ಮುಧೋಳ ಬಂದ್ ಯಶಸ್ವಿ; ರೈತರಿಂದ ಸಿಎಂ ಪ್ರತಿಕೃತಿ ದಹನ; ಪಿಎಂಗೆ ಪತ್ರ

ಮುಧೋಳದ ರಸ್ತೆಗಳಲ್ಲಿ ಜಾಲಿ ಮುಳ್ಳಿನ ಗಿಡಗಳನ್ನು ಹಾಕಿ ಪ್ರತಿಭಟಿಸಿದ ರೈತರು

ಬೆಳಗಾವಿ ಚಳಿಗಾಲ ಅಧಿವೇಶನಕ್ಕೂ ಕಬ್ಬು ಬೆಳೆಗಾರರ ಹೋರಾಟದ ಬಿಸಿ ತಟ್ಟುವ ಸಾಧ್ಯತೆ; ಸಿಎಂ ಕುಮಾರಸ್ವಾಮಿ ಮಧ್ಯಪ್ರವೇಶಿಸಲು ರೈತರ ಆಗ್ರಹ; ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ರೈತರ ಕಿಚ್ಚು…
ಕಬ್ಬಿಗೆ ದರ ನಿಗದಿಪಡಿಸುವಂತೆ ಹಾಗೂ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರ ರೈತರು ಇಂದು ಕರೆ ನೀಡಿದ್ದ ಮುಧೋಳ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ ಬೀದಿ ಹೋರಾಟ ನಡೆಸಿದ ರೈತರು ಪ್ರಧಾನಿ ಮೋದಿಗೆ ಪತ್ರ ಬರೆದರೆ, ಅತ್ತ ಹಳ್ಳಿಗಳಲ್ಲಿ ರೈತರು ಟೈಯರ್‌ಗೆ ಬೆಂಕಿ ಹಚ್ಚಿ ಸಿಎಂ ಕುಮಾರಸ್ವಾಮಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ಬಾಗಲಕೋಟೆಯ ರೈತರು ರಾಜ್ಯ ಸರಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.


ಬೆಳಗ್ಗೆಯಿಂದ ರೈತರು ಬೀದಿಗಿಳಿದು ಅಂಗಡಿಮುಂಗಟ್ಟು ಬಂದ್ ಮಾಡಿಸಿದ್ರು. ಜೀರಗಾಳ, ಶಿರೋಳ, ಚಿಂಚಖಂಡಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ರೈತರು ರಸ್ತೆಗೆ ಮುಳ್ಳುಕಂಟಿ ಹಾಕಿ, ಟೈಯರ್‌ಗೆ ಬೆಂಕಿ ಹಚ್ಚಿದರೆ ಮತ್ತೊಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ನಿರಂತರ ಹೋರಾಟಕ್ಕೆ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸದೇ ಇರುವುದು ರೈತರನ್ನು ರೊಚ್ಚಿಗೆಬ್ಬಿಸಿದೆ. ಕಾರ್ಖಾನೆಗಳಿಂದ ತಮಗೆ ಭಾರಿ ಮೋಸವಾಗುತ್ತಿರುವುದಷ್ಟೇ ಅಲ್ಲ, ಪ್ರತಿ ಹಂಗಾಮಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೀಡುವ ಅಬಕಾರಿ ಹಾಗೂ ಸಕ್ಕರೆ ಸೆಸ್​ನಲ್ಲಿ 500 ಕೋಟಿ ವಂಚನೆಯಾಗ್ತಿದೆ. ಅಲ್ಲದೆ, ಸಕ್ಕರೆ ರಿಕವರಿ ಹಾಗೂ ತೂಕದಲ್ಲೂ ಕೋಟ್ಯಂತರ ಹಣ ರೈತರಿಗೆ ಮೋಸವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮವಾಗಬೇಕೆಂದು ಒತ್ತಾಯಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ರೈತರು ಪೋಸ್ಟ್ ಮಾಡಿದ್ದಾರೆ.

ಇತ್ತ, ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಎಸ್‌ಪಿ ರಿಷ್ಯಂತ್ ಅವರು ಪ್ರವಾಸಿ ಮಂದಿರದಲ್ಲಿ ರೈತರ ಸಭೆ ಕರೆದರು. ಯಾವುದೇ ಅಹಿತಕರ ಘಟನೆ ಜರುಗದಂತೆ ನಡೆದುಕೊಂಡು ಶಾಂತಿಯಿಂದ ಹೋರಾಟ ನಡೆಸುವಂತೆ ಸೂಚಿಸಿದ್ರು.

ಬೆಳಗಿನಿಂದ ಸಂಜೆವರೆಗೂ ಮುಧೋಳದ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ನಡೆಸಿದ ರೈತರು ಮುಂಬರುವ ದಿನಗಳಲ್ಲಿ ವಿವಿಧ ಸ್ತರಗಳಲ್ಲಿ ಹೋರಾಟ ನಡೆಸಲು ಯೋಜನೆ ಹಮ್ಮಿಕೊಂಡಿದ್ದಾರೆ. ಲ್ಲೆಯ ವಿವಿಧ ಪಟ್ಟಣಗಳಲ್ಲಿ ಬಂದ್ ಕರೆ ನೀಡಿ ಉಗ್ರಸ್ವರೂಪದ ಹೋರಾಟ ಮಾಡುವುದು; ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕೋದು; ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ಮುಂಬರುವ ಬೆಳಗಾವಿ ಅಧಿವೇಶನವರೆಗೂ ಈ ಹೋರಾಟ ಮುಂದುವರೆಸಲು ರೈತರು ನಿರ್ಣಯ ಕೈಗೊಂಡರು.

ಒಟ್ಟಿನಲ್ಲಿ, ಕಬ್ಬು ಬೆಳೆಗಾರ ರೈತರು ಕರೆ ನೀಡಿದ್ದ ಮುಧೋಳ ಬಂದ್ ಕರೆ ಯಶಸ್ವಿಗೊಂಡಿದೆ. ಭವಿಷ್ಯದಲ್ಲಿ ಉಗ್ರ ಹೋರಾಟಕ್ಕೆ ಮುಧೋಳ ರೈತರು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಈಗಲೇ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುತ್ತಾ ಅಥವಾ ಬೆಳಗಾವಿ ಅಧಿವೇಶನದವರೆಗೂ ಹೋರಾಟ ಮುಂದುವರೆಯಲು ಬಿಟ್ಟು ಸಂಕಷ್ಟ ತಂದುಕೊಳ್ಳುತ್ತಾ ಎಂದು ಕಾದುನೋಡಬೇಕಿದೆ.

ನವೀನ ಹಳೆಯದು