ಮುಧೋಳ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರೇ ಬಾಸ್



ಸ್ಥಳೀಯಾಡಳಿತದಲ್ಲಿ ಮಹಿಳೆಯರದ್ದೇ ಮೇಲುಗೈ ಬಹುತೇಕ ಕಡೆ ಪತಿಯಂದಿರದ್ದೇ ದರ್ಬಾರ್‌

ಮುಧೋಳ: ಮಹಿಳೆಯರದ್ದೇ ಮೇಲುಗೈ. ಪ್ರತಿಬಾರಿ ಶೈಕ್ಷಣಿಕ ವರ್ಷದ ಫಲಿತಾಂಶ ಹೊರ ಬಿದ್ದಾಗ ಸಾಮಾನ್ಯವಾಗಿ ಕೇಳಿಬರುವ ಮಾತಿದು. ಈಗ ಈ ಮಾತು ತಾಲೂಕಿನ ಗ್ರಾಮ ಪಂಚಾಯತಿಗಳಿಗೂ ಅನ್ವಯವಾಗುತ್ತದೆ ಎಂದರೆ ಅತಿಶಯೋಕ್ತಿಯೆನಿಸದು.
ಹೌದು, ಮುಧೋಳ ತಾಲೂಕಿನ 29 ಗ್ರಾಮ ಪಂಚಾಯತಿಗಳ ಪೈಕಿ 17 ಗ್ರಾಮ ಪಂಚಾಯತಿಯಲ್ಲಿ ಮಹಿಳೆಯರೇ ಅಧ್ಯಕ್ಷಗಿರಿ ನಡೆಸುತ್ತಿದ್ದು, ಗ್ರಾಮೀಣ ಮಟ್ಟದ ಅಧಿಕಾರದಲ್ಲಿ ತಮ್ಮದೆಯಾದ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ.
ಮಹಿಳೆಯೆಂದರೆ ಅಡುಗೆ ಮನೆಗೆ ಸೀಮಿತ, ನಾಲ್ಕು ಗೋಡೆಗಳ ಮಧ್ಯೆಯೇ ಕಾರ್ಯನಿರ್ವಹಿಸಬೇಕು ಎಂಬ ಅನಾದಿ ಕಾಲದ ಸಂಪ್ರದಾಯದ ಕಟ್ಟುಪಾಡುಗಳನ್ನು ತೊಡೆದು ಹಾಕಿ ಸ್ಥಳೀಯಾಡಳಿತದ ಗದ್ದುಗೆ ಹಿಡಿದಿರುವ ಮಹಿಳೆಯರು, ನಾವೂ ಪುರುಷರಿಗೆ ಯಾವುದರಲ್ಲೂ ಕಡಿಮೆಯಿಲ್ಲ ಎಂಬ ದಾರಿಯಲ್ಲಿ ಸಾಗುತ್ತಿದ್ದಾರೆ.
ಸರ್ಕಾರ ನೀಡಿರುವ ಮೀಸಲಾತಿ ಹಾಗೂ ಸ್ವಬಲದಿಂದ ಗ್ರಾಮೀಣ ಭಾಗದ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಸ್ತ್ರೀಯರು, ತಮ್ಮ ತಮ್ಮ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಆ ಮೂಲಕ ತಮಗೆ ದೊರೆತ ಅಧಿಕಾರವನ್ನು ಬಳಕೆ ಮಾಡಿಕೊಂಡು ಗ್ರಾಮೀಣಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಎಲ್ಲೆಲ್ಲಿ ಅಧ್ಯಕ್ಷರು: ಮುಧೋಳ ತಾಲೂಕಿನ ಬರಗಿ, ಭಂಟನೂರ, ಚಿಚಖಂಡಿ, ದಾದನಟ್ಟಿ, ಗುಲಗಾಲ ಜಂಬಗಿ, ಹೆಬ್ಟಾಳ, ಇಂಗಳಗಿ, ಕಸಬಾಜಂಬಗಿ, ಲೋಕಾಪುರ, ಮಾಚಕನೂರ, ಮಂಟೂರ, ಮೆಳ್ಳಿಗೇರಿ, ಮೆಟಗುಡ್ಡ, ನಾಗರಾಳ, ಸೋರಗಾಂವ, ಉತ್ತೂರ ಹಾಗೂ ವಜ್ರಮಟ್ಟಿ ಗ್ರಾಮ ಪಂಚಾಯತ್‌ಗಳಿಗೆ ಮಹಿಳೆಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಹಿಳೆಯರ ಸಂಬಂಧಿಗಳ ಕೈಯಲ್ಲಿ ಫೋನ್‌: ಗ್ರಾಮೀಣ ಮಟ್ಟದ ಅಧಿಕಾರವನ್ನು ಮಹಿಳೆಯರೇ ನಡೆಸುತ್ತಿದ್ದರೂ ಅವರಿಗಿನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದೇ ಖೇದಕರ ಸಂಗತಿ. ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಅವರು ತಮ್ಮ ಅಧಿಕಾರ ನಡೆಸಲು ಪತಿ, ಪುತ್ರ ಹಾಗೂ ಸಂಬಂಧಿಕರ ನೆರವು ಪಡೆಯುತ್ತಿದ್ದಾರೆ.
ಈ ಬಗ್ಗೆ ವಿಚಾರಿಸಲು ಗ್ರಾಮ ಪಂಚಾಯತ ಅಧ್ಯಕ್ಷೆಯರಿಗೆ ಕರೆ ಮಾಡಿದಾಗ ಬಹುತೇಕ ಕರೆಗಳನ್ನು ಅವರ ಪತಿಯಂದಿರು, ಪುತ್ರರು ಹಾಗೂ ಸಂಬಂಧಿಕರೇ ಸ್ವೀಕರಿಸಿದ್ದು ಪುರುಷ ಪ್ರಧಾನ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಒಟ್ಟಾರೆ ಹಿಂದಿನ ಕಾಲಕ್ಕಿಂತ ಸುಧಾರಣೆ ಕಂಡಿರುವ ಮಹಿಳಾ ಮಣಿಗಳು ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಅಧಿಕಾರ ನಡೆಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ನವೀನ ಹಳೆಯದು