ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶಿ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಶೇ 5ರಷ್ಟು ದಾಖಲಾಗುವ ಮೂಲಕ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಶುಕ್ರವಾರ ಎರಡನೇ ತ್ರೈಮಾಸಿಕದ ಅಂಕಿ–ಅಂಶ ಹೊರಬಂದಿದ್ದು, ಜಿಡಿಪಿ ಶೇ 4.5ಕ್ಕೆ ಕುಸಿದಿದೆ.
ದೇಶದ ಅರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿಯೂ ಮಂದಗತಿಯಿಂದ ಹೊರಬಂದಿಲ್ಲ, ದೇಶದಲ್ಲಿ ಬಂಡವಾಳ ಹೂಡಿಕೆ ಮತ್ತು ಗ್ರಾಹಕ ಬೇಡಿಕೆ ಕುಸಿದಿದೆ ಎಂಬುದನ್ನು ಜಿಡಿಪಿ ಸೂಚಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2013ರ ಜನವರಿ–ಮಾರ್ಚ್ ಅವಧಿಯಲ್ಲಿ ಜಿಡಿಪಿ ವೃದ್ಧಿ ಶೇ 4.3ರಷ್ಟಿತ್ತು. 2018ರ ಜುಲೈ–ಸೆಪ್ಟೆಂಬರ್‌ನಲ್ಲಿ ಶೇ 7ರಷ್ಟಿದ್ದ ಆರ್ಥಿಕ ವೃದ್ಧಿ ದರ 2019ರಲ್ಲಿ ಮತ್ತೆ ಕುಸಿದಿದೆ.
ತಲ್ಲಣಕೆ ಒಳಗಾದ ಷೇರುಪೇಟೆ
ಜಿಡಿಪಿ ಮಾಹಿತಿ ಬಿಡುಗಡೆಯಾಗುವ ಹಿನ್ನೆಲೆ ಬೆಳಗಿನಿಂದಲೇ ದೇಶೀಯ ಷೇರುಪೇಟೆಗಳಲ್ಲಿ ಖರೀದಿ ಉತ್ಸಾಹ ತಗ್ಗಿತು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಶೇ 0.82ರಷ್ಟು ಇಳಿಕೆ ಕಂಡು 40,793.81 ಅಂಶಗಳಿಗೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ, ನಿಫ್ಟಿ ಶೇ 0.78ರಷ್ಟು ಕಡಿಮೆಯಾಗಿ 12,056.05 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. ಭರ್ಜರಿ ಗಳಿಕೆ ದಾಖಲಿಸಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಸಹ ಕುಸಿತ ಕಂಡಿವೆ.
ಡಾಲರ್ ಎದುರು ರೂಪಾಯಿ ಮೌಲ್ಯವು 11 ಪೈಸಿ ಇಳಿಕೆಯಾಗಿ ₹71.73ರಲ್ಲಿ ವಹಿವಾಟು ನಡೆದಿದೆ. ರೂಪಾಯಿ ಮೌಲ್ಯವು ಒಂದು ವರ್ಷದಲ್ಲಿ ಸರಾಸರಿ ಶೇ 5ರಷ್ಟು ಕುಸಿತ ಕಂಡಿದೆ.
ಸುಳ್ಳಾಗಲಿಲ್ಲ ಸಂಶೋಧನಾ ವರದಿಗಳು
ಕೈಗಾರಿಕೆ, ಮೂಲಸೌಕರ್ಯ, ತಯಾರಿಕೆ, ವಾಹನವನ್ನೂ ಒಳಗೊಂಡು ಪ್ರಮುಖ ಎಲ್ಲಾ ವಲಯಗಳ ಪ್ರಗತಿಯೂ ಇಳಿಮುಖವಾಗಿದೆ. ಹೀಗಾಗಿ ಜಿಡಿಪಿ ವೃದ್ಧಿ ದರ ಶೇ 4.9ರಷ್ಟಿರಲಿದೆ ಎಂದು ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಮಂಡಳಿ(ಎನ್‌ಸಿಎಇಆರ್) ವಿಶ್ಲೇಷಿಸಿತ್ತು. ಮಂದಗತಿಯ ಆರ್ಥಿಕ ಸ್ಥಿತಿಯು ಎರಡನೇ ತ್ರೈಮಾಸಿಕದಲ್ಲಿಯೂ ಮುಂದುವರಿಯುವ ಸೂಚನೆಗಳಿದ್ದು ಜಿಡಿಪಿ ಶೇ 4.2ಕ್ಕೆ ಕುಸಿಯಲಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ಅಂದಾಜಿಸಿತ್ತು.
ಮೊದಲ ತ್ರೈಮಾಸಿಕದಲ್ಲಿ ವೃದ್ಧಿ ದರ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ದಾಖಲಾದ ಬೆನ್ನಲೇ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿತ್ತು. ಅದರ ಫಲದಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕತೆಯು ಚೇತರಿಸಿಕೊಳ್ಳುವ ನಿರೀಕ್ಷೆಯೂ ಇತ್ತು. ವಾಹನ ಮಾರಾಟ ಕುಸಿತ, ತಯಾರಿಕೆ ಮತ್ತು ಮೂಲಸೌಕರ್ಯ ಮತ್ತು ನಿರ್ಮಾಣ ವಲಯಗಳಲ್ಲಿ ಹೂಡಿಕೆ ಚಟುವಟಿಕೆಯಲ್ಲಿ ಇಳಿಕೆ ಕಂಡುಬಂದಿದೆ.
ಆರಂಭಿಕ ತ್ರೈಮಾಸಿಕದಲ್ಲಿ ಆರ್ಥಿಕತೆಯ ಬಹುತೇಕ ವಲಯಗಳಲ್ಲಿ ಹಿಂಜರಿತ ದಾಖಲಾಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 6ಕ್ಕೆ ಇಳಿಯಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂದಾಜಿಗಿಂತ (ಶೇ 6.1) ಇದು ಕಡಿಮೆ ಇದೆ. 2018–19ರಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 6.9ರಷ್ಟು ದಾಖಲಾಗಿತ್ತು.
ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 5.6ರಷ್ಟು ಇರಲಿದೆ ಎಂದು ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡೀಸ್ ಇನ್‌ವೆಸ್ಟರ್ಸ್ ಸರ್ವಿಸ್ ಅಂದಾಜಿಸಿದೆ.