ಮುಧೋಳ ತಹಸೀಲ್ದಾರ್ ವರ್ತನೆ, ಗ್ರಾಮ ಪಂಚಾಯಿತಿ ಅಕಾರಿಗಳು ಮತ್ತು ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ನೌಕರರ ಸಂಘ, ಗ್ರಾಪಂ ನೌಕರರ ಸಂಘ ನೇತೃತ್ವದಲ್ಲಿ ಜಿಲ್ಲೆಯ ಪಿಡಿಒಗಳು ಜಿಲ್ಲಾಡಳಿತ ಭವನ ಎದುರು ಗುರುವಾರ ಧರಣಿ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಪಿಡಿಒಗಳು ದಿನವಿಡೀ ಧರಣಿ ನಡೆಸಿ ಸಂಜೆ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರಗೆ ಮನವಿ ಸಲ್ಲಿಸಿದರು.
ಪ್ರತಿಯೊಂದು ಯೋಜನೆಯಲ್ಲಿ ಪಿಡಿಒಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ನಿತ್ಯದ ಕಾರ್ಯಗಳ ಜತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಆದರೆ, ದಿನದಿಂದ ದಿನಕ್ಕೆ ವಿವಿಧ ಇಲಾಖೆಗಳ ಕೆಲಸಗಳನ್ನು ಗ್ರಾಪಂಗೆ ವರ್ಗಾಯಿಸುತ್ತಿರುವುದರಿಂದ ಕೆಲಸದ ಹೊರೆ ಹೆಚ್ಚಾಗುತ್ತಿದೆ. ಇದರ ಜತೆಗೆ ಅಕಾರಿಗಳ ದಬ್ಬಾಳಿಕೆ, ಅವಾಚ್ಯ ಪದಗಳ ಬಳಕೆಯಿಂದ ಮಾನಸಿಕ ನೆಮ್ಮದಿ ಹಾಳಾಗಿ ಕೆಲಸದ ಒತ್ತಡ ಉಂಟಾಗುತ್ತಿದೆ ಎಂದು ಪಿಡಿಒಗಳು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಸಂಘದ ನಿರ್ಣಯಗಳಿಗೆ ಆದ್ಯತೆ ಸಿಗುವಂತಾಗಬೇಕು, ಗ್ರಾಪಂಗಳ ಮೇಲೆ ಕೈಗೊಳ್ಳುವ ತನಿಖೆ ಹಿಂಪಡೆಯಬೇಕು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿ ಕೆಲಸದಿಂದ ಮುಕ್ತಗೊಳಿಸಬೇಕು, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ, ಪ್ರಯಾಣ ಭತ್ಯೆ, ಪ್ರಭಾರ ಭತ್ಯೆ ಜಮೆ ಮಾಡಬೇಕು. ಗ್ರಾಪಂಗಳಲ್ಲಿ ಮೂಲ ಸೌಕರ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಮುಧೋಳ ತಾಪಂ ಸಭಾಭವನದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕುರಿತು ನಡೆದ ಸಭೆಯ ಕಾಲಕ್ಕೆ ತಹಸೀಲ್ದಾರ್ ಡಿ.ಜಿ. ಮಹಾತ್ ಅವರು ಲಕ್ಷಾನಟ್ಟಿ ಗ್ರಾಪಂ ಅಭಿವೃದ್ಧಿ ಅಕಾರಿ ಎಸ್.ವೈ. ನರಸನ್ನವರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಆರ್.ಸಿ. ವಾರದ, ರೋಹಿತ ಇಟಕನ್ನವರ, ಸಿದ್ದಾರ್ಥ ಕೋಟೆ, ಶ್ರೀನಿವಾಸ ಚಿಗರೆಡ್ಡಿ, ರಾಮಚಂದ್ರ ಮೇತ್ರಿ, ಮಂಜುನಾಥ ಬ್ಯಾಹಟ್ಟಿ, ಯುವರಾಜ ಬೀಳಗಿ ನೇತೃತ್ವದಲ್ಲಿ ಪಿಡಿಒಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.