ಮುಧೋಳ: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ‘ಜಾನಪದ ಪ್ರವರ್ಧಕ’ ಪ್ರಶಸ್ತಿ ಪುರಸ್ಕೃತ ಜನಪದ ಸಾಹಿತಿ, ಜಿ.ಬಿ.ಖಾಡೆ (77) ಶನಿವಾರ ಇಲ್ಲಿ ನಿಧನರಾದರು.
ಅವರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಹಳ್ಳಿ ಹಳ್ಳಿ ಸುತ್ತಿ ಜನಪದ ಸಾಹಿತ್ಯವನ್ನು ಮೂಲ ರೂಪದಲ್ಲಿ ಸಂಗ್ರಹಿಸಿ ಪ್ರಕಟಿಸಿದ ಹಿರಿಮೆ ಇವರದ್ದು. ಬೀಸುಕಲ್ಲಿನ ಪದಗಳು, ಕೋಲಾಟದ ಪದಗಳು, ಹಂತಿಪದಗಳು, ಜೋಗುಳ ಪದ, ಡೊಳ್ಳಿನ ಪದಗಳನ್ನು ಸಂಪಾದಿಸಿದ್ದ ಕೃತಿ ಮೈಸೂರು
ವಿವಿಯಿಂದ 'ಕಾಡು ಹೂಗಳು' ಹೆಸರಿನಲ್ಲಿ 1973ರಲ್ಲಿ ಪ್ರಕಟವಾಗಿದೆ.
'ಬದುಕೇ ಜಾನಪದ' ಆತ್ಮಕಥನವು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಪಾತ್ರವಾಗಿದ್ದು, ಕರ್ನಾಟಕ ಜಾನಪದ ಅಕಾ ಡೆಮಿಯು ರಾಜ್ಯ ಪ್ರಶಸ್ತಿ ನೀಡಿದೆ.
ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಶ್ರೀಗಳು ‘ಜಾನಪದ ನುಡಿಗಾರುಡಿಗ‘ ಬಿರುದು ನೀಡಿ ಗೌರವಿಸಿದ್ದರು.
ಅವರ ಸಂಕಲಿತ ಜನಪದ ಸಾಹಿತ್ಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆದಿದೆ. ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಠ್ಯದಲ್ಲಿ ಇವರ ಕಥೆಯನ್ನು ಅಳವಡಿಸಿಕೊಳ್ಳಲಾಗಿದೆ.
ಅಂತ್ಯಕ್ರಿಯೆ, ಶನಿವಾರ ಮಧ್ಯಾಹ್ನ ಮುಧೋಳದಲ್ಲಿ ನೆರವೇರಿತು.