ಶೀಘ್ರದಲ್ಲೇ ಮುಧೋಳಕ್ಕೆ 24x7 ಕುಡಿಯುವ ನೀರು; ತಿಮ್ಮಾಪುರ


ಬಾಗಲಕೋಟೆ: ‘ಮುಧೋಳ ನಗರಕ್ಕೆ ಕೃಷ್ಣಾ ನದಿಯಿಂದ 24x7 ಕುಡಿಯುವ ನೀರು ಪೂರೈಕೆಗೆ ಸರ್ಕಾರದಿಂದ ತಾಂತ್ರಿಕ ಅನುಮತಿ ದೊರೆತಿದೆ. ₹3 ಕೋಟಿ ವೆಚ್ಚದಲ್ಲಿ ಈಜುಕೊಳ ಹಾಗೂ ವಾಕಿಂಗ್ ಪಾಥ್ ನಿರ್ಮಾಣಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಈ ಹಿಂದೆ ನಾನು ಅಬಕಾರಿ ಸಚಿವನಾಗಿದ್ದ ಅವಧಿಯಲ್ಲಿ ಮುಧೋಳ ನಗರಕ್ಕೆ ₹55 ಕೋಟಿ ವೆಚ್ಚದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಸರ್ಕಾರದಿಂದ ಮಂಜೂರಾತಿ ಕೊಡಿಸಿದ್ದೇನೆ. ಜೊತೆಗೆ ನಗರದ ಮುಖ್ಯ ರಸ್ತೆಯ ವಿಸ್ತರಣೆಗೆ ₹10 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬೈಪಾಸ್ ರಸ್ತೆ ನಿರ್ಮಾಣಕ್ಕೆ ಹಣ ಮಂಜೂರು ಆಗಿದೆ ಎಂದು ಸುಳ್ಳು ಹೇಳಿ 2009ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಕರೆ ತಂದು ಶಾಸಕರು ಶಂಕುಸ್ಥಾಪನೆ ಮಾಡಿಸಿದ್ದರು. ವಾಸ್ತವವಾಗಿ 2018ರ ಆಗಸ್ಟ್ 31ರಂದು ಭೂಸ್ವಾಧೀನಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಅದೇ ರೀತಿ ಚಿಚಖಂಡಿ ಬ್ಯಾರೇಜ್ ನಿರ್ಮಾಣಕ್ಕೆ ಮಂಜೂರಾತಿ ಕೊಡಿಸಿರುವುದಾಗಿ ತಪ್ಪು ಮಾಹಿತಿ ನೀಡಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಮಧ್ಯಂತರ ಚುನಾವಣೆ ಇಲ್ಲ: ಸಮ್ಮಿಶ್ರ ಸರ್ಕಾರ ಎಂದ ಮೇಲೆ ಒಂದಷ್ಟು ಸಣ್ಣಪುಟ್ಟ ಗೊಂದಲಗಳಿರುತ್ತವೆ. ಅದಕ್ಕೆ ಸರ್ಕಾರ ಬೀಳಲಿದೆ, ಮಧ್ಯಂತರ ಚುನಾವಣೆ ಬರಲಿದೆ ಎಂದು ಪ್ರಚಾರ ಮಾಡುವುದು ಸಲ್ಲ. ಅದನ್ನೇ ಕೆಲವು ಮಾಧ್ಯಮಗಳು ದಿನಪೂರ್ತಿ ತೋರಿಸುವ ಕೆಲಸ ಮಾಡುತ್ತಿವೆ. ಬಿಜೆಪಿಯವರು ಅದನ್ನೇ ಹೇಳುತ್ತಿದ್ದಾರೆ. ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ ಯಾರೂ ಬಿಜೆಪಿಗೆ ಹೋಗೊಲ್ಲ. ಸರ್ಕಾರ ಸುಭದ್ರವಾಗಿರಲಿದ್ದು, ಇನ್ನೂ ನಾಲ್ಕು ವರ್ಷ ಅವಧಿ ಪೂರ್ಣಗೊಳಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಮುಧೋಳದಲ್ಲಿ ಬಿಜೆಪಿಯೊಂದಿಗೆ, ಹಾಲಿ ಶಾಸಕರೊಂದಿಗೆ ರಾಜಿ ಆಗಿಲ್ಲ. ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಗುಂಡು ಹೊಡೆದವರೊಂದಿಗೆ, ದೇಶವನ್ನು ಧರ್ಮ, ಜಾತಿಗಳ ಆಧಾರದ ಮೇಲೆ ಒಡೆದವರೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ’ ಎಂದು ತಿಮ್ಮಾಪುರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉದಯಸಿಂಗ್ ಪಢತರೆ, ಸತ್ಯಪ್ಪ ತೇಲಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಿಮ್ಮಾಪುರ ಹಾಜರಿದ್ದರು.

*
ಮುಂದಿನ ಚುನಾವಣೆಯಲ್ಲಿ ಮುಧೋಳದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸಲಿದ್ದೇನೆ. ವಿಧಾನ ಪರಿಷತ್ ಸದಸ್ಯನಾಗಿದ್ದ ಕಾರಣಕ್ಕೆ ಕಳೆದ ಬಾರಿ ಟಿಕೆಟ್ ಬಿಟ್ಟುಕೊಟ್ಟಿದ್ದೆ.
-ಆರ್.ಬಿ.ತಿಮ್ಮಾಪುರ, ಸಕ್ಕರೆ ಸಚಿವ
ನವೀನ ಹಳೆಯದು