ಆರಂಭದ ಲಕ್ಷಣವೇ ಇಲ್ಲ


ಬಡವರ, ಮಧ್ಯಮ ವರ್ಗದವರ ಹಾಗೂ ಕೂಲಿ ಕಾರ್ಮಿಕರ ಹಸಿವು ಹಿಂಗಿಸಲು ಹಿಂದಿನ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ ನಗರದಲ್ಲಿ ಆರಂಭಗೊಳ್ಳುವ ಲಕ್ಷ ಣಗಳೇ ಕಾಣುತ್ತಿಲ್ಲ.
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಉದ್ಘಾಟನೆಗೆ ಸಜ್ಜಾಗಿವೆ. ಕೆಲವು ಆರಂಭಗೊಂಡಿವೆ. ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ರನ್ನ ನಾಡಿನಲ್ಲಿ ಸಕ್ಕರೆ, ಸಿಮೆಂಟ್‌ ಕಾರ್ಖಾನೆಗಳು ಇವೆ. ಇಲ್ಲಿ ಮಾತ್ರ ಇನ್ನೂ ಕ್ಯಾಂಟೀನ್‌ ಆರಂಭವಾಗಿಲ್ಲದಿರುವುದು ಯೋಜನೆ ಹಿನ್ನೆಡೆಗೆ ಕೈಗನ್ನಡಿಯಾಗಿದೆ.

ಆಮೆವೇಗದ ಕಾಮಗಾರಿ


ಸರಕಾರದ ಹಂತದಲ್ಲಿ ಟೆಂಡರ್‌ ಆಗಿದ್ದರೂ ನಿಧಾನವಾಗಿ ಆರು ತಿಂಗಳಿಂದಲೂ ಕ್ಯಾಂಟೀನ್‌ ಕಾಮಗಾರಿ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸಾಗಿರುವ ಇಂದಿರಾ ಕ್ಯಾಂಟೀನ್‌ ಜನರ ಬಳಿ ಇನ್ನೂ ಬರದೇ ಇರುವುದು ತಮಗೆ ಬಹಳ ನಿರಾಸೆಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ತಿಳಿಯದ ಕಾರಣ

ಗ್ರಾಮೀಣ ಭಾಗದಿಂದ ನಸುಕಿನ ಜಾವ ಕಾಲೇಜ್‌ಗೆ ತೆರಳುವ ವಿದ್ಯಾರ್ಥಿಗಳಿಗೆ, ಕೈಗಾರಿಕೆ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ, ರೈತರು, ಜನರಿಗೆ ಕಡಿಮೆ ಬೆಲೆಯಲ್ಲಿ ಉಪಹಾರ, ಊಟಕ್ಕೆ ಉಪಯುಕ್ತವಾಗುವ ದೃಷ್ಟಿಯಿಂದ ಕ್ಯಾಂಟೀನ್‌ ಆರಂಭಗೊಳ್ಳಬೇಕಾಗಿತ್ತು. ಆದರೆ ಯಾವ ಉದ್ದೇಶದಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಕಾರಣವೇ ತಿಳಿಯುತ್ತಿಲ್ಲ ಎಂದು ಹೇಳುತ್ತಾರೆ ಜನರು.

ಜಿಲ್ಲಾಡಳಿತ ನಿರ್ಲಕ್ಷ ್ಯ:

ಸರಕಾರದ ಯಾವುದೇ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ಆಯಾ ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಆದರೆ ಅವುಗಳನ್ನು ಅನುಷ್ಠಾನ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಕಾಮಗಾರಿ ಆರಂಭವಾದಾಗಿಂದಲೂ ಇದುವರೆಗೂ ಯಾವೊಬ್ಬ ಅಧಿಕಾರಿಯೂ ಕಾಮಗಾರಿ ಪರಿಶೀಲನೆ ಮಾಡಿಲ್ಲ ಎಂದು ದೂರುತ್ತಾರೆ ನಗರದ ನಾಗರಿಕರು.


ನಿರ್ವಹಣೆ ಯಾರು

ಕ್ಯಾಂಟೀನ್‌ ಆರಂಭಗೊಂಡ ಬಳಿಕ ನಿರ್ವಹಣೆಯನ್ನು ನಗರಸಭೆಗೆ ಒಪ್ಪಿಸಲಾಗುತ್ತಿದೆ. ಗುಣಮಟ್ಟದ ಆಹಾರ, ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸರಕಾರದ ಆದೇಶದಲ್ಲಿ ಸೂಚಿಸಲಾಗಿದೆ. ಕ್ಯಾಂಟೀನ್‌ ಒಳಗಡೆ ಪರಿಕರಗಳು ಹಾಗೆಯೇ ಬಿಡಲಾಗಿದೆ, ಅವುಗಳನ್ನು ಜೋಡಿಸಿ ಕ್ಯಾಂಟೀನ್‌ ನಿರ್ಮಾಣ ಮಾಡಬೇಕಾಗಿದೆ. ಯಾವಾಗ ಕ್ಯಾಂಟೀನ್‌ ಆರಂಭಿಸುತ್ತಾರೋ ದೇವರೇ ಬಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಏನೇ ಆಗಲಿ ಈಗಲಾದರೂ ತ್ವರೀತಗತಿಯಲ್ಲಿ ಕಾಮಗಾರಿ ಮುಗಿಸಿ ಜನರಿಗೆ ಸರಕಾರದಿಂದ ದೊರಕುವ ಉಪಹಾರ, ಊಟ ಸಿಗುವಂತೆ ವ್ಯವಸ್ಥೆ ಮಾಡಬೇಕು.
ಮಲ್ಲು ತೇಲಿ, ಕಾರ್ಮಿಕ, ಮುಧೋಳ.

ಇಂದಿರಾ ಕ್ಯಾಂಟೀನ್‌ ಆರಂಭಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿರುವೆ. ಇದು ವಿಳಂಬವಾಗಲು ಅವಕಾಶ ನೀಡುವುದಿಲ್ಲ. ಶೀಘ್ರ ಆರಂಭಿಸದೇ ಇದ್ದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಆರ್‌.ಬಿ.ತಿಮ್ಮಾಪೂರ, ಸಕ್ಕರೆ ಸಚಿವ, ಮುಧೋಳ.


ಕ್ಯಾಂಟೀನ್‌ ಕಾಮಗಾರಿಯಲ್ಲಿ ಸಣ್ಣಪುಟ್ಟ ಕೆಲಸಗಳಾಗಬೇಕಾಗಿವೆ. ಕೂಡಲೇ ಸರಿಪಡಿಸಲು ಸೂಚಿಸಲಾಗುವುದು. ಕೆಲವು ಪರಿಕರಗಳು ಬಂದಿದ್ದು, ಜೋಡಿಸಬೇಕಾಗಿದೆ. ತಿಂಗಳೊಳಗಾಗಿ ಇಂದಿರಾ ಕ್ಯಾಂಟೀನ್‌ ಆರಂಭವಾಗಬಹುದು.

ರಮೇಶ ಜಾಧವ, ಪೌರಾಯುಕ್ತಮ ನಗರಸಭೆ ಮುಧೋಳ.
ನವೀನ ಹಳೆಯದು