ಬಾಗಲಕೋಟೆ: ಹುಸಿ ಬಾಂಬ್ ಕರೆಯಿಂದಾಗಿ ಯಶವಂತಪುರ-ಬಿಕಾನೇರ್ ರೈಲು ಸುಮಾರು ಒಂದೂವರೆ ಗಂಟೆ ತಡವಾಗಿ ಹೊರಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯೊಬ್ಬ ಯಶವಂತಪುರ-ಬಿಕಾನೇರ್ ರೈಲಿನಲ್ಲಿ ಬಾಂಬ್ ಇರುವುದಾಗಿ ಪೊಲೀಸರಿಗೆ ಫೋನ್ ಮಾಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ಬಾಂಬ್ ಸ್ಕ್ವಾಡ್ ಸಿಬ್ಬಂದಿ ಬಾಗಲಕೋಟೆ ಜಂಕ್ಷನ್ ನಲ್ಲಿ ರೈಲು ತಡೆದು ಪರಿಶೀಲಿಸಿದ್ದಾರೆ.
ಪೊಲೀಸ್ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ರೈಲ್ವೆ ಪೊಲೀಸ್ ಸಿಬ್ಬಂದಿಗಳು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕ ವಸ್ತುಗಳು ದೊರೆತಿಲ್ಲ. ಹೀಗಾಗಿ ಇದೊಂದು ಹುಸಿ ಕರೆ ಎಂದು ತೀರ್ಮಾನಿಸಿ ರೈಲು ಹೊರಡಲು ಅನುವು ಮಾಡಿಕೊಡಲಾಗಿದೆ.
ಅಷ್ಟೇ ಅಲ್ಲದೇ ಮುಂದಿನ ವಿಜಯಪುರ ಜಂಕ್ಷನ್ ನಲ್ಲಿಯೂ ತಪಾಸಣೆ ನಡೆಸುವಂತೆ ಅಲ್ಲಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹುಸಿ ಕರೆಯಿಂದ ಸುಮಾರು ಒಂದೂವರೆ ಗಂಟೆ ಕಾಲ ತಪಾಸಣೆಗೊಳಪಟ್ಟ ರೈಲು ವಿಜಯಪುರದತ್ತ ತಡವಾಗಿ ಹೊರಟಿದೆ.