೆ ಹೋರಾಡಿದರು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ.ಹಲಗಲಿ ಬೇಡರ ಸಾಹಸದ ಕುರಿತು ಅನೇಕ ನಾಟಕಗಳು ಪ್ರಸಿದ್ಧವಾಗಿವೆ.ಈ ಕಡೆ ಯಾರಾದರೂ ಜಿಗುಟತನದಿಂದ, ಛಲದಿಂದ ವಾದಿಸಿದಾಗ ಜನ ಅರ್ಧ ವಿನೋದದಿಂದ ಇನ್ನರ್ಧ ಹೆಮ್ಮೆಯಿಂದ, ” ಏಯ್, ಅವ್ರನ್ನ ತಡಿಬ್ಯಾಡ್ರಪ್ಪೋ, ಅವರು ಹಲಗಲಿ ಬ್ಯಾಡ್ರಿದ್ದಂಗ” ಎಂದು ಹೇಳುವುದು ಸಾಮಾನ್ಯ.ಬ್ರೀಟಿಷರ ಗುಲಾಮಗಿರಿಯನ್ನು ಒಪ್ಪಿಕೊಳ್ಳುವುದಕ್ಕಿಂತ ವೀರಮರಣವೇ ಲೇಸೆಂದು ಸಾರಿ ಅಪ್ರತಿಮವಾಗಿ ಹೋರಾಡಿದ ಕೆಚ್ಚೆದೆಯ ಹಲಗಲಿ ಬೇಡರನ್ನು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ಮರಿಸುವುದು ಸೂಕ್ತವಾಗಿದೆ.

ನವೀನ ಹಳೆಯದು