ಮುಧೋಳ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವಡೆ ಭಾರೀ ಮಳೆಯಾಗುತ್ತಿದೆ.ಇನ್ನೂ ಬಾಗಲಕೋಟೆ ಜಿಲ್ಲೆಯಾದ್ಯಂತ ಅವಾಂತರ ಸೃಷ್ಠಿಯಾಗಿದೆ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಪರಿಣಾಮ ರಬಕವಿ-ಬನಹಟ್ಟಿ ತಾಲ್ಲೂಕಿನ ರಾಮಪುರ ಗ್ರಾಮದ ಸುಮಾರು ಎಂಡು ನೇಕಾರರ ಕುಟುಂಬದ ಮನೆಗಳ ಗೋಡೆಗಳು ಕುಸಿತಗೊಂಡಿವೆ. ಮನೆ ಗೋಡೆ ಕುಸಿದ ಜನರು ಇದೀಗ ಬೀದಿಗೆ ಬಿದ್ದಿದ್ದಾರೆ.
ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮುಧೋಳ ತಾಲ್ಲೂಕಿನ ಯಡಹಳ್ಳಿ ಸಮೀಪದ ಮಡಿವಾಳ ಫುಲ್ ಸಂಪೂರ್ಣವಾಗಿ ಜಲಾವೃತ ಆಗಿದೆ. ಇದರಿಂದ ರಸ್ತೆ ಸಂಚಾರ ಬಂದ್ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಸೇತುವೆ ಮೇಲೆ ನಾಲ್ಕು ಅಡಿವರೆಗೆ ನೀರು ಹರಿಯುತ್ತಿದ್ದು, ಕೆಲವು ವಾಹನ ಸವಾರರು ಹರಿಯುತ್ತಿರುವ ನೀರಲ್ಲೇ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಸೇತುವೆ ಮುಳುಗಡೆಯಿಂದ ಮುಧೋಳ, ಕಾತರಕಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ರಸ್ತೆ ಸಂಚಾರ ಕಟ್ ಆಗಿದೆ. ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಕೃಷ್ಣಾ ನದಿ ಮತ್ತೊಮ್ಮೆ ಉಕ್ಕಿ ಹರಿಯುತ್ತಿದೆ.
ಹೀಗಾಗಿ ಜಮಖಂಡಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಸದ್ಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಮೈಗೂರು ಟೂ ಹುನ್ನೂರ್ ರಸ್ತೆ ಸೇತುವೆ ಬಂದ್ ಆಗಿದ್ದು, ಸೇತುವೆ ಮೇಲೆ ನೀರು ರಭಾಸವಾಗಿ ಹರಿಯುತ್ತಿದೆ. ಇದರಿಂದ ಸಂಚಾರ ಬಂದ್ ಆಗಿದ್ದು, ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಇನ್ನೊಂದೆಡೆ ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮವಾಗಿ ಕೈ ಗೆ ಬಂದ ಈರುಳ್ಳಿ ನೀರು ಪಾಲಾಗಿದೆ.
ಭಾರಿ ಪ್ರಮಾಣದ ಮಳೆ ನೀರು ಹೊಲಗದ್ದೆಗಳಿಗೆ ನುಗ್ಗಿದ ಕಾರಣ ಮುಧೋಳ ತಾಲೂಕಿನ ಚಿತ್ರಭಾನುಕೋಟೆ ಹಾಗೂ ಬಂಟನೂರು ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ. ಹೊಲದಲ್ಲಿ ಕಿತ್ತಿಟ್ಟಿದ್ದ ಈರುಳ್ಳಿ ಬೆಳೆ ಜಲಾವೃತದಿಂದ ನಾಶಗೊಂಡಿದೆ.