ಮುಧೋಳ: ನಗರದ ಬಸವೇಶ್ವರ ವೃತ್ತದಲ್ಲಿ ಹಿತರಕ್ಷಣಾ ವೇದಿಕೆಯಿಂದ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಶನಿವಾರ ಮೂರನೇ ದಿನಕ್ಕೆ ಪ್ರವೇಶಿಸಿದ್ದು, ಶಾಸಕರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನೊಂದೆಡೆ ರಾಜ್ಯ ಹೆದ್ದಾರಿ ಅಕ್ಕಪಕ್ಕ ಅತಿಕ್ರಮಣ ತೆರವು ಕಾರ್ಯಾಚರಣೆ ಕೂಡಾ 3ನೇ ದಿನವೂ ಭರದಿಂದ ಸಾಗಿದೆ.
ನಗರಸಭೆ ಸದಸ್ಯ ಡಾ| ಸತೀಶ ಮಲಘಾಣ ಮಾತನಾಡಿ, ಇದು ಪಕ್ಷಾತೀತ ವೇದಿಕೆ. ಇಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ಧರಣಿ ಮಾಡಲಾಗುತ್ತಿದೆ. ಇಲ್ಲಿ ರಾಜಕೀಯ ಬೇಡ ಎಂದು ಶಾಸಕ ಗೋವಿಂದ ಕಾರಜೋಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸುತ್ತೇವೆ ಎಂಬುದಕ್ಕೆ ತಿರುಗೇಟು ನೀಡಿದರು.
ಇದರಿಂದ ಕೋಪಗೊಂಡ ಶಾಸಕ ಗೋವಿಂದ ಕಾರಜೋಳ, ಇದೇ ವೇದಿಕೆಯಲ್ಲಿ ಕೆಲವರು ಈ ಕ್ಷೇತ್ರಕ್ಕೆ ನಾನೇನೂ ಮಾಡಿಲ್ಲ ಎಂದು ಮಾತನಾಡಿದ್ದಾರೆ.
ಆದ್ದರಿಂದ ಇಲ್ಲಿ ನಾನು ರಾಜಕೀಯವಾಗಿ ಮಾತನಾಡಲ್ಲ. ಈ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸುವುದಾಗಿ ಹೇಳಿದರು. ಕೆಲ ಸಾರ್ವಜನಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ, ಕಾರಜೋಳ ಬೆಂಬಲಿಗರು ಶಾಸಕರು ಮಾತನಾಡಲಿ ಎಂದು ಕೂಗಿದರು.
ಮುಧೋಳ ಹಿತರಕ್ಷಣಾ ಸಮೀತಿ ಅಧ್ಯಕ್ಷ ಡಾ| ಸಂಜಯ ಘಾರಗೆ ಮಾತನಾಡಿ, ಕಳೆದ ಸುಮಾರು
20-25 ವರ್ಷಗಳಿಂದಲೂ ಮುಧೋಳ ಮತಕ್ಷೇತ್ರ ಆರ್ಥಿಕವಾಗಿ, ಭೌಗೋಳಿಕ, ಔದ್ಯೋಗಿಕವಾಗಿ ಬೆಳೆಯುತ್ತಿದ್ದರೂ ಅದರ ಜೊತೆಗೆ ಮೂಲಭೂತ ಸೌಲಭ್ಯ ವಂಚಿತವಾಗುತ್ತ ಬಂದಿದೆ. ಶಾಸಕ ಗೋವಿಂದ ಕಾರಜೋಳರಾಗಲಿ ಅಥವಾ ಇನ್ನಿತರ ಯಾವುದೇ ರಾಜಕೀಯ ನಾಯಕರಾಗಲೀ ಮುಧೋಳ ಅಭಿವೃದ್ಧಿ ಕೈಗೊಂಡಿಲ್ಲ ಎಂದು ನಾವು ಎಲ್ಲಿಯೂ ಆರೋಪಿಸಿಲ್ಲ. ಆದರೆ ಮುಧೋಳ ಎಷ್ಟೇ ಬೆಳೆದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಹೇಳಿದರು.
ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಗರದ ಸಾರ್ವಜನಿಕರ ಒತ್ತಾಸೆ ಮೇರೆಗೆ ಹೋರಾಟಕ್ಕೆ ಇಳಿದಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದರು
ಕಾರ್ಯದರ್ಶಿ ಡಾ| ಮೋಹನ ಬಿರಾದಾರ ಮಾತನಾಡಿ, ಕಾರಜೋಳ ಅವರು ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡ ನಂತರ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಬಂದು ಮುಧೋಳ ಭರದಿಂದ ಬೆಳೆಯಿತು. ನಗರದಲ್ಲಿ ದಿನಾಲೂ ಸಾವಿರಾರು ವಾಹನಗಳ ಸಂಚಾರ ಆರಂಭಗೊಂಡಿತು. ಆದರೆ ಅದಕ್ಕೆ ಪೂರಕವಾಗಿ ಮೂಲಭೂತ ಸೌಲಭ್ಯಗಳು ದೊರಕದೇ, ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ ಎಂದರು.