ಸಣ್ಣ ವಿಷಯವೇ ತಾರಕಕ್ಕೆ ಹೋಗಿ ಕುಡಿದ ಮತ್ತಿನಲ್ಲಿ ಸ್ನೇಹಿತರು ಸೇರಿಕೊಂಡು ಇನ್ನೊಬ್ಬ ಸ್ನೇಹಿತನನ್ನ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಂಟನೂರ ಗ್ರಾಮದಲ್ಲಿ ನಡೆದಿದೆಮುಧೋಳ: ವೀರಹನಮಪ್ಪ ನಾಯಕ್ ರಂಗಣ್ಣ (23) ಕೊಲೆಯಾದ ಯುವಕ. ನಿನ್ನೆ ತಡರಾತ್ರಿ ಕೆಲ ಸ್ನೇಹಿತರೆಲ್ಲ ಸೇರಿಕೊಂಡು ಬಂಟನೂರಿನ ನೀಲಗಿರಿ ಗುಡ್ಡದಲ್ಲಿ ಗುಂಡು ಪಾರ್ಟಿ ಮಾಡಿದ್ದಾರೆ. ಈ ವೇಳೆ ತಮ್ಮ ತಮ್ಮಲ್ಲೇ ಜಗಳ ಶುರುವಾಗಿದೆ. ಈ ಮಧ್ಯೆ ವೀರಹನಮಪ್ಪ ಗೆಳೆಯನೋರ್ವನ ಮೊಬೈಲ್ ಒಡೆದು ಹಾಕಿದ್ದಾನೆ. ಜಗಳ ಮತ್ತಷ್ಟು ತಾರಕಕ್ಕೇರಿದೆ. ಕೆಲವರು ವೀರಹನಮಪ್ಪನನ್ನು ವೈರ್ನಿಂದ ಕತ್ತು ಬಿಗಿದಿದ್ದಾರೆ. ಪರಿಣಾಮ ವೀರಹನಮಪ್ಪ ಉಸಿರುಗಟ್ಟಿ ಅಸುನೀಗಿದ್ದಾನೆ.
ಬಳಿಕ ಶವ ಅಲ್ಲೇ ಬಿಟ್ಟು ಮನೆಗೆ ವಾಪಾಸ್ ಆಗಿದ್ದಾರೆ. ಆದ್ರೆ ಬೆಳಗಿನವರೆಗೂ ವಿಷಯ ಗೊತ್ತಾಗಿರಲಿಲ್ಲ. ಬೆಳಗ್ಗೆಯಾದರೂ ಮಗ ಮನೆಗೆ ಬಾರದಿದ್ದಾಗ ಪೋಷಕರು ಸ್ನೇಹಿತರನ್ನ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇನ್ನು ಲೋಕಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮೃತ ಯುವಕನ ಪೋಷಕರ ಹೇಳಿಕೆ ಮೇರೆಗೆ ಮೂವರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.