ಮಂದಗತಿಯಲ್ಲಿ ರೈಲು ಮಾರ್ಗ ಯೋಜನೆ: ಖಾಜಿ ಆರೋಪ

ಬನಹಟ್ಟಿ: ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣ ಯೋಜನೆ ರಾಜಕೀಯ ಮುಖಂಡರ ಹಿತಾಶಕ್ತಿ ಕೊರತೆಯಿಂದ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಕುಡಚಿ ಬಾಗಲಕೋಟೆ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದಿನ್‌ ಖಾಜಿ ಹೇಳಿದರು. ನಗರದ ಭದ್ರನ್ನವನರ ಕಲ್ಯಾಣ ಮಂಟಪದಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆ ಕಾಮಗಾರಿ ಸಂಬಂಧ ಹೋರಾಟ ಪ್ರಕ್ರಿಯೆ ಕುರಿತು ಚರ್ಚಿಸಲು ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

816 ಕೋಟಿ ರೂ. ಯೋಜನೆ ಪೂರ್ಣಗೊಳ್ಳಲು ಹಣದ ಕೊರತೆಯಿಲ್ಲ. ರಾಜಕೀಯ ಮತ್ತು ಅಧಿಕಾರಿಗಳ ವಿಳಂಬ ಧೋರಣೆಯಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿರುವ ನಾವು ಹೋರಾಟ ಮಾಡದೇ ಯಾವುದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಮತ್ತೊಂದು ಹೋರಾಟಕ್ಕೆ ಎಲ್ಲರೂ ಸಿದ್ಧರಾಗಿ ಎಂದು ಕರೆ ನೀಡಿದರು.

ಹಲವು ವರ್ಷಗಳ ಹಿಂದೆ ಕುಡಚಿ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದವರ ಮೇಲೆ ಕೇಸು ದಾಖಲಿಸಿ ಇಂದಿಗೂ ಜಮಖಂಡಿ, ಮುಧೋಳ, ರಬಕವಿ ಬನಹಟ್ಟಿ ಸೇರಿದಂತೆ ಅನೇಕ ಹಿರಿಯರು ಬೆಂಗಳೂರಿಗೆ ಅಲೆದಾಡುತ್ತಿದ್ದಾರೆ. ಆದರೆ, ಯಾವುದಕ್ಕೂ ಹೆದರದೆ ಹೋರಾಟ ಮಾಡುವುದಾಗಿ ಹೇಳಿದರು.

ಜನರ ಹೋರಾಟದ ಫಲವಾಗಿ ರೈಲು ಯೋಜನೆ ಆರಂಭವಾಗಿದ್ದು, ಮತ್ತೇ ಹೋರಾಟದ ಮೂಲಕವೇ ತೀವ್ರಗೊಳಿಸುವ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ವಿಶೇಷ ಜಿಲ್ಲಾಧಿಕಾರಿ ನೇಮಕವಾಗಬೇಕು. ಕೂಡಲೇ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದೀಪಾವಳಿ ನಂತರ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಆರಂಭಗೊಳ್ಳಲಿವೆ ಎಂದರು.

ರೈತ ಮುಖಂಡ ಹಾಗೂ ವಕೀಲ ಹೊಸೂರು ಗ್ರಾಮದ ವೆಂಕಟೇಶ ನಿಂಗಸಾಣಿ, ಸಾಹಿತಿ ಸಿದ್ದರಾಜ ಪೂಜಾರಿ, ನೀಲಕಂಠ ದಾತಾರ, ಪ್ರೊ|ಎಂ. ಎಸ್‌. ಬದಾಮಿ, ಸುಭಾಷ ಮದರಖಂಡಿ, ಶಿವಾನಂದ ಬಾಗಲಕೋಟಮಠ, ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ಪಟ್ಟಣ ಸೇರಿದಂತೆ ಅನೇಕರು ಮಾತನಾಡಿದರು.

ಡಾ| ರವಿ ಜಮಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ರಬಕವಿ ಬನಹಟ್ಟಿ, ಲೋಕಾಪುರ, ಮಹಾಲಿಂಗಪುರ, ಮುಧೋಳ, ಜಮಖಂಡಿ, ತೇರದಾಳ ಸೇರಿದಂತೆ ಅನೇಕ ಗ್ರಾಮ ಹಾಗೂ ಪಟ್ಟಣಗಳ ನಾಗರಿಕರನ್ನು ಸಂಪರ್ಕಿಸಿ ನ. 18ರಂದು ಎಲ್ಲ ನಗರಗಳಲ್ಲಿ ಪ್ರತಿಭಟನೆ ಮತ್ತು ಸಂಪೂರ್ಣ ಬಂದ್‌ ಆಚರಿಸಲು ನಿರ್ಧರಿಸಲಾಗಿದೆ ಎಂದರು. ನಾರಾಯಣ ಬೋರಗಿನಾಯಕ, ಆರ್‌. ಡಿ. ಭದ್ರನ್ನವರ, ಸುರೇಶ ಚಿಂಡಕ, ಡಾ| ಪ್ರಭು ಪಾಟೀಲ, ಸತೀಶ ಹಜಾರೆ, ಬಸವರಾಜ ತೆಗ್ಗಿ, ರಾಮಣ್ಣ ಹುಲಕುಂದ, ಮಹಾದೇವ ಕೋಟ್ಯಾಳ, ಚಿದಾನಂದ ಸೊಲ್ಲಾಪುರ, ಸಂಗಣ್ಣ ಅರಬಳ್ಳಿ, ನೀಲಕಂಠ ಮುತ್ತೂರ, ಆನಂದ ಜುಗಳಿ ಇದ್ದರು.

ನವೀನ ಹಳೆಯದು